Homeಮುಖಪುಟಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

- Advertisement -
- Advertisement -

ಇತ್ತೀಚಿಗೆ ಸಾಮಾಜಿಕ ಜಾಲತಾಣದ ದೈತ್ಯ ಟೆಕ್ ಕಂಪನಿ ಫೇಸ್‌ಬುಕ್ ತನ್ನ ಬ್ರಾಂಡ್ ಹೆಸರನ್ನು ’ಮೆಟಾ’ ಎಂದು ಬದಲಾಯಿಸಿಕೊಂಡಾಗ, ಅದೊಂದು ರಿಬ್ರಾಂಡಿಂಗ್ ಎಕ್ಸರ್‌ಸೈಸ್ ಎಂಬಂತೆ ಹಲವು ಮಾಧ್ಯಮಗಳು ಉಪೇಕ್ಷಿಸಿದ್ದಿದೆ. ಎಲ್ಲೋ ಕೆಲವು ಮಾಧ್ಯಮಗಳು ಫೇಸ್‌ಬುಕ್ ಸಂಸ್ಥೆ ಇಲ್ಲಿಯವರೆಗೂ ಸೃಷ್ಟಿಸಿರುವ ಅಪಸವ್ಯಗಳ ಹಿನ್ನೆಲೆಯಲ್ಲಿ ಮತ್ತು ಆ ಸಂಸ್ಥೆಯ ಮಾಜಿ ನೌಕರರು ಸೋರಿಕೆ ಮಾಡಿದ ದಾಖಲೆಗಳ ಬೆಳಕಿನಲ್ಲಿ ತಂತ್ರಜ್ಞಾನ ಆಧಾರಿತ, ಡೇಟಾ ಆಧಾರಿತ ಸಾಮಾಜಿಕ ಮಾಧ್ಯಮಗಳು ಜನಸಮೂಹಗಳಲ್ಲಿ ಸೃಷ್ಟಿಸಿರುವ ಒಡಕನ್ನು, ಧ್ರುವೀಕರಣವನ್ನು, ಪ್ರಭುತ್ವಗಳು ಅದನ್ನು ಬಳಸಿಕೊಂಡ ಬಗೆಯನ್ನು ಅವಲೋಕಿಸಿ ಚರ್ಚಿಸಿದ್ದು ಕೂಡ ನಡೆಯಿತು. ಈ ಚರ್ಚೆಯ ಸಮಯದಲ್ಲಿ ಮುಖ್ಯವಾಗಿ ಗೋಚರಿಸಿದ್ದು: ಒಂದು ಸಮಯದಲ್ಲಿ ಹೆಚ್ಚು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ಬೆಳೆಯುತ್ತದೆ ಎಂದು ನಂಬಿದ್ದ ಇಂಟರ್‌ನೆಟ್, ಈ ದೈತ್ಯ ಟೆಕ್ ಸಂಸ್ಥೆಗಳ ಹಿಡಿತದಲ್ಲಿ ಸಿಕ್ಕಿ, ನೋಡನೋಡುತ್ತಿದ್ದಂತೆಯೇ ಅದು ಸರ್ವಾಧಿಕಾರಿಯ ರೀತಿಯಲ್ಲಿ ಬೆಳೆಯಿತೆಲ್ಲಾ ಎಂಬ ಅಚ್ಚರಿ ಮತ್ತು ಆತಂಕ. ಎಷ್ಟೋ ದೇಶಗಳಲ್ಲಿ ಅವು, ತನ್ನಂತಹ ವ್ಯವಸ್ಥೆಯನ್ನೇ ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಚುನಾವಣೆಗಳನ್ನು ಗೆಲ್ಲಲು ಸಹಕರಿಸಿದರೆ ಮತ್ತೆ ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ, ಅವಕಾಶವಂಚಿತರ, ವಲಸಿಗರ ವಿರೋಧಿ ವೇದಿಕೆಯಾಗಿ ಹೆಚ್ಚು ಕಾರ್ಯನಿರ್ವಹಿಸುತ್ತಾ ಸಾಗಿತು ಎಂಬುದೂ ಕೂಡ ವಿದಿತವೇ.

