ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಟಿವಿಯಲ್ಲಿ ಕೈಮುಗಿದು ಕ್ಷಮೆಯಾಚಿಸಬೇಕು. ಇಲ್ಲವಾದರೆ ಆತ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕು ಎಂದು ಶಿವಸೇನೆ ಮುಖಂಡ ಕಿಶೋರ್ ತಿವಾರಿ ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಚರ್ಚೆಯ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ನಿಂದನೆ ಮತ್ತು ಅವಹೇಳನ ಮಾಡಿರುವ ಅರ್ನಾಬ್ ಕ್ಷಮೆ ಕೇಳಬೇಕು ಎಂದು ತಿವಾರಿ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಪಾಲುದಾರರಾದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಪಾಲ್ಘರ್ ಜನಸಮೂಹ ಪ್ರಕರಣಕ್ಕೆ ಕಾರಣವೆಂದು ಆರೋಪಿಸಿದ್ದ ಅರ್ನಾಬ್ ವಿರುದ್ಧ ಕಾಂಗ್ರೆಸ್ ಕ್ರಿಮಿನಲ್ ಮೊಕದ್ದಮೆ ಹೂಡಿದೆ.
ಗೋಸ್ವಾಮಿಗೆ ಕಾನೂನು ನೋಟಿಸ್ ನೀಡಬೇಕು. ಅವರು ಚಾನೆಲ್‌ನಲ್ಲಿ ಚರ್ಚೆಗಳನ್ನು ನಡೆಸುವ ವಿಧಾನವು ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ನಿಂದನೆಯಾಗಿರುತ್ತದೆ ಎಂದು ತಿವಾರಿ ಹೇಳಿದ್ದಾರೆ.
ಚರ್ಚೆಯ ಸಮಯದಲ್ಲಿ, ಗೋಸ್ವಾಮಿ ತಮ್ಮ ಉದ್ದೇಶಪೂರ್ವಕ ಅಸಹಕಾರ ಮತ್ತು ನ್ಯಾಯಾಲಯದ ಆದೇಶದ ತಿರಸ್ಕಾರವನ್ನು ಮುಂದುವರೆಸಿದರು. ಸುಶಾಂತ್ ಪ್ರಕರಣದ ಕುರಿತು ನ್ಯಾಯಾಲಯದ ವಿಚಾರಣೆಯ ಮೇಲೆ ಪ್ರಭಾವ ಬೀರಲು ಮತ್ತು ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರು ಎಂದು ಅವರು ಆರೋಪಿಸಿದ್ದಾರೆ.
‘ಒಮ್ಮೆ ಕಾರ್ಯಕ್ರಮದ ನಡುವೆ, ಸುಶಾಂತ್ ಪ್ರಕರಣದ ‘ಪ್ರಧಾನ ಆರೋಪಿ’ ಉದ್ಧವ್ ಠಾಕ್ರೆ ಎಂದು ಕರೆದಿದ್ದಾರೆ. ಇದು ಠಾಕ್ರೆ ಕುಟುಂಬದ ಬಗ್ಗೆ ನಿಮ್ಮ ಪೂರ್ವಾಗ್ರಹ, ವಿಕೃತ, ಪಕ್ಷಪಾತ ಮತ್ತು ಪೂರ್ವ ನಿರ್ಧಾರಿತ ಶೈಲಿಯಲ್ಲಿಯಾಗಿದೆ ಎಂದು ತಿವಾರಿ ಹೇಳಿದ್ದಾರೆ.
ಚರ್ಚೆಗಳ ಶೈಲಿ ಮತ್ತು ವಿಧಾನ “ಸುಳ್ಳು, ಸಂಯೋಜಿತ ಕಥೆಗಳು ಮತ್ತು ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಆಧರಿಸಿದೆ” ಎಂದು ಅವರು ಹೇಳಿದರು. ಇದು ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ನಿಂದನೆಯಾಗಿದೆ ಎಂದು ಆರೋಪಿಸಿದ್ದಾರೆ.
ರಿಪಬ್ಲಿಕ್ ಟಿವಿಯು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಲಲಿತ್ ಮೋದಿ ಪ್ರಕರಣದೊಂದಿಗೆ ತಳುಕು ಹಾಕಿತ್ತು. ಈ ಆಘಾತವನ್ನು ಅವರು ಸಹಿಸಿಕೊಳ್ಳಲಾಗಲಿಲ್ಲ. ಇದು ಅವರ ಆರೋಗ್ಯ ಕುಸಿತಕ್ಕೆ ಕಾರಣವಾಗಿ, ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಕ್ಯಾನ್ಸರ್‌ಗೆ ಬಲಿಯಾದರು ಎಂದು ತಿವಾರಿ ಆರೋಪಿಸಿದ್ದಾರೆ.
ರಿಪಬ್ಲಿಕ್ ಟಿವಿ ಠಾಕ್ರೆ ಕುಟುಂಬಕ್ಕೆ ಕಳಂಕ ತರುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಸಂಪೂರ್ಣ ದುರುಪಯೋಗಕ್ಕೆ ಕಾರಣವಾಗಿದೆ. ಹಾಗಾಗಿ ಗೋಸ್ವಾಮಿ ಪ್ರೈಮ್ ಸಮಯದಲ್ಲಿ, ತನ್ನ ದೂರದರ್ಶನದಲ್ಲಿ “ಕೈಮುಗಿದು ಕ್ಷಮೆಯಾಚಿಸಬೇಕು” ಎಂದು ತಿವಾರಿ ಆಗ್ರಹಿಸಿದ್ದಾರೆ.
ಇದಕ್ಕೆ ಒಪ್ಪಲಿಲ್ಲವಾದರೆ ಅವರು ಕೋರ್ಟ್ ನಲ್ಲಿ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅರ್ನಾಬ್‌ಗೆ ನೋಟಿಸ್ ನೀಡಿದ ಮುಂಬೈ ಪೊಲೀಸ್