Homeಮುಖಪುಟರಾಜ್ ಠಾಕ್ರೆ, ಸೋಲಿನಿಂದ ಕಲಿತ ಪಾಠವೆ..? ಹೊಸ ಆಟವೆ..?

ರಾಜ್ ಠಾಕ್ರೆ, ಸೋಲಿನಿಂದ ಕಲಿತ ಪಾಠವೆ..? ಹೊಸ ಆಟವೆ..?

- Advertisement -
ಹೆಚ್ಚಿನ ರಾಜಕೀಯ ಪಂಡಿತರು ಮಹಾರಾಷ್ಟ್ರದ ಸ್ಪರ್ಧೆಯಿಂದ ಹೊರಗೆಸೆದಿದ್ದ ರಾಜ್ ಠಾಕ್ರೆ ಮತ್ತೆ ಕಣದಲ್ಲಿದ್ದಾರೆ. ಆದರೆ ಅವರು ಹುಲಿ ವೇಷದ ಜತೆಗೆ ಬರುವ ಕೋವಿಯವನೇ ಅಥವಾ ನಿಜವಾದ ಹುಲಿಯೇ? ಯಾಕೆಂದರೆ ಕಳೆದ ಬಾರಿ 2009ರಲ್ಲಿ ಅಧಿಕಾರಕ್ಕೆ ಬರಲು ನೇರವಾಗಿ ಮತದಾರರನ್ನು ಕೋರುವಷ್ಟು ಆತ್ಮವಿಶ್ವಾಸವನ್ನು ರಾಜ್ ಠಾಕ್ರೆ ಹೊಂದಿದ್ದರು. ಆದರೆ ಈ ಬಾರಿ ಪ್ರತಿಪಕ್ಷದ ಭಾಗವನ್ನಾಗಿ ಮಾಡಿ ಎಂದು ಕೋರುತ್ತಿದ್ದಾರೆ. ಹಾಗಾದರೆ ಬದಲಾಗಿರುವುದು ಏನು?
2009ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ ಠಾಕ್ರೆ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) 13 ಸ್ಥಾನಗಳನ್ನು ಗಳಿಸಿತ್ತು. ಆದರೆ, 2014ರಲ್ಲಿ ಕೇವಲ ಒಂದು ಸ್ಥಾನವನ್ನಷ್ಟೇ ಗಳಿಸಿ ಭಾರೀ ಹೊಡೆತ ತಿಂದಿತ್ತು. ಕಾಲಕ್ರಮೇಣ ಕಾರ್ಯಕರ್ತರು ಪಕ್ಷದ ಕೈಬಿಟ್ಟರು. ಪಕ್ಷ ವಾಸ್ತವ ಸ್ಥಿತಿಯೊಂದಿಗಿನ ಸಂಪರ್ಕ ಕಳೆದುಕೊಂಡಿತು. ಎಂಎನ್‌ಎಸ್ ರಾಜಕೀಯವಾಗಿ ಲೆಕ್ಕಕ್ಕಿಲ್ಲದ ಪಕ್ಷವಾಯಿತು.
‘ಮ.ನ.ಸೇ ರಾಜ್ ಕರ್ನೇವಾಲ’ (ಮನದಿಂದ ರಾಜ್ಯಭಾರ ಮಾಡುವವನು) ಎಂಬ ಸ್ವಯಂ ಘೋಷಣೆಯನ್ನು ಹೊಂದಿರುವ ರಾಜ್ ಠಾಕ್ರೆ ಕಳೆದ ಬಾರಿಯ ವೈಫಲ್ಯದಿಂದ ಚೇತರಿಸಿಕೊಳ್ಳಲು ಈ ಬಾರಿ ಯಾವ ಯೋಜನೆ ಹಾಕಿದ್ದಾರೆ? ಅದೂ ಕೂಡಾ ಕಳೆದ ಬಾರಿ ಗೆದ್ದಿದ್ದ ಏಕೈಕ ಶಾಸಕನೂ ಕಳೆದ ತಿಂಗಳು ಶಿವಸೇನೆಗೆ ಹಾರಿರುವಾಗ, ತಾಂತ್ರಿಕವಾಗಿ ಅವರ ಪಕ್ಷಕ್ಕೆ ಶಾಸಕರೂ ಇಲ್ಲ, ಸಂಸದರೂ ಇಲ್ಲ. ಬೃಹತ್ ಮುಂಬಯಿ ಮಹಾನಗರ ಪಾಲಿಕೆಯ ಚುನಾವಣೆಗಳಲ್ಲಿ ಪಕ್ಷವು 2012ರಲ್ಲಿ 27 ಸ್ಥಾನಗಳನ್ನು ಗೆದ್ದಿತ್ತು. 2017ರಲ್ಲಿ ಕೇವಲ ಏಳಕ್ಕೆ ಇಳಿದಿತ್ತು. ಅದರಲ್ಲೂ ಆರು ಮಂದಿ ಪಕ್ಷದ ನಾಯಕರು ಶಿವಸೇನೆಗೆ ಜಿಗಿದರು. 2009ರಿಂದ 2009ರತ ತನಕ  ಪಕ್ಷದ ಅವನತಿ ಈ ರೀತಿಯಲ್ಲಿ ಆಗಿದೆ. ಒಬ್ಬೊಬ್ಬರಾಗಿ ಪಕ್ಷದ ನಾಯಕರು ಮತ್ತು ಕಾರ್ಪೊರೇಟರ್‌ಗಳು ಠಾಕ್ರೆಗೆ ಕೈಕೊಟ್ಟಿದ್ದಾರೆ. ಇದರಿಂದ ಪಕ್ಷವು ಸಾಮಾನ್ಯ ಮತದಾರರೊಂದಿಗೆ ಸಂಪರ್ಕ ಕಳೆದುಕೊಂಡಿದೆ.
