ಉತ್ತರಪ್ರದೇಶದ ಪೂರ್ವಭಾಗದಲ್ಲಿರುವ ಸೊನಭದ್ರ ಜಿಲ್ಲೆಯ ಉಂಭಾ ಎನ್ನುವ ಹಳ್ಳಿಗೆ 32 ಟ್ರ್ಯಾಕ್ಟರ್‍ಗಳಲ್ಲಿ ಸುಮಾರು 200 ಜನರೊಂದಿಗೆ ಗ್ರಾಮದ ಮುಖ್ಯಸ್ಥ ಯಗ್ಯಾ ಸಿಂಗ್ ಬಂದ. ಅವರ ಉದ್ದೇಶ; ಅಲ್ಲಿಯ ಆದಿವಾಸಿ ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು. ಅದಕ್ಕೆ ಆದಿವಾಸಿ ಜನರು ಪ್ರತಿಭಟಿಸಿದಾಗ ನಡೆದದ್ದು ಯಾವುದೇ ನರಮೇಧಕ್ಕಿಂತ ಕಡಿಮೆಯಿಲ್ಲ.
ಸತತ ಒಂದು ಗಂಟೆ ಸಮಯ ಯಗ್ಯಾ ಸಿಂಗ್ ಮತ್ತವನ ಸಂಗಡಿಗರು ಪ್ರತಿಭಟಿಸಿದ ಆದಿವಾಸಿಗಳ ಮೇಲೆ ಗುಂಡಿನ ಸುರಿಮಳೆಗೈದರು. ಗುಂಡು ಹಾರಿಸಿದ ನಂತರ, ಅಲ್ಲಿ ಬಿದ್ದ ಜನರು ಸತ್ತಿದ್ದಾರೆಯೇ ಇಲ್ಲವೇ ಎನ್ನುವುದನ್ನು ಖಾತ್ರಿಪಡಿಸಲು ಲಾಠಿಯಿಂದ ಹೊಡೆದುನೋಡಿದರು. 3 ಮಹಿಳೆಯರನ್ನು ಒಳಗೊಂಡಂತೆ ಸತ್ತವರ ಸಂಖ್ಯೆ 10 ಹಾಗೂ ಇತರ 28 ಜನರು ಗಂಭಿರವಾಗಿ ಗಾಯಗೊಂಡಿದ್ದಾರೆ.

ಗ್ರಾಮಸ್ಥರು ಪೊಲೀಸ್ ಠಾಣೆಗೆ, ಡಿಎಮ್‍ಗೆ, ಎಸ್‍ಡಿಎಮ್‍ಗೆ ಕರೆ ಮಾಡಿದರು. ಆದರೆ ಅದರಿಂದ ಯಾವ ಸಹಾಯವೂ ಆಗಲಿಲ್ಲ. ದುಷ್ಕರ್ಮಿಗಳು ತಾವು ಬಂದಿದ್ದ ಕೆಲಸವನ್ನು ಮಾಡಿ ಜಾಗ ಖಾಲಿ ಮಾಡಿದ ನಂತರ, ಘಟನೆಯಾದ ಒಂದು ಗಂಟೆಯ ಮೇಲೆ ಪೊಲೀಸರು ಸ್ಥಳಕ್ಕೆ ತಲುಪಿದರು. ಅಂದಿನಿಂತ ಆ ಗ್ರಾಮ ಶೋಕದಲ್ಲಿ ಮುಳುಗಿದೆ.
ಘಟನೆಯಾದ ಎರಡು ದಿನಗಳವೆರಗೆ ಮಾಧ್ಯಮಗಳ ಘೋರಮೌನ
ಸ್ಥಳೀಯ ಹಿಂದಿ ಪತ್ರಿಕೆಗಳನ್ನು ಹೊರತುಪಡಿಸಿ ಯಾವುದೇ ಮುಖ್ಯವಾಹಿನಿಯ ದಿನಪತ್ರಿಕೆಗಳು ಈ ಘಟನೆಯ ವರದಿ ಮಾಡಲಿಲ್ಲ. ಈ ಘಟನೆಯಲ್ಲಿ ಮಡಿದ ಕುಟುಂಬದವರನ್ನು ಭೆಟಿಯಾಗಲು ಹೊರಟಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೊನಭದ್ರದಲ್ಲಿಯೇ ತಡೆಯಲಾಯಿತು, ಅಲ್ಲಿಯವರೆಗೆ ಮಾಧ್ಯಮಗಳ ಮೌನ ಎದ್ದುಕಾಣುವಂತಿತ್ತು.
ಎರಡು ಪ್ರಶ್ನೆಗಳು..
ಅಲ್ಲಿಯ ತನಕ ಮಾಧ್ಯಮ ನಿದ್ರೆ ಮಾಡುತ್ತಿತ್ತೆ? ರಾಜಕೀಯ ಬಿಗ್‍ವಿಗ್‍ಗಳು ಅಲ್ಲಿ ತಲುಪುವ ತನಕ ಹಾಗೂ ಆ ಘಟನೆಯನ್ನು ಸೆನ್ಸೇಷನಲ್ ಸ್ಟೋರಿ ಮಾಡುವ ಅವಕಾಶ ಕಾಣುವ ತನಕ ಆ ಘಟನೆ ವರದಿ ಮಾಡಲು ಯೋಗ್ಯವಾದ ಘಟನೆಯಾಗಿದ್ದಿಲ್ಲವೇ?
ಒಂದು ವೇಳೆ ಪ್ರಿಯಾಂಕಾ ಗಾಂಧಿ ಘಟನಾಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಸನ್ನಿವೇಶವನ್ನು ಪರಿಶೀಲಿಸಿದ್ದರೆ ಏನಾಗುವುದಿತ್ತು? ಯೋಗಿ ಸರಕಾರವು ವಿರೋಧಪಕ್ಷ ಏನನ್ನೂ ನೋಡಲೇಬಾರದು ಎಂದು ಏಕೆ ಬಯಸಿತ್ತು?

ಈ ಘಟನೆಯನ್ನು ರಾಷ್ಟ್ರದ ಗಮನಕ್ಕೆ ತಂದಿದ್ದಕ್ಕೆ ನಾವು ಪ್ರಿಯಾಂಕಾ ಗಾಂಧಿಗೆ ಕ್ರೆಡಿಟ್ ನೀಡಲೇಬೇಕಿದೆ, ಅವರು ಘಟನಾಸ್ಥಳಕ್ಕೆ ಹೋಗುವ ಪ್ರಯತ್ನ ಮಾಡದೇ ಇದ್ದಿದ್ದರೆ ಈ ಘಟನೆ ಸ್ಥಳೀಯ ಪತ್ರಿಕೆಗಳಲ್ಲಿಯೇ ಮುಚ್ಚಿಹೋಗುವ ಸಂಭವವಿತ್ತು.
ಈಗ ಈ ವಿಷಯ ರಾಜಕೀಯ ವಲಯಗಳಲ್ಲಿ ಮತ್ತು ಸುದ್ದಿತಾಣಗಳಲ್ಲಿ ಅಲೆಗಳನ್ನು ಸೃಷ್ಟಿಸಿದ ಸಮಯದಲ್ಲಿ, ಮುಖ್ಯವಾಹಿನಿಯ ಮಾಧ್ಯಮಗಳು ಈ ಘಟನೆಯನ್ನು ಯೋಗಿ ವರ್ಸಸ್ ಪ್ರಿಯಾಂಕಾ, ಯೋಗಿ ವರ್ಸಸ್ ವಿರೋಧ ಪಕ್ಷ ಎಂದು ತೋರಿಸಿ ನಿಜವಾದ ವಿಷಯವನ್ನು ನೋಡುಗರಿಗೆ ತೋರಿಸುತ್ತಿಲ್ಲ. ಮುಗ್ಧ ಆದಿವಾಸಿಗಳ ಮಾರಣಹೋಮ ಹಾಗೂ ಅದಕ್ಕೆ ಕಾರಣವಾದ ಭೂಕಬಳಿಕೆ ಮತ್ತು ಅಕ್ರಮ ಭೂ ವರ್ಗಾವಣೆ ಯ ವಿಷಯವನ್ನು ತೋರಿಸದೇ ಈ ಮಾಧ್ಯಮಗಳು ವಂಚನೆ ಮಾಡುತ್ತಿವೆ ಎಂದರೆ ತಪ್ಪಾಗದು.