ಈಗ ಇಂಟರ್‌ನೆಟ್ ವೆಬ್3ಯತ್ತ ಹೆಜ್ಜೆ ಹಾಕುತ್ತಿದೆ. ಹಿಂದೊಮ್ಮೆ ಪ್ರೋಗ್ರಾಮ್ ಮಾಡಿದಷ್ಟು ಮಾತ್ರ ಕೆಲಸ ಮಾಡುತ್ತಿದ್ದ ತಂತ್ರಜ್ಞಾನ, ತಾನು ಬೆಳೆದಂತೆ ತಾನೇ ಕಲಿಯುವ ‘ಮೆಶಿನ್ ಲರ್ನಿಂಗ್‌’ಗೆ ಮುಂದಾಯಿತು. ಈ ಯಂತ್ರ ಕಲಿಕೆ ಇಂದು ಹಿಂದೆಂದಿಗಿಂತಲೂ ಅಗಾಧವಾಗಿ ಬೆಳೆದಿದೆ. ಈ ಯಂತ್ರ ಕಲಿಕೆ ಎಷ್ಟು ಮುಂದುವರಿದಿದೆ ಎಂದರೆ, ಪ್ರೋಗ್ರಾಮ್‌ಗಳ ಮೂಲಕ ಏನನ್ನು ಮಾಡಬೇಕು ಎಂಬ ನಿರ್ದೇಶನಗಳ ತತ್ವವನ್ನು ಮೀರಿ ತಾನೇ ಹೊಸ ಕೆಲಸ ನಿರ್ವಹಿಸುವ, ನಿರೀಕ್ಷೆ ಮಾಡಲಾರದ ನಿರ್ಣಯ ತೆಗೆದುಕೊಳ್ಳುವ ಕೃತಕ ಬುದ್ಧಿಮತ್ತೆ ಅದಕ್ಕೆ ಬೆಳೆಯುತ್ತದೆ. ಇದಕ್ಕೆ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಆಗಿರುವ ಮಹತ್ತರ ವಿದ್ಯಮಾನಗಳು ಸಹಕರಿಸಿವೆ. ಈ ಯಂತ್ರ ಕಲಿಕೆಗೆ ಬಿಗ್‌ಡೇಟಾ ಎಂಬ ಮಾಹಿತಿಯನ್ನು ಕ್ರೋಢೀಕರಿಸಿ ಅದನ್ನು ಅವಲೋಕಿಸಿ ಬಳಸುವ ತಂತ್ರಜ್ಞಾನ ಕೂಡ ಒಂದು ದೊಡ್ಡ ಕೊಡುಗೆಯನ್ನು ನೀಡಿದೆ. ಈಗ ಈ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಪತ್ರಿಕೋದ್ಯಮವನ್ನೂ ಒಳಗೊಂಡಂತೆ, ಆರೋಗ್ಯ, ಶಿಕ್ಷಣ, ಪೊಲೀಸಿಂಗ್, ಉತ್ಪಾದನೆ, ಎಚ್‌ಆರ್, ಸಾಗಣೆ, ಸಂಚಾರ ಮುಂತಾದ ಕ್ಷೇತ್ರಗಳಿಗೆ ಲಗ್ಗೆ ಇಟ್ಟಿದೆ. ಇದು ಹಲವು ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲದು ಎಂದು ಇದರ ಮೇಲೆ ಹೂಡಿಕೆ ಮಾಡಿದವರು ಪ್ರತಿಪಾದಿಸುತ್ತಿದ್ದರಾದರೂ, ಈ ಕ್ರಾಂತಿ ಒಡ್ಡಬಹುದಾದ ಅಪಾಯಗಳ ಮೇಲೆ ನಿರೀಕ್ಷಿತ ಮಟ್ಟದ ಚರ್ಚೆಗಳಾಗುತ್ತಿಲ್ಲ. ಸಾಮಾಜಿಕ ಮಾಧ್ಯಮಗಳು ಮಾಹಿತಿ/ಜ್ಞಾನ ಉತ್ಪಾದನೆಯಿಂದ ಹಿಡಿದು ಹಂಚಿಕೆಯವರೆಗೂ ಹೇಗೆ ಅವನ್ನು ಪ್ರಜಾಸತ್ತಾತ್ಮಗೊಳಿಸಲಿವೆ ಎಂಬ ಮೊದಲಿನ ನಂಬಿಕೆಗೆ ವ್ಯತಿರಿಕ್ತವಾಗಿ ಮೂರೋ ನಾಲ್ಕೋ ಕಂಪನಿಗಳು ಸ್ವಾಮ್ಯ ಸಾಧಿಸಿರುವಂತೆಯೇ, ಈ ಕ್ರಾಂತಿ ಕೂಡ ಎಂಬ ಚರ್ಚೆಗಳಿವೆ.


