ಆ್ಯಸಿಡ್ ದಾಳಿಕೋರ ಹಾಗೂ ಆರೋಪಿ ನಾಗೇಶ್‌ನನ್ನು ಬಂಧಿಸಿ, ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಎಪಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, “ರಾಜ್ಯಾದ್ಯಂತ ಗಂಭೀರ ಅಪರಾಧಗಳ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕಕಾರಿ. ಅಸಮರ್ಥರು ಗೃಹಸಚಿವ ಹುದ್ದೆ ಅಲಂಕರಿಸಿರುವುದರಿಂದ ಜನರಿಗೆ ಕಾನೂನಿನ ಭಯವೇ ಇಲ್ಲವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಆ್ಯಸಿಡ್ ದಾಳಿಕೋರ ನಾಗೇಶ್‌ನನ್ನು ಶೀಘ್ರವೇ ಬಂಧಿಸಬೇಕು ಹಾಗೂ ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಉದ್ಯೋಗಿಗೆ ರಕ್ಷಣೆ ನೀಡುವುದರಲ್ಲಿ ವಿಫಲರಾದ ಮುತ್ತೂಟ್ ಫೈನಾನ್ಸ್ ಕಂಪನಿಯ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರವು ತಡಮಾಡದೇ ಸಂತ್ರಸ್ತ ಯುವತಿಗೆ ಒಂದು ಕೋಟಿ ರೂಪಾಯಿ ಪರಿಹಾರ ವಿತರಿಸಬೇಕು” ಎಂದು ಆಗ್ರಹಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಪೊಲೀಸ್ ಇಲಾಖೆಯ ಮೇಲೆ ಹಿಡಿತ ಸಾಧಿಸುವಲ್ಲಿ ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಘಟನೆ ನಡೆದು ಮೂರು ದಿನಗಳಾದರೂ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಗೃಹ ಸಚಿವರ ನಿರ್ಲಕ್ಷ್ಯವೇ ಕಾರಣ” ಎಂದು ಆರೋಪಿಸಿದರು.
“ಉದ್ಯೋಗಸ್ಥ ಮಹಿಳೆಯರ ರಕ್ಷಣೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ಹೆಚ್ಚಿನ ನಿಗಾ ವಹಿಸಬೇಕು” ಎಂದು ಒತ್ತಾಯಿಸಿದರು.
ಎಎಪಿ ಮುಖಂಡರಾದ ಸುಹಾಸಿನಿ ಫಣಿರಾಜ್, ಪಲ್ಲವಿ ಚಿದಂಬರ್, ಮರಿಯಾ ಹುಸೈನ್, ಶಿಲ್ಪ, ಸುಮನ್, ಗಾಯತ್ರಿ, ಸುರೇಶ್ ರಾಥೋಡ್, ಚನ್ನಪ್ಪ, ಸೀತಾರಾಮ್, ಶಶಿಧರ್ ಆರಾಧ್ಯ, ಶಾಮ್ ಪ್ರಕಾಶ್ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿರಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ
ನಗರದ ಸುಂಕದಕಟ್ಟೆ ಬಳಿ ಬೆಳಗಿನ ಹೊತ್ತು ಕೆಲಸಕ್ಕೆ ಹೊರಟಿದ್ದ 24 ವರ್ಷದ ಯುವತಿ ಮೇಲೆ ನಾಗೇಶ್ ಎಂಬ ಯುವಕ ಆ್ಯಸಿಡ್ ದಾಳಿ ನಡೆಸಿದ್ದಾನೆ. ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
“ತನ್ನ ಪ್ರೀತಿಯ ನಿವೇದನೆಯನ್ನು ನಿರಾಕರಿಸಿದಳು ಎಂದು ಆಕ್ರೋಶದಿಂದ ಯುವಕ ಆಸಿಡ್ ಎರಚಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 24 ವರ್ಷದ ಯುವತಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ” ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಭರವಸೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಸುಂಕದಕಟ್ಟೆ ಬಳಿ ಕೆಲಸಕ್ಕೆ ಹೊರಟಿದ್ದ ಯುವತಿ ಬಸ್ ನಿಲ್ದಾಣ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಬಂದ ಆರೋಪಿ ಯುವಕ ನಾಗೇಶ್ ಯುವತಿ ಮೇಲೆ ಏಕಾಏಕಿ ಆಸಿಡ್ ಎರಚಿ ಪರಾರಿಯಾಗಿದ್ದು ಆತನಿಗಾಗಿ ಬೆಂಗಳೂರು ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.