ಈ ಬಾರಿ ಎಂ‌ಎನ್ಎಸ್, ಕಾಂಗ್ರೆಸ್ ಜತೆಗೆ ಮೈತ್ರಿ ಹೊಂದಿರುವ ಶರದ್ ಪವಾರ್ ಅವರ ಎನ್‌ಸಿಪಿ ಜತೆ ತಾಂತ್ರಿಕವಾಗಿ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣುತ್ತದೆ. ಉದಾಹರಣೆಗೆ ಪುಣೆಯ ಪ್ರತಿಷ್ಟಿತ ಕೊತ್ರೂಡ್ ಕ್ಷೇತ್ರವನ್ನು ತೆಗೆದುಕೊಳ್ಳಬಹುದು. ಅಲ್ಲಿ ಎನ್‌ಸಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಎಂಎನ್‌ಎಸ್ ಪಕ್ಷವನ್ನು ಬೆಂಬಲಿಸುತ್ತಿದೆ.
ಮಾತಿನ ಹುಲಿ..?
ಬಾಳಾ ಠಾಕ್ರೆಯ ಮಾತಿನ ಶೈಲಿ, ಮತ್ತೆ ಮತ್ತೆ ಬೈಗುಳಗಳ ಬಳಕೆ, ಪ್ರಚೋದನಕಾರಿ ಪದಗಳು ಠಾಕ್ರೆಯ ಹಿಂಬಾಲಕರನ್ನು ಹಾಗೆಯೇ ಉಳಿಸಿವೆ. ಆದುದರಿಂದ ಜನರು ‘ಮುಂದೇನು?’ ಎಂದು ಕಾಯುತ್ತಿದ್ದಾರೆ.
ಇತ್ತೀಚೆಗೆ “ಮಾತು ಕೃತಿಗೆ ಇಳಿಯುತ್ತಿಲ್ಲ” ಎಂಬ ಗೊಣಗು ಕಾರ್ಯಕರ್ತರದ್ದಾಗಿದೆ. ಅಧಿಕಾರ ಇಲ್ಲದುದರಿಂದ ಅವರು ಏನನ್ನೂ ಮಾಡಲು ಸಾಧ್ಯವಿರಲಿಲ್ಲ ಎಂದು ಯಾರಾದರೂ ವಾದಿಸಬಹುದು. ಆದರೆ, 2012ರಲ್ಲಿ ಮಹತ್ವದ ನಾಸಿಕ್ ಮಹಾನಗರಪಾಲಿಕೆ ಚುನಾವಣೆಗಳಲ್ಲಿ ಗೆದ್ದಾಗ ಎಂಎನ್‌ಎಸ್‌ಗೆ ಒಂದು ಒಳ್ಳೆಯ ಅವಕಾಶ ಇತ್ತು. ಆದರೆ ಅದು ಉಳಿಯಲಿಲ್ಲ. ಮತದಾರರು ಅದರ ಸದಸ್ಯ ಬಲವನ್ನು 2012ರ 40ರಿಂದ 2017ರಲ್ಲಿ ಕೇವಲ ಐದಕ್ಕಿಳಿಸಿದರು. ಭಾಷಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದರೂ ಠಾಕ್ರೆ ಮಾತುಗಳು ಆಕ್ರೋಶವನ್ನು ಹುಟ್ಟುಹಾಕಿದರೂ ಸಹ ಮತವಾಗಿ ಪರಿವರ್ತನೆ ಆಗುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಈ ಸಲ ರಾಜ್ ಠಾಕ್ರೆಯ ತಂತ್ರ ಎಂದರೆ, ತನ್ನ ಧ್ವನಿ, ದೃಶ್ಯ ಮತ್ತು ಭಾಷಣಗಳಿಂದ ಮತದಾರರನ್ನು ಆಕರ್ಷಿಸುವುದು ಮಾತ್ರವಲ್ಲ, ತನ್ನ ಗುರಿಯ ಬಗ್ಗೆ ಕಟುವಾದ ಸತ್ಯವನ್ನು ಹೇಳುವುದು. ಅದೆಂದರೆ…
ಪ್ರತಿಪಕ್ಷದ ಹುಡುಗ..!
