Homeಅಂತರಾಷ್ಟ್ರೀಯಭಾರತ ಪಾಕಿಸ್ತಾನ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ಕರ್ತಾರ್ ಪುರ್‌ ಕಾರಿಡಾರ್ ಅಂದ್ರೆ ಏನು?

ಭಾರತ ಪಾಕಿಸ್ತಾನ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ಕರ್ತಾರ್ ಪುರ್‌ ಕಾರಿಡಾರ್ ಅಂದ್ರೆ ಏನು?

- Advertisement -

ಭಾರತ ಮತ್ತು ಪಾಕಿಸ್ತಾನ, ಎರಡೂ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ಕರ್ತಾರ್ ಪುರ್‌ ಕಾರಿಡಾರ್ ನವೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಇಂತಹ ಸಂಭ್ರಮದ ವಿಷಯ ಈಗ ಟೀಕೆ, ಆರೋಪಗಳಿಗೆ ಗುರಿಯಾಗಿ ದೇಶಾದ್ಯಂತ ಸದ್ದು ಮಾಡುತ್ತಿದೆ.

ಯಾವುದು ಈ ಕರ್ತಾರ್ ಪುರ್‌ ಕಾರಿಡಾರ್

ಸಿಖ್ಖರ ಪವಿತ್ರ ಸ್ಥಳಗಳಲ್ಲೊಂದು “ಗುರುದ್ವಾರ್ ದರ್ಬಾರ್ ಸಾಹಿಬ್”. ಸಿಖ್‌ರ ಧರ್ಮಗುರು ಗುರುನಾನಕ್‌ರವರ ಸಮಾಧಿ ಇರುವ ಸ್ಥಳ. ಇದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ ಜಿಲ್ಲೆಯ ಕರ್ತಾರ್ ಪುರದಲ್ಲಿದೆ. ಸಿಖ್ಖರ ಜೀವಿತಾವಧಿಯಲ್ಲಿ ಈ ಸ್ಥಳವನ್ನು ಒಮ್ಮೆಯಾದರೂ ನೋಡಲೇಬೇಕೆಂಬುದು ಅವರ ನಂಬಿಕೆ. ಇಲ್ಲವಾದರೆ ಅದು ತಮ್ಮ ಪಾಪವೆಂದು ಅವರು ಭಾವಿಸುತ್ತಾರೆ. ಪಾಕಿಸ್ತಾನಕ್ಕೆ ಸೇರಿರುವ ಲಾಹೋರ್ ಪ್ರದೇಶದಲ್ಲಿ ಹಾಗೂ ಪಂಜಾಬ್‍ನಲ್ಲಿರುವ ಭಾರತದ ಗಡಿಯಿಂದ ಕೇವಲ 4.7 ಕಿ.ಮೀ ಸಮೀಪದಲ್ಲಿ ಈ ಸ್ಥಳವಿದೆ. ಆದರೆ ಈ ಸ್ಥಳಕ್ಕೆ ಭಾರತೀಯರು ಹೋಗಬೇಕಾದರೆ ಸುಮಾರು 125 ಕಿ.ಮೀ ಸುತ್ತಾಟದ ಪ್ರಯಾಣ ಬೆಳೆಸಬೇಕು. ಅಲ್ಲದೆ ಪಾಕಿಸ್ತಾನದಿಂದ ವೀಸಾ ಕೂಡ ಪಡೆದುಕೊಳ್ಳಬೇಕಾಗಿತ್ತು. ಇಷ್ಟೆಲ್ಲಾ ಕಸರತ್ತು ಮಾಡಲಾಗದ ಕೆಲವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಅಂತರಾಷ್ಟ್ರೀಯ ಗಡಿಯಲ್ಲಿ ನಿಂತು ಬೈನಾಕುಲರ್(ದೂರದರ್ಶಕ)ನ ಸಹಾಯದಿಂದ ನೋಡಿ ತೃಪ್ತಿ ಪಟ್ಟುಕೊಂಡು ಜೀವನದ ಸಾರ್ಥಕತೆಯೆಂದು ಭಾವಿಸುತ್ತಿದ್ದರು.

ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ ಸಮಾಧಿ ಇರುವ ಕರ್ತಾರ್ ಪುರವನ್ನು ಪವಿತ್ರ ಸ್ಥಳವೆಂದು ಸಿಖ್ಖರು ಪೂಜಿಸುವ ಈ ಪ್ರದೇಶಕ್ಕೆ ಭಾರತೀಯರಿಗೆ ಮುಕ್ತ ಅವಕಾಶ ಕಲ್ಪಿಸುವ ವಿಚಾರ ಹಲವಾರು ವರ್ಷಗಳಿಂದ ಚರ್ಚೆಯಲ್ಲಿದೆ. 1999ರಲ್ಲಿ ದೆಹಲಿ ಮತ್ತು ಲಾಹೋರ್ ನಡುವೆ ಬಸ್ ವ್ಯವಸ್ಥೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಈ ಚರ್ಚೆ ಪ್ರಾರಂಭವಾಗಿತ್ತು. ಅಂದಿನ ಭಾರತದ ಪ್ರಧಾನಿಯಾಗಿದ್ದ ಅ.ಬಿ.ವಾಜಪೇಯಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಕರ್ತಾರ್ ಪುರ್ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಆ ಪ್ರಸ್ಥಾಪ ಪ್ರಸ್ತಾಪವಾಗಿಯೇ ನೆನೆಗುದಿಗೆ ಬಿದ್ದಿತ್ತು.

2018ರಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದರು. ತಮ್ಮ ಪ್ರಮಾಣವಚನ ಸಂದರ್ಭದಲ್ಲಿ ಭಾರತದಿಂದ ಕರ್ತಾರ್‌ಪುರಕ್ಕೆ ರಸ್ತೆ ಸೌಲಭ್ಯ ಕಲ್ಪಿಸಿ ಮುಕ್ತ ಪ್ರವೇಶ ನೀಡುವುದಾಗಿ ಘೋಷಿಸಿದ್ದರು. ಅದಾದ ಮೂರು ತಿಂಗಳ ನಂತರ 2018ರ ನವೆಂಬರ್‌ನಲ್ಲಿ ಕರ್ತಾರ್ ಪುರ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ್ದರು. ಕರ್ತಾರ್‌ಪುರದಿಂದ ಭಾರತದ ಗುರುದಾಸ್ ಪುರದ ದೇರೆ ಬಾಬ ನಾಸಿಕ್‍ಗೆ 4.7 ಕಿ.ಮೀ ಉದ್ದದ ಕಾರಿಡಾರ್ ಇದಾಗಿದೆ. 2019ರ ನವೆಂಬರ್‌ನಲ್ಲಿ ಗುರುನಾನಕ್ ಅವರ 550ನೇ ಜನ್ಮ ಜಯಂತಿಯಿದೆ. ಆ ವೇಳೆಗೆ ಕಾರಿಡಾರ್‌ನಲ್ಲಿ ಸಂಚಾರ ಆರಂಭಗೊಳಿಸುವುದಾಗಿ ಇಮ್ರಾನ್ ಖಾನ್ ತಿಳಿಸಿದ್ದರು. ಅಂತಯೇ ನವೆಂಬರ್ 1ರಂದು ಈ ಕಾರಿಡಾರ್ ಉದ್ಘಾಟನೆಗೊಳ್ಳುತ್ತಿದೆ. ಇನ್ನು ಮುಂದೆ ಭಾರತೀಯರ ಪ್ರವೇಶಕ್ಕೆ ಕರ್ತಾರ್‌ ಪುರ್ ತೆರೆದುಕೊಳ್ಳಲಿದೆ. ಭಾರತೀಯ ಸಿಖ್ ಯಾತ್ರಿಗಳು ತಮ್ಮ ಪುಣ್ಯ ಸ್ಥಳವನ್ನು ಮುಕ್ತ ಪ್ರವೇಶದೊಂದಿಗೆ ಕಣ್ತುಂಬಿಕೊಳ್ಳುವ ಅವಕಾಶವನ್ನು ಕಲ್ಪಸಿಕೊಡಲಾಗಿದೆ.