ಭಾರತದ ಮಧ್ಯ ಹಾಗೂ ಪೂರ್ವದಲ್ಲಿ ಆದಿವಾಸಿಗಳ ಕೊಲೆಗಳು, ಬಂಧನಗಳು, ಚಿತ್ರಹಿಂಸೆ ಮತ್ತು ಅವರನ್ನು ಸಾಮೂಹಿಕವಾಗಿ ಒತ್ತಾಯದಿಂದ ಸ್ಥಳಾಂತರಿಸುವುದು ವ್ಯಾಪಕವಾಗಿವೆ. ಸೋನಭದ್ರ ಇದಕ್ಕೆ ಅಪವಾದವಾಗಿಲ್ಲ. ಮಾಧ್ಯಮಗಳು ಆದಿವಾಸಿಗಳ ವಿಷಯದಲ್ಲಿ ಒಂದು ರೀತಿಯ ಚಾಣಾಕ್ಷ ಮೌನ ವಹಿಸಿಕೊಂಡೇ ಬಂದಿವೆ ಹಾಗೂ ಪ್ರವಾಸೋದ್ಯಮ ಅಥವಾ ಮಾವೋವಾದಿ ವಿರೋಧಿ ಪ್ರಚಾರದ ವಿಷಯದಲ್ಲಿ ಮಾತ್ರ ಅಲ್ಲಿ ತಮ್ಮ ಗಮನವನ್ನು ಹರಿಸುತ್ತವೆ. ಇವುಗಳಿಗೆ ಸತ್ತ ಆದಿವಾಸಿಗಳ ಅಥವಾ ಅವರಿಗೆ ನ್ಯಾಯ ಒದಗಿಸುವ ಬಗ್ಗೆ ಯಾವುದೇ ಕಾಳಜಿಯಿಲ್ಲ ಆದರೆ ಇಬ್ಬರು ರಾಜಕೀಯ ಧುರೀಣರ ಮಧ್ಯದ ಜಗಳವನ್ನು ತಮ್ಮ ಟಿಆರ್‍ಪಿಗೋಸ್ಕರ ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಮಾತ್ರ ಗೊತ್ತಿದೆ.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಏನು ಮಾಡುತ್ತಿವೆ?
ಮೇಲೆ ಹೇಳಿದ ನಾಚಿಕೆಗೇಡಿನ ವಿಷಯ ಮಾಧ್ಯಮಗಳ ಮೌನಕ್ಕೇ ಸೀಮಿತವಾಗಿಲ್ಲ. ಇದು ವ್ಯವಸ್ಥಿತವೂ ಮತ್ತು ಆಳವೂ ಆಗಿದೆ. ರಾಷ್ಟ್ರೀಯ ಮಾದ್ಯಮಗಳಲ್ಲಿ ಸುದ್ದಿ ಮಾಡಿದ ನಂತರ ರಾಜಕೀಯ ಪಕ್ಷಗಳು ತಮ್ಮ ಎಂದಿನ ಹಗ್ಗಜಗ್ಗಾಟ ಪ್ರಾರಂಭಿಸಿವೆ. ಕಾಂಗ್ರಸ್ ಪಕ್ಷವು ಬಿಜೆಪಿಯ ಆಡಳಿತವನ್ನು ಗೂಂಡಾ ರಾಜ್ ಎಂದು ದೂಷಿಸಿದರೆ, ಬಜೆಪಿಯು ನೆಹರು, ಗಾಂಧಿ ಮತ್ತು ಹಿಂದಿನ 70 ವರ್ಷಗಳ ಆಳ್ವಿಕೆಯನ್ನು ಇಂದಿನ ಪರಿಸ್ಥತಿಗೆ ಕಾರಣ ಎಂದು ಹೇಳುತ್ತಿದೆ.
