ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್ ಅವರಿಗೆ ಮಂಗಳವಾರ (ಡಿಸೆಂಬರ್ 9) ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಸಂಕೀರ್ಣದೊಳಗೆ ಅಪರಿಚಿತ ವ್ಯಕ್ತಿಗಳು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಚಪ್ಪಲಿಯಿಂದ ಹೊಡೆಯಲು ಯತ್ನಿಸುವಾಗ ರಾಕೇಶ್ ಕಿಶೋರ್ ಕೈ ಅಡ್ಡ ಹಿಡಿದು ತಡೆದಿದ್ದು, ಚಪ್ಪಲಿ ಏಟು ಅವರ ಕೈಗೆ ಬಿದ್ದಿರುವುದನ್ನು ನೋಡಬಹುದು.
ಮಾಜಿ ಸಿಜೆಐ ಮೇಲಿನ ಹಲ್ಲೆ ಯತ್ನಕ್ಕೆ ಪ್ರತೀಕಾರವಾಗಿ ರಾಕೇಶ್ ಕಿಶೋರ್ ಮೇಲೆ ಹಲ್ಲೆ ನಡೆಸಲಾಗಿದೆಯೇ? ಎಂದು ಸ್ಪಷ್ಟವಾಗಿಲ್ಲ. ಮಾಧ್ಯಮ ವರದಿಗಳು ಅದೇ ಕಾರಣಕ್ಕೆ ಥಳಿಸಲು ಯತ್ನಿಸಿರಬಹುದು ಎಂದು ಅಭಿಪ್ರಾಯಪಟ್ಟಿವೆ.
“ಸುಮಾರು 35-40 ವರ್ಷ ವಯಸ್ಸಿನ ವಕೀಲರೊಬ್ಬರು ನಮ್ಮ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದರು. ನಂತರ ನಾವು ಸ್ಥಳದಿಂದ ಹೊರಟೆವು. ಮಾಜಿ ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ್ದಕ್ಕೆ ಹಲ್ಲೆ ಮಾಡುತ್ತಿರುವುದಾಗಿ ಅವರು ಹೇಳಿದರು. ನ್ಯಾಯಮೂರ್ತಿ ದಲಿತ ಎಂಬ ಕಾರಣಕ್ಕೆ ಶೂ ಎಸೆದಿದ್ದೀರಿ ಎಂದರು. ಆಗ ನಾವು ಕೂಡ ‘ಸನಾತನ’ ಘೋಷಣೆಗಳನ್ನು ಕೂಗಿದೆವು” ಎಂದು ರಾಕೇಶ್ ಕಿಶೋರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಹಲ್ಲೆಯಿಂದ ನಾನು ಗಾಯಗೊಂಡಿಲ್ಲ” ಎಂದಿರುವ ರಾಕೇಶ್ ಕಿಶೋರ್, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೀರಾ? ಎಂದು ಕೇಳಿದಾಗ “ಇದೆಲ್ಲಾ ಕುಟುಂಬದೊಳಗಿನ ವಿಷಯ” ಎಂಬುವುದಾಗಿ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
“ನಾವು ದೂರು ದಾಖಲಿಸಿಲ್ಲ, ವಕೀಲರ ವಿರುದ್ಧ ದೂರು ನೀಡುವುದರ ಪ್ರಯೋಜನ ಏನು? ಅವರೆಲ್ಲರೂ ನಮ್ಮ ಸ್ವಂತ ಸಹೋದರರು. ಇದು ಕುಟುಂಬದೊಳಗಿನ ಒಂದು ಸಣ್ಣ ವಿಷಯ” ಎಂದು ರಾಕೇಶ್ ಕಿಶೋರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
2025 ಅಕ್ಟೋಬರ್ 6ರಂದು ಮಾಜಿ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದರು. ಗವಾಯಿ ಅವರು ನ್ಯಾಯಮೂರ್ತಿ ಚಂದ್ರನ್ ಅವರೊಂದಿಗೆ ನ್ಯಾಯಪೀಠದಲ್ಲಿ ವಿಚಾರಣೆ ನಡೆಸುತ್ತಿದ್ದಾಗಲೇ ಈ ಘಟನೆ ನಡೆದಿತ್ತು. ಈ ವೇಳೆ 71 ವರ್ಷದ ರಾಕೇಶ್ ಕಿಶೋರ್ ಅವರನ್ನು ಸ್ವಲ್ಪ ಸಮಯದವರೆಗೆ ಬಂಧಿಸಲಾಗಿದ್ದರೂ, ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅವರಿಗೆ ಆರೋಪಗಳನ್ನು ಹೊರಿಸದಂತೆ ಸಿಜೆಐ ಸೂಚಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.


