Homeಮುಖಪುಟ'ಮಹಿಷಾ ದಸರಾ,' ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌

‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌

ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಸಾರುತ್ತಿವೆ. ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ಆಳಿದ ರಾಜ ಈ ಮಹಿಷ. ಕೇರಳ ರಾಜ್ಯದಲ್ಲಿ ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಮಹಿಷನನ್ನು ಸ್ಮರಿಸುತ್ತಾರೆ.

- Advertisement -

ಕಳೆದ ಐದಾರು ವರ್ಷಗಳಿಂದ ‘ಮಹಿಷ ದಸರಾ’ ಎನ್ನುವುದು ಹೆಚ್ಚುಹೆಚ್ಚು ಚಾಲ್ತಿಗೆ ಬರುತ್ತಿದೆ. ಈ ಮೂಲಕ ಹೂತುಹೋಗಿರುವ ಇತಿಹಾಸವನ್ನು ಮತ್ತೆ ಮುನ್ನಲೆಗೆ ತಂದು ತಿಳಿಹೇಳುವ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇತಿಹಾಸ, ಪುರಾಣ ಮತ್ತು ಶಾಸ್ತ್ರಗಳ ತುಂಬಾ ವೈದಿಕರ ವಿಚಾರಗಳೇ ತುಂಬಿ ನಿಂತಿವೆ. ಹೀಗಿರುವಾಗ ಅವೈದಿಕ ಪರಂಪರೆಯಲ್ಲಿ ಬಹುಸಮುದಾಯಗಳನ್ನು ಪೊರೆದವರು ಯಾರು? ಎನ್ನುವುದನ್ನು ಮತ್ತೆ ಮತ್ತೆ ಕೇಳಿಕೊಂಡಾಗ ಈ ತರದ ಅವಲೋಕನ ಸಾಧ್ಯವಾಗುತ್ತದೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು, ಮಹಿಷನೂರು ಮೊದಲಾದ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಇಂದಿನ ಮೈಸೂರು ಮಹಿಷನಾಳಿದ ಬಹುದೊಡ್ಡ ಪ್ರದೇಶವಾಗಿತ್ತು. ವಿಂಧ್ಯಪರ್ವತದ ಮಹಿಸ್ಮೃತಿ ತಪ್ಪಲಿನವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ ಈ ಪ್ರದೇಶ, ಮೂಲನಿವಾಸಿ ರಾಜನೊಬ್ಬನ ಕತೆಯನ್ನು ಹಿಡಿದಿಟ್ಟುಕೊಂಡಿದೆ. ಇದೆಲ್ಲದಕ್ಕೆ ಸಾಕ್ಷಿಯಾಗಿ ಇತಿಹಾಸದ ಪುಟಗಳು ನಿಂತಿವೆ.

