Homeಮುಖಪುಟಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

ಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

- Advertisement -
- Advertisement -

ಸುಖಪಡಲು ಎಲ್ಲ ಸವಲತ್ತುಗಳೂ ಚಾಚಿಕೊಂಡು ಬಂದಾಗ ಫಲಾನುಭವಿಯೇ ಪೈಸಲ್ ಎಂಬಂತೆ ನಮ್ಮ ಮಹದೇವ ಪ್ರಕಾಶ್ ಕೊರೊನಾಕ್ಕೆ ಬಲಿಯಾದರು!

ಹಿರಿಯ ಮತ್ತು ಗೌರವಾನ್ವಿತ ಪತ್ರಕರ್ತರಾಗಿದ್ದ ಮಹದೇವ ಪ್ರಕಾಶ್ ಈ ನಾಡು ಕಂಡ ಪ್ರಾಮಾಣಿಕ ಮತ್ತು ದಕ್ಷ ರಾಜಕಾರಣಿಯಾಗಿದ್ದ ವಿರೇಂದ್ರಪಾಟೀಲರು ಆರಂಭಿಸಿದ್ದ ಲೋಕವಾಣಿ ಎಂಬ ಪತ್ರಿಕೆಯಲ್ಲಿದ್ದಾಗ ಪ್ರಾಮಾಣಿಕ ಅಭಿವ್ಯಕ್ತಿಗೆ ಹೆಸರಾಗಿದ್ದರು. ಆದರೂ ಲಂಕೇಶ್ ಬದುಕಿರುವವರೆಗೆ ಪತ್ರಿಕೆ ಆಫೀಸಿಗೆ ಬರಲಾಗಿರಲಿಲ್ಲ. ಲಂಕೇಶ್ ಏನಾದರೂ ಬೈದರೆ ಎಂಬ ಅಳುಕಿತ್ತು. ಈ ಅಳುಕು ಸಕಾರಣವಾಗಿತ್ತು.

ಲಂಕೇಶ್ ತೀರಿಕೊಂಡ ನಂತರ ಅವರ ಮಗಳು ಗೌರಿ ಸಂಪಾದಕಿಯಾದ ಮೇಲೆ ಮಹದೇವ ಪ್ರಕಾಶ್ ಪ್ರಭುದ್ಧ ಸಲಹೆಗಾರರಾಗಿ ಬಂದು ಸೇರಿಕೊಂಡರು. ಆಗ ಗೌರಿ, ಮಹದೇವ ಪ್ರಕಾಶ್ ಹೇಳಿದಂಗೆ ಎಂಬ ಉಪಮೆಯಿಂದ ಮಾತು ಆರಂಭಿಸುತ್ತಿದ್ದರು. ಮಹದೇವ ಪ್ರಕಾಶ್ ಬರವಣಿಗೆ ಕೂಡ ತಣ್ಣನೆ ಶೈಲಿಯ ಸಂಯುಕ್ತ ಕರ್ನಾಟಕದ ಲೇಖನದಂತಿದ್ದವು. ಆದ್ದರಿಂದ ಗೌರಿಯ ತಾತ್ಸಾರಕ್ಕೆ ಒಳಗಾದರು.

