ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗಿಗಳಿಗೆ ‘ಆರೋಗ್ಯ ಸೇತು’ ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಆರೋಗ್ಯ ಸೇತು ಆ್ಯಪ್ ಸುರಕ್ಷಿತವಲ್ಲ ಮತ್ತು ಖಾಸಗಿ ಮಾಹಿತಿಗಳ ಸೋರಿಕೆ ಹೆಚ್ಚು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
A writ petition has been filed in the Kerala High Court, challenging the directions issued by the Central Government to make the use of 'Aarogya Setu' app mandatory for public and private employees. pic.twitter.com/yGbHsNhFpa
— ANI (@ANI) May 8, 2020
ಮೇ 04 ರಿಂದ ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ನೌಕರರು ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅಪಸ್ವರ ಎತ್ತಿದ್ದರು.
“ಆರೋಗ್ಯ ಸೇತು ಅಪ್ಲಿಕೇಶನ್, ಒಂದು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯಾಗಿದ್ದು, ಖಾಸಗಿ ಕಂಪನಿಗೆ ಇದರ ನಿಯಂತ್ರಣ ಜವಾಬ್ದಾರಿ ನೀಡಲಾಗಿದೆ. ಯಾವುದೇ ಸಾಂಸ್ಥಿಕ ಮೇಲ್ವಿಚಾರಣೆಯಿಲ್ಲದಿರುವುದರಿಂದ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆಯ ಕುರಿತು ಇದು ಗಂಭೀರವಾದ ಪ್ರಶ್ನೆಗಳನ್ನು ಎತ್ತುತ್ತದೆ. ತಂತ್ರಜ್ಞಾನವು ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ; ಆದರೆ ನಾಗರಿಕರನ್ನು ಅವರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ವಿಷಯಗಳನ್ನು ಪತ್ತೆಹಚ್ಚಲು ಬಳಕೆಯಾಗುವ ವಸ್ತುವಾಗಬಾರದು” ಎಂದು ರಾಹುಲ್ ಗಾಂಧಿ ಶನಿವಾರ ಟ್ವೀಟ್ ಮಾಡಿದ್ದರು.
ಸರ್ಕಾರದ ಪರವಾಗಿ ನೀತಿ ಆಯೋಗವು ಆ್ಯಪ್ ಬಳಕೆಯನ್ನು ಸಮರ್ಥಿಸಿಕೊಂಡಿದೆ. ಜಿಪಿಎಸ್ ಡೇಟಾ ಹೊಸ ಹಾಟ್‌ಸ್ಪಾಟ್‌ಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಸ್ಥಳದ ಡೇಟಾವನ್ನು ಅಪ್ಲಿಕೇಶನ್‌ನಿಂದ ವೈಯಕ್ತಿಕ ಆಧಾರದ ಮೇಲೆ ಬಳಸುವ ಬದಲಾಗಿ, ಒಟ್ಟು ಆಧಾರದ ಮೇಲೆ ಬಳಸಲಾಗುತ್ತದೆ ಎಂದು ಅದು ಹೇಳಿದೆ.
ರಾಹುಲ್ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಈ ಅಪ್ಲಿಕೇಶನ್ “ಜನರನ್ನು ರಕ್ಷಿಸುವ ಪ್ರಬಲ ಒಡನಾಡಿ” ಎಂದು ಹೇಳಿದ್ದರು.
ಈ ನಡುವೆ “ಆರೋಗ್ಯ ಸೇತು ಆಪ್‌ನ ಸೋರ್ಸ್ ಕೋಡ್ ಮುಕ್ತವಾಗಿರಬೇಕು. ನೀವು ನಿಮ್ಮ ದೇಶದ ಪ್ರಜೆಗಳಿಗೆ ಕಡ್ಡಾಯವಾಗಿ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಲು ಹೇಳುತ್ತಿರುವಾಗ, ಈ ಆಪ್ ಏನು ಮಾಡುತ್ತಿದೆ ಎಂಬುದನ್ನು ಅರಿಯುವ ಹಕ್ಕಿದೆ. ನಿಮಗೆ ನಿಜಕ್ಕೂ ದೇಶ ಪ್ರೇಮವಿದ್ದರೆ ಆರೋಗ್ಯ ಸೇತು ಆಪ್‌ನ ಸೋರ್ಸ್ ಕೋಡ್ ಪ್ರಕಟಿಸಿ” ಎಂದು ಫ್ರೆಂಚ್ ಮೂಲದ ಹ್ಯಾಕರ್, ಡಾಟಾ ಸಂಶೋಧಕ ಏಲಿಯಟ್ ಆಲ್ಡರ್‌ಸನ್ ಸವಾಲು ಹಾಕಿದ್ದಾರೆ.
ಸೋರ್ಸ್ ಆಪ್‌ನ ವಿನ್ಯಾಸವನ್ನು ರೂಪಿಸಲು ಬಳಸುವ ನಿರ್ದೇಶನಗಳ ಒಟ್ಟು ಗುಚ್ಚ. ಇದೇ ಆಪ್ ಕಾರ್ಯವಿಧಾನವನ್ನು ಬಿಚ್ಚಿಡುತ್ತದೆ. ಅದನ್ನ ಸರ್ಕಾರ ಮುಚ್ಚಿಡುತ್ತಿದೆ ಎಂಬುದು ಏಲಿಯಟ್ ಆಲ್ಡರ್ಸನ್ ತಕರಾರು ತೆಗೆದಿದ್ದಾರೆ.
ಅಲ್ಲದೇ ಪ್ರಧಾನಿ ಕಚೇರಿಯಲ್ಲಿ 5 ಮಂದಿಗೆ ಅನಾರೋಗ್ಯವಿದೆ, ಭಾರತೀಯ ಸೇನಾ ಮುಖ್ಯ ಕಚೇರಿಯಲ್ಲಿ ಇಬ್ಬರು ಅನಾರೋಗ್ಯ ಪೀಡಿತರು, ಭಾರತೀಯ ಸಂಸತ್ತಿನಲ್ಲಿ ಒಬ್ಬರಿಗೆ ಸೋಂಕಿದೆ ಗೃಹ ಕಚೇರಿಯಲ್ಲಿ ಮೂವರಿಗೆ ಸೋಂಕಿದೆ ಎಂಬ ಮಾಹಿತಿಯನ್ನು ತಮಗೆ ಸಿಕ್ಕಿದೆ. ಇನ್ನು ಮುಂದೆ ಹೇಳಬೇಕೆ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ದೇಶಪ್ರೇಮ ಇದ್ದರೆ, ಆರೋಗ್ಯ ಸೇತು ಸೋರ್ಸ್ ಕೋಡ್ ಪ್ರಕಟಿಸಿ | ಭಾರತ ಸರ್ಕಾರಕ್ಕೆ ಹ್ಯಾಕರ್ ಸವಾಲು
Also Read: Aarogya Setu: The COVID-19 tracking app, another Surveillance tool?


