ಪಶ್ಚಿಮ ಬಂಗಾಳದ ಆಡಳಿತರೂಢ ಪಕ್ಷ ಟಿಎಂಸಿಯ ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿಯರು ಡಿಸೆಂಬರ್ 02ರ ಗುರುವಾರ ಸಂಜೆ ಉದ್ಯಮಿ ಗೌತಮ್ ಅದಾನಿಯವರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮತ್ತು 2022ರ ಏಪ್ರಿಲ್‌ನಲ್ಲಿ ನಡೆಯುವ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಸಮ್ಮಿಟ್‌ಗೆ ಆಹ್ವಾನಿಸಿದ್ದಾರೆ. ಇನ್ನೊಂದೆಡೆ ಕೃಷಿ ಕಾಯ್ದೆಗಳು ಸೇರಿದಂತೆ ಹಲವು ವಿಚಾರವಾಗಿ ಅದಾನಿಯ ವಿರುದ್ಧ ಕಿಡಿಕಾರುತ್ತಿದ್ದ ಅದೇ ಪಕ್ಷದ ಸಂಸದೆ ಮಹುವಾ ಮೊಯಿತ್ರಾರವರು ಈಗ ತಮ್ಮ ಹಳೆಯ ಟ್ವೀಟ್‌ಗಳನ್ನು ಅಳಿಸಿದ್ದಾರೆ ಮತ್ತು ಅಳಿಸಲಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಉತ್ತರಿಸಿರುವ ಮಹುವಾ ತಮ್ಮ ಟ್ವೀಟ್‌ಗಳಿಗೆ ಈಗಲೂ ಬದ್ಧ ಎಂದಿದ್ದಾರೆ.
ಮಹುವಾ ಮೊಯಿತ್ರಾರವರು ಈ ಹಿಂದೆ ಅದಾನಿಯವ ವಿರುದ್ಧ ಮಾಡಿದ್ದ ಹಲವರು ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವೀಟ್ ಮಾಡಿರುವ ಸಿಪಿಐ(ಎಂ) ನಾಯಕ ಎಂಡಿ ಸಲೀಂರವರು ಈ ಟ್ವೀಟ್‌ಗಳಲ್ಲಿ ಯಾವಾಗ ಬೇಕಾದರೂ ಡಿಲೀಟ್ ಮಾಡಬಹುದು ಎಂದು ಆರೋಪಿಸಿದ್ದಾರೆ. ಇನ್ನು ಕೆಲವು ನೆಟ್ಟಿಗರು ಒಂದು ಹೆಜ್ಜೆ ಮುಂದೆ ಹೋಗಿ ಮಹುವಾರವರು ಅದಾನಿಯವರನ್ನು ಟೀಕಿಸಿದ್ದ ತಮ್ಮ ಹಳೆಯ ಟ್ವೀಟ್‌ಗಳನ್ನು ಅಳಿಸಿಹಾಕಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಟ್ವೀಟ್ ಮೂಲಕವೆ ಸ್ಪಷ್ಟೀಕರಣ ನೀಡಿರುವ ಸಂಸದೆ, ಎಲ್ಲಾ ಟ್ವೀಟ್‌ಗಳು ಈಗಲೂ ಇವೆ ಮತ್ತು ಆ ವಿಚಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸಂಸ್ಥೆಗಳನ್ನು ಅದಾನಿ ಕಬಳಿಸುತ್ತಿದ್ದಾರೆ. ಇಡೀ ಕೇಂದ್ರ ಸರ್ಕಾರವೇ ಅವರ ಜೇಬಿನಲ್ಲಿದೆ. ಬ್ಯಾಂಕುಗಳಿಗೆ ಅವರು ವಂಚನೆ ಮಾಡಿದ್ದರೂ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂದು ಮಹುವಾ ಮೊಯಿತ್ರಾ ಸರಣಿ ಟ್ವೀಟ್‌ಗಳಲ್ಲಿ ಅದಾನಿ ವಿರುದ್ಧ ತಿರುಗಿಬಿದ್ದಿದ್ದರು. ಈಗ ಸ್ವತಃ ಸಿಎಂ ಅದಾನಿಯವರನ್ನು ಹೂಡಿಕೆಗೆ ಬಂಗಾಳಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿರುವುದರಿಂದ ಈ ವಿವಾದ ಭುಗಿಲೆದ್ದಿದೆ.
ಮಮತಾ ಬ್ಯಾನರ್ಜಿಯವರು ಬ್ಯುಸಿನೆಸ್ ಸಮ್ಮಿಟ್‌ಗೆ ಮುಖೇಶ್ ಅಂಬಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಆಹ್ವಾನಿಸಿದ್ದಾರೆ. ಅದಾನಿ ಈ ಕುರಿತು ಟ್ವೀಟ್ ಮಾಡಿ “ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿದ್ದು ಸಂತೋಷವಾಗಿದೆ” ಎಂದಿದ್ದಾರೆ. ಜೊತೆಗೆ ಭೇಟಿಯ ಫೋಟೊ ಸಹ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಮೋದಿ ಬೀದಿಬದಿ ಪೋಕರಿ ರೀತಿ ಮಾತನಾಡುತ್ತಾರೆ’- ಮೊಹುವಾ ಮೊಯಿತ್ರಾ


