ಅರ್ಥಶಾಸ್ತ್ರ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದು ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಅಭಿಜಿತ್ ಬ್ಯಾನರ್ಜಿ ಬಗ್ಗೆ ಬಿಜೆಪಿ ಸಚಿವ ಪೀಯೂಷ್ ಗೋಯಲ್ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಇಡೀ ದೇಶವೇ ಅಭಿಜಿತ್ ಬ್ಯಾನರ್ಜಿ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದು, ಲಕ್ಷಾಂತರ ಭಾರತೀಯರು ಅಭಿಜಿತ್ ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಿ ಎಂದು ತಿವಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಪೀಯೂಷ್ ಗೋಯಲ್, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಎಡಪಂಥೀಯ ಚಿಂತನೆಯುಳ್ಳವರು. ಆದರೂ ಅವರು ಭಾರತೀಯರಾಗಿದ್ದು, ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದು, ಹೆಮ್ಮೆಯ ವಿಷಯ ಎಂದು ಹೇಳುವ ಮೂಲಕ ಸಂಕುಚಿತ ಪ್ರವೃತ್ತಿಯನ್ನು ಹೊರಹಾಕಿದ್ದರು. ಗೋಯಲ್ ಅವರ ವಿಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ದೇಶದ ಜನತೆ ಪಕ್ಷ ಭೇದ ಮರೆತು, ಗೋಯಲ್ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿ, ಗೋಯಲ್ ಅವರ ಹೇಳಿಕೆ ಮತ್ತು ಬಿಜೆಪಿಯ ಸಂಕುಚಿತ ಮನಸ್ಥಿತಿಯನ್ನು ಖಂಡಿಸಿದ್ದಾರೆ.
Dear Mr Banerjee,
These bigots are blinded by hatred and have no idea what a professional is. You cannot explain it to them, even if you tried for a decade.
Please be certain that millions of Indians are proud of your work. https://t.co/dwJS8QtXvG
— Rahul Gandhi (@RahulGandhi) October 20, 2019
ದೇಶದಲ್ಲಿ ಬಡತನ ಹೋಗಲಾಡಿಸಿ, ಭಾರತದ ಆರ್ಥಿಕತೆಗೆ ಪುಷ್ಠಿ ನೀಡಲು ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿದ್ದ ನ್ಯಾಯ್ ಯೋಜನೆಯನ್ನು ರೂಪಿಸಿದ್ದು, ಅಭಿಜಿತ್ ಬ್ಯಾನರ್ಜಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
‘ಲಕ್ಷಾಂತರ ಭಾರತೀಯರು ನಿಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ದಶಕದಿಂದ ಪ್ರಯತ್ನಿಸಿದ ಕಾರ್ಯವನ್ನು ವೃತ್ತಿಪರರು, ಧರ್ಮಾಂಧರಿಗೆ ವಿವರಿಸಲು ಸಾಧ್ಯವಿಲ್ಲ. ದ್ವೇಷದಿಂದ ಅವರೆಲ್ಲರೂ ಕುರುಡಾಗಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ, ‘ನಾನು ವೃತ್ತಿಪರನಾಗಿದ್ದು, ಎಲ್ಲರೊಂದಿಗೂ ವೃತ್ತಿಪರನಾಗಿರಲು ಬಯಸುತ್ತೇನೆ. ಕಾಂಗ್ರೆಸ್ ಪಕ್ಷದಂತೆ, ಬಿಜೆಪಿ ಸರ್ಕಾರವು ನಿರ್ದಿಷ್ಟ ಆದಾಯ ಹೆಚ್ಚಿಸುವ ಬಗ್ಗೆ ಕೇಳಿದ್ದರೆ, ನಾನು ಸತ್ಯವನ್ನು ಹೇಳುತ್ತಿರಲಿಲ್ಲವೇ.. ಎಂದು ಪ್ರಶ್ನಿಸಿದ್ದಾರೆ. ಆರ್ಥಿಕ ಚಿಂತನೆಯಲ್ಲಿ ಯಾವುದೇ ಪಕ್ಷಪಾತ ಮಾಡುವುದಿಲ್ಲ. ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ, ಮಾಲಿನ್ಯ ಮಂಡಳಿಯಲ್ಲಿ ಕೆಲಸ ಮಾಡಿದ್ದನ್ನು ಬ್ಯಾನರ್ಜಿ ತಿಳಿಸಿದರು.


