Homeಕರ್ನಾಟಕದಶಕಗಳ ನಂತರ ಮಾರ್ದನಿಸಿದ ದಲಿತರ ಸಾಂಸ್ಕೃತಿಕ ಪ್ರತಿರೋಧ

ದಶಕಗಳ ನಂತರ ಮಾರ್ದನಿಸಿದ ದಲಿತರ ಸಾಂಸ್ಕೃತಿಕ ಪ್ರತಿರೋಧ

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶದ ಸಂಪೂರ್ಣ ವರದಿ....

- Advertisement -
- Advertisement -

ದುರಿತ ಕಾಲದ ಭರವಸೆಯಾಗಿ, ದಲಿತರ ಮೇಲೆ ಹೆಚ್ಚಾಗುತ್ತಿರುವ ದಬ್ಬಾಳಿಕೆಗಳ ಈ ಕಾಲಘಟ್ಟದಲ್ಲಿ ಸಮಸಮಾಜದ ಕನಸು ಕಾಣುತ್ತಿರುವ ದಲಿತರು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.

ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನದೇ ಆದ ಮಹತ್ವವನ್ನು ಪಡೆದಿರುವ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಒಂದು ವೇದಿಕೆಗೆ ಬರುವ ಮೂಲಕ ಶಕ್ತಿ ಪ್ರದರ್ಶನ ಮಾಡಿದವು.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಆಯೋಜಿಸಿದ್ದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ, ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ’ವು ದಲಿತರಲ್ಲಿ ಹೊಸ ಭರವಸೆಗಳನ್ನು ಹುಟ್ಟಿಹಾಕಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನಲವತ್ತು ಸಾವಿರಕ್ಕೂ ಹೆಚ್ಚಿನ ದಲಿತರು ಬಿಜೆಪಿ ಸರ್ಕಾರದ ದಲಿತ ವಿರೋಧಿ ನೀತಿಗಳ ವಿರುದ್ಧ ರಣಕಹಳೆ ಮೊಳಗಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನ್ಯಾಷನಲ್ ಕಾಲೇಜು ಮೈದಾನದ ತುಂಬಿ ತುಳುಕುತ್ತಿತ್ತು. ದೂರದ ಜಿಲ್ಲೆಗಳಿಂದ ಸಾವಿರಾರು ಜನರು ವಾಹನಗಳನ್ನು ಮಾಡಿಕೊಂಡು ಬೆಂಗಳೂರಿಗೆ ಆಗಮಿಸಿದ್ದರು. ಮೈದಾನ, ಸುತ್ತಲಿನ ಕಾಂಪೌಂಡ್ ಅಷ್ಟೇ ಅಲ್ಲದೇ ರಸ್ತೆಯ ತುಂಬೆಲ್ಲ ಜನವೋ ಜನ. ಅಂಗಳದ ತುಂಬೆಲ್ಲಾ ಜೈಭೀಮ್‌ ಘೋಷಣೆ ಮಾರ್ದನಿಸಿತು. ದಶಕಗಳ ನಂತರ ದಲಿತ ಸಂಘಟನೆಗಳು ಒಂದು ವೇದಿಕೆಯಲ್ಲಿ ಗುರುತಿಸಿಕೊಂಡು ಒಗ್ಗಟ್ಟಿನ ಮಹತ್ವವನ್ನು ಸಾರಿದವು.

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮಗಳಾದ ರಮಾಬಾಯಿ ಅಂಬೇಡ್ಕರ್‌ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. “ಇಂದು ಅಂಬೇಡ್ಕರರ ಪರಿನಿಬ್ಬಾಣ ದಿನ. ಅಂಬೇಡ್ಕರರು ಹೇಳಿದಂತೆ ಸಂಘರ್ಷ ಮಾಡುವುದು ನಮ್ಮ ಹಕ್ಕಾಗಿದೆ. ಬಾಬಾ ಸಾಹೇಬರು ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದಾರೆ. ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಮಹಿಳೆಯರು ಶಿಕ್ಷಿತರಾದರೆ ಇಡೀ ಸಮಾಜ ಬೆಳೆಯುತ್ತದೆ. ನಾವು ಬಾಬಾ ಸಾಹೇಬರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಶಿಕ್ಷಿತರಾಗಿ ಮುಂದುವರಿಯುವುದೇ ಆಗಿದೆ” ಎಂದು ಎಚ್ಚರಿಸಿದರು.