“ಅವನು ಪ್ರತಿಪಕ್ಷಗಳ ಮುಖವಾಣಿ” ಎಂಬುದು ರಾಜ್ ಠಾಕ್ರೆಯ ಬಗ್ಗೆ ಬಿಜೆಪಿ ಮತ್ತು ಶಿವಸೇನೆಯ ಟೀಕೆ. ಇದಕ್ಕೆ ಕಾರಣವೆಂದರೆ ಕಳೆದ ಲೋಕಸಭಾ ಚುನಾವಣೆಯ ವೇಳೆ ವೈರಲ್ ಆದ ಅವರ ಭಾಷಣಗಳ ವಿಡಿಯೋಗಳು. ಅವುಗಳು ಧ್ವನಿ ಮತ್ತು ದೃಶ್ಯಗಳ ಮೂಲಕ ಮೋದಿ-ಫಡ್ನವೀಸ್ ಸರಕಾರಗಳ ಸುಳ್ಳುಗಳನ್ನು ಬಯಲಿಗೆಳೆದಿದ್ದವು. ತಾನು ಪ್ರತಿಪಕ್ಷಗಳ ಪರ ಪ್ರಚಾರ ಮಾಡುತ್ತಿಲ್ಲ ಎಂದು ರಾಜ್ ಠಾಕ್ರೆ ಹೇಳಿಕೊಂಡರೂ, ಅವರು ಪ್ರತಿಪಕ್ಷಗಳಿಗೆ ನೀಡಿದ ಹಿಂಬಾಗಿಲ ಬೆಂಬಲವು ಅವರನ್ನು ಮತ್ತೆ ಮುಖ್ಯವಾಹಿನಿಯ ರಾಜಕಾರಣಕ್ಕೆ ತಂದಿತ್ತು. ಇಂತಹ ನಡೆಯನ್ನು ರಾಜ್ ಠಾಕ್ರೆಯಂತವರಿಂದ ಯಾರೂ ನಿರೀಕ್ಷಿಸಿರಲಿಲ್ಲ.
ಗೂಂಡಾ ರಾಜ್..? ನೇತಾ ರಾಜ್..?
“ಲಾತೊಂಕಿ ಭೂತ್ ಬಾತೊಂ ಸೆ ನಹೀ ಮಾನ್‌ತಿ” (ಒದೆಯ ಭೂತ ಮಾತಿಗೆ ಬಗ್ಗದು) ಎಂಬುದು ಎಂಎನ್‌ಎಸ್‌ನ ಘೋಷಣೆಯಾಗಿತ್ತು. ಮುಂಬಯಿಯ ರಸ್ತೆಗಳಲ್ಲಿ ಉತ್ತರ ಭಾರತೀಯರ ವಿರುದ್ಧದ ಹಿಂಸಾಚಾರ ಆತನಿಗೆ “ಗೂಂಡಾ ರಾಜ್” ಎಂಬ ಅಡ್ಡಹೆಸರು ತಂದುಕೊಟ್ಟಿತ್ತು. ಅವರು ಈ ಸಲ ಅದನ್ನು ಮರೆಸಲು ಯತ್ನಿಸುತ್ತಿರುವಂತಿದೆ. ಇತ್ತೀಚಿನ ನಿದರ್ಶನ ಎಂದರೆ, ಅವರು ಜಾರಿ ನಿರ್ದೇಶನಾಲಯ (ಇಡಿ)ದ ಜಾಲದಲ್ಲಿ ಸಿಲುಕಿ ಹಾಕಿಕೊಂಡಿರುವುದು ಅಥವಾ ಸಿಲುಕಿಸಿರುವುದು. ಕಪ್ಪುಹಣವನ್ನು ಬಿಳಿಗೊಳಿಸಿದ ಐಎಲ್ ಎಂಡ್ ಎಫ್‌ಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳಿಸಿತ್ತು. ಆಗ ಎಂಎನ್‌ಎಸ್ ಕಾರ್ಯಕರ್ತರು ಮುಂಬಯಿ ಬಂದ್‌ಗೆ ಕರೆ ನೀಡಿದ್ದರು. ಆದರೆ, ರಾಜ್ ಠಾಕ್ರೆ ಶಾಂತಿ ಕಾಪಾಡುವಂತೆ ಸಾರ್ವಜನಿಕವಾಗಿ ಕರೆ ನೀಡಿ, ಇದು ತನ್ನ ಬಾಯಿ ಮುಚ್ಚಿಸಲು ಕೇಂದ್ರ ಸರಕಾರದ ಇನ್ನೊಂದು ತಂತ್ರ ಎಂದು ಕರೆದಿದ್ದರು. ರಾಜ್ ಠಾಕ್ರೆಯ ಹಿಂಸಾತ್ಮಕ ಹಿನ್ನೆಲೆಯು ಆತನಿಗೆ ಪತ್ರಿಕೆಗಳಲ್ಲಿ ಕೆಟ್ಟ ಹೆಸರು ತಂದುಕೊಟ್ಟಿದ್ದು ಮಾತ್ರವಲ್ಲ, ಆತ ಕೆಲಸ ಮಾಡಬಲ್ಲ ವ್ಯಕ್ತಿಯಾಗಿದ್ದರೂ, ಅಧಿಕಾರದಲ್ಲಿರಲು ಸೂಕ್ತ ವ್ಯಕ್ತಿಯಲ್ಲ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿತ್ತು.