ಯೋಗಿ ಆದಿತ್ಯನಾಥ ಈಗಾಗಲೇ ಉತ್ತರಪ್ರದೇಶದಲ್ಲಿ ಜಂಗಲ್ ರಾಜ್ ನಡೆಸುವ ಕುಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಹಾಗೂ ಘಟನೆಯ ಸ್ಥಳಕ್ಕೆ ಮಾರಣಹೋಮವಾದ ನಾಲ್ಕು ದಿನಗಳವರೆಗೆ ಭೇಟಿ ನೀಡುಲು ಹೋಗಲಿಲ್ಲ. ಆದರೆ ವಿರೋಧಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಸ್ಥಳಕ್ಕೆ ಭೇಟಿ ನೀಡಿದಂತೆ ತಡೆಯಲು ಮತ್ತು ಸೆಕ್ಷನ್ 144 ವಿಧಿಸಲು ಯಾವುದೇ ತಡ ಮಾಡಲಿಲ್ಲ.
ಈ ಮಾರಣಹೋಮದಿಂದ ತನ್ನ ಸರಕಾರವನ್ನು ದೋಷಮುಕ್ತಗೊಳಿಸಲು ಪ್ರತಿದಿನ ಒಂದೊಂದು ಹೊಸ ಕಾರಣಗಳನ್ನು ತರುತ್ತಿದ್ದಾರೆ. 1955ರ ಕಾಂಗ್ರೆಸ್ ಸರಕಾರವನ್ನು ಇಂದಿನ ಸ್ಥಿತಿಗೆ ಕಾರಣವೆಂದೂ ದೂರಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಆರೋಪಿಗಳು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಸಂಬಂಧ ಉಳ್ಳವರಾಗಿದ್ದಾರೆ ಎಂದು ಹೇಳಿ ವಿರೋಧಪಕ್ಷಗಳನ್ನು ದೂರಿದ್ದಾರೆ.
ಹಾಗೂ ಮಾಧ್ಯಮಗಳು ಇದನ್ನೇ ಎತ್ತಿಕೊಂಡು, ಇದರ ಸತ್ಯಾಸತ್ತತೆಗಳನ್ನು ಪ್ರಶ್ನಿಸದೆ, ಯಾವುದೇ ಫ್ಯಾಕ್ಟ್ ಚೆಕ್ ಮಾಡದೇ ಸುದ್ದಿಯ ಮುಖ್ಯಾಂಶಗಳನ್ನಾಗಿ ಮಾಡಿಬಿಟ್ಟವು. ಆವಾಗಿನಿಂದ, ಈ ವಿಷಯವನ್ನು ಒಂದು ರಾಜಕೀಯ ಸರ್ಕಸ್ ಮಾಡಲಾಗಿ, ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧಪಕ್ಷಗಳ ನಡುವೆ ದೋಷಾರೋಪಣೆಗಳ ಆಟವನ್ನಾಗಿಸಿವೆ.
ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷವನ್ನು ಪ್ರಶ್ನಿಸಲು ಇದೊಂದು ಒಳ್ಳೆಯ ಅವಕಾಶವಾಗಿತ್ತು. ಆದರೆ ಅವರು ತಮ್ಮ ಟ್ವಿಟರ್ ಅಕೌಂಟ್‍ಗಳಲ್ಲಿ ಕಾಟಾಚಾರಕ್ಕೆ ಬರೆದು ಕೈತೊಳೆದುಕೊಂಡಿದ್ದಾರೆ; ಇದಕ್ಕೆ ಪ್ರಿಯಾಂಕಾ ಗಾಂಧಿ ಮಾತ್ರ ಅಪವಾದವಾಗಿದ್ದಾರೆ. ಲೋಕಸಭೆಯು ಅಧಿವೇಶನ ನಡೆಯುತ್ತಿರುವಾಗ ಯಾವ ಒಬ್ಬ ಲೋಕಸಭೆ ಸದಸ್ಯನೂ ಇದರ ಬಗ್ಗೆ ಪ್ರಶ್ನೆ ಎತ್ತದಿರುವುದು ಕ್ಷಮಾರ್ಹವಲ್ಲ.