ನಂತರ ಈ ಭಾನುವಾರ ಎಂಬ ವಾರಪತ್ರಿಕೆ ನಡೆಸತೊಡಗಿದರು. ಇದೂ ಕೂಡ ಸುಧಾರಿತ ವೈಕುಂಟರಾಜುರವರ ವಾರಪತ್ರಿಕೆಯಂತಿತ್ತು. ಜನ ಕೊಂಡು ಓದದಿದ್ದರೂ, ಪತ್ರಿಕೆ ನಡೆಸುವ ಕುಶಲಕಲೆ ಮಹದೇವ ಪ್ರಕಾಶರಿಗಿತ್ತು. ಸಿದ್ದರಾಮಯ್ಯನವರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಲೇಖನ ಬರತೊಡಗಿದವು. ಮಹದೇವ ಪ್ರಕಾಶ್ ಬರೆದ ಮೇಲೆ ಅದರಲ್ಲಿ ಸತ್ಯಾಂಶಗಳಿರುತ್ತವೆ ಎಂದು ಕೆಲವರು ಓದುತ್ತಿದ್ದರು. ಮುಖ್ಯವಾಗಿ ಯಡಿಯೂರಪ್ಪನವರ ಕಡೆಯವರ ನಡುವೆ ಪತ್ರಿಕೆ ಹೆಚ್ಚು ಚರ್ಚೆಯಾಗುತ್ತಿತ್ತು. ಅದೇ ಸಮಯದಲ್ಲಿ ಮಹದೇವ ಪ್ರಕಾಶ್ ಟಿವಿಯೊಳಗೆ ರಾಜಕೀಯ ವಿಶ್ಲೇಷಕರಾಗಿ ಬಂದು ಕುಳಿತರು. ಅಲ್ಲಿ ಬಂದು ಕುಳಿತ ಮೇಲೆ ನಿರಂತರವಾಗಿ ಮಾತನಾಡಬೇಕಾಗುತ್ತದೆ. ಆದ್ದರಿಂದ ಪೂರ್ವಾಗ್ರಹಗಳಿದ್ದರೆ ಸಾಕು, ಸುಳ್ಳುಗಳು ತಾನಾಗಿಯೇ ಹರಿದು ಬರುತ್ತವೆ.

ಒಮ್ಮೆ ಅವರು ಟಿವಿಯಲ್ಲಿ ಮಾತಾನಾಡುತ್ತ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಯತೀಂದ್ರನನ್ನು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡುತ್ತ ಶಾಂತವೇರಿ ಗೋಪಾಲಗೌಡರು ತಾವು ಅನಾರೋಗ್ಯಕ್ಕೆ ತುತ್ತಾದಾಗ ತಮ್ಮ ಮಗಳನ್ನು ಅಭ್ಯರ್ಥಿಯನ್ನಾಗಿ ಮಾಡುವುದರ ಬದಲು ಬೆಸ್ತ ಜನಾಂಗದ ಕೊಣಂದೂರು ಲಿಂಗಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಅಂತಹ ತ್ಯಾಗಮಯಿ ರಾಜಕಾರಣಿ ಎಲ್ಲಿ, ಈ ಸಿದ್ದರಾಮಯ್ಯನೆಲ್ಲಿ ಎಂದರು. ಆಗ ನಾನು ಗೌರಿ ಎದುರು ಕುಳಿತಿದ್ದೆ. ಅವರು ಹೇಳಿದ ಸುಳ್ಳನ್ನು ಗೌರಿಗೆ ಹೇಳಿದೆ. ಫೋನ್ ಮಾಡಲು ನಂಬರ್ ಕೊಟ್ಟಳು. ತುಸು ಹೊತ್ತಾದ ನಂತರ ಮಹದೇವ ಪ್ರಕಾಶ್‌ಗೆ ಫೋನ್ ಮಾಡಿ:

ಏನ್ ಸಾರ್ ಈ ತರ ಸುಳ್ಳು ಹೇಳ್ತಾ ಇದ್ದೀರಿ ಎಂದೆ.

ನಾನ್ಯಾವ ಸುಳ್ಳು ಹೇಳಿದೆ ಅಂದ್ರು.

ನೋಡಿ ಗೋಪಾಲಗೌಡ್ರು ಅನಾರೋಗ್ಯದಲ್ಲಿದ್ದು, ತೀರ್ಥಹಳ್ಳಿ ಕ್ಷೇತ್ರ ಬಿಟ್ಟುಕೊಟ್ಟಾಗ, ಅವರ ಮಗಳಿಗೆ ಐದಾರು ವರ್ಷ ಇರಬಹುದು. ಇನ್ನು ಕೊಣಂದೂರು ಲಿಂಗಪ್ಪ ಬೆಸ್ತರ ಪೈಕಿ ಅಲ್ಲ, ಬೋವಿ ಪೈಕಿ. ನಿಮ್ಮಂಥವರು ಟಿವಿ ಒಳಗಡೆ ಕುಂತುಗಂಡು ಚೆಡ್ಡಿಗಳ ತರ ಸುಳ್ಳು ಹೇಳಬಾರ್ದು ಎಂದೆ.