ಈ ದೇಶದಲ್ಲಿ ಮೂಲನಿವಾಸಿಗಳ, ಬುಡಕಟ್ಟುಗಳ ಮತ್ತು ಬೌದ್ಧರ ಮೇಲಿನ ದಾಳಿಗಳು ಇತಿಹಾಸವನ್ನು ಛಿದ್ರಛಿದ್ರವಾಗಿಸಿವೆ. ಈ ಛಿದ್ರತೆಯಲ್ಲಿ ಮೇಲುಗೈ ಪಡೆದ ವೈದಿಕ ಪರಂಪರೆ ಅನೇಕ ಕಟ್ಟುಕತೆಗಳ ರೂಪದಲ್ಲಿ ಇತಿಹಾಸವನ್ನು ನೋಡುವಂತೆ ನಮ್ಮ ಕಣ್ಣುಗಳನ್ನು ರೂಪಿಸಿದೆ. ಇದರಿಂದ ಮೂಲನಿವಾಸಿ ಮತ್ತು ಅಸುರ ರಾಜರುಗಳು ಹೆಚ್ಚು ಮನದಾಳದಲ್ಲಿ ಬೇರೂರಿದಂತಾಗಿದೆ. ಇದರ ಹಿಂದೆ ವೈದಿಕತೆಯನ್ನೇ ಹೆಚ್ಚು ವಿಜೃಂಭೀಕರಿಸುವ, ಆ ಮೂಲಕ ಸಾಮ್ರಾಜ್ಯವನ್ನು ಆಳುವ ಮತ್ತು ಶತಶತಮಾನಗಳ ಕಾಲ ಮಾನಸಿಕ ಗುಲಾಮಗಿರಿಗೆ ಒಳಗಾಗಿ ಬದುಕುವಂತೆ ಮಾಡುವ ಹುನ್ನಾರವನ್ನು ಈ ವರ್ಗ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಲೇ ಇದೆ. ಇದಕ್ಕಾಗಿ ಅದು ಕೋಟ್ಯಾಂತರ ದೇವರುಗಳನ್ನು ಸೃಷ್ಟಿಸಿ ತಮ್ಮ ಬೇಳೆಯನ್ನು ಇಂದಿಗೂ ಬೇಯಿಸಿಕೊಳ್ಳುತ್ತಲೇ ಇದ್ದಾರೆ. ಕುರು, ಪಾಂಚಾಲ, ಚೇರ, ವೆಂಗಿ, ಮಗಧ ಮುಂತಾದ ರಾಜಮನೆತನಗಳ ಭವ್ಯ ಪರಂಪರೆಯನ್ನು ಕಟ್ಟಿಕೊಟ್ಟ ಹಾಗೆ ನಾಗ ಮತ್ತು ಮಹಿಷ ಮಂಡಲದ ಮನೆತನಗಳ ಇತಿಹಾಸವನ್ನು ಕಟ್ಟಿಕೊಡುವ ಗೋಜಿಗೆ ಅಕ್ಷರ ಬಲ್ಲವರು ಹೋಗಿಲ್ಲ. ಇದರ ಪರಿಣಾಮ ಇವೆರಡರ ಅಪ್ರತಿಮ ಹೋರಾಟಗಾರರು ಅಂಚಿಗೆ ಸರಿದರು. ಇದರಲ್ಲಿ ಮಹಿಷನೂ ಒಬ್ಬ.

ಭಾರತದ ವೈದಿಕಶಾಹಿ ಇಲ್ಲಿನ ಮೂಲನಿವಾಸಿಗಳ ಪರಂಪರೆಯನ್ನು ಒಡೆದು ಮೇಲುಗೈ ಸಾಧಿಸಿದಂತೆಲ್ಲ ಇಲ್ಲಿನ ಅಪ್ರತಿಮ ನಾಯಕರನ್ನು ಖಳನಾಯಕರಂತೆ ಬಿಂಬಿಸಲು ಪ್ರಾರಂಭಿಸಿತು. ರಾಕ್ಷಸ, ಅಸುರ, ದಾನವ, ಕಿನ್ನರ, ಕಿಂಪುರುಷ ಮೊದಲಾದ ಪದಗಳಿಗೆ ಅಪಾರ್ಥಗಳನ್ನು ಹೊರಿಸಿ ಜನತೆಯ ಮನದಲ್ಲಿ ಇವರ ಕೀರ್ತಿಪತಾಕೆಗಳನ್ನೇ ಶಾಶ್ವತವಾಗಿ ನಕಾರಾತ್ಮಕ ಧೋರಣೆ ಬರುವಂತೆ ಮಾಡಿದರು. ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಚಿತ್ರಿಸಿದರು. ಇವರ ಹಾದಿಯಲ್ಲಿ ಕಾಣುವ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರವನ್ನು ಈ ಮೂಲಕ ಮಾಡುತ್ತಾ ಬಂದರು. ಈ ವೈದಿಕಶಾಹಿ ತನಗೆ ವಿರುದ್ಧವಾದುದೆಲ್ಲವನ್ನು ರಾಕ್ಷಸ ಪರಂಪರೆಯೆಂದು ವಿಂಗಡಿಸಿ, ಅವರು ಕ್ರೂರಾತಿಕ್ರೂರರೆಂದು ಬಿಂಬಿಸಿದರು. ‘ಇವರನ್ನು ನಾಶಗೊಳಿಸಲು ದೇವನೊಬ್ಬನು ಅವತರಿಸಿ ಬರಬೇಕಾಯಿತು. ಹೀಗೆ ಬಂದದ್ದರಿಂದಲೇ ಈ ರಾಕ್ಷಸನ ಸಂಹಾರ ಸಾಧ್ಯವಾಗಿ ಲೋಕಕಲ್ಯಾಣವಾಯಿತು’ ಎನ್ನುವ ಹಸಿ ಸುಳ್ಳಿನ ಕತೆಯನ್ನು ಕಟ್ಟಿ ಜನತೆಗೆ ಆಚರಣೆ ಮೂಲಕ ನಂಬಿಸಿದರು. ಇದರ ಪರಿಣಾಮವಾಗಿ ಮೈಸೂರಿನ ದೊರೆಯಾದ ಮಹಿಷ ಹೊರನಿಲ್ಲುವಂತಾಗಿ ಕಟ್ಟಿದ ಕತೆಯ ಕುರುಹಾಗಿ ಚಾಮುಂಡಿ ಒಳ ನಿಲ್ಲುವಂತಾಗಿದೆ.

ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಸಾರುತ್ತಿವೆ. ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ಆಳಿದ ರಾಜ ಈ ಮಹಿಷ. ಕೇರಳ ರಾಜ್ಯದಲ್ಲಿ ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಮಹಿಷನನ್ನು ಸ್ಮರಿಸುತ್ತಾರೆ. ಈ ಧನ್ಯತೆಯ ಭಾವದಿಂದ ಆಚರಿಸಲ್ಪಡುವ ಹಬ್ಬವೇ ದಸರಾ. ಇತಿಹಾಸವನ್ನು ತಿರುಚಿ ಅಂತೆಕಂತೆಗಳ ಪುರಾಣ ಕಟ್ಟುವಲ್ಲಿ ಪ್ರಸಿದ್ಧರಾದ ವೈದಿಕರು ‘ಬ್ರಾಹ್ಮಣನ ವೇಷದಲ್ಲಿ ಬಂದು ಮೂರು ಮೊಳ ಭೂಮಿಯನ್ನು ದಾನ ಪಡೆದು ವಿಷ್ಣು ಅವನನ್ನು ಭೂಮಿಗೆ ತುಳಿದನು’ ಎನ್ನುವ ಕತೆ ಕಟ್ಟಿದಂತೆ ಅತಿ ಕೆಟ್ಟವನಾದ ಮಹಿಷನನ್ನು ಸಂಹರಿಸಲು ಪಾರ್ವತಿ ದೇವಿಯೇ ಶಕ್ತಿ ಪಡೆದು ಬಂದು ಅವನನ್ನು ಸಂಹರಿಸಿದಳು’ ಎನ್ನುವ ಕತೆಯನ್ನು ಕಟ್ಟಿ ನಂಬಿಸಿದರು. ಈ ನಂಬಿಸಿದ ಫಲವೇ ಇಂದಿನ ಚಾಮುಂಡಿ ದಸರಾ. ಇದಕ್ಕೆ ರಾಜಮಹಾರಾಜರ ಒಪ್ಪಿತ ಮುದ್ರೆ ಬಿದ್ದಿದ್ದರಿಂದ ಇದು ನಿರಂತರ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಂದಮೇಲೂ ಇಂತವೇ ಮನಸ್ಸುಗಳು ಇಲ್ಲಿ ಉಸಿರಾಡುತ್ತಿರುವುದರಿಂದ ಈಗಲೂ ಅದ್ದೂರಿ ದಸರಾ ಹಬ್ಬ ‘ನಾಡದೇವತೆ’ ಎನ್ನುವ ಹೆಸರಿನಡಿ ನಡೆಯುತ್ತಲೇ ಇದೆ.