ರಮಾಬಾಯಿ ಅಂಬೇಡ್ಕರ್‌

“ಬಾಬಾ ಸಾಹೇಬರು ಹೇಳಿದಂತೆ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆಯನ್ನು ಕಟ್ಟಿರಿ, ಹೋರಾಟವನ್ನು ಮಾಡಿರಿ. ದಲಿತ ವಿದ್ಯಾರ್ಥಿ ವೇತನ ಕಿತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಕಿತ್ತುಕೊಳ್ಳುತ್ತಿದ್ದಾರೆ. ಬಾಬಾ ಸಾಹೇಬರು ಹೇಳಿದಂತೆ ಹೋರಾಟವೇ ದಾರಿ” ಎಂದು ತಿಳಿಸಿದರು.

“ಸಂವಿಧಾನವನ್ನು ಇಂಚಿಂಚೆ ಕಸಿಯಲಾಗುಗತ್ತಿದೆ. ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ದಲಿತರು ಸೇರಿರುವುದು ನೋಡಿ ಸಂತೋಷವಾಯಿತು. ನಾವು ಸಂಘರ್ಷದ ಹಾದಿ ತುಳಿಯಬೇಕಿದೆ. ನನ್ನ ಪತಿ ಆನಂದ್ ತೇಲ್ತುಂಬ್ಡೆಯವರು ಜೈಲಿನಲ್ಲಿದ್ದಾಗ ನೀವೆಲ್ಲ ನಮ್ಮ ಜೊತೆಯಲ್ಲಿ ನಿಂತು ಹೋರಾಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು” ಎಂದರು.

ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ದಲಿತ ಚಳವಳಿ ನಮ್ಮ ಕಾಲಮಾನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದೆ. ನಾವು ಹೋರಾಟಗಳ ಮೂಲಕ ಕಟ್ಟಿಕೊಟ್ಟಂತಹ ವಿಚಾರಗಳು ಲಕ್ಷಾಂತರ ದಲಿತರ ಹೃದಯದಲ್ಲಿ ಸ್ವಾಭಿಮಾನಿದ ಕಿಚ್ಚು ಹತ್ತಿಸಿದೆ. ದಲಿತರೆಂದರೆ ಕೇವಲ ಅಸ್ಪೃಶ್ಯರಷ್ಟೇ ಅಲ್ಲ, ನಾಡಿನ ಎಲ್ಲ ನೊಂದ ಜನರೂ ದಲಿತರಾಗಿದ್ದಾರೆ. ದಸಂಸ ಎಲ್ಲ ನೊಂದವರ ಪರ ಹೋರಾಟ ಮಾಡಿದೆ. ದಲಿತ ಚಳವಳಿ ಆರಂಭವಾಗಿ ಐವತ್ತು ವರ್ಷಗಳಾಗಿವೆ. ದಲಿತರು ಕೂಗಿದ ಘೋಷಣೆಗಳು ಸರ್ಕಾರದ ಕಾರ್ಯಕ್ರಮಗಳಾಗಿವೆ. ಇವೆಲ್ಲವೂ ನಮ್ಮ ಹೆಮ್ಮೆ” ಎಂದು ಇತಿಹಾಸವನ್ನು ಮೆಲುಕು ಹಾಕಿದರು.