ಈ ಮಧ್ಯೆ, ಈ ಘೋರ ಅಪರಾಧವನ್ನು ಖಂಡಿಸಿ ಉತ್ತರ ಭಾರತಾದ್ಯಂತ ನಾಗರಿಕ ಸಮಾಜದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋನಭದ್ರ ಮಾರಣಹೋಮ : ಆದಿವಾಸಿ ಪ್ರದೇಶದ ದಾರುಣ ಕಥೆ
ಈ ಮಾರಣಹೋಮದ ಹಿಂದೆ ಆದಿವಾಸಿಗಳ ಪ್ರದೇಶದಲ್ಲಿ ನಡೆಯುವ ಭೂ ಆಕ್ರಮಣದ ಇತಿಹಾಸವುದೆ; ಇತರ ಆದಿವಾಸಿ ಪ್ರದೇಶಗಳ ಕಥೆಗಿಂತ ಇದು ಹೆಚ್ಚು ಭಿನ್ನವಿಲ್ಲ.
ಉತ್ತರಪ್ರದೇಶದ ಈ ಸೋನಭದ್ರ ಜಿಲ್ಲೆ ತನ್ನ ಅರಣ್ಯ, ಗುಡ್ಡಗಳು ಮತ್ತು ಖನಿಜ ಸಂಪನ್ಮೂಲಗಳಿಂದ ತುಂಬಿದೆ. ಈ ಸಂಪನ್ಮೂಲಗಳೇ ಇಲ್ಲಿಯ ಆದಿವಾಸಿಗಳಿಗೆ ಶಾಪವಾಗಿ ಪರಣಮಿಸಿವೆ. ಇದರ ಕಥೆ ಶುರುವಾಗುವುದು 1955 ರಲ್ಲಿ.
ಆಗ ಅಲ್ಲಿಯ ಆಗಿನ ರಾಜ್ಯಪಾಲರ ಸಂಬಂಧಿಕರಾದ ಮಹೇಶ್ವರ ಪ್ರಸಾದ ನಾರಾಯಣ ಎನ್ನುವವರ ಸರಕಾರದ ಅಧಿಕಾರಿಗಳೊಂದಿಗೆ ಕೈಮಿಲಾಯಿಸಿ ಅಲ್ಲಿಯ ಭೂಮಿಯನ್ನು ಕಬಳಿಸಿ ಒಂದು ಸೊಸೈಟಿ ರಚಿಸಿದರು. 1989ರಲ್ಲಿ ಆ ಸೊಸ್ಶೆಟಿಯ ಭೂಮಿಯನ್ನು ಅದರ ಸದಸ್ಯರ ಹೆಸರಿಗೆ ಮಾಡಲಾಯಿತು. ಅದರಲ್ಲಿ ಒಬ್ಬರು ನಿವೃತ್ತ ಐಏಎಸ್ ಅಧಿಕಾರಿ ಪ್ರಭಾತ್ ಕುಮಾರ್ ಮಿಶ್ರ. ಈ ನಿವೃತ್ತ ಐಎಎಸ್ ಅಧಿಕಾರಿಯು 2017 ರಲ್ಲಿ ಸುಮಾರು 168 ಎಕರೆ ಜಮೀನನ್ನು ಅಲ್ಲಿಯ ಪ್ರಬಲ ಗುಜ್ಜರ್ ಸಮುದಾಯದ ಯಗ್ಯಾ ದತ್ ಅವರಿಗೆ ಮಾರಾಟ ಮಾಡಿದರು.
ಈ ಯಗ್ಯಾ ದತ್ ಎನ್ನುವ ವ್ಯಕ್ತಿ ಅಲ್ಲಿ ಉಳುಮೆ ಮಾಡುತ್ತಿರುವ ಆದಿವಾಸಿಗಳಿಂದ ತೆರಿಗೆ ಸಂಗ್ರಹಿಸುತ್ತ ಬಂದಿದ್ದಾನೆ. ಈ ತೆರಿಗೆ ಸಂಗ್ರಹ ಅಕ್ರಮ ಎಂದು ಹೇಳಬೇಕಾಗಿಲ್ಲ. ಈತ ಈ ಭೂಮಿಯನ್ನು ಖರೀದಿ ಮಾಡಿದ ಸಮಯದಿಂದ ಅಲ್ಲಿಯ ಆದಿವಾಸಿಗಳನ್ನು ತನ್ನ ತೋಳ್ಬಲದಿಂದ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಲೇ ಇದ್ದಾನೆ. ಅದಕ್ಕೆ ಈ ಆದಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗೆ ಹಲವಾರು ಪತ್ರಗಳನ್ನು ಬರೆದಿದ್ದರೂ ಯಾವ ಪ್ರಯೋಜನವೂ ಆಗಿಲ್ಲ.
