ಗೌರಿ ಮೇಡಂ ಜೊತೆಗಿನ ನನ್ನ ಒಡನಾಟಕ್ಕೆ ಈ ವರ್ಷಕ್ಕೆ 20 ತುಂಬುತ್ತದೆ. ಅದರಲ್ಲಿ ಅವರು ಜೊತೆಗಿಲ್ಲದೇ ಕಳೆದ 3 ವರ್ಷಗಳನ್ನೂ ಸೇರಿಸಿದ್ದೇನೆ, ಏಕೆಂದರೆ ಅವರ ಸಾವಿನ ನಂತರ ಅವರ ವಿಚಾರ, ಆಶಯ, ಗುರಿ ಅವನ್ನು ಮುಟ್ಟಬಹುದಾದ ದಾರಿ ಇವುಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಬೆಸೆದುಕೊಂಡಿದ್ದೇನೆ. ಇಂಥದೇ ವಿಚಾರಗಳಿಂದ ಕೂಡಿದ ಒಂದಿಡೀ ಉತ್ಸಾಹಿ ತಂಡದೊಂದಿಗೆ ಗುರುತಿಸಿಕೊಂಡಾಗಿನಿಂದ ಜೀವನ ಹೆಚ್ಚು ಪ್ರಸ್ತುತವೆನಿಸುತ್ತದೆ.
ಗೌರಿ ಮೇಡಂ, ಪತ್ರಕರ್ತೆಯಿಂದ ಆಕ್ಟಿವಿಸ್ಟ್ ಆಗಿ ಬೆಳೆದ ಅವರ ಪ್ರಯಾಣದ ಎಲ್ಲ ಹಂತದಲ್ಲಿ ಅವರ ಜೊತೆ ಇದ್ದು ಅವರು ಆ ಬೆಳವಣಿಗೆಯ ಆಳ-ಅಗಲ ಅರ್ಥವಾಗುವಷ್ಟರಲ್ಲಿ ಅವರನ್ನು ಕಳೆದುಕೊಂಡಾಗ, ನನ್ನದೇ ವ್ಯಕ್ತಿತ್ವದ ಒಂದು ಭಾಗ ಕಿತ್ತುಹೋದಂತಾಯ್ತು.
ನಾನು ಲಂಕೇಶ್ ಪತ್ರಿಕೆ ಆಫೀಸ್ ಪಕ್ಕದಲ್ಲಿಯೇ ಇದ್ದ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು ‘ಲಂಕೇಶ್’ ಸತ್ತ ಸುದ್ದಿ ಹೇಳಿದರು. ಬೆಂಗಳೂರಿಗೆ ಬಂದಾಗಿನಿಂದ ದಿನಾಲು ಲಂಕೇಶ್ ಪತ್ರಿಕೆ ಆಫೀಸ್ ನೋಡುತ್ತಿದ್ದೆನಾದರೂ ಒಳಗೆ ಹೋಗಿರಲಿಲ್ಲ. ಆದರೆ ಲಂಕೇಶ್ ಸಾವು, ಪತ್ರಿಕೆಯ ಭವಿಷ್ಯ ಇವುಗಳ ಬಗ್ಗೆ ಸ್ನೇಹಿತರೊಂದಿಗೆ ಮಾತಾಡುವಾಗ ತಡೆಯಲಾಗದೆ ಒಂದು ದಿನ ಕಾರಣವಿಲ್ಲದೇ ‘ಲಂಕೇಶ್ ಪತ್ರಿಕೆ’ ಆಫೀಸಿಗೆ ಹೋದೆ. ಪತ್ರಿಕೆ ಆಫೀಸಿನ ಮೆಟ್ಟಿಲುಗಳೇರಿದಾಗ ಎದುರಿಗೇ ಇರುವ ಒಂದು ಸಣ್ಣ ರೂಮಿನಲ್ಲಿ ಗೌರಿ ಹಣೆಗೆ ಕೈಹಚ್ಚಿ ಕುಳಿತಿದ್ದರು. ಒಳಗೆ ಹೋಗಿ ನನ್ನ ಪರಿಚಯ ಮಾಡಿಕೊಂಡೆ. ಅಂದಿನ ನನ್ನ ಸಣಕಲ ದೇಹ, ಶಾರ್ಟ್ ಹೇರ್‍ಕಟ್ ನೋಡಿ ಅವರಿಗೆ ಅದೇನನ್ನಿಸಿತೋ “ಕೂಡು ಮರಿ” ಅಂದರು. ನಂತರ ನನ್ನೂರು, ಕಾಲೇಜು ಎಲ್ಲದರ ಬಗ್ಗೆ ಮಾತಾಡಿದರು. ಆಗ ನಾನು ಕಾಲೇಜಲ್ಲಿದ್ದಾಗಲೇ ಬೆಳಗಿನ ಹೊತ್ತು “ಸಂಜೆವಾಣಿ” ಪತ್ರಿಕೆಯಲ್ಲಿ ಉಪ ಸಂಪಾದಕಳಾಗಿ ಕೆಲಸ ಮಾಡುತ್ತಿದ್ದೆ ಮತ್ತು ಕೆಲವು ಸಣ್ಣ ಕಥೆ, ಲೇಖನ ಎಲ್ಲಾ ಬರೆದಿದ್ದೆ. ನನ್ನ ಬ್ಯಾಗಿನಲ್ಲಿ ಕೆಲವೊಂದನ್ನು ಅಂದು ತೋರಿಸಿದೆ. ಅವರು ಒಂದುಕ್ಷಣ ಬಹಳ ಖುಷಿ ಪಟ್ಟು ಒಳಗಡೆ ಇದ್ದ ಚಂದ್ರೇಗೌಡರನ್ನ ಕರೆದು ತೋರಿಸಿದರು. ಗೌಡರೂ ಓದಿ ‘ಚಂದ ಬರಿದೀಯವ್ವಾ’ ಅಂದಾಗ ಗೌರಿ “ಇದನ್ನ ನೋಡಿದರೆ ಹೈಸ್ಕೂಲ್ ಹುಡುಗಿ ಹಂಗ ಕಾಣ್ತದ ಅಂತ ನಕ್ಕು” ನಮ್ಮೂರ ಕಡೆ ಪ್ರೀತಿಯಿಂದ ಚಿಕ್ಕವರನ್ನು ಅದು ಇದು ಅಂತ ಕರೀತಾರ ಬೇಜಾರ ಮಾಡ್ಕೋ ಬ್ಯಾಡರಿ ಅಂದರು. ಅವತ್ತಿನ ನಮ್ಮ ಮೊದಲ ಭೇಟಿ ಸುಮಾರು ಒಂದೂವರೆ ಗಂಟೆ ನಡೆಯಿತು. ಒಂದೆರಡು ಸಣ್ಣಕತೆ ಬರೆದುಕೊಂಡು ಬಾ ಎಂದು ಗೌರಿ ಹೇಳಿದಾಗ ಅತೀ ಸಂಭ್ರಮದಿಂದ ಅಲ್ಲಿಂದ ಬಂದಿದ್ದೆ. ಅದ್ಯಾವತ್ತೂ ಮೊದಲ ಭೇಟಿ ಅನಿಸಲೇ ಇಲ್ಲ. ಅಷ್ಟೊಂದು ಆತ್ಮೀಯತೆ, ಸ್ನೇಹ ಅವರಲ್ಲಿತ್ತು.
