“ಕರೊನಾದಿಂದ ಏಟು ಜನ ಸತ್ರಲಾ ಉಗ್ರಿ” ಎಂದಳು ಜುಮ್ಮಿ.
“ವಾಟಿಸ್ಸೆ ಬಂದ ಅವುನ್ನೆ ಕೇಳು” ಎಂದ.
“ಲೆ ವಾಟಿಸ್ಸೆ ಏಟು ಜನ ಸತ್ರಲಾ.”
“ನೀನು ತಿಳಕಂಡಂಗೆ ಜನ ಸಾಯ್ತಯಿಲ್ಲ ಕಣ್ಣಕ್ಕ.”
“ಯಾಕ್ಲ.”
“ನಮ್ಮ ಜನಗಳ ಪರ‍್ರಂಗದೆ. ಕರೋನಾನೂ ಫೇಸ್ ಮಾಡ್ತ ಅವುರೆ, ಅಂತ ಯೇಡ್ಸನೆ ತಡಕಂಡ್ರು ಇದ್ಯಾವ ಲ್ಯಕ್ಕ.”
“ಏಡಿಸಿಗಿಂತ್ಲೂ ದ್ಲಡ್ಡ ಕಾಯಲವೆ ಇದು.”
“ಊ ಕಣ್ಣಕ್ಕ, ಏಡಸಾದೋನು ಸತ್ತೇ ಸಾಯ್ತನೆ. ಆದ್ರೆ ಕೊರೋನಾ ಬಂದೋರು ರಿಕವರಿ ಆಯ್ತ ಅವುರೆ ಇದಕೇನೇಳ್ತೀ.”
“ಮತ್ತೆ ಪಾರಿನ್ನಲ್ಲಿ ಭಾಳ ಜನ ಸತ್ರಂತೆ.”
“ಆ ನನ್‌ಮಕ್ಕಳು ಡೆಲಿಕೇಟು ಕಣಕ್ಕ. ಅದ್ಕೆ ಉದಿರೋದ್ರು.”
“ಡೇಲ್ಲಿಕೇಟು ಅಂದ್ರೇನ್ಲ.”
“ಡೆಲಿಕೇಟ್ ಅಂದ್ರೆ. ಯಾವಾಗ್ಲೂ ಕೈಯಿ ಬಾಯಿ ತ್ವಳಕಳದು ದಿನ ಸ್ನಾನ ಮಾಡದು. ಮೈನ್ಯಲ್ಲ ವರಿಸಿಗಳದು. ಸೆಂಟಾಕದು ಇಂತ ವಿಪರೀತ ಮಾಡಿ ಮೈಲಿಗೆ ಮಾಡಿದ್ರೆ ಮನುಸುನ ಬಾಡಿ ಡೆಲಿಕೇಟಾಯ್ತದೆ. ಅಂತಾ ನನ್‌ಮಕ್ಕಳು ಕಾಯ್ಲೆ ತಡಕಳ್ಳದಿಲ್ಲ.”
“ಅಂಗರೆ ಕಿಲೀನಾಗಿರಬಾರ್ದು ಅನ್ನು.”
“ಎಷ್ಟು ಬೇಕೊ ಅಷ್ಟಿರಬೇಕು.”
“ಊ ಯಾವ್ದು ಅತಿಯಾಗಬಾರ್ದು ಅಂತ ಅತಿ ಮಾಡಕ್ಕೋದ ಪಾರಿನ್ನರು ಕರೋನಾ ತಡಿಯಕ್ಕಾಗದೆ ಗ್ವಾತ ವಡಿತಾ ಅವುರೆ ಅದೇ ನಮ್ಮೊರು ನೋಡು ರಿಕವರಿ ಆಯ್ತಾ ಅವುರೆ.”
“ಯಣ್ಣೆ ಸಿಕ್ಕತೇನೊ ನಿನಗೆ” ಎಂದ ಉಗ್ರಿ.
“ಸಿಕ್ತು ಕಣೊ ಉಗ್ರಿ, ಆದ್ರೆ ಒಂದೂವರೆ ತಿಂಗಳು ಅದ ಮುಟ್ಟದಂಗಿದ್ದೆ ನೋಡು, ಅದ್ಕೊ ಏನೊ ವರಕು ಮಾಡಲಿಲ್ಲ ಅದು.”
“ಹಳೆ ಸ್ಟಾಕಿರಬೇಕೇನೊ.”
“ಹಳೆ ಸ್ಟಾಕೆ ಅಲವೆ ಕಿಕ್ ಕೊಡದು. ಎಲ್ಲೊ ಡೂಪ್ಲಿಕೇಟು ಅಂತ ಡವುಟು ಬತ್ತು.”
“ಅಂತೂ ಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ.”
“ಅವುನೆಲ್ಲಿ ತಗದ್ನೊ, ಮೋದಿ ತಗಿರಿ ಅತ್ತಗೆ ಅಂದ ಇವುನು ತಗದ ಅವುರಿಗೇನು ಸರಕಾರಕೆ ಆದಾಯ ಬತ್ತು.”
“ಮೋದಿ ಏನು ಮಾಡಿದುನ್ಲ ಕರೋನ ಕಾಯಿಲಕೆ.”
