ದೆಹಲಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ಎಎಪಿ ಕಾರ್ಯಕರ್ತರು ಇಂದು ದೆಹಲಿಯ ಲಕ್ಷ್ಮಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷದ ‘ಜೈಲ್ ಕಾ ಜವಾಬ್ ವೋಟ್ ಸೇ’ ಅಭಿಯಾನದ ಭಾಗವಾಗಿ ಪೂರ್ವ ದೆಹಲಿ ಪ್ರದೇಶದ ಫುಟ್ ಓವರ್ ಬ್ರಿಡ್ಜ್ ಬಳಿ ಪ್ರತಿಭಟನೆ ನಡೆಸಲಾಗಿದೆ. ಪೂರ್ವ ದೆಹಲಿ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಅಭಿಯಾನದಲ್ಲಿ ಭಿತ್ತಿಪತ್ರಗಳನ್ನು ಹಿಡಿದು ‘ಜೈಲ್ ಕಾ ಜವಾಬ್ ವೋಟ್ ಸೇ’ ಎಂದು ಎಎಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ.
ಬಿಜೆಪಿ ತೋರಿದ ಸರ್ವಾಧಿಕಾರ ಮತ್ತು ಕೇಜ್ರಿವಾಲ್ ಬಂಧನಕ್ಕೆ ತಕ್ಕ ಉತ್ತರ ನೀಡಲು ದೆಹಲಿಯ ಜನತೆ ಸಿದ್ಧರಾಗಿದ್ದಾರೆ ಎಂದು ಪೂರ್ವ ದೆಹಲಿ ಲೋಕಸಭಾ ಚುನಾವಣಾ ಅಭ್ಯರ್ಥಿ ಕುಲದೀಪ್ ಕುಮಾರ್ ಹೇಳಿದ್ದಾರೆ. ಸುನೀತಾ ಕೇಜ್ರಿವಾಲ್ ಇಂದು ಕುಲದೀಪ್ ಕುಮಾರ್ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದಾರೆ.
ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ (ಇಡಿ) ಈಗ ರದ್ದುಗೊಡಿರುವ ‘ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ’ ಪ್ರಕರಣದಲ್ಲಿ ಬಂಧಿಸಿತ್ತು. ದೆಹಲಿ ನ್ಯಾಯಾಲಯ ಮೇ 7ರವರೆಗೆ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರ ಮಾಡದಂತೆ ತಡೆಯುವ ಉದ್ದೇಶದಿಂದ ಬಿಜೆಪಿಯ ಪಿತೂರಿಯ ಭಾಗವಾಗಿ ಕೇಜ್ರಿವಾಲ್‌ನ್ನು ಬಂಧಿಸಲಾಗಿದೆ ಎಂದು ಎಎಪಿ ಈ ಮೊದಲು ಆರೋಪಿಸಿತ್ತು. ಇದೀಗ ಸುನೀತಾ ಕೇಜ್ರಿವಾಲ್ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಎಎಪಿ ಪರವಾಗಿ ಲೋಕಸಭಾ ಚುನಾವಣೆಯ ಪ್ರಚಾರವನ್ನು ಮುನ್ನಡೆಸಲಿದ್ದಾರೆ.
ಕೇಜ್ರಿವಾಲ್ ಬಂಧನವನ್ನು ಖಂಡಿಸಿ ಈ ಮೊದಲು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಕೂಟದ ಮೆಗಾ ರ್ಯಾಲಿ ನಡೆದಿತ್ತು. ರ್ಯಾಲಿಯಲ್ಲಿ ಸೋನಿಯಾ ಗಾಂಧಿ, ಸುನಿತಾ ಕೇಜ್ರಿವಾಲ್ ಮತ್ತು ಬಂಧಿತ ಜಾರ್ಖಾಂಡ್ ಮಾಜಿ ಸಿಎಂ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೋರೆನ್ ಅವರು ಭಾಗವಹಿಸಿದ್ದರು. ಇದಲ್ಲದೆ ಆಮ್ ಆದ್ಮಿ ಪಕ್ಷವು (ಎಎಪಿ) ಇಂದು ಜಂತರ್ ಮಂತರ್‌ನಲ್ಲಿ ‘ಉಪವಾಸ ದಿವಸ’ ಪ್ರತಿಭಟನೆ ನಡೆಸಿತ್ತು. ಏಕಕಾಲದಲ್ಲಿ ಭಾರತದ 25 ರಾಜ್ಯಗಳಲ್ಲಿ ಮತ್ತು ನ್ಯೂಯಾರ್ಕ್, ಬೋಸ್ಟನ್, ಟೊರೊಂಟೊ, ವಾಷಿಂಗ್ಟನ್ ಡಿಸಿ, ಮೆಲ್ಬೋರ್ನ್ ಮತ್ತು ಲಂಡನ್ ಸೇರಿದಂತೆ ಪ್ರಮುಖ ಅಂತರಾಷ್ಟ್ರೀಯ ಕೇಂದ್ರಗಳಲ್ಲಿ ಎಎಪಿ ಬೆಂಬಲಿಗರು ಸಾಮೂಹಿಕ ಉಪವಾಸದ ಮೂಲಕ ಕೇಜ್ರಿವಾಲ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಇದನ್ನು ಓದಿ: 27 ಪ್ರಕರಣಗಳು: ಪ್ರಧಾನಿ ಮೋದಿ ವಿರುದ್ಧದ ದೂರುಗಳಿಗೆ ಸಂಬಂಧಿಸಿ ಚುನಾವಣಾ ಆಯೋಗ ಏನು ಮಾಡಿದೆ?