ಅಕ್ಟೋಬರ್ ಕೊನೆಯಲ್ಲಿ ಫೇಸ್‌ಬುಕ್, ’ಮೆಟಾ’ ಎಂದು ರಿಬ್ರಾಂಡ್ ಮಾಡಿಕೊಂಡ ನಂತರ ಅದರ ಸಿಇಒ ಮಾರ್ಕ್ ಝುಕರ್ಬಗ್, ಮುಂದೆ ಆ ಸಂಸ್ಥೆ ತೆರೆದುಕೊಳ್ಳಲಿರುವ ’ಮೆಟಾವರ್ಸ್’ಗೆ ಪ್ರಚಾರ ಎಂಬಂತೆ ಸುಮಾರು ಎರಡು ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿದರು. ಝುಕರ್ಬಗ್ ತನ್ನ ಪ್ರತಿಕೃತಿಯನ್ನು ಸೃಷ್ಟಿಸಿಕೊಂಡು, ಬಾಹ್ಯಾಕಾಶದಲ್ಲಿ ತನ್ನ ಗೆಳೆಯರೊಂದಿಗೆ (ಅವುಗಳೂ ಪ್ರತಿಕೃತಿಗಳೇ) ಮತ್ತು ರೊಬೋಟ್ ಒಂದರೊಂದಿಗೆ ಇಸ್ಪೀಟ್ ಆಡುವುದು, ನಡುವೆ ನಿಜ ಲೋಕದ ತನ್ನ ಗೆಳೆಯರೊಂದಿಗೆ ಸಂಭಾಷಿಸುವುದು ಹೀಗೆ ಮುಂದುವರೆಯುತ್ತದೆ. ಮುಂದಿನ ಸಾಮಾಜಿಕ ಮಾಧ್ಯಮದಲ್ಲಿ/ಮೆಟಾವರ್ಸ್‌ನಲ್ಲಿ ನಾವೆಲ್ಲಾ ಹೀಗೆ ಸೋಶಿಯಲೈಸ್ ಮಾಡುತ್ತೇವೆ ಅಥವಾ ಕನೆಕ್ಟ್ ಆಗುತ್ತೇವೆ ಎಂಬ ಸಂದೇಶದೊಂದಿಗೆ ಆ ವಿಡಿಯೋ ಮುಕ್ತಾಯವಾಗುತ್ತದೆ. ಇದು ’ವರ್ಚುಯಲ್ ರಿಯಾಲಿಟಿ’ ಲೋಕ. ಇಲ್ಲಿ ಕೂಡ ಎಐ ಅಪಾರ ಬಗೆಗಳಲ್ಲಿ ಬಳಕೆಯಾಗಲಿದೆ. ಒಂದು ಕನ್ನಡಕದ ರೀತಿಯ ಸಾಧನವನ್ನು ಹಾಕಿಕೊಂಡು, ನಮ್ಮ ಪ್ರತಿಕೃತಿಯನ್ನು ಸೃಷ್ಟಿಸಿಕೊಂಡು, ನಮ್ಮ ಮಾತುಗಳನ್ನು ಅರ್ಥ ಮಾಡಿಕೊಂಡು, ಆ ಮಾತುಗಳ ಅರ್ಥದ ರೀತಿಯಲ್ಲಿ ಬೇಕಾದ ಜಗತ್ತನ್ನು ಸೃಷ್ಟಿ ಮಾಡಿ, ಅದಕ್ಕೆ ಸ್ಪಂದಿಸಿ ವ್ಯವಹರಿಸುವ ಈ ವರ್ಚುಯಲ್ ಲೋಕದ ಸೃಷ್ಟಿಗೆ ಕೃತಕ ಬುದ್ಧಿಮತ್ತೆ ಅನನ್ಯವಾಗಿ ಜತೆಗೂಡಲಿದೆ.