ಈ ಭೂಮಿಯಲ್ಲಿ ಆದಿವಾಸಿಗಳು ತಮ್ಮ ಅನೇಕ ತಲೆಮಾರುಗಳಿಂದ ಉಳುಮೆ ಮಾಡುತ್ತಲೇ ಇದ್ದಾರೆ. 2006ರ ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಆದಿವಾಸಿ ಸಮುದಾಯಗಳಿಗೆ ನೆಲೆಸುವ ಹಕ್ಕನ್ನು ಹೊಂದಿದ್ದಾರೆ. ಇದೇ ರೀತಿ ತಮ್ಮ ಭೂಮಿಯನ್ನು ಕಳೆದುಕೊಂಡವರು ಎಷ್ಟು ಆದಿವಾಸಿಗಳೆಂದು ಹೇಳಬೇಕಾದರೆ, ಭೂಮಿಯನ್ನು ಅಕ್ರಮವಾಗಿ ಕಳೆದುಕೊಳ್ಳದ ಒಬ್ಬ ಆದಿವಾಸಿಯೂ ಸಿಗುವುದಿಲ್ಲ.
ಅರಣ್ಯಭೂಮಿಯ ಈ ಅಂಕಿಅಂಶಗಳನ್ನು ಕಲೆಹಾಕಿ ಸರಕಾರಕ್ಕೆ ಸಲ್ಲಿಸುವ ಸಲುವಾಗಿ ಒಂದು ಸಮೀಕ್ಷೆಯನ್ನು 1983ರಲ್ಲಿ ಪ್ರಾರಂಭಿಸಲಾಗಿತ್ತು. ಅದಕ್ಕೆ ಈಗ 36 ವರ್ಷ ವಯಸ್ಸು; ಸಮೀಕ್ಷೆ ಪೂರ್ಣಗೊಂಡಿಲ್ಲ ಆದರೆ.., ಸುಮಾರು 75% ಭೂದಾಖಲೆಗಳನ್ನು ರದ್ದು ಮಾಡಿ, ಆದಿವಾಸಿಗಳಲ್ಲದ ಇತರ ವ್ಯಕ್ತಿಗಳಿಗೆ ಭೂಹಸ್ತಾಂತರ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಈ ಸಮೀಕ್ಷೆ.
ಈ ಮಾರಣಹೋಮಕ್ಕೆ ಕಾರಣರಾದ ಯಗ್ಯಾ ದತ್ ಗೆ ಶಿಕ್ಷೆ ಆಗಬಹುದು ಆದರೆ ಸರಕಾರ ಆದಿವಾಸಿ ಪ್ರದೇಶಗಳಲ್ಲಿ ನಡೆಯುತ್ತಿರುವ ಭೂಆಕ್ರಮಣವನ್ನು ನಿಲ್ಲಿಸುವುದೇ? ಆ ನಿವೃತ್ತ ಅಧಿಕಾರಿಯ ಕುಟುಂಬ ಇಂದಿಗೂ ಸುಮಾರು 450 ಎಕರೆ ಜಮೀನನ್ನು ಹೊಂದಿದೆ. ಆ ಪ್ರಕರಣವನ್ನು ಇನ್ನೊಂದು ಭೂವ್ಯಾಜ್ಯ ಎಂದು ನೋಡದೇ ಭಾರತದ ಆದಿವಾಸಿಗಳ ಭೂಹಗರಣದ ಸಮಸ್ಯೆ ಎಂದು ಪರಿಗಣಿಸಿ ಪರಿಹಾರವನ್ನು ಕೊಂಡುಕೊಳ್ಳುವುದೇ?


