ದೆಹಲಿಯಲ್ಲಿ ಎಎಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಪುರುಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಮತ್ತು ಮೆಟ್ರೋ ಪ್ರಯಾಣ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಘೋಷಿಸಿದ್ದಾರೆ.
“ಆಮ್ ಆದ್ಮಿ ಪಕ್ಷದ ಸರ್ಕಾರ ಶಿಕ್ಷಣಕ್ಕೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತದೆ. ಬಡವರು ತಮ್ಮ ಬಳಿ ಹಣವಿಲ್ಲದ ಕಾರಣ ಶಿಕ್ಷಣವನ್ನು ಕಳೆದುಕೊಳ್ಳುತ್ತಾರೆ. ನಮ್ಮ ಸರ್ಕಾರ ಮತ್ತೆ ರಚನೆಯಾದರೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸಲಾಗುವುದು. ಇದು ಈಗ ಹುಡುಗಿಯರಿಗೆ ಉಚಿತವಾಗಿದೆ; ನಾವು ಹುಡುಗರಿಗೂ ಇದನ್ನು ಉಚಿತಗೊಳಿಸುತ್ತೇವೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಇದೀಗ ದೆಹಲಿಯಲ್ಲಿ ದೆಹಲಿ ಸಾರಿಗೆ ನಿಗಮವು ನಿರ್ವಹಿಸುವ ಎಲ್ಲ ಎಸಿ ಮತ್ತು ಎಸಿ ಅಲ್ಲದ ಬಸ್‌ಗಳಲ್ಲಿ ಮಹಿಳೆಯರು ಶುಲ್ಕವಿಲ್ಲದೆ ಪ್ರಯಾಣಿಸಲು ಅವಕಾಶ ನೀಡುವ ಉಚಿತ ಬಸ್ ಸೇವೆ ಇದೆ.
ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದ ಬಗ್ಗೆಯೂ ಕೇಜ್ರಿವಾಲ್ ಪ್ರಸ್ತಾಪಿಸಿದರು. “ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮೆಟ್ರೋ ಬಳಸುತ್ತಾರೆ, ಇದು ದುಬಾರಿಯಾಗಿದೆ. ಸಾಮಾನ್ಯ ವಿದ್ಯಾರ್ಥಿಯೊಬ್ಬರು ಮಟ್ರೋ ಪ್ರಯಾಣದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಮೆಟ್ರೋ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ 50-50 ಉದ್ಯಮವಾಗಿದೆ. ವಿದ್ಯಾರ್ಥಿಗಳಿಗೆ ಮೆಟ್ರೋ ಟಿಕೆಟ್‌ನಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಬೇಕು ಎಂದು ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ” ಎಂದರು.
“ರಿಯಾಯಿತಿ ನೀಡಿದ ನಂತರ ಬರುವ ವೆಚ್ಚ, ಆ ವೆಚ್ಚವನ್ನು ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ 50-50 ರಷ್ಟು ವಿಂಗಡಿಸಲಾಗುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಪ್ರಧಾನಿ ಇದನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಚುನಾವಣೆಯ ನಂತರ, ದೆಹಲಿ ಬಸ್‌ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಯಾಣ ಉಚಿತವಾಗಿರುತ್ತದೆ. ನಾವು ಎಲ್ಲಾ ದೆಹಲಿ ವಿದ್ಯಾರ್ಥಿಗಳಿಗೆ ಮೆಟ್ರೋ ದರದಲ್ಲಿ 50% ರಿಯಾಯಿತಿಯನ್ನು ನೀಡುತ್ತೇವೆ” ಎಂದು ಅವರು ಹೇಳಿದರು.
ದೆಹಲಿಯ ವಿದ್ಯಾರ್ಥಿಗಳು ಶಾಲೆಗಳು ಮತ್ತು ಕಾಲೇಜುಗಳಿಗೆ ಪ್ರಯಾಣಿಸಲು ಮೆಟ್ರೋವನ್ನು ಅವಲಂಬಿಸಿದ್ದಾರೆ. ಆದ್ದರಿಂದ, ಅವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಕೇಜ್ರಿವಾಲ್ ಹೇಳಿದರು.
“ದೆಹಲಿಯ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಒಂದು ಪ್ರಮುಖ ವಿಷಯದ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ದೆಹಲಿಯ ವಿದ್ಯಾರ್ಥಿಗಳು ತಮ್ಮ ಶಾಲೆ ಅಥವಾ ಕಾಲೇಜಿಗೆ ಪ್ರಯಾಣಿಸಲು ಹೆಚ್ಚಾಗಿ ಮೆಟ್ರೋವನ್ನು ಅವಲಂಬಿಸಿದ್ದಾರೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇದು ಬಂದಿದೆ. ಮತ ಎಣಿಕೆ ಫೆಬ್ರವರಿ 8 ರಂದು ನಡೆಯಲಿದೆ. ಆಡಳಿತಾರೂಢ ಎಎಪಿ ಈಗಾಗಲೇ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) 59 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಇದನ್ನೂ ಓದಿ; ಏಮ್ಸ್ ಹೊರ ರೋಗಿಗಳು-ಕುಟುಂಬಗಳ ಬಗ್ಗೆ ಕೇಂದ್ರ ಸರ್ಕಾರ ಸಂವೇದನಾರಹಿತವಾಗಿದೆ: ರಾಹುಲ್ ಗಾಂಧಿ