ಇಂದೂಧರ ಹೊನ್ನಾಪುರ

“ಹಂಚಿಕೊಂಡು ತಿಂದು ಬೆಳೆದ ದೇಶವಿದು. ಆದರೆ ದೇಶ ಯಾವ ಸ್ಥಿತಿಗೆ ಹೋಗಿದೆ ಎಂದು ನೋಡುತ್ತಿದ್ದೇವೆ. ನಮ್ಮ ಸಂಸ್ಕೃತಿ, ಆಹಾರ, ಉದ್ಯೋಗ, ಉಡುಗೆ ತೊಡುಗೆಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಸಂವಿಧಾನದ ಹೆಸರು ಹೇಳಿಕೊಂಡೇ ವಂಚನೆ ಮಾಡುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ನಿಲ್ಲಿಸುತ್ತಿದ್ದಾರೆ. ಆದರೆ ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ಅಂಕಿ- ಅಂಶಗಳನ್ನು ತಡೆಹಿಡಿದು ಬಡತನವೇ ಇಲ್ಲ ಎನ್ನುತ್ತಿದ್ದಾರೆ. ಬಾಬಾ ಸಾಹೇಬರು ಮನುಸ್ಮೃತಿ ಸುಟ್ಟು ಸಂವಿಧಾನವನ್ನು ರಚಿಸಿದರು. ಆದರೆ ಇಂದು ಸಂಘಪರಿವಾರ ಸಂವಿಧಾನ ಹೆಸರು ಹೇಳಿಕೊಂಡು ಮನುಸ್ಮೃತಿ, ಪಂಚಾಂಗಗಳನ್ನು ಜಾರಿಗೆ ತರುತ್ತಿದೆ. ರಾಮರಾಜ್ಯದ ಹೆಸರಲ್ಲಿ ಹಿಂಸೆ, ದೌರ್ಜನ್ಯ ಎಸಗುತ್ತಿದ್ದಾರೆ. ಪ್ರಶ್ನೆ ಕೇಳಿದರೆ ಜೈಲಿಗೆ ಹಾಕುತ್ತಾರೆ. ಆನಂದ್ ತೇಲ್ತುಂಬ್ಡೆಯವರನ್ನು ಎರಡು ವರ್ಷ ಕಾಲ ಜೈಲಿನಲ್ಲಿ ಇರಿಸಿದ್ದರು. ಆರ್‌ಎಸ್‌ಎಸ್‌, ಬಿಜೆಪಿಯವರು ನಿಜವಾದ ದೇಶದ್ರೋಹಿಗಳು” ಎಂದು ಆಕ್ರೋಶ ಹೊರಹಾಕಿದರು.

“ದಲಿತರು ಇವತ್ತು ಬೀದಿಳಿದಿದ್ದಾರೆ. ಸಂಘಟನೆಗಳು ಒಂದಾಗುವುದಕ್ಕೆ ಸರ್ಕಾರದ ನೀತಿಗಳೂ ಕಾರಣವಾಗಿವೆ. ಹತ್ತು ಸಂಘಟನೆಗಳ ನಾಯಕರು ಈಗ ಕೈಜೋಡಿಸಿದ್ದಾರೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟನೆಗಳು ಬಂದು ಸೇರಲಿವೆ. ಜಾತ್ಯತೀತ ಸಂಘಟನೆಗಳನ್ನೆಲ್ಲ ಒಳಗೊಳ್ಳುತ್ತೇವೆ. ಮನುವಾದಿಗಳ ಪರ ಹಾಗೂ ಸಂವಿಧಾನ ವಿರೋಧಿಗಳ ಜೊತೆ ನಿಂತವರನ್ನು ಹೊರಗಿಡುತ್ತೇವೆ. ನಾವೆಲ್ಲ ಒಂದಾಗದಿದ್ದರೆ ರೌವರವ ನರಕಕ್ಕೆ ಹೋಗುತ್ತೇವೆ” ಎಂದು ಎಚ್ಚರಿಸಿದರು.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಎನ್.ನಾಗಮೋಹನ ದಾಸ್ ಅವರು ಮಾತನಾಡಿ, “ಈ ಸಂದರ್ಭದಲ್ಲಿ ಅಂಬೇಡ್ಕರ್‌ರವರಿಗೆ ಸಲಾಮ್ ಹೊಡೆದರೆ ಸಾಕಾಗಲ್ಲ, ಅಂಬೇಡ್ಕರ್ ಬಗ್ಗೆ ಅಹಂ ಬೆಳೆಸಿಕೊಳ್ಳುವುದಲ್ಲ, ಅವರ ಬಗ್ಗೆ ಅರಿವು ಬೆಳೆಸಿಕೊಳ್ಳೋಣ. ಅಂದರೆ ಸಂವಿಧಾನದ ಅರಿವು” ಎಂದು ವಿಶ್ಲೇಷಿಸಿದರು.