ಇಂತಹ ವರ್ಚುಯಲ್ ಲೋಕದಲ್ಲಿ ಸೃಷ್ಟಿಯಾಗುವ ಭ್ರಾಮುಕ ಜಗತ್ತಿನಲ್ಲಿ ಇಂದು ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಇರಬಲ್ಲುದೇ? ಇಂದು ಜಗತ್ತನ್ನು ಬಾಧಿಸುತ್ತಿರುವ ತೀವ್ರ ಧ್ರುವೀಕರಣವನ್ನು ಆ ಜಗತ್ತಿನಲ್ಲಿ ಸರಿಪಡಿಸುವ ಶಕ್ತಿ ಇದೆಯೇ? ಇಂದಿನ ತೀವ್ರ ಅಸಮಾನತೆಯನ್ನು ಹೋಗಲಾಡಿಸುವ ಶಕ್ತಿ ಅಲ್ಲಿದೆಯೇ? ಇದಕ್ಕೆ ಉತ್ತರ ಕಂಡುಕೊಳ್ಳುವುದು ಅಲ್ಲಿ ಹೂಡಿಕೆ ಮಾಡುತ್ತಿರುವ ದೈತ್ಯ ಕಾರ್ಪೊರೆಟ್ ಶಕ್ತಿಗಳಿಗೆ ಬೇಕಾಗಿಲ್ಲ. ಭೂಮಿಯ ಡಿಜಿಟಲ್ ರೂಪವನ್ನು ಹಂಚಿ ಟ್ರೇಡ್ ಮಾಡುವ, ಒಡೆತನ ನೀಡುವ ಬಗ್ಗೆ ಆ ಕಂಪನಿಗಳು ಚಿಂತೆ ಮಾಡುತ್ತಿವೆ. ಅದೆಲ್ಲಾ ಇರಲಿ, ಇಂತಹ ವರ್ಚುಯಲ್ ಜಗತ್ತಿನ ಸೃಷ್ಟಿಗೆ ಬಳಕೆಯಾಗುವ ಬಳಕೆದಾರನ ಮಾಹಿತಿಯ ರಕ್ಷಣೆ ಬಗ್ಗೆ, ಗೌಪ್ಯತೆಯ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ಜಗತ್ತಿನ ಹಲವು ದೇಶಗಳ ಆಡಳಿತ ವ್ಯವಸ್ಥೆಗಳು ಚಿಂತನೆ ನಡೆಸಿವೆಯೇ? ನಮ್ಮ ಭಾರತದಲ್ಲಂತೂ ಇದರ ಬಗ್ಗೆ ಪ್ರಭುತ್ವ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡಿಲ್ಲ. ಸದ್ಯದ ಸಾಮಾಜಿಕ ಜಾಲತಾಣ ಸಂಸ್ಥೆಗಳು ತನ್ನ ರಾಜಕೀಯಕ್ಕೆ ಸಹಕರಿಸುತ್ತಿರುವಾಗ, ಅದರ ಮುಂದುವರೆದ ತಂತ್ರಜ್ಞಾನ ಕೂಡ ತನ್ನತ್ತಲೇ ವಾಲಬಹುದೆಂಬ ಲೆಕ್ಕಾಚಾರ ಇರಬಹುದೇ ಅದಕ್ಕೆ?

