ಭಾರತ ಪಾಕಿಸ್ತಾನದ ನಡುವೆ ನಡೆದ ಐಸಿಸಿ ಟಿಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಿ ಪಾಕ್ ಗೆದ್ದಾಗ ಸಂಭ್ರಮಿಸಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಶ್ರೀನಗರದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(UAPA)ಯ ಅಡಿಯಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಶ್ರೀ ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಶ್ರೀನಗರದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅವುಗಳ ಆಧಾರದ ಮೇಲೆ ಶ್ರೀನಗರದ ಕರಣ್ ನಗರ್ ಮತ್ತು ಸೌರ ಪೊಲೀಸ್ ಠಾಣೆಗಳಲ್ಲಿ ಭಯೋತ್ಪಾದನಾ ವಿರೋಧಿ ಪ್ರಕರಣಗಳ ಅಡಿಯಲ್ಲಿ ಕೇಸು ದಾಖಲಾಗಿಸಲಾಗದೆ.
ಶ್ರೀ ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಧಿಕಾರಿಗಳು ಈ ಕುರಿತು ಫ್ಯಾಕ್ಟ್ ಫೈಂಡಿಂಗ್ ಸಮಿತಿ ರಚಿಸಲಾಗಿದ್ದು ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುವುದು ಮತ್ತು ವಿಡಿಯೋ ವೈರಲ್ ಆಗಿದ್ದು ಹೇಗೆ ಎಂದು ತನಿಖೆ ನಡೆಸಲು ನಿರ್ಧರಿಸಿದ್ದಾರೆ. 48 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. “ನಮ್ಮ ಸಂಸ್ಥೆಯಲ್ಲಿ ಸಂಭ್ರಮಾಚರಣೆ ನಡೆದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆಗಿದ್ದರೂ ಸತ್ಯಶೋಧನಾ ಸಮಿತಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ವೈರಲ್ ಆಗಿರುವ ವಿಡಿಯೋಗಳನ್ನು ಮತ್ತು ಅವುಗಳಲ್ಲಿರುವ ಜನರನ್ನು ಪರಿಶೀಲಿಸುವಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
I strongly disagree. If you think that they r not patriotic enough because they cheered for another team- u should have the courage and the belief to wean them back if u think they have gone patriotically astray. Punitive actions won’t help. Have not helped in the past either. https://t.co/xtHnpViX1S
— Sajad Lone (@sajadlone) October 26, 2021
ವಿದ್ಯಾರ್ಥಿಗಳ ಮೇಲಿನ ಪೊಲೀಸರ ಶಿಸ್ತುಕ್ರಮವನ್ನು ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಸರೆನ್ಸ್‌ನ ಮುಖಂಡ ಸಾಜಿದ್ ಲೋನ್ ಬಲವಾಗಿ ಖಂಡಿಸಿದ್ದಾರೆ. “ಇದನ್ನು ನಾನು ಒಪ್ಪುವುದಿಲ್ಲ. ಅವರು ಬೇರೆ ತಂಡಕ್ಕೆ ಹುರಿದುಂಬಿಸಿದ ಕಾರಣ ಅವರು ದೇಶಭಕ್ತರಲ್ಲ ಎಂದು ನೀವು ಭಾವಿಸಿದರೆ- ಅವರು ದೇಶಭಕ್ತಿಯ ದಾರಿ ತಪ್ಪಿದ್ದಾರೆಂದು ನೀವು ಭಾವಿಸಿದರೆ ಅವರನ್ನು ಹಿಂದಕ್ಕೆ ಕರೆತರುವ ಧೈರ್ಯ ಮತ್ತು ನಂಬಿಕೆಯನ್ನು ನೀವು ಹೊಂದಿರಬೇಕು. ದಂಡನಾತ್ಮಕ ಕ್ರಮಗಳು ಸಹಾಯ ಮಾಡುವುದಿಲ್ಲ. ಈ ಹಿಂದೆಯೂ ಸಹಾಯ ಮಾಡಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮೆಹಬೂಬ ಮುಫ್ತಿಯವರು ಟ್ವೀಟ್ ಮಾಡಿ, “ಗೃಹ ಸಚಿವರು ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಕೇಸು ಹಾಕುವ ಮೂಲಕ ತಮ್ಮ ಮನ್ ಕಿ ಬಾತ್ ಶುರು ಮಾಡಿದ್ದಾರೆ. ವಿದ್ಯಾವಂತ ಯುವಜನರು ಏಕೆ ಪಾಕಿಸ್ತಾನದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಅರಿಯುವ ಬದಲು ಭಾರತ ಸರ್ಕಾರ ಅವರ ಮೇಲೆ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಕ್ರಮಗಳು ಅವರನ್ನು ಮತ್ತಷ್ಟು ದೂರ ತಳ್ಳುತ್ತವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Lets agree to disagree & take it in the right spirit like Virat Kohli who was the first to congratulate the Pakistani cricket team.