ಜಸ್ಟೀಸ್‌ ಎನ್.ಎನ್.ನಾಗಮೋಹನ ದಾಸ್

“ಅಂಬೇಡ್ಕರ್ ಪರಿನಿಬ್ಬಾಣ ಹೊಂದಿದ ದಿನದಂದೇ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಸಂವಿಧಾನವನ್ನು ಅಂಬೇಡ್ಕರ್‌ರವರು ಬರೆದಿಲ್ಲ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತದೆ. ಈ ದೇಶವನ್ನು ಕಟ್ಟಿದ್ದು ನಮ್ಮ ಸಂವಿಧಾನ. ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ನಾವೆಲ್ಲ ಪಾಲ್ಗೊಳ್ಳುತ್ತಿರುವುದಕ್ಕೆ ಅಂಬೇಡ್ಕರ್‌ರವರು ಬರೆದ ಸಂವಿಧಾನ ಕಾರಣ” ಎಂದು ತಿಳಿಸಿದರು.

ಸಂವಿಧಾನ ಜಾರಿಯಾದ ಇಷ್ಟು ವರ್ಷಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದೇವೆ. ಹಾಗೆಯೇ ಸಾಕಷ್ಟು ಸವಾಲುಗಳೂ ಇವೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಸರ್ಕಾರವನ್ನು ಪ್ರಶ್ನೆ ಮಾಡಿದರೆ ಯುಎಪಿಎ ಹಾಕುತ್ತಿದ್ದಾರೆ. ಎನ್ಕೌಂಟರ್ ಮಾಡುತ್ತಿದ್ದಾರೆ. ಪಿಟಿಸಿಎಲ್ ಕಾಯ್ದೆ ಅಪ್ರಸ್ತುತ ಆಗುತ್ತಿದೆ. ಖಾಸಗೀಕರಣ ಹೆಚ್ಚಾಗುತ್ತಿದ್ದೆ. ಮೀಸಲಾತಿ ಹೆಚ್ಚಿಸುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಆದರೆ ಖಾಲಿ ಇರುವ ಹುದ್ದೆಗಳು ಭರ್ತಿಯಾಗಿಲ್ಲ. ಹೀಗಾದರೆ ಎಷ್ಟು ಮೀಸಲಾತಿ ಹೆಚ್ಚಿಸಿದರೂ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

“ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು. ಒಬ್ಬೊಬ್ಬರಾಗಿಯೇ ಮಾತನಾಡಿದರೆ ಸರ್ಕಾರಕ್ಕೆ ಕೇಳಿಸಲ್ಲ. ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಒಂದಾಗಬೇಕು. ಅಂಬೇಡ್ಕರ್ ದಾರಿಯೇ ನಮ್ಮ ತಾತ್ವಿಕ ನೆಲಗಟ್ಟಾಗಬೇಕು. ಸಂವಿಧಾನವನ್ನು ಉಳಿಸಿಕೊಳ್ಳಬೇಕು. ನಾವು ಗಳಿಸಿದ್ದನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕೋಮುವಾದ ರಾರಾಜಿಸಿದ್ದಲ್ಲಿ ನಾವು ಬಾಯಿಗೆ ಬೀಗ ಹಾಕಿಕೊಂಡು ಇರಬೇಕಾಗುತ್ತದೆ. ದೇವಾಲಯದ ಬಳಿ ಮುಸ್ಲಿಮರು ಮಾರಾಟ ಮಾಡುವಂತಿಲ್ಲ ಎಂದು ಇಂದು ಹೇಳುತ್ತಿದ್ದಾರೆ. ನಾಳೆ ದಲಿತರು ದೇವಾಲಯದ ಬಳಿ ತೆಂಗಿನಕಾಯಿ ಮಾರುವಂತಿಲ್ಲ, ಹೂ ಮಾರುವಂತಿಲ್ಲ ಎನ್ನುತ್ತಾರೆ, ಎಚ್ಚರವಿರಲಿ” ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಮರಿಸ್ವಾಮಿ ಅವರು ಮಾತನಾಡಿ, “ಯಾವುದೇ ದೇಶದ ಆಡಳಿತ ಎಷ್ಟೇ ಕ್ರೂರವಾಗಿದ್ದರೂ ನ್ಯಾಯ ಕೊಡುವ ನಾಟಕವನ್ನಾದರೂ ಸರ್ಕಾರಗಳು ಮಾಡುತ್ತವೆ. ಆದರೆ ನಮ್ಮ ದೇಶದಲ್ಲಿ ಅದು ನಡೆಯುತ್ತಿಲ್ಲ. ಮೋದಿ ಓಟಿನ ದಿನವೂ ರೋಡ್ ಶೋ ನಡೆಸಿದ್ದಾರೆ. ಕಾನೂನು ನಿಮಗೆ ಮಾತ್ರ, ನಮಗಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ಅನ್ಯಾಯದ ಮೂಲಕ ದೇಶವನ್ನು ನಡೆಸಬಹುದು ಎಂದು ತೀರ್ಮಾನಿಸಿದ್ದಾರೆ. ಈ ಜನ ಪೆದ್ದರು, ಏನೂ ಮಾಡಲ್ಲ ಎಂದು ಭಾವಿಸಿದ್ದಾರೆ” ಎಂದು ವಿಷಾದಿಸಿದರು.

ಎಸ್.ಮರಿಸ್ವಾಮಿ

ರೈತ ಸಂಘದ ನಾಯಕರಾದ ಬಡಗಪುರ ನಾಗೇಂದ್ರ ಮಾತನಾಡಿ, “ಸಂವಿಧಾನವನ್ನು ಪ್ರತಿ ಕ್ಷಣ ಪ್ರಭುತ್ವ ಕೊಲ್ಲುತ್ತಿದೆ. ಅಂಬೇಡ್ಕರ್ ಹೆಸರು ಹೇಳಿಕೊಂಡು ವಂಚನೆ ಮಾಡಲಾಗುತ್ತಿದೆ. ಈ ದೇಶವನ್ನು ಮಾರಾಟ ಮಾಡುತ್ತಿದ್ದಾರೆ. ಏಕ ಸಂಸ್ಕೃತಿಯನ್ನು ಏರಲು ಕುತಂತ್ರ ನಡೆಯುತ್ತಿದೆ. ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ಯುವಕರು ಒಟ್ಟಾಗಿ ಹೋರಾಡಿದರೆ ಮಾತ್ರ ಈ ದೇಶವನ್ನು ಉಳಿಸಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.

ಹಿರಿಯ ದಲಿತ ಹೋರಾಟಗಾರ ಎನ್.ಮುನಿಸ್ವಾಮಿ ಮಾತನಾಡಿ, “ಕರ್ನಾಟಕದಿಂದ ಮೂಲೆಮೂಲೆಯಿಂದ ಬಂದಿರುವ ನೀಲಿ ಸೈನ್ಯಕ್ಕೆ ಲಾಲ್ ಸಲಾಂ. ಅಂಬೇಡ್ಕರ್ ಹೇಳಿದ ಎರಡು ಪ್ರಧಾನ ಶತ್ರುಗಳನ್ನು ನೆನಪಿಡಬೇಕು. ಒಂದು ಮನುವಾದ, ಎರಡನೇಯದು ಬಂಡವಾಳವಾಳವಾದ. ಹದಿನೇಳು ವರ್ಷಗಳ ಕಾಲ ದಸಂಸ ಒಡೆದು ಹೋಯಿತು. ಈಗ ಒಂದಾಗುತ್ತಿದ್ದೇವೆ. ಉಳಿದ ಸಂಘಟನೆಗಳು ಮುಂದಿನ ದಿನಗಳಲ್ಲಿ ಬಂದು ಸೇರಿಕೊಳ್ಳಲಿವೆ” ಎಂದು ಸಂತಸ ವ್ಯಕ್ತಪಡಿಸಿದರು.

