ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮಹಾರಾಷ್ಟ್ರ ಕ್ಯಾಬಿನೆಟ್ ಮಂತ್ರಿಯನ್ನು ಹೆಸರಿಸಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಿವಸೇನೆ ಸಂಸದ ಅರವಿಂದ ಸಾವಂತ್ ಮಂಗಳವಾರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಪತ್ರ ಬರೆದಿದ್ದಾರೆ.
ಗೋಸ್ವಾಮಿ ‘ಕೆಲವು’ ಜನರ ಹಿತದೃಷ್ಟಿಯಿಂದ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ದಕ್ಷಿಣ ಮುಂಬೈ ಸಂಸದರಾದ ಅರವಿಂದ್ ಸಾವಂತ್ ಆರೋಪಿಸಿದರು.
ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಮತ್ತು ಸಚಿವ ಆದಿತ್ಯ ಠಾಕ್ರೆ ಅವರನ್ನು ಹೆಸರಿಸಿದೆ.
“ಪತ್ರಿಕೋದ್ಯಮದ ಹೆಸರಿನಲ್ಲಿ ಹಿಂದಿ ಸುದ್ದಿ ಚಾನೆಲ್ ರಿಪಬ್ಲಿಕ್ ಭಾರತ್ ಮತ್ತು ಇಂಗ್ಲಿಷ್ ನ್ಯೂಸ್ ಚಾನೆಲ್ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಬೇಜವಾಬ್ದಾರಿಯಿಂದ ಸುದ್ದಿಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿದ್ದಾರೆ. ಯಾವುದೇ ಪುರಾವೆಗಳಿಲ್ಲದೆ, ಸುದ್ದಿ ವಾಹಿನಿ ಮತ್ತು ಅದರ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವರ ಮೇಲೆ ಆರೋಪಗಳನ್ನು ಹೊರಿಸುತ್ತಿದ್ದಾರೆ” ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ಗೋಸ್ವಾಮಿ ಸುದ್ದಿ ಮಂಡಿಸುವಾಗ ರಾಜಕಾರಣಿಗಳು ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದಕ್ಕಾಗಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಶಿವಸೇನಾದ ಮತ್ತೊಬ್ಬ ನಾಯಕ ಆರೋಪಿಸಿದ್ದಾರೆ.
ಮಂಗಳವಾರ ಟಿವಿ ಚಾನೆಲ್‌ಗಳೊಂದಿಗೆ ಮಾತನಾಡಿದ ಸಾವಂತ್, ಯಾವುದೇ ಪ್ರಕರಣದ ಬಗ್ಗೆ ವರದಿ ಮಾಡುವಾಗ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ನಿಯಮದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ ಎಂದು ಹೇಳಿದರು.
“ಇತ್ತೀಚೆಗೆ, ಚಾನೆಲ್‌ಗಳು ಆರೋಪಿ ಯಾರೆಂಬುದನ್ನು ನಿರ್ಧರಿಸುತ್ತವೆ. ಕೆಲವು ಜನರನ್ನು ಹೆಸರಿಸಿ ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬಂತೆ ಬಿಂಬಿಸುತ್ತದೆ. ಅವರ ದೇಹ ಭಾಷೆ ಮತ್ತು ಇದನ್ನು ಮಂಡಿಸುವ ವಿಧಾನವು ತುಂಬಾ ಅಗೌರವವನ್ನುಂಟುಮಾಡುತ್ತದೆ.
ಇದು ಕೊನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಮಾತ್ರ ಹೆಸರಿಸುವ ಹಂತಕ್ಕೆ ಬಂದಿದೆ. ಇದು ಕೇವಲ ವ್ಯಕ್ತಿಯನ್ನು ಅಗೌರವಗೊಳಿಸುವುದಲ್ಲ ಆದರೆ ಇಡೀ ರಾಜ್ಯಕ್ಕೇ ಅವಮಾನ ಮಾಡಿದಂತಾಗಿದೆ. ಹಾಗಾಗಿ ಅವರ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ” ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿ ಕೈಮುಗಿದು ಕ್ಷಮೆಯಾಚಿಸಲಿ: ಶಿವಸೇನೆ ಮುಖಂಡನ ಆಗ್ರಹ


