ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ವಿರುದ್ದ ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆ ಸರಿಯಾಗಿಲ್ಲ. ಅಸಮಂಜಸವಾಗಿದೆ ಮತ್ತು ಸಮಯದ ಕೊರತೆ ಇದೆ ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಜುಲೈ 4ರಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಎಡಿಆರ್, “ಪ್ರಸ್ತುತ ರಿಟ್ ಅರ್ಜಿಯನ್ನು ಭಾರತದ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾಗಿದೆ ಎಂದಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ (ಇಸಿಐ) 24 ಜೂನ್ 2025 ರಂದು ಹೊರಡಿಸಿರುವ ಆದೇಶ ರದ್ದುಗೊಳಿಸುವಂತೆ ಕೊರಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ನಿರ್ದೇಶಿಸಿರುವುದು, ಭಾರತದ ಸಂವಿಧಾನದ 14, 19, 21, 325 ಮತ್ತು 326ನೇ ವಿಧಿಗಳು ಹಾಗೂ 1950ರ ಜನ ಪ್ರಾತಿನಿಧ್ಯ ಕಾಯ್ದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳ 21 ಎ ಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಎಡಿಆರ್ ಹೇಳಿದೆ.
ಚುನಾವಣಾ ಆಯೋಗದ ಆದೇಶವನ್ನು ರದ್ದುಗೊಳಿಸದಿದ್ದರೆ, ನಿರಂಕುಶವಾಗಿ ಮತ್ತು ಸರಿಯಾದ ಪ್ರಕ್ರಿಯೆಯಿಲ್ಲದೆ ಲಕ್ಷಾಂತರ ಮತದಾರರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ಕಳೆದುಕೊಳ್ಳಲಿದ್ದಾರೆ. ಇದು ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ” ಎಂದಿದೆ.
ಚುನಾವಣಾ ಆಯೋಗ ಕೇಳಿದ ದಾಖಲೆಗಳು ಹೊಂದಿಸಲು ಎಲ್ಲಾ ಜನರಿಗೆ ಸಾಧ್ಯವಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸರಿಯಿಲ್ಲ. ಸಮಯದ ಕೊರತೆಯಿದೆ. ಲಕ್ಷಾಂತರ ನಿಜವಾದ ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳುವ ಆತಂಕವಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳು ಆಗುವುದಿಲ್ಲ, ಬದಲಾಗಿ ಜನನ ಪ್ರಮಾಣಪತ್ರವೇ ತರಬೇಕೆಂದು ಕಡ್ಡಾಯ ಮಾಡಿದೆ. ಇದರಿಂದ ತಳ ಸಮುದಾಯಗಳ ಮತ್ತು ಬಡ ಮಧ್ಯಮ ವರ್ಗದ ಜನರನ್ನು ಮತದಾನದಿಂದ ವಂಚಿತರಾಗಿಸುವ ಸಾಧ್ಯತೆ ಇದೆ ಎಂದು ಎಡಿಆರ್ ಅರ್ಜಿಯಲ್ಲಿ ತಿಳಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆಯು ಸಂವಿಧಾನದ ವಿಧಿ 326ರ ಉಲ್ಲಂಘನೆಯಾಗಿದೆ. ಏಕೆಂದರೆ ಮತದಾರರು ತಮ್ಮ ಪೌರತ್ವವನ್ನು ಮತ್ತು ಅವರ ತಾಯಿ ಅಥವಾ ತಂದೆಯ ಪೌರತ್ವವನ್ನು ಸಾಬೀತುಪಡಿಸಲು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಮತ್ತು ಅದರಿಂದ ಅಳಿಸಬಹುದು ಎಡಿಆರ್ ಹೇಳಿದೆ.
“ವಿಶೇಷ ಸಾರಾಂಶ ಪರಿಷ್ಕರಣೆ (ಎಸ್‌ಎಸ್‌ಆರ್) ಅನ್ನು ಈಗಾಗಲೇ ಅಕ್ಟೋಬರ್ 29, 2024 ಮತ್ತು ಜನವರಿ 6, 2025ರ ನಡುವೆ ನಡೆಸಲಾಗಿದೆ. ಈ ಮೂಲಕ ವಲಸೆ, ಸಾವು ಅಥವಾ ಇತರ ಕಾರಣಗಳಿಂದಾಗಿ ಅನರ್ಹ ಮತದಾರರಂತಹ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಹೀಗಿರುವಾಗ ಕಡಿಮೆ ಅವಧಿಯಲ್ಲಿ ಲಕ್ಷಾಂತರ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅಗತ್ಯವಿಲ್ಲ” ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ವಾದಿಸಿದೆ.
ಟ್ರಂಪ್ ವಿರುದ್ಧ ತಿರುಗಿ ಬಿದ್ದ ಅತ್ಯಾಪ್ತ ಎಲಾನ್ ಮಸ್ಕ್: ಹೊಸ ರಾಜಕೀಯ ಪಕ್ಷ ಘೋಷಣೆ