ಹಿರಿಯ ದಲಿತ ಹೋರಾಟಗಾರ ಮಾವಳ್ಳಿ ಶಂಕರ್‌ ಸಮಾವೇಶದಲ್ಲಿ ಮಿಂಚಿನ ಸಂಚಲನ ಉಂಟುಮಾಡಿದರು. “ಬಸವನಗುಡಿಗೆ ತಟ್ಟಿದ್ದ ಶಾಪ ನಿಮ್ಮ ಪಾದಗಳ ಸ್ಪರ್ಶದಿಂದ ಮುಕ್ತಿಯಾಗಿದೆ. ಈ ದೇಶವನ್ನು ನಾವು ಕಟ್ಟಿದ್ದೇವೆ. ಬಾಬಾ ಸಾಹೇಬರು ಭಾತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಸಂವಿಧಾನದ ಮೂಲಕ ಅವರು ಜೀವಂತವಾಗಿದ್ದಾರೆ. ಸಂವಿಧಾನವನ್ನು ರಕ್ಷಣೆ ಮಾಡಬೇಕಾಗಿದೆ” ಎಂದು ಹೇಳಿದರು.

ಮಾವಳ್ಳಿ ಶಂಕರ್‌

“ಬುದ್ಧನ ಕ್ರಾಂತಿಯನ್ನು ಪುಷ್ಯಶುಂಗನ ಕಾಲದಲ್ಲಿ ಕುಟಿಲ ಬುದ್ಧಿಯಿಂದ ತಡೆಯಲಾಯಿತು. ಬೌದ್ಧಧಮ್ಮವನ್ನು ದೇಶದಿಂದ ಹೊರಕ್ಕೆ ಹಾಕಲಾಯಿತು. ಆದರೆ ಅಂಬೇಡ್ಕರ್‌ರವರು ಬುದ್ಧನನ್ನು ವಾಪಸ್ ತಂದರು. ಈಗ ಮನುವಾದಿಗಳು ಭೂತಚೇಷ್ಟೇ ಆರಂಭಿಸಿದ್ದಾರೆ” ಎಂದು ಟೀಕಿಸಿದರು.

“ಕಾಶ್ಮೀರ್ ಫೈಲ್ಸ್ ಎನ್ನುತ್ತಾರೆ. ಇಲ್ಲಿ ದಲಿತ್ ಫೈಲ್ಸ್ ನೋಡಿ. ಬಿಲ್ಕಿಸ್ ಬಾನೋ ಫೈಲ್ಸ್ ಎಲ್ಲಿಗೆ ಹೋಯಿತಪ್ಪ? ಕಾಂಗನಾ ರಾಣವತ್‌ಗೆ ಜೆಡ್ ಪ್ಲಸ್ ಸೆಕ್ಯುರಿಟಿ ಕೊಡುತ್ತಾರೆ, ದಲಿತರಿಗೆ ಯಾವುದೇ ರಕ್ಷಣೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಹತ್ಯೆ ನಿಷೇಧ ಮಾಡುತ್ತೇವೆ ಎನ್ನುತ್ತಾರೆ. ಏನು ಮೋದಿ ಮನೆಯಲ್ಲಿ, ಬೊಮ್ಮಾಯಿ ಮನೆಯಲ್ಲಿ ಹಸು ಸಾಕಿಕೊಂಡಿದ್ದಾರಾ? ನೀರು ಮುಟ್ಟಿದ್ದಕ್ಕೆ ದಲಿತರನ್ನು ಕೊಂದಿರಿ? ನೀವು ಎಷ್ಟೇ ಕಟ್ಟಿ ನಿಲ್ಲಿಸಿದರೂ, ನಾವು ಎದ್ದು ಬರುತ್ತೇವೆ. ನಾನು ಬಾಬಾ ಸಾಹೇಬರ ಕುಡಿಗಳು ನಾವು ಎಂದು ಗರ್ಜಿಸಿದರು.

“ನಾನು ದೇಶದ್ರೋಹಿಗಳಾಗಿಲ್ಲ, ಬಂದೂಕು ಹಿಡಿದಿಲ್ಲ. ಈ ಆರ್‌ಎಸ್‌ಎಸ್‌ನವರು ಬಂದೂಕು ಹಿಡಿದಿದ್ದಾರೆ. ಈ ಶನಿಸಂತಾನವನ್ನು ಮುಗಿಸಬೇಕಾಗಿದೆ. ನಾವು ಏಕಲವ್ಯನ ವಂಶಸ್ಥರು, ನಮ್ಮ ಹೆಬ್ಬರಳನ್ನು ಕಿತ್ತುಕೊಂಡರೂ ಮತ್ತೆ ಮತ್ತೆ ಬಿಲ್ಲು ಹಿಡಿಯುತ್ತೇವೆ. ನಾವು ದೇಶವನ್ನು ಕಟ್ಟಿದವರು” ಎಂದು ತಿಳಿಸಿದರು.

“ಬಲಾಢ್ಯ ಜಾತಿಗಳಿಗೆ ಇಡಬ್ಲ್ಯೂಎಸ್ ಮೀಸಲಾತಿ ಕೊಟ್ಟಿದ್ದೀರಿ. ಮೀಸಲಾತಿ ನಿಮ್ಮ ಅಪ್ಪನದ್ದಾ? ಮೋದಿಯನ್ನು ಬೈಯೋದ್ದಲ್ಲ, ಬಿಜೆಪಿ ಸಂಘಪರಿವಾರದ ಗುಲಾಮಗಿರಿಯನ್ನು ಮಾಡುತ್ತಿರುವ ದಲಿತ ಎಂಪಿಗಳನ್ನು ಬೈಯ್ಯಬೇಕು” ಎಂದರು.

ದಲಿತ ಹೋರಾಟಗಾರ ಲಕ್ಷ್ಮೀನಾರಾಯಣ ನಾಗವಾರ ಮಾತನಾಡಿ, “ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡಬಾರದು. ನಿಮ್ಮ ಸುಳ್ಳಿನ ಕಂತೆ ನಮಗೆ ಬೇಕಾಗಿಲ್ಲ” ಎಂದು ಹೇಳಿದರು.

ದಲಿತ ಹೋರಾಟಗಾರ್ತಿ ಗಂಗಮ್ಮ ಮಾತನಾಡಿ, “ವೈಯಕ್ತಿಕ ಹಿಸಾಸಕ್ತಿಯನ್ನು ಬಿಟ್ಟು ಒಗ್ಗಟನ್ನು ಮೆರೆಯಬೇಕು. ಜಾತಿ ಪ್ರಜ್ಞೆ ಬಿಟ್ಟು ಒಟ್ಟಾಗಿ ಇರಬೇಕಾಗಿದೆ. ದಲಿತ ಯುವಕ, ಯುವತಿಯರು ಸ್ವಯಂ ಉದ್ಯೋಗಕ್ಕೂ ಗಮನ ಕೊಡಬೇಕು, ಸರ್ಕಾರಿ ಉದ್ಯೋಗಗಳಿಗೂ ಹೋರಾಡಬೇಕು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೋರಾಟದ ರಥವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ” ಎಂದು ಮನವಿ ಮಾಡಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಹೋರಾಟಗಾರರಾದ ಎನ್‌.ವೆಂಕಟೇಶ್, “ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಯಶಸ್ಸು ದೊರೆತಿದೆ. ಬಾಬಾ ಸಾಹೇಬರು ಹೇಳಿದಂತೆ ನಮ್ಮ ಶತಮಾನಗಳ ಚರಿತ್ರೆಯನ್ನು ಅಧ್ಯಯನ ಮಾಡಿ ಮುನ್ನುಗ್ಗಬೇಕು” ಎಂದು ಆಶಿಸಿದರು.

ಇದನ್ನೂ ಓದಿರಿ: ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ: ಚಿತ್ರಗಳಲ್ಲಿ ನೋಡಿರಿ

“ದಲಿತ ಸಂಘರ್ಷ ಸಮಿತಿಗೆ ತನ್ನದೇ ಆದ ಚರಿತ್ರೆ ಇದೆ. ಸಾಂಸ್ಕೃತಿಕ ಸಂಘಟನೆಯಾಗಿ, ರಾಜಕೀಯವಾಗಿ ದಸಂಸವನ್ನು ಮುನ್ನಡೆಸಿಕೊಂಡು ಬಂದಿದ್ದೇವೆ. ಬಿ.ಕೃಷ್ಣಪ್ಪ ಆದಿಯಾಗಿ ನಾಡಿನ ಹತ್ತಾರು ನಾಯಕರು ಸಂಘಟನೆಯನ್ನು ಕಟ್ಟಿ ಬೆಳೆಸಿದ್ದಾರೆ. ಹಲವು ಸವಾಲುಗಳ ನಡುವೆ, ಜೀವವನ್ನೇ ಮುಡಿಪಾಗಿಟ್ಟು ಹೋರಾಟ ರೂಪಿಸಿದ್ದಾರೆ” ಎಂದು ದಸಂಸದ ಇತಿಹಾಸವನ್ನು ಮೆಲುಕು ಹಾಕಿದರು.

“ಹೋರಾಟದ ಎಲ್ಲಾ ಮಜುಲುಗಳನ್ನು ನೀವು ತೆಗೆದುಕೊಳ್ಳಬೇಕಾಗಿದೆ. ಪ್ರಾಮಾಣಿಕತೆ, ನೈತಿಕತೆಯನ್ನು ಉಳಿಸಿಕೊಂಡು ಹೋರಾಟ ಮಾಡಬೇಕಾಗಿದೆ. ಪ್ರತಿ ಊರಿಗೂ, ತಾಲ್ಲೂಕಿಗೂ ನಾವು ಬರಲು ಸಿದ್ಧವಾಗಿದ್ದೇವೆ. ನಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಟ ಮುಂದುವರಿಸೋಣ. ಬ್ರಾಹ್ಮಣ್ಯವನ್ನು, ಬಂಡವಾಳಶಾಹಿ ವ್ಯವಸ್ಥೆಯನ್ನು ತೊಲಗಿಸೋಣ” ಎಂದು ಕರೆ ನೀಡಿದರು.

ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಂಗಕರ್ಮಿ ಸಿ.ಬಸವಲಿಂಗಯ್ಯ ಚಾಲನೆ ನೀಡಿದರು. ಗುರುಪ್ರಸಾದ್ ಕೆರೆಗೋಡು, ಡಾ.ಡಿ.ಜಿ.ಸಾಗರ್‌, ಇಂದಿರಾ ಕೃಷ್ಣಪ್ಪ, ಲಕ್ಷ್ಮಿಪತಿ ಕೋಲಾರ, ಮಂಗ್ಳೂರು ವಿಜಯ, ಹುಲ್ಕೆರೆ ಮಹಾದೇವ, ಬಾಬು ಬಂಡಾರಿಗಲ್‌, ಎಚ್.ಜನಾರ್ದನ್‌ (ಜನ್ನಿ), ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪ್ರಸಾದ್, ಕೆ.ದೊರೆರಾಜ್‌, ಸಿ.ಜಿ.ಶ್ರೀನಿವಾಸನ್, ಬಸವರಾಜ ನಾಯಕ, ಎಚ್.ಎನ್.ಅಣ್ಣಯ್ಯ ಸೇರಿದಂತೆ ನೂರಾರು ದಲಿತ ಹೋರಾಟಗಾರರು ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...