ಉತ್ತರ ಪ್ರದೇಶದ ಬರೇಲಿಯ ಹಿಂದೂ ಪ್ರಾಬಲ್ಯ ಪ್ರದೇಶದಲ್ಲಿ ಮುಸ್ಲಿಂ ಕುಟುಂಬವೊಂದು ಮನೆ ಖರೀದಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹಾಗಾಗಿ, ಖರೀದಿಸಿದ ಕೆಲವೇ ದಿನಗಳಲ್ಲಿ ಮುಸ್ಲಿಂ ಕುಟುಂಬ ಮನೆ ಮಾರಲು ನಿರ್ಧರಿಸಿದೆ ಎಂದು ದಿ ವೈರ್ ವರದಿ ಮಾಡಿದೆ.
ಮುಸ್ಲಿಂ ಕುಟುಂಬಕ್ಕೆ ಮನೆ ಮಾರಾಟ ಮಾಡಿರುವ ವಿಶಾಲ್ ಸಕ್ಸೇನಾ ಎಂಬವರು ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದು, “ಹಿಂದುತ್ವ ಸಂಘಟನೆಯೊಂದಿಗೆ ಸೇರಿಕೊಂಡು ಸ್ಥಳೀಯರು ಮನೆ ಮಾರಾಟದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕೋಮು ಸೌಹಾರ್ದತೆಯನ್ನು ಕೆಡಿಸುವ ಸಲುವಾಗಿ ಸಾಮೂಹಿಕ ವಲಸೆಯ ಬೆದರಿಕೆ ಹಾಕಿದ್ದಾರೆ” ಎಂದು ಹೇಳಿದ್ದಾರೆ.
ದಿ ವೈರ್ ಜೊತೆ ಮಾತನಾಡಿರುವ ಸಕ್ಸೇನಾ ಅವರು ” ಈ ಹಿಂದೆ 10-12 ಮಂದಿ ನನ್ನ ಮನೆ ಖರೀದಿಸಲು ಬಂದಿದ್ದರು. ಆದರೆ, ಮನೆ ಸೂಫಿ ಸಂತರ ದರ್ಗಾ ಮತ್ತು ಮುಸ್ಲಿಂ ಬಾಹುಳ್ಯದ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಅವರು ಮನೆ ಖರೀದಿಸಿಲ್ಲ” ಎಂದು ತಿಳಿಸಿದ್ದಾರೆ.
“ನನಗೆ ಮನೆ ವಾಪಸ್ ಬೇಡ, ಆದರೆ ಮುಸ್ಲಿಂ ಕುಟುಂಬಕ್ಕೆ ಮನೆ ಕೊಟ್ಟಿರುವುದನ್ನು ವಿರೋಧಿಸುವುದರ ಹಿಂದೆ ನಗರದ ಹೆಸರನ್ನು ಹಾಳು ಮಾಡುವ ಉದ್ದೇಶವಿದೆ” ಎಂದು ಸಕ್ಸೇನಾ ಆರೋಪಿಸಿದ್ದಾರೆ.
ಸಕ್ಸೇನಾ ಅವರು ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಅವರ ಮನೆ ಮಾರಾಟದ ಬಗೆಗಿನ ಸುಳ್ಳು ಆರೋಪಗಳನ್ನು ವಿವರಿಸಿಲ್ಲ. ಆದರೆ, ಖರೀದಿ ಒಪ್ಪಂದದಲ್ಲಿ ಸ್ಥಳೀಯ ಮಸೀದಿಯನ್ನು ಅಕ್ರಮ ಸ್ವಾಧೀನದಲ್ಲಿಟ್ಟುಕೊಂಡಿರುವ ಅಸ್ಸಾಮಿ ಮೌಲಾನಾ ಒಬ್ಬರು ಭಾಗಿಯಾಗಿದ್ದಾರೆ ಎಂದು ಕೆಲ ಸ್ಥಳೀಯ ನಿವಾಸಿಗಳು ಹೇಳಿರುವುದಾಗಿ ದಿ ವೈರ್ ತಿಳಿಸಿದೆ.
ಈ ಎಲ್ಲಾ ಗೊಂದಲಗಳ ನಡುವೆ ಸಕ್ಸೇನಾ ಅವರಿಂದ ಮನೆ ಖರೀದಿಸಿರುವ ಶಬ್ನಂ ಎಂಬ ಮುಸ್ಲಿಂ ಮಹಿಳೆಯ ಕುಟುಂಬ, ಸೂಕ್ತ ಬೆಲೆ ನೀಡಲು ಸಿದ್ದರಿರುವ ಯಾವುದೇ ಸನಾತನಿ ಹಿಂದೂಗಳಿಗೆ ಮನೆ ಮಾರಾಟ ಮಾಡಲು ಸಿದ್ದ ಎಂದಿದೆ. ಶಬ್ನಂ ಕುಟುಂಬ ಕೆಲ ದಿನಗಳ ಹಿಂದೆಯಷ್ಟೇ ಸಕ್ಸೇನಾ ಅವರಿಂದ ಮನೆ ಖರೀದಿಸಿತ್ತು. ಅದು ಬರೇಲಿಯಾ ಹಿಂದೂ ಪ್ರಾಬಲ್ಯ ಪ್ರದೇಶ ಪಂಜಾಬ್ ಪುರದಲ್ಲಿದೆ.