ಚಂದ್ರೇಗೌಡ್ರೆ ತಪ್ಪಿದ್ರೆ ಹೇಳಿ ತಿದ್ದಿಕೊಳ್ಳೋಣ ಆದ್ರೆ ಚೆಡ್ಡಿಗಳು ಅನ್ನಬೇಡಿ ಎಂದರು.

ನೀವು ಇದುವರಿಗೂ ಹೇಳಿರೋ ಸುಳ್ಳುಗಳ ಲೆಕ್ಕಹಾಕಿದ್ರೆ ಚೆಡ್ಡಿಗಳು ಮಾತ್ರ ಇಷ್ಟು ಸುಳ್ಳೇಳಕ್ಕೆ ಸಾಧ್ಯ. ಮುಂದಿನ ವಾರ ಹೈಕಮಾಂಡು ಬಂದು ಸಿದ್ದರಾಮಯ್ಯನ್ನ ಇಳಸತ್ತೆ ಅಂತ ಮೂರು ತಿಂಗಳಿಂದ ಹೇಳ್ತ ಇದ್ದೀರಿ ಎಂದು ಆ ಕಡೆಯ ಯಾವ ವಿವರವನ್ನ ಕೇಳಿಸಿಕೊಳ್ಳದೆ ದಾಳಿ ಮಾಡಿದೆ. ಗೌರಿ ನಗುತ್ತ ಹೋಗ್ಲಿ ಬುಡ್ರಿ ಎಂದಳು. ಆಗ ಮನಸ್ಸಿಗೆ ಎಂತದೊ ಸಮಾಧಾನವಾಯ್ತು!

ಮಹದೇವ ಪ್ರಕಾಶರ ಟಿವಿ ವಿಶ್ಲೇಷಣೆ ಮತ್ತು ಭಾನುವಾರ ಪತ್ರಿಕೆ ಸತತವಾಗಿ ಸಿದ್ದರಾಮಯ್ಯನ ಸರಕಾರವನ್ನು ಟೀಕಿಸಿದ್ದು ಫಲ ಕೊಟ್ಟಿತ್ತು. ಯೆಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡರು. ಎಂದಿನಂತೆ ಯಡಿಯೂರಪ್ಪ ಯಾರ್‍ಯಾರಿಗೆ ಆಶ್ವಾಸನೆ ಕೊಟ್ಟಿದ್ದರೋ ಏನೋ ಸಲಹೆಗಾರನಾಗಿ ಮಹದೇವ ಪ್ರಕಾಶರ ಅಲ್ಪ ಅವಧಿ ಮುಗಿಯಿತು.

ತೀರಿಕೊಂಡವರ ಬಗ್ಗೆ ಹಗುರವಾಗಿ ಮಾತನಾಡಬಾರದಂತೆ. ಆದರೂ ಒಂದು ಕಾಲದ ಗೌರವಾನ್ವಿತ ವ್ಯಕ್ತಿಯಾಗಿದ್ದ ಮಹದೇವರು ಹೀಗಾಗುವ ಅಗತ್ಯವಿರಲಿಲ್ಲ ಎಂಬುದು ಹಗುರವಾದ ಮಾತಲ್ಲ.


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನನ್ನ ಬಂಧನ ಸಂಘಟಿತ ಪಿತೂರಿಯ ಭಾಗ..’; ರಾಂಚಿ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ...

0
ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಮಂಗಳವಾರ ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, 'ನನ್ನ ಬಂಧನವು ರಾಜಕೀಯ ಪ್ರೇರಿತವಾಗಿದೆ; ಬಿಜೆಪಿಗೆ ಸೇರುವಂತೆ ಒತ್ತಾಯಿಸುವ ಸುಸಂಘಟಿತ ಪಿತೂರಿಯ ಭಾಗವಾಗಿದೆ' ಎಂದು ಆರೋಪಿಸಿದರು. ಇದಕ್ಕೆ...