ಇತಿಹಾಸದ ಮಹತ್ವದ ಅಂಶಗಳು ಒಂದಲ್ಲ ಒಂದು ಕಾಲದಲ್ಲಿ ಬೆಳಕಿಗೆ ಬಂದೇ ಬರುತ್ತವೆ. ಹೀಗೆ ಬೆಳಕಿಗೆ ಬಂದ ಪ್ರತಿಫಲವೇ ವೈದಿಕರು ಕಟ್ಟಿರುವ ಎಲ್ಲ ದುಷ್ಟಶಕ್ತಿಗಳ ಹಿಂದಿನ ನೈಜತೆ ಬೆಳಕಿಗೆ ಬರುತ್ತಿದೆ. ಹೀಗೆ ಬೆಳಕಿಗೆ ಬಂದ ಕಾರಣದಿಂದಲೇ ಅಸುರ ಶಕ್ತಿಗಳಾದ ಬಲಿಚಕ್ರವರ್ತಿ, ಮಹಿಷ, ರಾವಣ, ನರಕಾಸುರ ಮುಂತಾದವರ ಬಗ್ಗೆ ಹೊಸ ಹೊಸ ದೃಷ್ಟಿಕೋನಗಳು ಬೆಳೆಯುತ್ತಿವೆ. ವಿದ್ಯೆ, ಸಂಪತ್ತು, ಅಧಿಕಾರ ಎಲ್ಲವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದ ವೈದಿಕಶಾಹಿ ಸಹಜವಾಗಿಯೇ ತನಗೆ ವಿರುದ್ಧದಾದುದ್ದೆಲ್ಲವನ್ನು ಇನ್ನಿಲ್ಲದ ತಂತ್ರಗಳ ಮೂಲಕ ಹಣಿಯಲು ಪ್ರಾರಂಭಿಸಿತು. ಇದೆಲ್ಲವು ಶಾಶ್ವತವಾಗಿರಲು ಜನತೆಯ ನಂಬಿಕೆಯೊಂದೇ ಪ್ರಬಲ ಅಸ್ತ್ರವೆಂದು ತಿಳಿದ ಈ ಬೌದ್ಧಿಕಶಾಹಿಗಳು ಕತೆ, ಗೀತೆ, ಮಹಾಕಾವ್ಯ, ಪುರಾಣ, ಶಾಸ್ತ್ರ, ವೇದ ಮುಂತಾದವುಗಳನ್ನು ಜನತೆಯ ಮನದಾಳದಲ್ಲಿ ಬೇರೂರಿಸಿತು. ಇದರಿಂದ ಅಪ್ರತಿಮ ದೊರೆಯಾದ, ನಾಡಿನ ಹೆಮ್ಮೆಯ ಪ್ರತಿನಿಧಿಯಾದ, ಮೂಲನಿವಾಸಿ ರಾಜನಾದ ಮಹಿಷನಂತವರು ಖಳನಾಯಕರಾಗಿ ಜನಮನದಲ್ಲಿ ನಿಂತರು. ಇಂದು ಇತಿಹಾಸ ಪುನರ್ ವ್ಯಾಖ್ಯಾನಕ್ಕೆ ನಾಡಿನ ಪ್ರಗತಿಪರ ಮತ್ತು ದಮನಿತ ಸಮುದಾಯಗಳು ಮುಂದಾಗಿವೆ. ಇದಕ್ಕೆ ಪ್ರೇರಕ ಶಕ್ತಿಯಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ದೈತ್ಯ ಪ್ರತಿಭೆ ಎದುರಿಗಿದೆ. ಇದೆಲ್ಲವನ್ನು ಬಳಸಿಕೊಂಡು ಮಹಿಷದಸರಾ ಮಾಡಲು ಸೇನೆಯಂತೆ ಮುನ್ನುಗ್ಗಿದೆ ಮೂಲನಿವಾಸಿಗಳ ದಂಡು. ಇದು ಕಾರ್ಯಗತಗೊಳ್ಳಲಿ. ನಾಡಿನ ಹೆಮ್ಮೆಯ ವೀರನಾದ ಮಹಿಷ ಮತ್ತೆ ಎಲ್ಲರ ಎದೆಯಲ್ಲಿ ನಿಲ್ಲಲಿ. ಈ ಮೂಲಕ ಅಗೋಚರಕ್ಕೆ ಒಳಗಾಗಿರುವ ಎಲ್ಲ ಮೂಲನಿವಾಸಿ ದೇವರುಗಳು ಅಂಚಿನಿಂದ ಮುನ್ನಲೆಗೆ ಬಂದು ನಿಲ್ಲುವಂತಾಗಲಿ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಯಚೂರು: ಡಾ. ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

0
ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ತೆರವುಗೊಳಿಸಿ, ಧ್ವಜಾರೋಹಣ ನಡೆಸಿರುವ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ನಾಡಿನ ಚಿಂತಕರು, ಸಾಹಿತಿಗಳು, ವಕೀಲರು ತಮ್ಮ...
Wordpress Social Share Plugin powered by Ultimatelysocial