ಕಾರಿಡಾರ್ ಅನ್ನು ಬರ್ಲಿನ್ ಗೋಡೆಯ ಪತನಕ್ಕೆ ಹೋಲಿಸಿದ್ದ ಇಮ್ರಾನ್ ಖಾನ್

2018ರ ನವೆಂಬರ್ 28ರಂದು ಭಾರತ ಮತ್ತು ಪಾಕಿಸ್ತಾನಕ್ಕೆ ಮುಕ್ತ ಪ್ರವೇಶ ಕಲ್ಪಿಸುವ ಕರ್ತಾರ್ ಪುರ್ ಕಾರಿಡಾರ್‌ಗೆ ಚಾಲನೆ ನೀಡಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದರು. ತಮ್ಮ ಮಾತಿನಲ್ಲಿ ಈ ಯೋಜನೆಯನ್ನು ಜರ್ಮನಿಯ ಬರ್ಲಿನ್ ಗೋಡೆಗೆ ಹೋಲಿಸಿದ್ದರು. ಜರ್ಮನ್ ದೇಶವನ್ನು ಪೂರ್ವ ಜರ್ಮನ್ ಮತ್ತು ಪಶ್ಚಿಮ ಜರ್ಮನ್ ಎಂದು ಇಬ್ಬಾಗಿಸಿ ಬರ್ಲಿನ್‍ನಲ್ಲಿ ಗೋಡೆಯನ್ನು ಕಟ್ಟಲಾಗಿತ್ತು. 1990ರ ದಶಕದಲ್ಲಿ ಈ ಗೋಡೆಯನ್ನು ಕೆಡವಿ ಇಬ್ಬಾಗವಾಗಿದ್ದ ದೇಶಗಳ ಜನರನ್ನು ಒಂದುಗೂಡಿಸಿ ಒಂದೇ ದೇಶವೆಂದು ಘೋಷಿಸಲಾಗಿತ್ತು. ಅಂತೆಯೇ ಪಾಕಿಸ್ತಾನದ ಕರ್ತಾರ್‌ಪುರ್‌ಗೆ ಭಾರತೀಯರಿಗೆ ಮುಕ್ತ ಅವಕಾಶ ನೀಡಿರುವುದು ಶತ್ರುಗಳಂತೆ ಕಾದಾಡುತ್ತಿದ್ದ ದೇಶಗಳ ನಡುವೆ ಸಾಮರಸ್ಯ ಸಂಬಂಧವನ್ನು ತರಲಿದೆ ಎಂಬ ಭಾವ ಅವರ ಮಾತಿನಲ್ಲಿತ್ತು.

ಕಾರಿಡಾರ್ ನಿರ್ಮಾಣಕ್ಕೆ ಕಾರಣವಾಯ್ತಾ ಆ ಅಪ್ಪುಗೆ..

2018ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಂತ್ರಿಯೂ ಆಗಿದ್ದ ನವಜೋದ್ ಸಿಂಗ್ ಸಿಧು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರನ್ನು ಸಿಧು ಅಪ್ಪಿಕೊಂಡಿದ್ದರು. ಈ ಅಪ್ಪುಗೆಯನ್ನು ಭಾರತೀಯರು ಕಟುವಾಗಿ ಟೀಕಿಸಿದ್ದರು. ಕೆಲವು ದಿನಗಳ ನಂತರ ಈ ಟೀಕೆಗೆ ಪ್ರತಿಕ್ರಿಯಿಸಿದ್ದ ಸಿಧು ಭಾರತ ಮತ್ತು ಕರ್ತಾರ್ ಪುರ್ ನಡುವೆ ಮುಕ್ತ ಸಂಪರ್ಕ ಕಲ್ಪಿಸುವ ಬಗ್ಗೆ ಪಾಕ್ ತೀರ್ಮಾನಿಸಿದೆ. ಅದಕ್ಕಾಗಿ ನಾನು ಅವರನ್ನು ಅಪ್ಪಿಕೊಂಡೆ ಎಂದು ಹೇಳಿದ್ದರು. ಈ ‍ಘಟನೆ ನಡೆದ ಮೂರು ತಿಂಗಳ ನಂತರ ಕಾರಿಡಾರ್ ನಿರ್ಮಾಣಕ್ಕೆ ಶಂಕುಸ್ಥಾಪನೆಯೂ ನಡೆಯಿತು. ಆ ದಿನವೂ ಸಿಧು ಭಾಗವಹಿಸಿದ್ದರು.

ಅಂತೂ ಸಿಖ್ ಯಾತ್ರಿಗಳಿಗೆ “ಗುರುದ್ವಾರ್ ದರ್ಬಾರ್ ಸಾಹಿಬ್‍ಗೆ ಮುಕ್ತ ಪ್ರವೇಶ ದೊರೆಯುಂತಾಗಿದೆ. ಈ ಕಾರಿಡಾರ್‌ನ ಉದ್ಘಾಟನಾ ಸಮಾರಂಭಕ್ಕೆ ಭಾರತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮದ್ ಹೇಳಿದ್ದಾರೆ. ಆದರೆ ಈ ಬಗ್ಗೆ ಮನಮೋಹನ್ ಸಿಂಗ್‌ರವರು ಯಾವುದೇ ನಿರ್ಧಾರ ಕೈಗೊಂಡಿಲ್ಲ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial