ವೈಮಾನಿಕ ಪ್ರದರ್ಶನ ಪ್ರಯುಕ್ತ ಮಾಂಸ ಮಾರಾಟ ನಿಷೇಧ ಹೊರಡಿಸುವುದಕ್ಕೆ ಬೆಂಗಳೂರಿನ ಹೋಟೆಲ್ ಉದ್ಯಮದಿಂದ ವಿರೋಧ ವ್ಯಕ್ತವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲಹಂಕ ವಲಯದಿಂದ ಆದೇಶ ಹೊರಡಿಸಲಾಗಿದ್ದು, ವಾಯುಪಡೆ ನಿಲ್ದಾಣದ 13 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟದ ಮೇಲೆ 26 ದಿನಗಳ ನಿಷೇಧ ಹೇರಿದೆ. ಪ್ರತಿಷ್ಠಿತ ಏರೋ ಇಂಡಿಯಾ ಪ್ರದರ್ಶನಕ್ಕೂ ಮುನ್ನ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ.
ಯಲಹಂಕ ವಲಯದ ಜಂಟಿ ಆಯುಕ್ತರು ಜನವರಿ 17 ರಂದು ಸಾರ್ವಜನಿಕ ಸೂಚನೆಯ ಮೂಲಕ ಹೊರಡಿಸಿದ ಬಿಬಿಎಂಪಿಯ ನಿರ್ದೇಶನವು, ವಿಮಾನ ಹಾರಾಟ ಅಭ್ಯಾಸ ಅವಧಿಗಳು ಮತ್ತು ಫೆಬ್ರವರಿ 10 ರಿಂದ 14 ರವರೆಗೆ ನಿಗದಿಯಾಗಿದ್ದ ಮುಖ್ಯ ಕಾರ್ಯಕ್ರಮದ ಸಮಯದಲ್ಲಿ ಪಕ್ಷಿ ಡಿಕ್ಕಿ ಹೊಡೆಯುವುದನ್ನು ತಡೆಯುವ ಗುರಿಯನ್ನು ಹೊಂದಿದೆ. ಉಲ್ಲಂಘನೆಗಳಿಗೆ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ವಿಮಾನ ನಿಯಮಗಳು 1937 (ನಿಯಮ 91) ಎರಡರ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.
ಆದರೆ, ಬೆಂಗಳೂರು ಹೋಟೆಲ್‌ಗಳ ಸಂಘವು ಸುಮಾರು ಒಂದು ತಿಂಗಳ ಕಾಲ ವಿಧಿಸಿರುವ ನಿಷೇಧವನ್ನು ‘ಅವೈಜ್ಞಾನಿಕ’ ಎಂದು ಕರೆದಿದೆ. ಇದು ಸ್ಥಳೀಯ ವ್ಯವಹಾರಗಳ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು ಎಂದು ಹೇಳಿದೆ.
ಜನವರಿ 20ರಂದು ಈ ಬಗ್ಗೆ ಬಿಬಿಎಂಪಿಗೆ ಪತ್ರ ಬರೆದಿದ್ದು, ಮಾಂಸ ಮಾರಾಟ ನಿಷೇಧವು ಈ ಪ್ರದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ರೆಸ್ಟೋರೆಂಟ್‌ಗಳು, ಬಾರ್‌ಗಳು, ಪಬ್‌ಗಳು ಮತ್ತು ಐಷಾರಾಮಿ ಹೋಟೆಲ್‌ಗಳು ಸೇರಿದಂತೆ 5,000 ಕ್ಕೂ ಹೆಚ್ಚು ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಘವು ಒತ್ತಿ ಹೇಳಿದೆ.
ನಿಷೇಧದ ಹಿಂದಿನ ತರ್ಕವನ್ನು ಪ್ರಶ್ನಿಸುವ ಹಲವಾರು ಅಂಶಗಳನ್ನು ಸಂಘವು ಎತ್ತಿದೆ. ಹೋಟೆಲ್‌ಗಳು ಈಗಾಗಲೇ ಸರಿಯಾದ ದೈನಂದಿನ ಕಸ ವಿಲೇವಾರಿ ವ್ಯವಸ್ಥೆಯನ್ನು ಹೊಂದಿದ್ದು, ಪಕ್ಷಿಗಳನ್ನು ಆಕರ್ಷಿಸಬಹುದಾದ ಆಹಾರ ತ್ಯಾಜ್ಯ ಸಂಗ್ರಹವಾಗುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ ಎಂದು ಅವರು ವಾದಿಸುತ್ತಾರೆ. ಕಾರ್ಯಕ್ರಮದ ಸಮಯದಲ್ಲಿಯೇ ವಾಯುಪಡೆ ನಿಲ್ದಾಣದೊಳಗೆ ಮಾಂಸ ಭಕ್ಷ್ಯಗಳನ್ನು ಬಡಿಸುವ ನಿರೀಕ್ಷೆಯಿರುವ ವಿಪರ್ಯಾಸವನ್ನೂ ಅವರು ಗಮನಸೆಳೆದರು.
“ಈ ನಿರ್ಧಾರ ಅಪ್ರಾಯೋಗಿಕ ಮತ್ತು ಅನಗತ್ಯ. ಈ ಅವಧಿಯಲ್ಲಿ ಮದುವೆಗಳು, ಕಾರ್ಯಕ್ರಮಗಳು ಮತ್ತು ವ್ಯಾಪಾರ ಸಭೆಗಳನ್ನು ನಿಗದಿಪಡಿಸಲಾಗಿದೆ. ನಿಷೇಧವು ಆತಿಥ್ಯ ವಲಯಕ್ಕೆ ಗಮನಾರ್ಹ ನಷ್ಟವನ್ನುಂಟು ಮಾಡುತ್ತದೆ” ಎಂದು ಸಂಘವು ತಮ್ಮ ಪತ್ರದಲ್ಲಿ ತಿಳಿಸಿದೆ.
ಏರೋ ಇಂಡಿಯಾ ಪ್ರದರ್ಶನವು ವಾಯುಯಾನ ತಂತ್ರಜ್ಞಾನಗಳ ಜೊತೆಗೆ ಮಿಲಿಟರಿ ಮತ್ತು ನಾಗರಿಕ ವಿಮಾನಗಳನ್ನು ಪ್ರದರ್ಶಿಸಲು ಹೆಸರುವಾಸಿಯಾಗಿದೆ.
ಇದನ್ನೂ ಓದಿ; ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನ: 13 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸದ ಅಂಗಡಿಗಳ ನಿಷೇಧ; ಯಾಕೆ?


