ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ, ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಸೋಮವಾರ (ಡಿ.8) ನ್ಯಾಯಾಲಯ ಖುಲಾಸೆಗೊಳಿಸಿದೆ.
ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ್ದ ದಿಲೀಪ್, ಮಾಜಿ ಪತ್ನಿ ಮಂಜು ವಾರಿಯರ್ ತನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಮಂಜು ವಾರಿಯರ್ ಭಾನುವಾರ (ಡಿ.14) ಪ್ರತಿಕ್ರಿಯಿಸಿದ್ದು, “ಪ್ರಕರಣದ ಸಂಚುಕೋರನಿಗೆ ಇನ್ನೂ ಶಿಕ್ಷೆಯಾಗಿಲ್ಲ, ಹಾಗಾಗಿ ನ್ಯಾಯ ಇನ್ನೂ ಅಪೂರ್ಣವಾಗಿದೆ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಮಂಜು ವಾರಿಯರ್, “ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಇನ್ನೂ ಅಪೂರ್ಣವಾಗಿದೆ. ದೈಹಿಕವಾಗಿ ಅಪರಾಧ ಎಸಗಿದವರಿಗೆ ಮಾತ್ರ ಶಿಕ್ಷೆಯಾಗಿದೆ. ಆದರೆ, ಈ ಹೇಯ ಕೃತ್ಯಕ್ಕೆ ಸಂಚು ರೂಪಿಸಿದವರು, ಅದು ಯಾರೇ ಆಗಿರಲಿ, ಇನ್ನೂ ಮುಕ್ತವಾಗಿ ಓಡಾಡುತ್ತಿದ್ದಾರೆ. ಇದು ಅತ್ಯಂತ ಭಯಾನಕ ವಿಚಾರ. ಈ ಅಪರಾಧದ ಹಿಂದಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿದಾಗ ಸರಿಯಾದ ನ್ಯಾಯ ಸಿಗುತ್ತದೆ”ಎಂದು ಬರೆದುಕೊಂಡಿದ್ದಾರೆ.
“ಇದು ಕೇವಲ ಒಬ್ಬ ಸಂತ್ರಸ್ತೆಯ ಪ್ರಶ್ನೆಯಲ್ಲ. ಪ್ರತಿಯೊಬ್ಬ ಹುಡುಗಿ, ಪ್ರತಿಯೊಬ್ಬ ಮಹಿಳೆ ಹಾಗೂ ಪ್ರತಿಯೊಬ್ಬ ಮನುಷ್ಯರು ಭಯವಿಲ್ಲದೆ ಕೆಲಸದ ಸ್ಥಳಗಳಲ್ಲಿ, ಬೀದಿಗಳಲ್ಲಿ ಹಾಗೂ ತಮ್ಮ ಜೀವನದಲ್ಲಿ ತಲೆಯೆತ್ತಿ ನಡೆಯುವ ಹಕ್ಕಿನ ವಿಷಯವಾಗಿದೆ” ಎಂದು ಮಂಜು ವಾರಿಯರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯ ಖುಲಾಸೆಗೊಳಿಸಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದ ದಿಲೀಪ್, “ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಪಿತೂರಿ ನಡೆಸಲಾಗಿದೆ. ನಾನೇ ಈ ಪ್ರಕರಣದ ನಿಜವಾದ ಬಲಿಪಶು. ನನ್ನ ವೃತ್ತಿ ಜೀವನ, ಪ್ರತಿಷ್ಠೆ ಮತ್ತು ಸಮಾಜದಲ್ಲಿ ನನ್ನ ಜೀವನವನ್ನು ನಾಶಮಾಡುವ ಉದ್ದೇಶದಿಂದ ಈ ಪಿತೂರಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಇದೆ ಎಂದು ಮೊದಲು ಹೇಳಿದ್ದೇ ಮಂಜು ವಾರಿಯರ್. ಅವರು ಹೀಗೆ ಹೇಳಿದ ದಿನದಿಂದಲೇ ನನ್ನ ವಿರುದ್ಧದ ಪಿತೂರಿ ಶುರುವಾಯಿತು” ಎಂದು ಹೇಳಿದ್ದರು.
2017ರಲ್ಲಿ ಕೊಚ್ಚಿಯ ಹೊರವಲಯದಲ್ಲಿ ನಡೆದ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ತೀರ್ಪನ್ನು ಡಿಸೆಂಬರ್ 8ರಂದು ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಹನಿ ಎಂ.ವರ್ಗೀಸ್ ಪ್ರಕಟಿಸಿದ್ದು, 8ನೇ ಆರೋಪಿಯಾಗಿದ್ದ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ್ದರು.
ಉಳಿದ ಆರೋಪಿಗಳಾದ ಸುನಿಲ್ ಎನ್.ಎಸ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೀಶ್ ವಿಪಿ, ಸಲೀಂ ಎಚ್ ಅಲಿಯಾಸ್ ವಡಿವಲ್ ಸಲೀಂ ಹಾಗೂ ಪ್ರದೀಪ್ ಅವರನ್ನು ದೋಷಿಗಳೆಂದು ಘೋಷಿಸಿದ್ದರು. ಈ ಎಲ್ಲಾ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.


