| ಗೌರಿ ಲಂಕೇಶ್
ಜೂನ್ 3, 2009 (ಸಂಪಾದಕೀಯದಿಂದ) |
ಮಾನವತಾವಾದಿ ಬಿನಾಯಕ್ ಸೇನ್‍ರವರ ಅಕ್ರಮ ಬಂಧನ ಕುರಿತಂತೆ ಬರಹಗಾರ ಅಸೀಮ್ ಶ್ರೀವಾಸ್ತವ ಅವರು ಇತ್ತೀಚೆಗೆ ಬರೆದಿರುವ ಲೇಖನದಲ್ಲಿ ಹಲವು ಸ್ವಾರಸ್ಯಕರವಾದ ಸಂಗತಿಗಳಿವೆ. ಅವನ್ನು ಇಲ್ಲಿ ನೀಡಬೇಕೆನಿಸುತ್ತಿದೆ.
ಮೊದಲನೆಯದು ಇಬ್ಬರು ಖ್ಯಾತ ಅಮೆರಿಕನ್ನರ ನಡುವೆ ಸಂಭವಿಸಿದ್ದು.
ಮೆಕ್ಸಿಕೋ ದೇಶದ ಮೇಲೆ ಅಮೆರಿಕ ದಾಳಿ ಮಾಡಿದಾಗ ಖ್ಯಾತ ನಿಸರ್ಗವಾದಿ ಹೆನ್ರಿ ಥೋರೊ ಅದನ್ನು ಪ್ರತಿಭಟಿಸಿದರಲ್ಲದೆ, ತಮ್ಮ ಸರ್ಕಾರದ ನಿಲುವಿನ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ತೆರಿಗೆಗಳನ್ನು ಕಟ್ಟಲು ನಿರಾಕರಿಸಿದ್ದರು. ಆಗ ಅಮೆರಿಕನ್ ಸರ್ಕಾರ ಥೋರೊ ಅವರನ್ನು ಬಂಧಿಸಿ ಜೈಲಿಗಟ್ಟಿತು.
ಥೋರೊ ಅವರ ಸ್ನೇಹಿತ ಮತ್ತು ಹಿತೈಷಿಯಾಗಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಬರಹಗಾರ ರಾಲ್ಫನಾಲ್ವ ಎಮರ್ಸನ್ ಥೋರೊರನ್ನು ನೋಡಲು ಜೈಲಿಗೆ ಬಂದರು. ಜೈಲಿನ ಸರಳುಗಳ ಹಿಂದಿದ್ದ ಥೋರೊ ಅವರನ್ನು ಕಂಡು ಎಮರ್ಸನ್ ಅವರು “ನೀನು ಇದರೊಳಗೆ ಏನು ಮಾಡುತ್ತಿದ್ದೀಯಾ?” ಎಂದು ಕೇಳಿದರು. ಆಗ ಥೋರೊ “ನೀನು ಹೊರಗಡೆ ಏನು ಮಾಡುತ್ತಿದ್ದೀಯಾ?” ಎಂದು ಮರುಪ್ರಶ್ನೆ ಹಾಕುವ ಮೂಲಕ ಉತ್ತರಿಸಿದರು. ಅದನ್ನು ಕೇಳಿ ಎಮರ್ಸನ್‍ರವರ ಮುಖ ನಾಚಿಕೆಯಿಂದ ಕೆಂಪೇರಿತು.
ಅಂದರೆ, ತನ್ನಂಥವರನ್ನೇ ಸರ್ಕಾರ ಬಂಧಿಸಿರುವಾಗ ಎಮರ್ಸನ್ ಥರದ ಜನ ಹೊರಗಡೆ ಏನು ಮಾಡುತ್ತಿದ್ದಾರೆ ಎಂಬುದೇ ಥೋರೊ ಅವರ ಪ್ರಶ್ನೆಯಾಗಿತ್ತು.
ಎರಡನೆ ಸಂಗತಿ ಎರಡು ರೀತಿಯ ಜನರ ಪಟ್ಟಿಗಳಿಗೆ ಸಂಬಂಧಪಟ್ಟಿದ್ದು.
ಮೊದಲನೆ ಪಟ್ಟಿಯಲ್ಲಿ ಸಾಕ್ರೆಟೀಸ್, ನೆಲ್ಸನ್ ಮಂಡೇಲ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಜಯಪ್ರಕಾಶ್ ನಾರಾಯಣ್, ಫೈಜ್ ಅಹಮ್ಮದ್ ಫೈಜ್, ಬಿನಾಯಕ್ ಸೇನ್, ಇರೋಮ್ ಶರ್ಮಿಳಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಹೆನ್ರಿ ಥೋರೊ ಮತ್ತು ಫ್ರೆಡೋರ್ ದಸ್ತೋವಸ್ಕಿ ತರಹದ ಜನ ಇದ್ದಾರೆ. ಅವರೆಲ್ಲರ ನಡುವೆ ಒಂದು ಸಾಮ್ಯತೆ ಇದೆ. ಆ ಸಾಮ್ಯತೆ ಏನು?
ಎರಡನೆ ಪಟ್ಟಿಯಲ್ಲಿ ಒಸಾಮಾ ಬಿನ್ ಲಾಡನ್, ಜಗದೀಶ್ ಟೈಟ್ಲರ್, ಸಜ್ಜನ ಕುಮಾರ್, ನರೇಂದ್ರ ಮೋದಿ, ಜ್ಯೋತಿ ಬಸು, ಬಾಳಾ ಠಾಕ್ರೆ, ಜಾರ್ಜ್ ಬುಷ್, ಟೋನಿ ಬ್ಲೇರ್, ಡೊನಾಲ್ಡ್ ರಮ್ಸ್‍ಫೆಲ್ಟ್, ಡಿಕ್ ಚೆನಿ, ಹಿಟ್ಲರ್ ಮತ್ತು ಜೋಸೆಫ್ ಸ್ಟಾಲಿನ್ ಥರದವರಿದ್ದಾರೆ. ಇವರೆಲ್ಲರ ನಡುವೆಯೂ ಒಂದು ರೀತಿಯ ಸಾಮ್ಯತೆ ಇದೆ. ಈ ಸಾಮ್ಯತೆ ಏನು?
ಮೊದಲನೆ ಪಟ್ಟಿಯಲ್ಲಿರುವವರೆಲ್ಲರೂ ಸರ್ಕಾರ ನಡೆಸುತ್ತಿದ್ದ ಅನ್ಯಾಯಗಳನ್ನು ಪ್ರತಿಭಟಿಸಿದ್ದಕ್ಕೆ ಜೈಲಿಗೆ ದೂಡಲ್ಪಟ್ಟವರು. ಎರಡನೇ ಪಟ್ಟಿಯಲ್ಲಿರುವವರು ಸಾಮೂಹಿಕ ಮಾರಣಹೋಮಕ್ಕೆ ಕಾರಣೀಭೂತರಾಗಿದ್ದರೂ, ಎಂದೂ ಶಿಕ್ಷೆಗೆ ಗುರಿಯಾಗದೆ ಸಮಾಜದಲ್ಲಿ ಮೆರೆದವರು.
ಶ್ರೀವಾಸ್ತವ ಅವರ ಲೇಖನದಲ್ಲಿನ ಮೂರನೆ ಸಂಗತಿ ದಾಮೋದರ್ ರಥ್ ಎಂಬಾತನನ್ನು ಕುರಿತದ್ದು, ಒರಿಸ್ಸಾದ ಭಿನ್ನಮತೀಯರಾದ ರಥ್ ಅವರು ಕೆಲ ವರ್ಷಗಳ ಹಿಂದೆ ಒಂದು ಜೈಲಿನ ಬಾಗಿಲಲ್ಲಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಅವರ ಬೇಡಿಕೆ ಏನಾಗಿತ್ತೆಂದರೆ ಒರಿಸ್ಸಾ ಸರ್ಕಾರ ತನ್ನ ಪೆದ್ದುತನದಿಂದಾಗಿ ಹಲವಾರು ಅಮಾಯಕ ಜನರನ್ನು ಅಕ್ರಮಬಾಗಿ ಜೈಲಿನಲ್ಲಿಟ್ಟಿದ್ದರಿಂದ ತನ್ನನ್ನೂ ಜೈಲಿನಲ್ಲಿ ಬಂಧಿಸಬೇಕೆಂಬುದೇ ಆಗಿತ್ತು.
ರಥ್‍ರವರು ಹೀಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಹತ್ತು ದಿನಗಳ ಕಾಲ ಮುಂದುವರೆಸಿದಾಗ ಕೊನೆಗೂ ಜೈಲಧಿಕಾರಿಯೊಬ್ಬ ಬಂದು “ನೀನು ಯಾಕೆ ಇಷ್ಟು ಕಷ್ಟ ಅನುಭವಿಸುತ್ತಿದ್ದೀಯಾ?” ಎಂದು ಕೇಳಿದ. ಆಗ ರಥ್ “ಜೈಲಿನ ಹೊರಗಡೆಗಿಂತ ಜೈಲಿನೊಳಗೇ ಉತ್ತಮ ಜನರಿದ್ದಾರೆ. ಅದಕ್ಕೆ” ಎಂದು ಉತ್ತರಿಸಿದರು. ಮರುಕ್ಷಣವೇ ರಥ್‍ರವರ ಮಿತ್ರರನ್ನು ಬಂಧಮುಕ್ತರನ್ನಾಗಿಸಲಾಯಿತು.
ಶ್ರೀವಾಸ್ತವ ಅವರ ಲೇಖನದ ಸಾರಾಂಶ ಇವತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ನೆಪದಲ್ಲಿ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ತೊಡಗಿದೆ. ಆದರೆ ನಾವು ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದ್ದರೆ ಸರ್ಕಾರವೇ ಭಯೋತ್ಪಾದಕನಂತೆ ವರ್ತಿಸುವುದನ್ನು ನಾವೆಲ್ಲರೂ ಜೊತೆಗೂಡಿ ತಡೆಯಬೇಕಿದೆ.