ಅಂದಿನಿಂದ ಶುರುವಾದ ಗೌರಿ ಜೊತೆಗಿನ ಒಡನಾಟ ನಿರಂತರವಾಗಿದೆ. ಇಂಗ್ಲಿಷ್ ಜರ್ನಲಿಸಂದಿಂದ ಕನ್ನಡಕ್ಕೆ ಒಗ್ಗಿಕೊಳ್ಳುವಲ್ಲಿ ಅವರು ಪಡುತ್ತಿದ್ದ ಪ್ರಯತ್ನಕ್ಕೆ, ಪತ್ರಿಕೆ ನಿರ್ವಹಿಸಲು ಹಣಕಾಸಿಗಾಗಿ ಗೌರಿ ಪಡುತ್ತಿದ್ದ ಕಷ್ಟ ನೋಡಿದ ಮೇಲೂ, ನಾವೊಂದಿಷ್ಟು ಜನ ಪತ್ರಿಕೆ ಮಾಡುವ ಸಾಹಸಕ್ಕೆ ಕೈಹಾಕಿ ಮೇಡಂ ಸಲಹೆ ಕೇಳಲು ಆಫೀಸಿಗೆ ಹೋಗಿ ಹಗುರಾಗಿ ಬೈಸಿಕೊಂಡು ಬಂದಿದ್ದೆವು. “ನನ್ನಪ್ಪನ ಹೆಸರು ಇದ್ದೂ, ರೆಡಿಮೇಡ್ ಆಫೀಸೂ ಇದ್ದು ನಾನೇ ಒದ್ದಾಡ್ತಾ ಇದ್ದಿನಿ, ಈಗ ತಾನೆ ಡಿಗ್ರಿ ಮುಗಿಸೀರಿ ನಿಮಗ್ಯಾಕೆ ಈ ಉಸಾಬರಿ” ಅಂದರೂ ಕೇಳುವ ವಯಸ್ಸಲ್ಲವಲ್ಲ. ಸ್ನೇಹಿತನ ಪತ್ರಿಕೆಯ ಹುಮ್ಮಸ್ಸಿಗೆ ನಾವೆಲ್ಲ ಭರವಸೆಯ ಮಳೆ ಸುರಿಸಿ ಹಂಗೂಹಿಂಗೂ ಒಂದುವರ್ಷ ಬಹಳ ಚೆನ್ನಾಗಿ ಪತ್ರಿಕೆ ನಡೆಸಿ, ಹಣಕಾಸಿನಲ್ಲಿ ಕೈಸುಟ್ಟ ಮೇಲೆ ಅದನ್ನು ನಿಲ್ಲಿಸಿ, ನಿಯತ್ತಿನಿಂದ ವೃತ್ತಿ ಜೀವನ ಶುರುಮಾಡಿಕೊಂಡಿವಿ. ಗೌರಿ ಮೇಡಂ ಜೊತೆ ಪ್ರತಿಯೊಂದು ಧರಣಿ, ಸತ್ಯಾಗ್ರಹ, ಎಲ್ಲ ಕಡೆ ಹೋಗುವುದು ಮಾತ್ರ ಹಾಗೇ ಮುಂದುವರೆದು ಅವರ ಲಂಕೇಶ್ ಪತ್ರಿಕೆ ಪ್ರಯಾಣ ಮುಗಿದು “ಗೌರಿ ಲಂಕೇಶ್” ಶುರುವಾದಾಗ ಉದ್ಘಾಟನಾ ಸಮಾರಂಭದಲ್ಲಿ ನಮ್ಮದೇ ಪತ್ರಿಕೆ ಶುರುವಾದಂಥ ಸಂಭ್ರಮದಲ್ಲಿ ಓಡಾಡಿದ್ದೆವು. ಅಲ್ಲಿಂದ ಮುಂದಿನ ಪ್ರಯಾಣ ಮಾತ್ರ ಬಹಳ ಜವಾಬ್ದಾರಿಯಿಂದ ಕೂಡಿದ್ದಾಗಿತ್ತು.
ಕೋಮು ಸೌಹಾರ್ದ, ಅಲ್ಪಸಂಖ್ಯಾತ ಮತ್ತು ಲೈಂಗಿಕ ಶೋಷಿತರ ಹಕ್ಕುಗಳು, ಬಲಪಂಥ ವಿರೋಧ ಹೀಗೆ ಹಲವು ಹೋರಾಟಗಳಲ್ಲಿ ಭಾಗಿಯಾಗಿ, ಗೌರಿ ಅವರಲ್ಲಿ ಒಬ್ಬರಾಗಿ ಬೆರೆಯುತ್ತಾ ಹೋದೆವು. ಎಲ್ಲ ದಮನಿತರು ಒಂದೇ ಸೂತ್ರದಲ್ಲಿ ಸೇರಿಕೊಂಡವರು ಎಂಬ ಸೂಕ್ಷ್ಮ ಅಂಶವನ್ನು ಅರಿತಿದ್ದ ಗೌರಿ ಆ ಸೂತ್ರಗಳಲ್ಲಿ ಹಾದು ಹೊಕ್ಕರು. ಟೌನ್‍ಹಾಲ್ ಮೆಟ್ಟಿಲಮೇಲೆ ಕೂಡುವಷ್ಟೇ ಸಹಜವಾಗಿ ಕಂಡ ಹಳ್ಳಿಹಳ್ಳಿಗೆ ಹೋಗಿ ಬಂದರು. ಶೃಂಗೇರಿಯಲ್ಲೊಮ್ಮೆ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೋದಾಗ ಮಳೆಗಾಲದ ಮಲೆನಾಡನ್ನು ನೋಡಿ ನನಗೆ ವಿಚಿತ್ರವಾದ ಅನುಭವ. ಒಂದು ಕಡೆ ಜೀಪ್ ನಿಲ್ಲಿಸಿ ಗುಡ್ಡದಲ್ಲಿ ಹೋಗುವಾಗ ಗೌರಿ ಮೇಡಂ ಮತ್ತು ಇತರರ ಮಾತುಗಳನ್ನೇ ಕೇಳುತ್ತಾ ಹೋದ ಅನುಭವ ಮಾತ್ರ ಮರೆಯಲು ಸಾಧ್ಯವಿಲ್ಲ. ವಾಪಸ್ಸು ಬಂದು ನಿಂತಾಗ ಗೌರಿ ಮೇಡಂ ತಮಗೆ ಅಂಟಿಕೊಂಡು ರಕ್ತ ಹೀರುತ್ತಿದ್ದ ಜಿಗಣೆಗಳನ್ನು ಕಿತ್ತಲು ಹೇಳಿದಾಗ ನನ್ನ ಕೈ ನಡುಗುತಿತ್ತು. ಕಿತ್ತಿದಾಗ ಹರಿದ ರಕ್ತ ನೋಡಿ ಹೌಹಾರಿದ್ದೆ. ಗೌರಿ ನಕ್ಕು ಎಲ್ಲರಿಗೂ ಹೇಳಿದ್ದರು “ಪಾಪ ಇದು ಬಯಲು ಸೀಮೇದು ನೋಡ್ರಿ ಹೆಂಗೆ ಗಾಬರಿಯಾಗಿದೆ” ಅಂತ.
ಜರ್ನಲಿಸ್ಟ್ ಗೌರಿ ಆಕ್ಟಿವಿಸ್ಟ್ ಆಗುವಷ್ಟರಲ್ಲಿ ಅವರ ಜೊತೆ ನಾನೂ ವಿದ್ಯಾರ್ಥಿ ದೆಸೆಯಿಂದ ಬೆಳೆದು ವಕೀಲಳಾಗಿ ಮುಂದೆ ಅವರದೇ ಪತ್ರಿಕೆಯಲ್ಲಿ ಅಂಕಣಕಾರಳಾಗಿ, ಕಾನೂನು ವಿಷಯಗಳಲ್ಲಿ ಅವರಿಗೆ ಆಗಾಗ ಸಲಹೆ ನೀಡುತ್ತ, ಅದೇ ಸಲುಗೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಕಾಮೆಂಟ್, ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿದಾಗ ಬೈಯುತ್ತಿದ್ದೆ. ಅದೊಂದು ನೆನಪುಗಳ ಸರಮಾಲೆ.
ಗೌರಿಯನ್ನು ಕೊಂದು ಅವರ ವಿಚಾರಗಳನ್ನು ನಾಶ ಮಾಡುತ್ತೇವೆ ಎಂದುಕೊಂಡವರಿಗೆ ಇಂದು ಆ ಹೆಸರಿನ ಹಿಂದೆ ಇರುವ ಸಮಾನ ಮನಸ್ಕರ ದಂಡು ನೋಡಿ ಗಾಬರಿ ಆಗಬೇಕು. ಗೌರಿ ಮುಗಿದಿಲ್ಲ, ಅವರಿನ್ನೂ ಬೆಳೆಯುತ್ತಾರೆ, ನಾವೂ ಬೆಳೆಯುತ್ತೇವೆ. ಜೊತೆಜೊತೆಯಾಗಿ.