— Mehbooba Mufti (@MehboobaMufti) October 25, 2021
ಮುಂದುವರಿದು, “ಪಾಕ್ ಗೆಲುವನ್ನು ಸಂಭ್ರಮಿಸುತ್ತಿರುವ ಕಾಶ್ಮೀರಿಗಳ ಮೇಲೆ ಇಷ್ಟೊಂದು ಕೋಪ ಏಕೆ? ಕೆಲವರು ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿ ಎಂದು ಕೊಲೆಗಡುಕ ಘೋಷಣೆಗಳನ್ನೂ ಕೂಗುತ್ತಿದ್ದಾರೆ. ಜಮ್ಮು ಕಾಶ್ಮೀರ ಛಿದ್ರಗೊಂಡಾಗ ಮತ್ತು ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಾಗ ಎಷ್ಟು ಮಂದಿ ಸಿಹಿ ಹಂಚಿ ಸಂಭ್ರಮಿಸಿದರು ಎಂಬುದನ್ನು ಯಾರೂ ಮರೆತಿಲ್ಲ. ನೀವು ಒಪ್ಪಬಹುದು ಅಥವಾ ಬಿಡಬಹುದು, ಪಾಕ್ ಗೆದ್ದಾಗ ಆ ತಂಡವನ್ನು ಮೊದಲು ಅಭಿನಂದಿಸಿದ ವಿರಾಟ್ ಕೊಹ್ಲಿಯವರ ಸರಿಯಾದ ಸ್ಫೂರ್ತಿಯನ್ನು ತೆಗೆದುಕೊಳ್ಳೋಣ” ಎಂದು ಮುಫ್ತಿ ಹೇಳಿದ್ದಾರೆ.
ಐಸಿಸಿ ಟಿಟ್ವೆಂಟಿ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ಎದರು 10 ವಿಕೆಟ್‌ಗಳ ಸೋಲು ಕಂಡಿತು. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯ ಮುಗಿದ ವೇಳೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್‌ರನ್ನು ಅಪ್ಪಿಕೊಂಡು ಅಭಿನಂದಿಸಿದರು. ಮತ್ತೊಬ್ಬ ಆಟಗಾರ ಪಾಕ್ ನಾಯಕ ಬಾಬರ್ ಅಜಂರಿಗೆ ಅಭಿನಂದನೆ ತಿಳಿಸಿದರು. ಈ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ “ನಿಜವಾದ ಕ್ರೀಡಾಸ್ಪೂರ್ತಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಅದೇ ರೀತಿ ಪಂದ್ಯದ ನಂತರ ಭಾರತದ ತಂಡದ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ತಾನದ ಆಟಗಾರರ ಜೊತೆ ಮಾತುಕತೆ ನಡೆಸಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಶಮಿ ಪರ ನಿಂತ ರಾಹುಲ್ ಗಾಂಧಿ, ಸಚಿನ್ ತೆಂಡೂಲ್ಕರ್
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಪಾಕಿಸ್ತಾನದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ 151 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಗೆಲುವಿನ ಸಿಹಿ ಉಂಡಿತು. ಆ ಮೂಲಕ ಪಾಕಿಸ್ತಾನ ತಂಡವು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಭಾರತದ ಎದುರು ಜಯ ದಾಖಲಿಸಿತು. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅದ್ಭುತ ಜೊತೆಯಾಟವಾಡಿದರು.
Spirit of Cricket!! ??? pic.twitter.com/pH6UfrRcKf
— Pakistan Cricket (@TheRealPCB) October 24, 2021
ಪಾಕ್ ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಪಾಕ್ ಆಟಗಾರರನ್ನು ಅಭಿನಂದಿಸುತ್ತಿರುವ ಫೋಟೊ ಹಂಚಿಕೊಂಡಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ “Spirit of Cricket” ಎಂದು ಬರೆದಿದೆ.
ಇದನ್ನೂ ಓದಿ: ಪಂದ್ಯ ಸೋತರೂ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಕೊಹ್ಲಿ, ಧೋನಿ!