1997ರಲ್ಲಿ ಐಬಿಎಂ ಸಂಸ್ಥೆಯ ಡೀಪ್ ಬ್ಲೂ ಸೂಪರ್ ಕಂಪ್ಯೂಟರ್ ಅಂದಿನ ಚೆಸ್ ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿದಾಗ ಬಹುಷಃ ಈ ಕೃತಕ ಬುದ್ಧಿಮತ್ತೆ ಈ ಮಟ್ಟಕ್ಕೆ ಬೆಳೆಯುತ್ತದೆ ಎಂಬುದನ್ನು ಊಹಿಸಿದವರು ಕಡಿಮೆ ಇದ್ದಾರು. ಆದರೆ ಈಗ ಕನಿಷ್ಠ ಪಶ್ಚಿಮದ ದೇಶದ ಚಿಂತಕರು, ತಜ್ಞರು, ತತ್ವ ಶಾಸ್ತ್ರಜ್ಞರು ಇದರ ಬಗ್ಗೆ ಹೆಚ್ಚುಹೆಚ್ಚು ಮಾತನಾಡಲು ಪ್ರಾರಂಭಿಸಿದ್ದಾರೆ. ಉದಾಹರಣೆಗೆ, ಇಸ್ರೇಲ್‌ನ ಇತಿಹಾಸದ ಪ್ರೊಫೆಸರ್ ಮತ್ತು ಸಾರ್ವಜನಿಕ ಬುದ್ಧಿಜೀವಿ ಯುವಲ್ ಹರಾರಿ ಅವರು, ಎಐ ತಂತ್ರಜ್ಞಾನ ಒಡ್ಡಬಹುದಾದ ಸಮಸ್ಯೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಒಂದು ಹಂತದಲ್ಲಿ ಉತ್ಪಾದನೆ ಯಾಂತ್ರೀಕೃತವಾದಾಗ, ಹಲವು ಉದ್ಯೋಗಗಳು ನಷ್ಟವಾದರೂ, ಆ ಯಂತ್ರಗಳನ್ನು ಮುನ್ನಡೆಸಬೇಕಾದ ಒಂದು ಪಡೆ ಅಗತ್ಯವಿದ್ದರಿಂದ ಅದಕ್ಕಾಗಿ ಹೊಸ ನೌಕರಪಡೆಯನ್ನು ಸೃಷ್ಟಿಮಾಡಬೇಕಾಗಿ ಬಂತು. ಆ ನಿಟ್ಟಿನಲ್ಲಿ ಕಡಿತಗೊಂಡ ಉದ್ಯೋಗಗಳ ಪ್ರಮಾಣ ಆತಂಕಕಾರಿಯಾಗಿರಲಿಲ್ಲ. ಆದರೆ ಎಐ ಸೃಷ್ಟಿಸುವ ಆಟೋಮೇಷನ್ ಬೇರೆ ತೆರನಾದದ್ದು. ಇದು ಊಹಿಸಲೂ ಕಷ್ಟವಾದಷ್ಟು ಜನರ ಉದ್ಯೋಗವನ್ನು ಕಡಿತಗೊಳಿಸುತ್ತದೆ. ಇದಕ್ಕೆ ಸರ್ಕಾರಗಳು ಯಾವ ರೀತಿಯಲ್ಲಿ ಸಿದ್ಧವಾಗಿವೆ ಎಂಬುದು ಹರಾರಿ ಅವರ ಚಿಂತನೆಯ ಸಾರ. ಉದಾಹರಣೆಗೆ ಚಾಲಕರಿಲ್ಲದ ಕಾರು ಸಾಕಾರವಾಗುವುದರತ್ತ ದಾಪುಗಾಲಿಟ್ಟಿದೆ. ಇದು ಎಷ್ಟು ಜನರನ್ನು ಚಾಲಕ ವೃತ್ತಿಯಿಂದ ಹೊರದಬ್ಬಬಹುದು ಎಂಬ ಊಹೆಯೇ ಭಯಂಕರವಾಗಿದೆ. ಹಿಂದಿನ ಕೈಗಾರೀಕರಣ ಕಾರ್ಮಿಕರನ್ನು ’ರಿಸ್ಟ್ರಕ್ಚರ್’ ಮಾಡಿ ಬೇರೆ ಉದ್ಯೋಗ ನೀಡಬಹುದಾದ ರೀತಿಯಲ್ಲಿತ್ತು. ಆದರೆ ಈ ಎಐ ಕ್ರಾಂತಿ ಬೇರೆಯೇ ರೀತಿಯದ್ದು. ಈಗಾಗಲೇ ಅಮೆಜಾನ್ ಕಂಪನಿ ಮನುಷ್ಯರ ಜೊತೆಗೆ ವ್ಯವಹರಿಸಬಲ್ಲ ಕೃತಕ ಬುದ್ಧಿಮತ್ತೆಯ ಡ್ರೋಣ್ ಮೂಲಕ ವಸ್ತುಗಳನ್ನು ಡೆಲಿವರಿ ಮಾಡುವ ಪೇಟೆಂಟ್ ತೆಗೆದುಕೊಂಡಿದೆ. ಇಲ್ಲಿ ಸಾವಿರಾರು ಡ್ರೋನ್‌ಗಳನ್ನು ಚಲಾಯಿಸಲು ಬಹುಷಃ ಬೇಕಾಗಿರುವುದು ಕೆಲವೇ ಕೆಲವರು. ಈ ನಿಟ್ಟಿನಲ್ಲಿ ಸಾಗಾಣೆ ಸರಪಳಿಯಲ್ಲಿ ನಷ್ಟವಾಗಬಹುದಾದ ಉದ್ಯೋಗಗಳ ಬಗ್ಗೆ ಸರ್ಕಾರಗಳಿಗೆ ಯೋಜನೆಯೇನಾದರೂ ಇದೆಯೇ?

ಇನ್ನು ಈ ಎಐ ಬಳಕೆ ಹಲವು ನೈತಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿರುವುದು ಕೂಡ ಈಗಾಗಲೇ ದಾಖಲಾಗಿದೆ. ಉದಾಹರಣೆಗೆ ಅಮೆರಿಕದ ಕೆಲವು ಕಡೆ ಜೈಲಿನಲ್ಲಿರುವ ಕೈದಿಗಳಿಗೆ ’ಪೆರೋಲ್’ ನೀಡುವುದಕ್ಕೆ ಪ್ರಾಯೋಗಿಕವಾಗಿ ಬಳಸಲಾದ ಎಐ ತಂತ್ರಜ್ಞಾನ. ಕೈದಿಗಳಿಗೆ ಜೈಲಿನಿಂದ ಕೆಲವು ವರ್ಷಗಳ ಕಾಲ ತಾತ್ಕಾಲಿಕ ಬಿಡುಗಡೆ ಮಾಡಲು ಅಥವಾ ಜೈಲಿನಲ್ಲಿನ ಅವರ ನಡವಳಿಕೆಯ ಪ್ರಕಾರ ಅವರ ಕಾರಾಗೃಹ ಅವಧಿಗೂ ಮುಂಚಿತವಾಗಿ ಬಿಡುಗಡೆ ಮಾಡಲು ನಿರ್ಧರಿಸಲು ಹಲವು ಪುಟಗಳ ದಾಖಲೆಗಳನ್ನು ಓದಿ, ಅದರ ಪ್ರಕಾರ ಮುಂದಿನ ನಿರ್ಣಯ ಕೈಗೊಳ್ಳಬೇಕಿದೆ. ಇದು ಮನುಷ್ಯರು ಅವಲೋಕಿಸಿ ಮಾಡಬೇಕಾದ ಕರ್ತವ್ಯವಾಗಿದ್ದರೂ ಇದಕ್ಕೆ ಅಗತ್ಯ ಮಾನವ ಸಂಪನ್ಮೂಲಗಳು ಇಲ್ಲ. ಮನುಷ್ಯನ ರೀತಿಯಲ್ಲಿಯೇ ಆದರೆ ಅವನಿಗಿಂತಲೂ ದಾಖಲೆಗಳನ್ನು ವೇಗವಾಗಿ ಓದುವ, ನೂರಾರು ಪ್ಯಾರಾಮೀಟರ್‌ಗಳನ್ನು ಮನುಷ್ಯರಂತೆಯೇ ಅಥವಾ ಅವನಿಗಿಂತಲೂ ಚುರುಕಾಗಿ ಅವಲೋಕಿಸುವ ಮತ್ತು ನಿರ್ಣಯ ಕೈಗೊಳ್ಳುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಪ್ರಯೋಗ ಮಾಡಲಾಯಿತು. ಎಷ್ಟೋ ಬಾರಿ ಮನುಷ್ಯರು ಜನಾಂಗ ಮತ್ತು ವ್ಯಕ್ತಿಗಳ ಬಗ್ಗೆ ಪೂರ್ವಾಗ್ರಹಪೀಡಿತರಾಗಿರಲು ಸಾಧ್ಯವಿದ್ದು, ಪೆರೋಲ್ ನಿರ್ಣಯಗಳಲ್ಲಿ ಅದು ರಿಫ್ಲೆಕ್ಟ್ ಆಗುವ ಸಾಧ್ಯತೆಯಿರುತ್ತದೆ. ಆದುದರಿಂದ ಕೃತಕ ಬುದ್ಧಿಮತ್ತೆಯ ಯಂತ್ರ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಕೂಡ ಬಣ್ಣಿಸಲಾಗಿತ್ತು. ಈ ಪ್ರಯೋಗದ ನಂತರ ಮಾಡಿದ ಅಧ್ಯಯನ ತಿಳಿಸಿದ ಸತ್ಯ ಅಘಾತಕಾರಿಯಾಗಿತ್ತು. ಈ ಮೆಶಿನ್ ಕಲಿಕೆಗೆ ಯಾವ ಡೇಟಾ ಬಳಕೆ ಮಾಡಲಾಗಿತ್ತೋ ಅದು ಕೂಡ ಪೂರ್ವಾಗ್ರಹಗಳಿಂದ ಕೂಡಿದ್ದರಿಂದ ಮೆಶಿನ್ ಕಲಿಕೆ ಕೂಡ ಅದೇ ನಿಟ್ಟಿನಲ್ಲಿತ್ತು. ಎಷ್ಟೋ ಜನ ಅರ್ಹ ಬ್ಲಾಕ್ ಸಮುದಾಯದ ವ್ಯಕ್ತಿಗಳಿಗೆ ಈ ಯಂತ್ರ ಪೆರೋಲ್ ನಿರಾಕರಿಸಿದ್ದು ಈ ಅಧ್ಯಯನದಿಂದ ತಿಳಿದುಬಂತು. ಇದೇ ರೀತಿಯ ಮತ್ತೊಂದು ಉದಾಹರಣೆಯಲ್ಲಿ, ಹಲವು ಕಾರಣಗಳಿಂದ ಪುನರ್ವಸತಿ ಶಿಬಿರಗಳಲ್ಲಿ ಇರುವ ತಾಯಂದಿರು ಹಡೆದಾಗ, ಮಗುವಿಗೆ ಮುಂದೆ ಅವರು ಅಪಾಯಕಾರಿಯಾಗಬಲ್ಲರೇ ಎಂಬುದನ್ನು ಪತ್ತೆ ಹಚ್ಚಿ ಮಗುವನ್ನು ಬೇರೆ ಕಡೆಗೆ ಆರೈಕೆಗೆ ವರ್ಗಾಯಿಸುವುದಕ್ಕೆ ಕೂಡ ಎಐ ತಂತ್ರಜ್ಞಾನವನ್ನು ಬಳಸಲಾಗಿತ್ತು. ಅಲ್ಲಿ ಕೂಡ ಆ ಯಂತ್ರ ಬ್ಲಾಕ್ ಸಮುದಾಯದ ತಾಯಂದಿರ ಮೇಲೆ ತಾರತಮ್ಯ ಎಸಗಿದ್ದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ರೀತಿ ಎಐ ತಂತ್ರಜ್ಞಾನ ಈಗಿರುವ ತಾರತಮ್ಯವನ್ನು ಬಲಪಡಿಸದಂತೆ, ಅಸಮಾನತೆಯನ್ನು ತೀವ್ರಗೊಳಿಸದಂತೆ ಸರಿ ದಿಕ್ಕಿನಲ್ಲಿ ಸಾಗಬೇಕಿರುವಂತೆ ಮಾಡುವ ನೈತಿಕ ಬಿಕ್ಕಟ್ಟುಗಳು ಕೂಡ ತಲೆದೋರಿವೆ.