“ಅವುನು ರಾಮಾಯ್ಣ ದಾರವಾಯಿ ನೋಡ್ತ ಕುಂತವುನೆ.”
“ಅದ್ಯಾಕ್ಲ.”
“ಅಷ್ಟೆ ಅಲವೇನಕ್ಕ ಅವುನ ಕೈಲಾಗದು. ಅವುನೇನು ಕರೋನಾ ಡಾಗುಟ್ರೊ ಅಥವ ಮುಂದಾಲೋಚನೆಯಿರೊ ನಾಯಕನೋ ಇಲ್ಲ ಬುಡಬಗ್ಗರು ಸ್ಥಿತಿ ಗೊತ್ತಿರೊ ಮನುಸನೊ ಯಾವುದೂ ಅಲ್ಲ ಕಣಕ್ಕ ಅದ್ಕೆ ದೇಸವ ಅದರ ಪಾಡಿಗೆ ಬುಟ್ಟು ಅಗಾಗ್ಗೆ ಏನೇನೂ ಆಜ್ಞೆ ವರುಡುಸ್ತನೆ ಅವೂ ಅವನ ಸ್ವಂತ ತೀರಮಾನ ಅಲ್ಲ ಆರೆಸೆಸ್ ಮುಖಂಡ್ರು ಹೇಳಿದವು.”
“ನಮ್ಮ ಎಡೂರಪ್ಪನೆ ವಾಸಿ ಅಲವೇನೊ.”
“ಅದ್ಯಂಗೊ ಉಗ್ರಿ.”
“ಅವುನು ಉಗಾದಿ ಹಬ್ಬದ ಹಿಂದಿನ ದಿನ ಊರಿಗೋಗಿ ಬರೋರು ಬನ್ನಿ ಅಂದೆ ಇದ್ರೆ, ನಮ್ಮೂರರ‍್ಯಲ್ಲ ಬೆಂಗಳೂರಲೇ ಸಾಯಬೇಕಾಗಿತ್ತು.”
“ಅದೇನೊ ನಿಜಕಣೊ ಉಗ್ರಿ, ನೋಡು ಎಡೂರಪ್ಪಾಗ್ಲಿ ಮೋದಿ ಆಗ್ಲಿ ಕರೋನಾ ಸಮಸ್ಯೆಗೆ ಇವುರತ್ರ ಇರೊ ಸಲ್ಯೂಷನ್ ಏನದೆ ಗೊತ್ತೇನೊ.”
“ಅದಯಾವುದಪ್ಪ ಸಲೂಶನ್ನು.”
“ಮನೆಯಿಂದ ಯಾರು ವರಗೆ ಬರಬ್ಯಾಡಿ, ಬಾಯಿಗೆ ಬಟ್ಟೆ ಕಟಿಗಂಡಿರಿ, ದೂರ ನಿಂತಗಂಡು ಯವಾರ ಮಾಡಿ, ದೀಪಹಚ್ಚಿ ಜಾಗಟೆ ಬಾರಿಸಿ, ಅನ್ನದು ಬುಟ್ರೆ ಇನ್ನೆನುಯಿಲ್ಲ.”
“ಅಷ್ಟೆ ಅಂತಿಯಾ.”
“ಅಷ್ಟೆ ಅಂತಿಯಾ ಅಂತ ಕೇಳತಿಯಲ್ಲಾ ಈಗನುಭವುಸ್ತಯಿರದು ಅದೇ ಅಲವೇನೊ ನೀವಿಂಗಿರಿ ನಾವಿಂಗೆ ಮಾಡ್ತಿವಿ ದವಸ ಧಾನ್ಯ ಕೊಡ್ತೀವಿ ಸಾರಿಗೆ ಯವಸ್ಥೆ ಮಾಡ್ತಿವಿ ಊರಿಗೋಗಿ ಹೆದರಬ್ಯಾಡಿ ಅನ್ನೊ ಮಾತು ಅವುರ ಬಾಯಿಲಿ ಬರಲಿಲ್ಲಲ್ವೊ.”
“ಅದ್ಕೆ ಏನೊ ಕಂಡ್ಳ ಸೋನಿಯಗಾಂಧಿ ಊರಿಗೋಗೊ ಜನಕ್ಯಲ್ಲ ಗಾಡಿ ಚಾರ್ಜು ಕೊಡ್ತಿನಿ ಅಂದವುಳೆ.”
“ಆಗ್ಲೆ ಕಣಕ್ಕ ಬಿಜೆಪಿಗಳ ಬಾಯಿಗೆ ಬೀಗ ಬಿದ್ದಿದ್ದು. ಇವುಕೆ ಮಾನ ಮರಿಯಾದಿ ಇದ್ರೆ ಆ ಹೆಣ್ಣೆಂಗಸು ಹತ್ತುವರಸ ದೇಸ ಯಂಗೆ ಮಡಗಿದ್ಲು ಅಂತ ತಿಳಕಬೇಕು ಕಣಕ್ಕ ಆಗ್ಲಾರ ದೇಸ ಯಂಗಾಳಬೇಕು ಅನ್ನದು ವಳಿತದೆ.”
“ನಿಜ ಕಂಡ್ಳ ನೀನೇಳಿದ್ದು.”
ಇದನ್ನೂ ಓದಿ: ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ


