Homeಗೌರಿ ಲಂಕೇಶ್ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?

ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?

ಗೌರಿ ಲಂಕೇಶರಿಗೆ ನೇರವಾಗಿ ಗುಂಡಿಕ್ಕಿದ ಪರಶುರಾಮ ವಾಘ್ಮೋರೆ ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ಕುಖ್ಯಾತಿ ಹೊಂದಿರುವವನು. ಅವನು ಮುತಾಲಿಕ್ ಸೇನೆಯ ಕಾರ್ಯಕರ್ತ.

- Advertisement -
- Advertisement -

ಗೌರಿ ಲಂಕೇಶರನ್ನು ಹತ್ಯೆಗೈಯ್ಯಲಾದ ಸೆಪ್ಟೆಂಬರ್ 5ರಂದು ಟ್ವಿಟ್ಟರ್‌ನಲ್ಲಿ ಒಂದು ಟ್ರೆಂಡ್ ಕಾಣಿಸಿತು. #truefaceofGaurilankesh ಹ್ಯಾಷ್‍ಟ್ಯಾಗ್‍ನ ಜೊತೆ ಆದ ಟ್ರೆಂಡ್. ಅದೇ ಸಂದರ್ಭದಲ್ಲಿ ಸಂಘಟನೆಯೊಂದರ ಮುಖಂಡ ಮುತಾಲಿಕ್ ಎಂಬ ವ್ಯಕ್ತಿ ಗೌರಿಲಂಕೇಶ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಮಾತನ್ನು ಹೇಳಿದ್ದು ವರದಿಯಾಯಿತು. ಕೆಲವು ದಿನಗಳ ನಂತರ ಅದೇ ಸಂಘಟನೆಗೆ ಸೇರಿದ ಇನ್ನೊಬ್ಬ ವ್ಯಕ್ತಿ ಗೌರಿ ಲಂಕೇಶರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಮತ್ತು ಅದು ಪಾಕಿಸ್ತಾನದಿಂದ ಸರಬರಾಜಾಗುತ್ತಿತ್ತು ಎಂದು ಹೇಳಿದ.

ಮುತಾಲಿಕ್ photo courtesy: Scroll.in

ಈ ರೀತಿ ಆರೋಪ ಮಾಡಿದವರಿಗೂ ಗೌರಿಯವರು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಖಚಿತವಾಗಿ ಗೊತ್ತಿತ್ತು; ಆದರೂ ಆ ರೀತಿ ಆರೋಪ ಮಾಡಿದುದಕ್ಕೆ ಎರಡು ಕಾರಣಗಳಿರಬಹುದು. ಒಂದು, ಅವರಿಬ್ಬರೂ ಡ್ರಗ್ಸ್ ತೆಗೆದುಕೊಂಡಿರುವ ಸಾಧ್ಯತೆ ಇದೆ. ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಊರುಗಳಿಂದ ಅವರು ಮಾತಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅದರ ಅರ್ಥ, ಅವರ ಸಂಘಟನೆಯಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದು ಬಿಡಲಾಗದ ಚಟವಾಗಿ ಅಂಟಿಕೊಂಡಿದ್ದು, ಎಲ್ಲರೂ ಎಲ್ಲಿದ್ದರೂ ಡ್ರಗ್ಸ್ ತೆಗೆದುಕೊಳ್ಳುವವರಾಗಿರಬೇಕು. ಇಲ್ಲವೇ ದುರುದ್ದೇಶವಿದ್ದು, ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿರಬೇಕು. ವಾಸ್ತವವೇನು ಗೊತ್ತೇ? ಇವೆರಡೂ ನಿಜ. ಅವರು ದುರುದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೆ ಮತ್ತು ಆ ರೀತಿ ಸುಳ್ಳು ಹೇಳುವುದು ಅವರಿಗೆ ನಶೆಯಂತೆ ಅಂಟಿದೆ. ಮುತಾಲಿಕ್ ಎಂಬ ವ್ಯಕ್ತಿ ಎಂತೆಂತಹ ಅಪಾಯಕಾರಿ ಸುಳ್ಳು ಮತ್ತು ಕುಕೃತ್ಯಗಳಲ್ಲಿ ತೊಡಗಿದ್ದು ಮತ್ತೆ ಮತ್ತೆ ಸಾಬೀತಾಗುತ್ತಿದ್ದರೂ ಆತ ಪದೇ ಪದೇ ಅದನ್ನು ಹೇಳುತ್ತಾನೆ ಮತ್ತು ಆತನ ಮಾತುಗಳನ್ನು ಹುಚ್ಚ ವೆಂ…ನ ಸುದ್ದಿ ಪ್ರಕಟಿಸಿದಷ್ಟೇ ನಿಷ್ಠೆಯಿಂದ ಗೌರವಾನ್ವಿತ ಪತ್ರಿಕೆಗಳು ಪ್ರಕಟಿಸುತ್ತವೆ ಮತ್ತು ಮನೋರೋಗವನ್ನು ಸಾಂಕ್ರಾಮಿಕವಾಗಿ ಹಬ್ಬಿಸುವ ಟಿವಿ ಚಾನೆಲ್‍ಗಳ ಕುರಿತು ಹೆಚ್ಚೇನೂ ಹೇಳುವ ಅಗತ್ಯವಿಲ್ಲ.

ಈಗಿನ ಪ್ರಶ್ನೆ ಇದಾವುದೂ ಅಲ್ಲ. ಮುತಾಲಿಕ್ ಹೇಳಿದ ಮಾತಿಗೆ ನಾವು ಪ್ರತಿಕ್ರಿಯಿಸಬೇಕಾ, ಬೇಡವಾ? ಕೆಲವರ ಅನಿಸಿಕೆಯೇನೆಂದರೆ – ನೋಡಿ ಇದೊಂದು ಟ್ರ್ಯಾಪ್. ಏಕೆಂದರೆ, ಗೌರಿ ಲಂಕೇಶರ ಉನ್ನತ ವ್ಯಕ್ತಿತ್ವ ಏನೆಂದು ಎಲ್ಲರಿಗೂ ಗೊತ್ತಿದೆ. ಆದರೆ ನೀವು ಗೌರಿಯವರು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದರೂ ಪದೇ ಪದೇ ಅದು ಚರ್ಚೆಗೆ ಬರುತ್ತದೆ ಮಾತ್ರವಲ್ಲ, ಅವರೂ ಅದಕ್ಕೆ ಪ್ರತಿಕ್ರಿಯೆ ಕೊಟ್ಟು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ತಮ್ಮದೇ ಐಟಿ ಸೆಲ್ಲುಗಳಲ್ಲಿ ಇದನ್ನು ವಿಸ್ತೃತವಾಗಿ ಹರಿಯಬಿಡುತ್ತಾರೆ. ಅಂತಿಮವಾಗಿ ಒಂದಷ್ಟು ಜನರು ಗೌರಿಯವರು ಡ್ರಗ್ಸ್ ತೆಗೆದುಕೊಳ್ಳುತ್ತಿರಬಹುದು ಎಂದು ನಂಬಿಯೂ ಬಿಡಬಹುದು. ಹಾಗಾಗಿ ಈ ಕುರಿತು ಪ್ರತಿಕ್ರಿಯಿಸದೇ ಸುಮ್ಮನಾಗಿಬಿಡೋಣ ಎಂಬುದು ಒಂದು ವಾದ.

ಈ ಸೇನೆ – ಪೇನೆಗಳಿಗೆಲ್ಲಾ ಐಟಿ ಸೆಲ್ ಇದೆಯಾ ಎಂದು ನೀವು ಅಚ್ಚರಿ ಪಡಬಹುದು. ಬಿಜೆಪಿ ಐಟಿ ಸೆಲ್ ಇವರ ಪರವಾಗಿಯೂ ಕೆಲಸ ಮಾಡುತ್ತದೆಯೇ ಎಂಬ ಪ್ರಶ್ನೆಯೂ ಏಳಬಹುದು. ಇವರೆಲ್ಲರೂ ಒಂದೇ ಹೊಲಸಿನ ತುಂಡುಗಳೇ. ಇದೇ ವಿದ್ಯಮಾನ ನೋಡಿ. ಗೌರಿಯವರ ಹತ್ಯೆಯಂತಹ ಅಮಾನವೀಯ, ವಿಕೃತ ಹಾಗೂ ಜೀವವಿರೋಧಿ ಕೃತ್ಯ ಎಸಗಿದವರು ಅವರು ಸತ್ತ 3 ವರ್ಷಗಳ ನಂತರ ಗೌರಿ ಲಂಕೇಶರ ಅಸಲಿ ಮುಖ ಎಂಬ ಕ್ಯಾಂಪೇನ್ ನಡೆಸಿದರೋ ಇಲ್ಲವೋ? ಇದು ಕ್ಯಾಂಪೇನ್ ಎಂದು ಹೇಗೆ ಹೇಳುತ್ತೀರಿ? ಬಹಳ ಸ್ಪಷ್ಟ. ಅಂದು ನಡೆದ ಟ್ವಿಟ್ಟರ್ ಅಭಿಯಾನದಲ್ಲಿ ಆಗಿರುವ ಟ್ವೀಟ್‍ಗಳನ್ನು ಗಮನಿಸಿ. ಅವೆಲ್ಲಾ ಒಂದೇ ಮೂಲದಿಂದ ಬಂದಿವೆ. ಒಂದೇ ಟ್ವೀಟ್ ಶೀಟ್‍ಅನ್ನು ಐಟಿ ಸೆಲ್ಲು ತಯಾರಿಸಿಕೊಟ್ಟಿದೆ. ನಾಲ್ಕು ಸಾಲು ತಾವೇ ಬರೆಯಲು ಬಾರದವರು, ತಮಗೆ ಬಂದ ಟ್ವೀಟ್ ಶೀಟ್‍ನಿಂದ ಕಾಪಿ ಮಾಡಿ ಒಂದೇ ಹ್ಯಾಷ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿ 2 ರೂ. ಸಂಪಾದಿಸುತ್ತಾ ಹೋಗಿದ್ದರು. ಅಂದರೆ ಸಮರ್ಥ ಐಟಿ ಸೆಲ್ ಇರುವ ಪಕ್ಷದ/ಸಂಘಟನೆಯ ಜಾಲವನ್ನು ಇದರಲ್ಲಿ ತೊಡಗಿಸಲಾಗಿತ್ತು.

photo courtesy: Oneindia

ಇರಲಿ, ಒಟ್ಟಾರೆ ಇದರ ಅರ್ಥ ಇಷ್ಟೇ. ಇದೊಂದು ವ್ಯವಸ್ಥಿತ ಕ್ಯಾಂಪೇನ್ ಆಗಿತ್ತು. ಅಂದರೆ ಗೌರಿಲಂಕೇಶರು ಸತ್ತ ನಂತರವೂ ಅವರ ವ್ಯಕ್ತಿತ್ವಹರಣವನ್ನು ಮಾಡಲು ಒಂದು ಯೋಜನೆ ತಯಾರಾಗಿದೆ. ಕಾರಣಗಳು ಹಲವಿರಬಹುದು. ಒಂದು, ತಾವು ಕೊಂದ ವ್ಯಕ್ತಿಯು ದುಷ್ಟ ಅಥವಾ ದುಷ್ಟೆಯಾಗಿದ್ದಳು ಎಂಬುದನ್ನು ಬಿಂಬಿಸುವುದು. ಎರಡು, ಈಗಾಗಲೇ ಗೌರಿಯವರ ವ್ಯಕ್ತಿತ್ವದ ಔನ್ನತ್ಯವು ದೇಶವಿದೇಶಗಳಲ್ಲಿ ವ್ಯಾಪಿಸಿರುವಾಗ ಅವರನ್ನು ಡೆಮನೈಸ್ ಮಾಡದಿದ್ದರೆ ಕಷ್ಟವಾಗುವ ಅನಿವಾರ್ಯತೆ. ಮೂರು, ಗೌರಿಯವರ ಕೊಲೆ ಆರೋಪಿಗಳ ಮೇಲಿನ ಆರೋಪವು ದೃಢವಾಗುತ್ತಾ ಬಂದಂತೆ ವಿಚಾರಣೆಯನ್ನು ಮತ್ತು ನಂತರದ ಪರಿಣಾಮಗಳನ್ನು ದುರ್ಬಲಗೊಳಿಸುವುದು. ನಾಲ್ಕು, ಗೌರಿಯವರ ಆಶಯವನ್ನು ಮುಂದುವರಿಸುತ್ತಿರುವ ಹಲವು ಬಗೆಯ ಪ್ರಯತ್ನಗಳನ್ನು ಡಿಮಾರಲೈಸ್ ಮಾಡುವುದು. ಹಾಗಾಗಿ ಈ ಸಾರಿಯ ಸುಪಾರಿಯನ್ನು ಸೇನೆಯೊಂದಕ್ಕೆ ಕೊಡಲಾಗಿದ್ದು, ಅದಕ್ಕೆ ಬ್ಯಾಕಪ್ ಕೆಲಸವನ್ನು ಐಟಿ ಸೆಲ್ ಮೂಲಕ ಮಾಡಿಸಲಾಗುತ್ತಿದೆ.

ಇದು ಅರ್ಥವಾಗಬೇಕೆಂದರೆ, ಇನ್ನೊಂದು ಉದಾಹರಣೆ ನೋಡೋಣ. ಎಚ್.ಎಸ್.ದೊರೆಸ್ವಾಮಿಯವರ ಮೇಲೆ ಒಮ್ಮೆ ಇದ್ದಕ್ಕಿದ್ದಂತೆ ಸಂದರ್ಭವೇ ಇಲ್ಲದೇ, ಯತ್ನಾಳ್ ಎಂಬೊಬ್ಬ ಚಿಲ್ಲರೆ ವ್ಯಕ್ತಿ ಸಗಟು ಆರೋಪವೊಂದನ್ನು ಮಾಡಿದ. ಅದಕ್ಕೆ ದೊಡ್ಡ ಮಟ್ಟದ ವಿರೋಧ ಬಂದಿತು. ಸಾಮಾನ್ಯವಾಗಿ ಅಂತಹ ಆರೋಪಕ್ಕೆ ಪ್ರತಿರೋಧ ಬಂದರೆ, ಆರೋಪ ಮಾಡಿದವರು ಧೃತಿಗೆಡುತ್ತಾರೆ. ಆದರೆ, ಇಲ್ಲಿ ಆತ ಮತ್ತೆ ಆರೋಪವನ್ನು ಪುನರುಚ್ಚರಿಸಿದ. ಇನ್ನಿಬ್ಬರು ಸಚಿವರು ಅದನ್ನು ಸಮರ್ಥಿಸಿದರು. ಹೀಗಿರುವಾಗ ಬಿಜೆಪಿ ಪಕ್ಷದಲ್ಲೇ ಇರುವ ‘ಸಜ್ಜನ’ರಿಂದ ನೀವೇನು ನಿರೀಕ್ಷಿಸುತ್ತಿರುತ್ತೀರಿ? ಸಜ್ಜನರೆಂದು ಬಿಂಬಿಸಿಕೊಳ್ಳಲು ಹಾತೊರೆಯುವ ಸುರೇಶ್‍ಕುಮಾರ್ ಅವರೂ ದೊರೆಸ್ವಾಮಿಯವರನ್ನು ಖಂಡಿಸಿದರು. ಇನ್ನು ಮುಖ್ಯಮಂತ್ರಿ? ಈ ಮುಖ್ಯಮಂತ್ರಿಯವರು ಮುಸ್ಲಿಮರನ್ನು ಅನ್ಯಾಯವಾಗಿ ದೂಷಿಸಲಾಗುತ್ತಿದೆ ಎನಿಸಿದಾಗ ಅದನ್ನು ಖಂಡಿಸಿ ಎಚ್ಚರಿಕೆ ಕೊಟ್ಟವರು. ಅಂಥವರು ದೊರೆಸ್ವಾಮಿಯವರ ವಿಚಾರದಲ್ಲಿ ಇನ್ನೂ ಜೋರಾಗಿ ಖಂಡಿಸಬೇಕಿತ್ತಲ್ಲವೇ? ಊಹುಂ. ಅವರು ಬಾಯೇ ಬಿಡಲಿಲ್ಲ. ಸ್ವತಃ ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಸದನದ ಹೊರಗೆ ಮತ್ತು ಒಳಗೆ ಪ್ರತಿಭಟನೆಗಳಾದಾಗಲೂ ಈ ಕುರಿತು ತುಟಿಕ್‍ಪಿಟಕ್ ಎನ್ನಲಿಲ್ಲ. ಇದೇ ಅವಧಿಯಲ್ಲಿ ಐಟಿ ಸೆಲ್ ಒಂದೇಸಮನೆ ಅಸಹ್ಯವನ್ನು ಉಗುಳುತ್ತಿತ್ತು. ಟಿವಿ ಚಾನೆಲ್ಲೊಂದು ಯತ್ನಾಳ್‍ಗಿಂತ ಕೆಟ್ಟದಾಗಿ ದೊರೆಸ್ವಾಮಿಯವರ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿತು.

ಅಂದರೆ, ಇದೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿತ್ತು; ‘ಸಜ್ಜನ’ರು, ದುರ್ಜನರು ಮತ್ತು ಯಡಿಯೂರಪ್ಪನವರು ಎಲ್ಲರಿಗೂ ಸ್ಪಷ್ಟ ಸಂದೇಶ ಕಳಿಸಿ, ‘ನಾವೀಗ ಈ ವ್ಯಕ್ತಿಯನ್ನು ನೈತಿಕವಾಗಿ ಕುಗ್ಗಿಸಬೇಕೆಂದು ತೀರ್ಮಾನಿಸಿದ್ದೇವೆ ಮತ್ತು ನಿಮ್ಮ ಪಾತ್ರ ಇಂಥದ್ದು’ ಎಂದು ಸೂಚಿಸಲಾಗಿತ್ತು. ಈಗ ಗೌರಿ ಲಂಕೇಶರ ವಿರುದ್ಧ ಅಂತಹುದೇ ವ್ಯವಸ್ಥಿತ ದಾಳಿ ಶುರುವಾಗಿದೆ. ಇದು ಹೀಗೆಯೇ ಮುಂದುವರಿದರೆ ಏನಾಗುತ್ತದೆ? ಜೈಲಿನಲ್ಲಿರುವ ಗೌರಿಯವರ ಕೊಲೆಗಡುಕರು ಮತ್ತು ಸಂಚುಕೋರರು ಒಂದು ವೇಳೆ ಶಿಕ್ಷೆಗೊಳಪಟ್ಟರೆ ಹುತಾತ್ಮರೆಂಬಂತೆ ಬಿಂಬಿಸಲ್ಪಡುತ್ತಾರೆ; ಬಿಡುಗಡೆಯಾದರೆ ವೀರೋಚಿತ ಸ್ವಾಗತ ಸಿಗುತ್ತದೆ.

ಇವೆಲ್ಲಾ ಕಾರಣಗಳಿಂದ ನಾವಿದಕ್ಕೆ ಪ್ರತಿಕ್ರಿಯಿಸಲೇಬೇಕು. ಪ್ರತಿಕ್ರಿಯಿಸದೇ ಇದ್ದಲ್ಲಿ ಸುಮ್ಮನಾಗುವ ಕೇಸು ಇದಲ್ಲ. ಹಾಗಾಗಿದ್ದರೆ, ಅವರು ಇಂತಹ ಯೋಜಿತ ಆಟ ಆಡುತ್ತಿರಲಿಲ್ಲ. ಆದರೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದರೆ, ಅವರ ಟ್ರ್ಯಾಪ್‍ನೊಳಗೆ ಸಿಕ್ಕಿಕೊಳ್ಳುವ ರೀತಿ ಅಲ್ಲ. ಬದಲಿಗೆ ಅವರ ವಿಕೃತಿ, ಯೋಜಿತ ಹುನ್ನಾರ ಮತ್ತು ಕೊಲೆಗಡುಕತನ ಬಯಲಾಗುವ ರೀತಿಯಲ್ಲಿ.

photo courtesy: Deccan Chronicle

ಗೌರಿ ಲಂಕೇಶರಿಗೆ ನೇರವಾಗಿ ಗುಂಡಿಕ್ಕಿದ ಪರಶುರಾಮ ವಾಘ್ಮೋರೆ ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ಕುಖ್ಯಾತಿ ಹೊಂದಿರುವವನು. ಅವನು ಮುತಾಲಿಕ್ ಸೇನೆಯ ಕಾರ್ಯಕರ್ತ. ಆದರೆ ಮುತಾಲಿಕ್ ಹೇಳಿದ್ದು, ಪಾಕಿಸ್ತಾನದ ಬಾವುಟ ಹಾರಿಸಿದ ಪ್ರಕರಣದಲ್ಲಿ ಸಿಲುಕಿಕೊಂಡವರು ಆರೆಸ್ಸೆಸ್ ಕಾರ್ಯಕರ್ತರು ಎಂದು. ಈಗ ಆ ವಿಚಾರವೇಕೆ ಜನರ ಕಾಮನ್‍ಸೆನ್ಸ್ ಭಾಗವಾಗಿಲ್ಲ? ಏಕೆ ಆರೆಸ್ಸೆಸ್ ಮತ್ತು ಮುತಾಲಿಕ್ ಸೇನೆ ಇಬ್ಬರೂ ಈ ವಿಚಾರದಲ್ಲಿ ಮೌನವಾಗಿದ್ದಾರೆ?

ಗೌರಿ ಲಂಕೇಶರ ಬಗ್ಗೆ ಅವರ ಕೊಲೆಗಡುಕನು ಭಾಗವಾಗಿರುವ ಸಂಘಟನೆಯ ಮುಖಂಡ ಮಾತಾಡುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ ಮತ್ತು ಆ ರೀತಿ ಮಾತಾಡುವಾಗ ಹಾಗೂ ಕೊಲೆಗೈಯ್ಯುವ ವ್ಯಕ್ತಿಗೆ ಅವರ ಮುಖಂಡನೇ ಡ್ರಗ್ಸ್ ಸರಬರಾಜು ಮಾಡಿದ್ದನ್ನು ಖಂಡಿಸುತ್ತೇವೆ ಎಂದು ಹೇಳಬೇಕು. ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ‘ಮಸೀದಿಗೆ ಹೋಗಿ ಹಂದಿ ಹಾಕಿ’ ಎಂದು ಮುತಾಲಿಕ್ ಹೇಳಿದ ಕೆಲವೇ ದಿನಗಳಲ್ಲಿ ಹಂದಿಯನ್ನು ಹಾಕಲಾಯಿತು ಮತ್ತು ಕೋಮುಗಲಭೆ ಉಂಟಾಯಿತು. ಬೇಕಾದರೆ ಆ ಕೇಸಿನ ಚಾರ್ಜ್‍ಶೀಟ್ ನೋಡಬಹುದು. ಪಾಕಿಸ್ತಾನದ ಧ್ವಜ ಅವರೇ ಹಾರಿಸಿ, ಮರುದಿನ ಅದರ ವಿರುದ್ಧ ಅವರೇ ಪ್ರತಿಭಟನೆ ಮಾಡುತ್ತಾರೆ. ತೀರಾ ಇತ್ತೀಚೆಗೆ ಮಂಡ್ಯದಲ್ಲಿ ದೇವಸ್ಥಾನದ ಮೂವರು ಅರ್ಚಕರ ಕೊಲೆಯಾಗುತ್ತದೆ; ತಕ್ಷಣವೇ ಈ ಮುತಾಲಿಕ್‍ಯಿಂದ ಅವರನ್ನು ಇಸ್ಲಾಮಿಕ್ ಜಿಹಾದಿಗಳು ಕೊಂದಿದ್ದಾರೆಂಬ ಹೇಳಿಕೆ ಹೊರಬರುತ್ತದೆ. ಮರುದಿನ ಮೂವರು ಮುಸ್ಲಿಮೇತರರು ಸಿಕ್ಕಿಬೀಳುತ್ತಾರೆ. ಇಸ್ಲಾಮಿಕ್ ಜಿಹಾದಿಗಳೇ ಮಾಡಿದ್ದಾರೆಂಬ ಮುತಾಲಿಕ್ ಹೇಳಿಕೆಯನ್ನು ಪ್ರಕಟಿಸಿದ ಮಾಧ್ಯಮಗಳು ಮತ್ತೆ ಆತನನ್ನು ಪ್ರಶ್ನೆ ಮಾಡುವುದಿಲ್ಲ. ಅಷ್ಟೇ ಅಲ್ಲದೇ ಇಂತಹುದೇ ತಲೆಕೆಟ್ಟ ಹೇಳಿಕೆಯನ್ನು ಆತ ಇನ್ನೊಮ್ಮೆ, ಮತ್ತೊಮ್ಮೆ ಹೇಳಿದರೆ ಅದನ್ನೂ ಪ್ರಕಟಿಸುತ್ತಾರೆ.

ಈ ವಿಚಾರಗಳ ಕುರಿತು ನಾವ್ಯಾವಾಗಾದರೂ ಕ್ಯಾಂಪೇನ್ ನಡೆಸಿದ್ದೇವೆಯೇ?

ಐಟಿ ಸೆಲ್ಲುಗಳು ಕೊಲೆಗಡುಕರ ಪರವಾಗಿ ಖುದ್ದಾಗಿ ಕ್ಯಾಂಪೇನ್ ನಡೆಸುವುದನ್ನು ನಾವು ಬಯಲುಗೊಳಿಸುವುದಲ್ಲದೇ, ಗೌರಿಯವರ ಕೊಲೆಯನ್ನು ಸಂಭ್ರಮಿಸಿದವನ ಟ್ವಿಟ್ಟರ್ ಫಾಲೋಯರ್ ಆಗಿ ಪ್ರಧಾನಿ ಮೋದಿಯಿರುವುದನ್ನು ಮತ್ತೆ ಮತ್ತೆ ನೆನಪಿಸಬೇಕು. ಇವೆಲ್ಲದರ ಜೊತೆಗೆ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳಬೇಕು. ಇಂತಹ ಹತ್ತಾರು ಸಂಗತಿಗಳನ್ನು ನಿರಂತರವಾಗಿ, ವ್ಯವಸ್ಥಿತವಾಗಿ ಸತ್ಯದ ಪರ, ಮಾನವೀಯತೆಯ ಪರ ತೆಗೆದುಕೊಳ್ಳದಿದ್ದರೆ, ಜೀವ ವಿರೋಧಿಗಳು ಮತ್ತು ಸುಳ್ಳಿನ ಪ್ರಚಾರಕರು ವಿಜೃಂಭಿಸುತ್ತಿರುತ್ತಾರೆ ಮತ್ತು ನಾವು ಅವರು ಮಾಡುವ ಕ್ಷುದ್ರ ಆರೋಪಗಳಿಗೆ ಉತ್ತರ ಕೊಡುವುದರಲ್ಲಿ ಕಳೆದುಹೋಗುತ್ತೇವೆ.

ಈ ವಿಚಾರದಲ್ಲಿ ಒಂದು ವಾಲಂಟಿಯರ್ ಗುಂಪನ್ನು ಗೌರಿ ಮೀಡಿಯಾ ಸಂಘಟಿಸುತ್ತಿದೆ. ಪ್ರತಿಯೊಬ್ಬರಿಗೂ ಅದರಲ್ಲಿ ಒಂದು ಪಾತ್ರವಿದ್ದೇ ಇರುತ್ತದೆ. ವಾಲಂಟಿಯರ್ ಮಾಡಬಯಸುವವರು ಸಂಪರ್ಕಿಸಬೇಕೆಂದು ಕೋರುತ್ತೇವೆ. ಇಂತಹ ದುಷ್ಟರ ಹುನ್ನಾರಗಳಿಗೆ ಇನ್ನು ಅವಕಾಶ ನೀಡಬಾರದು. ಸತ್ಯ ಮತ್ತು ಸುಳ್ಳಿನ ನಡುವಿನ ಸಂಗ್ರಾಮದಲ್ಲಿ ಸತ್ಯವು ಸೋಲುತ್ತಾ ಇರುವುದನ್ನು ನೋಡಿಕೊಂಡು ಕುಳಿತಿರಲಾಗದು.


ಇದನ್ನೂ ಓದಿ: ಸುಲಿಗೆ, ವಸೂಲಿ ದಂಧೆ ಆರೋಪ: ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕ್ರಿಮಿನಲ್ ದೂರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ದಾರಿ ತಪ್ಪಿಸುವ ಜಾಹೀರಾತು ಪ್ರಕರಣ; ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರಾಮ್‌ದೇವ್‌ಗೆ ಸುಪ್ರೀಂ ತಪರಾಕಿ

0
ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಯೋಗ ಗುರು ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ. ಆದರೆ, ಈಗ ಅವರನ್ನು...