ಫೋಟೋ ಹೊಡೆದು ಪತ್ತೆ ಹಚ್ಚಿ ಕಣ್ಗಾವಲು ನಡೆಸುವ, ಫೋಟೋಗಳನ್ನು ಮ್ಯಾಚ್ ಮಾಡುವ, ನಕಲಿ ವಿಡಿಯೋಗಳನ್ನು ಸೃಷ್ಟಿಸುವ ಡೀಪ್ ಫೇಕ್, ಹೀಗೆ ಕೃತಕ ಬುದ್ಧಿಮತ್ತೆ ಸೃಷ್ಟಿಸುತ್ತಿರುವ ಸವಾಲುಗಳು, ಈ ಸದ್ಯಕ್ಕೆ ಅದು ನಮಗೆ ನೀಡುತ್ತಿರುವ ಒಳ್ಳೆಯ ಭವಿಷ್ಯದಭರವಸೆಯನ್ನು ಮೀರಿಸುತ್ತಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಕಥೆ-ಕವಿತೆ ಬರೆದು, ರಿಪೋರ್ಟ್‌ಗಳನ್ನು ಬರೆದು ಸೃಜನಶೀಲ ಕೆಲಸದ ಮಹತ್ವವನ್ನು ಅಲ್ಲಗಳೆಯುವ ಅಪಾಯ, ಉಳಿದೆಲ್ಲಾ ಕಳವಳಕಾರಿ ಆತಂಕಗಳಿಗೆ ಹೋಲಿಸಿದರೆ, ನಿಜಕ್ಕೂ ಅತಿ ಸಣ್ಣಸಂಗತಿಯಂತೆ ಕಾಣುತ್ತದೆ.

ಈ ನಿಟ್ಟಿನಲ್ಲಿ ಎಐ ಬಗ್ಗೆ ಕೆಲವು ಆಯಾಮಗಳಲ್ಲಿ ಚರ್ಚೆಗಳನ್ನು ಈ ಸಂಚಿಕೆಯಲ್ಲಿ ಪ್ರಾರಂಭಿಸಿದ್ದೇವೆ. ಈ ತಂತ್ರಜ್ಞಾನದ ತಿಳಿವಳಿಕೆ ದೃಷ್ಟಿ ಮತ್ತು ಇದರ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸ್ಟೇಕ್ ಕೂಡ ಇರಬೇಕೆಂಬ ಕಾಳಜಿ ಪತ್ರಿಕೆಯದ್ದು. ಆ ನಿಟ್ಟಿನಲ್ಲಿ ಇದರ ಬಗ್ಗೆ ಸರಣಿ ಲೇಖನಗಳು ಮುಂದುವರೆಯಲಿವೆ.

  • – ಗುರುಪ್ರಸಾದ್ ಡಿ ಎನ್

ಇದನ್ನೂ ಓದಿ: ಪಾವ್ಲೊ ಫ್ರೆಯರೆಗೆ ನೂರು; ಮಾನವೀಕರಣ ಮತ್ತು ಪ್ರಜಾತಾಂತ್ರಿಕ ಶಿಕ್ಷಣಕ್ಕೆ ಮರುಚಿಂತನೆ ಅಗತ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...