ಮೂವತ್ತೊಂಬತ್ತು ವರ್ಷ ಹಳೆಯ ಅತ್ಯಾಚಾರ ಪ್ರಕರಣವೊಂದರಲ್ಲಿ ಅಪರಾಧಿ ವಿರುದ್ಧದ ಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಪ್ರಕರಣ ಇತ್ಯರ್ಥವಾಗಲು ಸುಧೀರ್ಘ ಕಾಯುವಿಕೆಗಾಗಿ ಮಹಿಳೆ ಮತ್ತು ಆಕೆಯ ಕುಟುಂಬದ ಬಗ್ಗೆ ಅನುಕಂಪ ವ್ಯಕ್ತಪಡಿಸಿದೆ.
“ಅಪ್ರಾಪ್ತ ವಯಸ್ಸಿನ ಯುವತಿ ಮತ್ತು ಆಕೆಯ ಕುಟುಂಬ ತಮ್ಮ ಜೀವನದಲ್ಲಿ ಭಯಾನಕ ಅಧ್ಯಾಯವನ್ನು ಕೊನೆಗೊಳಿಸಲು ನಾಲ್ಕು ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿ ಬಂದಿರುವುದು ತೀವ್ರ ಖೇದಕರ” ಎಂದಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, 2013ರ ಜುಲೈನಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ.
1986ರಲ್ಲಿ ಅಪ್ರಾಪ್ತ ವಯಸ್ಕಳಾಗಿದ್ದ ಮಹಿಳೆಯ ಮೇಲೆ 21 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ್ದ. 1987ರ ನವೆಂಬರ್‌ನಲ್ಲಿ ವಿಚಾರಣಾ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಆ ಬಳಿಕ ಹಲವು ನ್ಯಾಯಾಲಯಗಳನ್ನು ಸುತ್ತುಹೊಡೆದ ಪ್ರಕರಣ, ಅಂತಿಮವಾಗಿ ರಾಜಸ್ಥಾನ ಹೈಕೋರ್ಟ್ ತಲುಪಿದೆ. ಪ್ರಾಸಿಕ್ಯೂಷನ್ ಸಾಕ್ಷಿಗಳಿಂದ ಪ್ರಬಲ ಹೇಳಿಕೆಗಳು ಇಲ್ಲ ಎಂಬ ಕಾರಣ ನೀಡಿ ಹೈಕೋರ್ಟ್, ಆರೋಪಿಯನ್ನು ದೋಷಮುಕ್ತಗೊಳಿಸಿತ್ತು.
“ಬಾಲ ಸಾಕ್ಷಿ (ಸಂತ್ರಸ್ತೆ) ಆಕೆಯ ವಿರುದ್ಧ ಅಪರಾಧ ಎಸಗಿರುವ ಬಗ್ಗೆ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಘಟನೆ ಬಗ್ಗೆ ಕೇಳಿದಾಗ, ಸಂತ್ರಸ್ತೆ ಮೌನವಾಗಿದ್ದರು ಎಂದು ವಿಚಾರಣಾ ನ್ಯಾಯಾಧೀಶರು ದಾಖಲಿಸಿಕೊಂಡಿದ್ದರು. ಮತ್ತೆ ಕೇಳಿದಾಗ ಮೌನವಾಗಿ ಕಣ್ಣೀರು ಸುರಿಸಿದ್ದು ಬಿಟ್ಟರೆ ಮತ್ತೇನೂ ಹೇಳಿರಲಿಲ್ಲ” ಎಂದು ನ್ಯಾಯಾಲಯ ಹೇಳಿತ್ತು.
ಆದರೆ, ಇದನ್ನು ಆರೋಪಿಯ ಪರ ಅಂಶ ಎಂದು ಪರಿಗಣಿಸಲಾಗದು. ಬಾಲಕಿಯ ಮೌನದ ಹಿಂದೆ ಆಘಾತ ಕೆಲಸ ಮಾಡಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮಗುವಿನ ಮೌನವನ್ನು ವಯಸ್ಕ ಸಂತ್ರಸ್ತೆಯ ಮೌನದ ಜೊತೆ ತಾಳೆ ಮಾಡುವಂತಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಇದನ್ನು ಅಳೆಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೇಳಿದ್ದಾರೆ.
“ತನ್ನ ಮೇಲಾದ ದೌರ್ಜನ್ಯದಿಂದ ಚಿಕ್ಕ ವಯಸ್ಸಿನಲ್ಲಿಯೇ ಆಘಾತಕ್ಕೊಳಗಾದ ಮಗು, ಆರೋಪಿಯನ್ನು ಜೈಲಿಗೆ ಹಾಕಲು ಆಧಾರವಾಗಲು ಸಾಧ್ಯವಿಲ್ಲ. ಇಡೀ ಪ್ರಾಸಿಕ್ಯೂಷನ್‌ನ ಭಾರವನ್ನು ಆಕೆಯ ಎಳೆಯ ಹೆಗಲ ಮೇಲೆ ಹೇರುವುದು ಅನ್ಯಾಯ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಖಂಡನಾ ಹೇಳಿಕೆ ಇಲ್ಲದಿದ್ದರೂ, ವಿಶೇಷವಾಗಿ ವೈದ್ಯಕೀಯ ಮತ್ತು ಸಾಂದರ್ಭಿಕ ಪುರಾವೆಗಳು ಲಭ್ಯವಿದ್ದಾಗ, ಶಿಕ್ಷೆಯು ನಿಲ್ಲಲು ಸಾಧ್ಯವಿಲ್ಲ ಎಂಬ ಯಾವುದೇ ಕಠಿಣ ನಿಯಮವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಮೇಲಿನ ತನ್ನ ತೀರ್ಪುಗಳನ್ನು ಉಲ್ಲೇಖಿಸಿದ ಪೀಠ, ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುವ ಮತ್ತು ತಳ್ಳಿ ಹಾಕುವ ಮೊದಲು ಹೈಕೋರ್ಟ್ ಸಾಕ್ಷ್ಯಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದಿದೆ.
ಹೈಕೋರ್ಟ್ ಈ ವಿಷಯವನ್ನು ನಿಭಾಯಿಸಿದ ರೀತಿಗೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ತನ್ನ ತೀರ್ಪಿನಲ್ಲಿ ಸಂತ್ರಸ್ತೆಯ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಆರೋಪಿಯು ಈಗಾಗಲೇ ಶಿಕ್ಷೆ ಅನುಭವಿಸಿಲ್ಲದಿದ್ದರೆ, ವಿಚಾರಣಾ ನ್ಯಾಯಾಲಯವು ವಿಧಿಸಿರುವ ಶಿಕ್ಷೆಯನ್ನು ಅನುಭವಿಸಲು ನಾಲ್ಕು ವಾರಗಳಲ್ಲಿ ಶರಣಾಗುವಂತೆ ಆದೇಶಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.