ರಾಜ್ ಠಾಕ್ರೆಯನ್ನು ಬಿಟ್ಟುಹೋದ ಬಹಳಷ್ಟು ನಾಯಕರ ದೂರು ಎಂದರೆ, ಆತ ಕೈಗೆ ಸಿಗುವುದಿಲ್ಲ ಎಂಬುದಾಗಿತ್ತು. ಕಳೆದ ಲೋಕಸಭಾ ಚುನಾವಣೆಯ ವೇಳೆ ಆತನ ‘ಬಿಗಿತ’ವೇ ಲೋಕಸಭಾ ಚುನಾವಣೆ ವೇಳೆಗೆ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದಿಂದ ಎಂಎನ್‌ಎಸ್ ಪಕ್ಷವನ್ನು ಹೊರಗಿಡಲಾಗಿತ್ತು. ಆದರೆ, ಈಗ ಎನ್‌ಸಿಪಿ ಜತೆ ಮೈತ್ರಿ ಮತ್ತು ಬಿಜೆಪಿ-ಶಿವಸೇನೆಯ ವಿರುದ್ಧ ವಾಗ್ದಾಳಿ, ಅವರ ಮನೋಭಾವ ಬದಲಾಗಿದೆ ಎಂಬುದನ್ನು ತೋರಿಸುತ್ತದೆ.
ತಡವಾಯಿತೆ..?
ಹಿಂದಿನ ಲೋಕಸಭಾ ಚುನಾವಣೆಯ ವೇಳೆಯೂ, ಈಗಿನ ವಿಧಾನಸಭಾ ಚುನಾವಣೆಯ ವೇಳೆಯೂ ಅವರು, ನಿಲ್ಲುತ್ತಾರೋ ಇಲ್ಲವೋ ಎಂಬ ಹಂತದಲ್ಲಿ ಕಣಕ್ಕಿಳಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೂಡಾ ಎರಡೇ ವಾರಗಳ ಹಿಂದೆ ಬಂತು. ಆಗಲೇ ಕಾಂಗ್ರೆಸ್-ಎನ್‌ಸಿಪಿ ಮತ್ತು ಬಿಜೆಪಿ-ಶಿವಸೇನಾ ಮೈತ್ರಿಕೂಟಗಳು ಪ್ರಚಾರ ಆರಂಭಿಸಿದ್ದವು!
ಇದು ಕಾರ್ಯಕರ್ತರಿಗೆ ಕೂಡಾ ಸಿದ್ಧತೆಗೆ ಕಡಿಮೆ ಸಮಯ ಕೊಟ್ಟರೂ, ಅವರು ಕಳೆದ ಚುನಾವಣೆಯಲ್ಲಿ ಮಾಡಿದಂತೆ ಮೋದಿ-ಶಾ ದುಷ್ಟಕೂಟದ ಬಗ್ಗೆ ತನ್ನ ಭಾಷಣಗಳ ಮೂಲಕ ದಾಳಿ ನಡೆಸುತ್ತಾ, ತಾನು ಹಿಂದಿನಿಂದಲೂ ಇದಕ್ಕೆ ಸಿದ್ಧನಾಗಿದ್ದೆ ಎಂದು ತೋರಿಸುತ್ತಿದ್ದಾರೆ. ಏನೇ ಇದ್ದರೂ ಮಹಾರಾಷ್ಟ್ರ ರಾಜಕಾರಣದಲ್ಲಿ ಮಾತಿನ ಬಲ ಇರುವ ಒಬ್ಬ ‘ಠಾಕ್ರೆ’ಯನ್ನು ಕಡೆಗಣಿಸುವಂತಿಲ್ಲ!
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...