ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯದಿಂದ ಸಾಂತಾಕ್ಲಾಸ್ ವೇಷ ಧರಿಸಿದ ಪುರುಷರು ಮೂರ್ಛೆ ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ಸ್ಕಿಟ್ (ಅಭಿನಯ) ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ ಸೌರಭ್ ಭಾರದ್ವಾಜ್, ಸಂಜೀವ್ ಝಾ ಮತ್ತು ಆದಿಲ್ ಅಹ್ಮದ್ ಖಾನ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಗುರುವಾರ (ಡಿ.25) ಎಎನ್‌ಐ ವರದಿ ಮಾಡಿದೆ.
ಕ್ರಿಸ್‌ಮಸ್ ಆಚರಣೆಗೆ ಮುನ್ನ ಡಿಸೆಂಬರ್ 17 ಮತ್ತು 18ರಂದು ಎಎಪಿ ನಾಯಕರು ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ದೆಹಲಿಯ ಕನ್ನೌಟ್ ಪ್ಲೇಸ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿತ್ತು. “ದೆಹಲಿ ಮಾಲಿನ್ಯದಿಂದ ಸಾಂತಾಕ್ಲಾಸ್ ಮೂರ್ಛೆ ಹೋದರು” ಎಂಬ ಶೀರ್ಷಿಕೆಯನ್ನು ವಿಡಿಯೋಗೆ ಕೊಡಲಾಗಿತ್ತು.
ದೆಹಲಿಯ ವಾಯುಮಾಲಿನ್ಯದಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ವಿಫಲವಾಗಿದ ಎಂದು ತೋರಿಸುವ ಸಲುವಾಗಿ ಮತ್ತು ಸರ್ಕಾರದ ವಿರುದ್ದ ಪ್ರತಿಭಟನೆ ವ್ಯಕ್ತಪಡಿಸಿ ಎಎಪಿ ನಾಯಕರು ಈ ಸ್ಕಿಟ್ ಮಾಡಿದ್ದರು.
ಸೌರಭ್ ಭಾರದ್ವಾಜ್ ಹಂಚಿಕೊಂಡಿರುವ ವಿಡಿಯೋದಲ್ಲಿ, ದೆಹಲಿಯ ವಿಪರೀತ ವಾಯುಮಾಲಿನ್ಯದಿಂದ ಸಾಂತಾಕ್ಲಾಸ್ ವೇಷ ಧರಿಸಿದ ಇಬ್ಬರು ವ್ಯಕ್ತಿಗಳು ಕುಸಿದು ಬೀಳುವುದು, ಅವರನ್ನು ಭಾರಧ್ವಾಜ್ ಸೇರಿದಂತೆ ಸುತ್ತಲು ನೆರೆದವರು ಮೇಲೆತ್ತುವುದು ಇದೆ. ವಿಡಿಯೋದ ಕೊನೆಯಲ್ಲಿ “ದೆಹಲಿಯ ವಿಪರೀತ ವಾಯುಮಾಲಿನ್ಯದಿಂದ ಕ್ರಿಸ್‌ಮಸ್ ಮುನ್ನ ಭಾರತಕ್ಕೆ ಬಂದ, ಭಾರತದ ರಾಜಧಾನಿಗೆ ಬಂದ ಸಾಂತಾಕ್ಲಾಸ್ ಮೂರ್ಛೆ ಹೋಗಿದ್ದಾರೆ ಎಂದು ಭಾರದ್ವಾಜ್ ಹೇಳಿದ್ದಾರೆ.
ಮುಂದುವರಿದು, “ವಾಯುಗುಣಮಟ್ಟ (ಎಕ್ಯೂಐ) ಸಂಖ್ಯೆಗಳಲ್ಲಿ ಮಾತ್ರ ಕಡಿಮೆಯಾಗಿದೆ, ನಿಜವಾಗಿ ಕಡಿಮೆಯಾಗಿಲ್ಲ. ಹಾಗಾಗಿ, ವಿಫಲ ಮುಖ್ಯಮಂತ್ರಿ ರೇಖಾಗುಪ್ತ ರಾಜೀನಾಮೆ ಕೊಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ರಾಜಕೀಯ ಸ್ಕಿಟ್ ಮಾಡುವಾಗ ಕ್ರೈಸ್ತ ಧರ್ಮೀಯರು ಪವಿತ್ರವಾಗಿ ಪರಿಗಣಿಸುವ ಸಾಂತಾಕ್ಲಾಸ್ ವಸ್ತ್ರ ಧರಿಸಿ ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ. ಕ್ರೈಸ್ತರ ಸಂಸ್ಕೃತಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ಎಎಪಿ ನಾಯಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಉಲ್ಲೇಖಿಸಿದೆ.
ಎಎಪಿ ನಾಯಕರು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ದುರುದ್ದೇಶಪೂರ್ವಕವಾಗಿ ಕೃತ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಿ ವಕೀಲೆ ಖುಷ್ಬೂ ಜಾರ್ಜ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಭಾರದ್ವಾಜ್, “ದೂರುದಾರರು ಬಿಜೆಪಿ ನಾಯಕರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ” ಎಂದಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಮನೋಜ್ ತಿವಾರಿ ಅವರೊಂದಿಗೆ ದೂರು ನೀಡಿದ ಜಾರ್ಜ್ ಇರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. “ನಾವು ಈ ಜನರಿಗೆ ಉಚಿತ ಪ್ರಚಾರ ನೀಡಬಾರದು” ಎಂದು ಭಾರದ್ವಾಜ್ ಹೇಳಿದ್ದಾರೆ.


