ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಟರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತೆಡೆಯಲು ‘ಆಂತರಿಕ ಸಮಿತಿ’ಗೆ ಚಿತ್ರನಿರ್ಮಾಪಕರು ಮತ್ತು ನಟರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ನಟಿ ಸಂಜನಾ ಗಲ್ರಾನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ‘ಮಹಿಳೆಯರಿಗೆಂದೆ ಹೊಸ ಸಮಿತಿ ರಚನೆ’ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಸ್ಯಾಂಡಲ್‌ವುಡ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಿಎಂ ಅವರಿಗೆ ಬರೆದಿರುವ ಪತ್ರದಲ್ಲಿ, ಸಂಜನಾ ಗಲ್ರಾನಿ ಫೌಂಡೇಶನ್ ಮೂಲಕ, ಚಲನಚಿತ್ರೋದ್ಯಮದಲ್ಲಿ ಮಹಿಳಾ ಶೋಷಣೆಯನ್ನು ತಡೆಗಟ್ಟಲು ಕಡ್ಡಾಯವಾಗಿ ತೆಗೆದುಕೊಳ್ಳಬೇಕಾದ ಕೆಲವು ಪ್ರಮುಖ ಸುರಕ್ಷತಾ ಕ್ರಮಗಳನ್ನು ಪ್ರಾರಂಭಿಸಲು ಮತ್ತು ಮಹಿಳೆಯ ಹೊಸ ಸಮಿತಿ ರಚನೆಗೆ ವಿನಂತಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಸರ್ಕಾರದ ಮಟ್ಟದಲ್ಲೂ ಕನ್ನಡ ಚಿತ್ರರಂಗದ ಮಹಿಳಾ ಕಲಾವಿದರಿಗೆ ವಿಶೇಷ ಅನುದಾನ ಹಾಗೂ ‘ಸ್ಯಾಂಡಲ್‌ವುಡ್ ವುಮೆನ್ ಆರ್ಟಿಸ್ಟ್ ಅಸೋಸಿಯೇಷನ್(SWSS) ರಚನೆಯಾದರೆ ಸರ್ಕಾರದ ಮಟ್ಟದಲ್ಲಿ ಅದಕ್ಕೆ ಮಾನ್ಯತೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
“ಚಿತ್ರರಂಗದ ಮಹಿಳೆಯರ ನೇತೃತ್ವದಲ್ಲಿ ಮಹಿಳಾ ಕಲಾವಿದರ ಸಂಘದ ವಿಭಾಗವನ್ನು ರಚಿಸಬೇಕು ಮತ್ತು ಪ್ರಸ್ತುತ ಇರುವ ಕಲಾವಿದರ ಸಂಘದ ವಿಸ್ತರಣೆಯಾಗಿ ಮಹಿಳಾ ನಟಿಯರಿಗೆ ಮೂಲಭೂತಹಕ್ಕುಗಳ ಬಗ್ಗೆ ಶಿಕ್ಷಣ ನೀಡಲು ಅದು ಸಕ್ರಿಯವಾಗಿರಬೇಕು” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂಓದಿ: ಸಿನಿಮಾ ಸೆಟ್‌ನಲ್ಲಿ ‘ಆಂತರಿಕ ಸಮಿತಿ’ ಬೇಡವೆಂದ ಕನ್ನಡ ಚಲನಚಿತ್ರ ನಿರ್ಮಾಪಕರು!
ಇತರ ಚಲನಚಿತ್ರೋದ್ಯಮಗಳಲ್ಲಿ ನಡೆಯುತ್ತಿರುವ ಮಹಿಳಾ ಶೋಷಣೆಯ ಪ್ರಸಂಗಗಳ ಸರಣಿಯನ್ನು ಗಮನಿಸಿ, “ನಮ್ಮ ಕನ್ನಡ ಚಿತ್ರೋದ್ಯಮ” ದಲ್ಲಿ ಪ್ರಶಾಂತತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದ್ದು, ನಮ್ಮ ಚಿತ್ರೋದ್ಯಮ ಯಾವುದೇ ಮುಜುಗರದ ಪರಿಸ್ಥಿತಿಯಿಂದ ಮತ್ತು ಭವಿಷ್ಯದಲ್ಲಿ ಅಂತಹ ಯಾವುದೇ ಕಪ್ಪು ಚುಕ್ಕೆಗಳಿಂದ ರಕ್ಷಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಸಂಜನಾ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಮಹಿಳಾ ಸಂಘ ರಚನೆಯಾದರೆ ಅದಕ್ಕೆ ಕೆಲವು ನಿಯಮಗಳನ್ನು ಕೂಡಾ ಸಂಜನಾ ಅವರು ಪ್ರಸ್ತಾಪಸಿದ್ದಾರೆ. “ಪ್ರತಿಯೊಬ್ಬ ಹೊಸ ನಟ ಮತ್ತು ನಟಿಯರು ತಮ್ಮ ಮೊದಲ ಚಿತ್ರಕ್ಕೆ ಸಹಿ ಹಾಕಿದ೦ತೆಯೇ ಕಲಾವಿದರ ಸಂಘಕ್ಕೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳುಬೇಕು. ಅವರಿಗೆ ಕನ್ನಡ ಚಿತ್ರರಂಗದ ನೋಂದಾಯಿತ ಕಲಾವಿದರಾಗಿ ತಮ್ಮ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಬೇಕು” ಎಂದು ಅವರು ಹೇಳಿದ್ದಾರೆ.
