ಕೊರೊನಾ ವೈರಸ್‌ನಿಂದ ತೀವ್ರ ಕೆಟ್ಟ ಹೊಡೆತ ಅನುಭವಿಸಿದ್ದ ಮುಂಬೈನಲ್ಲಿ ಸೋಮವಾರ ನಡೆಸಿದ 8,776 ಕೊರೊನಾ ವೈರಸ್ ಪರೀಕ್ಷೆಗಳ ಫಲಿತಾಂಶ ಹೊರಬಿದಿದ್ದು ಅದರಲ್ಲಿ ಸುಮಾರು 700 ಮಾದರಿಗಳು ಮಾತ್ರ ಪಾಸಿಟಿವ್ ಆಗಿದೆ. ಇದು ಕಳೆದ 100 ದಿನಗಳಲ್ಲಿ ಅತ್ಯಂತ ಕಡಿಮೆ ಪ್ರಕರಣ ದಾಖಲು ಮಾಡಿದ ದಿನವಾಗಿದೆ.
ದೇಶದ ಹಣಕಾಸು ರಾಜಧಾನಿಯಾದ ಮುಂಬೈ, ಭಾನುವಾರ ನಡೆಸಿದ ಪರೀಕ್ಷೆಗಳಿಂದ 1,033 ಕೊರೊನಾ ಪ್ರಕರಣಗಳನ್ನು ವರದಿ ಮಾಡಿತ್ತು. ಪ್ರಕರಣಗಳು ದ್ವಿಗುಣವಾಗಲು ಈಗ 68 ದಿನಗಳನ್ನು ತೆಗೆದುಕೊಳ್ಳುತ್ತಿದ್ದು, ಮುಂಬೈನ ಚೇತರಿಕೆ ಪ್ರಮಾಣವು ಶೇಕಡಾ 73 ರಷ್ಟಿದೆ. ಜುಲೈ 20 ರಿಂದ ಜುಲೈ 26 ರವರೆಗೆ ಮುಂಬೈನಲ್ಲಿನ ಕೊರೊನಾವೈರಸ್ ಪ್ರಕರಣಗಳ ಒಟ್ಟಾರೆ ಬೆಳವಣಿಗೆಯ ದರವು ಶೇಕಡಾ 1.03 ರಷ್ಟಿತ್ತು ಎನ್ನಲಾಗಿದೆ.
ಸೋಮವಾರ, ಇಡೀ ಮಹಾರಾಷ್ಟ್ರದಲ್ಲಿ 7,924 ಪ್ರಕರಣಗಳು ಮತ್ತು 227 ಸಾವುಗಳು ದಾಖಲಾಗಿವೆ. ಮುಂಬೈಯಲ್ಲಿ ಇದುವರೆಗೆ 6,132 ಸಾವುಗಳು ಸಂಭವಿಸಿವೆ.
“ಮುಂಬೈನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಪರೀಕ್ಷೆ ನಡೆಸಿ (8,776) ಕೇವಲ 700 ಪ್ರಕರಣಗಳು ದಾಖಲಾಗಿವೆ. ಇದರಿಂದ ವೈರಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಹಿಮ್ಮೆಟ್ಟಿಸಲು ಸಾಧ್ಯವಾಗಿದೆ. 3 ತಿಂಗಳ ನಂತರ ಒಂದು ದೊಡ್ಡ ಸಮಾಧಾನ ಸಿಕ್ಕಂತಾಗಿದೆ. ನಿಮ್ಮ ಮಾಸ್ಕ್ ಅನ್ನು ಮುಖದಿಂದ ಕೆಳಗೆ ಇಳಿಸಬೇಡಿ! ಸಂಖ್ಯೆಗಳನ್ನು ಮಾತ್ರ ಇಳಿಸಿ!” ಎಂದು ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಮುಂಬೈನಲ್ಲಿ ಒಟ್ಟು 1,10,182 ಪ್ರಕರಣಗಳಿದ್ದು, ಈ ಪೈಕಿ 21,812 ಪ್ರಕರಣಗಳು ಮಾತ್ರ ಸಕ್ರಿಯ ಪ್ರಕರಣಗಳಾಗಿವೆ. ನೆರೆಯ ಥಾಣೆಯಲ್ಲಿ 34,471 ಸಕ್ರಿಯ ಪ್ರಕರಣಗಳು ಮತ್ತು ಪುಣೆಯಲ್ಲಿ 48,672 ಸಕ್ರಿಯ ಪ್ರಕರಣಗಳಿವೆ.
ಆದಾಗ್ಯೂ, ಅಧಿಕಾರಿಗಳು ಎರಡನೇ ಅಲೆಗೆ ಹೆದರುತ್ತಿದ್ದಾರೆ. ಲಸಿಕೆ ಬರಲು ಇನ್ನೂ ಸ್ವಲ್ಪ ಸಮಯವಿದೆ ಎಂದು ಹೇಳುತ್ತಿರುವುದರಿಂದ ಬಹಳ ಎಚ್ಚರಿಕೆಯಿಂದಿದ್ದಾರೆ.
ಮುಂಬೈನಲ್ಲಿರುವ ಧಾರವಿ ಏಷ್ಯಾದ ಅತಿದೊಡ್ಡ ಸ್ಲಂ ಆಗಿದ್ದು ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಪ್ರದೇಶದಲ್ಲಿ ಈಗ 98 ಸಕ್ರಿಯ ಪ್ರಕರಣಗಳಿವೆ. ಸೋಮವಾರ ಕೇವಲ ಒಂಬತ್ತು ಹೊಸ ಪ್ರಕರಣಗಳು ವರದಿಯಾಗಿವೆ. ಧಾರವಿ ಯಲ್ಲಿ ಒಟ್ಟು 2,540 ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: ಉತ್ತರ ಪ್ರದೇಶದ ಕೊರೊನಾ ರೋಗಿಯ ವೀಡಿಯೋ: ಆತನ ಸಾವಿನ ನಂತರ ವೈರಲ್!