“ಚಿತ್ರಕ್ಕೆ ಸಹಿ ಮಾಡುವ ಪ್ರತಿಯೊಬ್ಬ ಕಲಾವಿದರು ಕಲಾವಿದರ ಸಂಘಕ್ಕೆ ಬ೦ದು ಸೈನ್ ಅಪ್ ಮಾಡವುದು ಮತ್ತು SWAA ಕಮಿಟಿ ನಿಯಮ ಪುಸ್ತಕವನ್ನು ನೀಡಿ ಅವರಿಗೆ ಕರ್ತವ್ಯ, ಬಾಧ್ಯತೆ ಗಳನ್ನು ತಿಳಿ ಹೇಳಬೇಕು. ಇದರಿಂದಾಗಿ ಪ್ರತಿಯೊಬ್ಬ ಮಹಿಳೆಯೂ SWAAಯಿಂದ ನಟಿಯಾಗಿ ಅವಳ ಸಾಮಾಜಿಕ ಹಕ್ಕುಗಳು ಮತ್ತು ಬಾಧ್ಯತ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದು” ಎಂದು ಹೇಳಿದ್ದಾರೆ.
ಇದನ್ನೂಓದಿ: ಬೆಂಗಳೂರು | ನಡುರಸ್ತೆಯಲ್ಲಿ ಯುವಕನ್ನು ಬೆತ್ತಲೆಗೊಳಿಸಿದ ರೌಡಿ ಶೀಟರ್!
“ಹೊಸದಾಗಿ ಸ್ಥಾಪಿಸಲಾದ SWAA ಯಾವುದೇ ಸಮಯದಲ್ಲಿ ನಟಿಯರು ಎದುರಿಸುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗಿ ಲಭ್ಯವಿರಬೇಕು. ಅಲ್ಲದೆ, ಎಲ್ಲಾ ನಿಯಮಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ನಿಯಮ ಪುಸ್ತಕದ ರೂಪದಲ್ಲಿ ಲಿಖಿತವಾಗಿ ನೀಡಬೇಕು. ಕಲಾವಿದರ ಸಂಘದಲ್ಲಿ ನಟರ ನೋಂದಣೆಗೆ ಸಂಬಂಧಿಸಿದ ನಿಯಮ ಪುಸ್ತಕವನ್ನು ಹಸ್ತಾಂತರಿಸುವುದು SWAA ಜವಾಬ್ದಾರಿಯಾಗಿರಬೇಕು.” ಎಂದು ಸಲಹೆ ನೀಡಿದ್ದಾರೆ.ಸ್ಯಾಂಡಲ್‌ವುಡ್
SWAAಗೆ ಇರಬೇಕಾದ ನಿಯಮಗಳ ಬಗ್ಗೆ ಕೂಡಾ ಅವರು ಸಲಹೆ ನೀಡಿದ್ದು, “ರಾತ್ರಿ ಅಥವಾ ಹಗಲಿನ ಶೂಟಿಂಗ್ ಸಮಯದಲ್ಲಿ ನಟಿಯರು ತಮ್ಮ ಕುಟುಂಬದ ಒಬ್ಬ ವ್ಯಕ್ತಿಯನ್ನು ಯಾವುದೇ ಸ್ಥಳೀಯ ಅಥವಾ ಹೊರಗಿನ ಶೂಟಿಂಗ್ ಸ್ಥಳಕ್ಕೆ ಜೊತೆಯಲ್ಲಿ ಕರೆದೊಯ್ಯುವುದನ್ನು ಕಡ್ಡಾಯಗೊಳಿಸಬೇಕು. ಜೊತೆಗೆ ಈ ಕುಟುಂಬದ ಸದಸ್ಯರಿಗೆ ಸಾರಿಗೆ ಶುಲ್ಕವನ್ನು ಒದಗಿಸಬೇಕು.” ಎಂದು ಅವರು ಹೇಳಿದ್ದಾರೆ.
“ನಟಿಯರಿಗೆ ಶೂಟಿಂಗ್ ಸ್ಥಳದಲ್ಲಿ ತಮ್ಮ ಬಟ್ಟೆಗಳನ್ನು ಬದಲಾಯಿಸಲು ಕಾರವಾನ್‌ನಂತಹ ಖಾಸಗಿ ಸ್ಥಳವನ್ನು ಒದಗಿಸಬೇಕು ಅಥವಾ ಮಹಿಳಾ ಕಲಾವಿದರಿಗೆ ಮೂಲಭೂತ ಸೌಕರ್ಯಕ್ಕಾಗಿ ಕನಿಷ್ಠ ವೈಯಕ್ತಿಕ ಕೊಠಡಿಯನ್ನು ಒದಗಿಸಬೇಕು.” ಎಂದು ಅವರು ಆಗ್ರಹಿಸಿದ್ದಾರೆ.
ಸಂಜನಾ ಗಲ್ರಾನಿ ಅವರು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದ ಮೂಲಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್, ಡಿಜಿಐಜಿ ಅಲೋಕ್ ಮೋಹನ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್, ಕಲಾವಿದರ ಸಂಘದ ಅಧ್ಯಕ್ಷ/ ಕಾರ್ಯದರ್ಶಿ – ರಾಕ್ಲೈನ್ ವೆಂಕಟೇಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಸೇರಿದಂತೆ ಚಿತರಂಗಕ್ಕೆ ಸಂಬಂಧಪಟ್ಟವರೆಲ್ಲರಿಗೂ ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ಮಹಿಳಾ ರಕ್ಷಣೆಗೆ ಮನವಿ ಮಾಡಿದ್ದಾರೆ.
ವಿಡಿಯೊ ನೋಡಿ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಾಮಕುಮಾರ್ ಅವರ ಮಾತುಗಳು