ಹಿಂದೂ ಪ್ರಾಬಲ್ಯ ಪ್ರದೇಶದಲ್ಲಿ ಮನೆ ಖರೀದಿಸುವಾಗ ಶಬ್ನಂ ಕುಟುಂಬ ತಲೆ ಮಾರುಗಳಿಂದ ಕಾಪಾಡಿಕೊಂಡು ಬಂದಿರುವ ನಗರದ ಕೋಮು ಸಾಮರಸ್ಯವನ್ನು ನಂಬಿತ್ತು. ಆದರೆ, ಅವರ ನಂಬಿಕೆ ಹುಸಿಯಾಗಿದೆ. ಮನೆ ಖರೀದಿಸಿದ ಬೆನ್ನಲ್ಲೇ ಪಂಜಾಬ್ ಪುರದ ಹಿಂದೂಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮನೆಯ ನೋಂದಣಿ ಮಾಡಬಾರದು ಎಂದಿದ್ದಾರೆ. ಮುಸ್ಲಿಂ ಕುಟುಂಬಕ್ಕೆ ಮನೆ ಕೊಟ್ಟರೆ ‘ಸಾಮೂಹಿಕ ವಲಸೆ’ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿ ವಿವರಿಸಿದೆ.
ಕೆಲ ಹಿಂದೂ ನಿವಾಸಿಗಳು ತಮ್ಮ ಮನೆಯ ಕಾಂಪೌಡ್ ಮೇಲೆ ‘ಸಾಮೂಹಿಕ್ ಪಲಾಯನ್’ (ಸಾಮೂಹಿಕ ಪಲಾಯನ) ಎಂಬ ಪೋಸ್ಟರ್ ಅಂಟಿಸಿ ಶಬ್ನಂ ಕುಟುಂಬಕ್ಕೆ ಮನೆ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರಿಗೆ ಮನೆ ಕೊಟ್ಟರೆ ಅದು ‘ಲವ್ ಜಿಹಾದ್’ಗೆ ಅವಕಾಶ ಕೊಟ್ಟಂತಾಗುತ್ತದೆ ಎಂದು ಕೆಲವರು ಹೇಳಿದ್ದಾರೆ, ಇನ್ನೂ ಕೆಲವರು ಮುಸ್ಲಿಮರ ಆಹಾರ ಪದ್ದತಿಗೆ ಆಕ್ಷೇಪ ಎತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಶಬ್ನಂ ಕುಟುಂಬಕ್ಕೆ ಮನೆ ಕೊಟ್ಟಿರುವುದನ್ನು ವಿರೋಧಿಸುತ್ತಿರುವ ಜನರನ್ನು ದಿ ವೈರ್ ಮಾತನಾಡಿಸಿದ್ದು,” ಒಬ್ಬ ವ್ಯಕ್ತಿ ಶಬ್ನಂ ಅವರ ಸಹೋದರ ನಸೀಮ್ 2010 ರ ಬರೇಲಿ ಗಲಭೆಯ ಮಾಸ್ಟರ್ ಮೈಂಡ್ ಎಂದು ಘೋಷಿಸುವ ಮಟ್ಟಕ್ಕೆ ಹೋಗಿದ್ದಾರೆ. ಇನ್ನೊಬ್ಬರು ಅಸ್ಸಾಮಿಗಳು ಮತ್ತು ಬಾಂಗ್ಲಾದೇಶಿಯರ ಬಗ್ಗೆ ಜಾಗರೂಕರಾಗಿರುವಂತೆ ಮುಖ್ಯಮಂತ್ರಿ ಮತ್ತು ಪ್ರಧಾನಿ ಹೇಳಿದ್ದಾರೆ ಎಂದಿದ್ದಾರೆ. ಆದರೆ, ಸಿಎಂ ಮತ್ತು ಪ್ರಧಾನಿ ಆ ರೀತಿ ಹೇಳಿರುವುದು ನಮಗೆ ಕಂಡು ಬಂದಿಲ್ಲ ಎಂದು ದಿ ವೈರ್ ವಿವರಿಸಿದೆ.
ಒಟ್ಟಿನಲ್ಲಿ ಹಿಂದೂ ಪ್ರಾಬಲ್ಯದ ಪ್ರದೇಶದಲ್ಲಿ ಹಿಂದೂ ವ್ಯಕ್ತಿಯೇ ಮುಸ್ಲಿಂ ಕುಟುಂಬಕ್ಕೆ ಮನೆ ಮಾರಾಟ ಮಾಡಿರುವುದಕ್ಕೆ ಸ್ಥಳೀಯ ಹಿಂದೂಗಳಿಂದ ವಿರೋಧ ವ್ಯಕ್ತವಾಗಿದೆ. ಇದರ ಹಿಂದೆ ಹಿಂದುತ್ವ ಸಂಘಟನೆಯ ಕುಮ್ಮಕ್ಕು ಇದೆ ಎಂದು ಮನೆ ಮಾರಿರುವ ಸಕ್ಸೇನಾ ಹೇಳಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನೆಲೆ, ನಗರದ ಸಾಮರಸ್ಯ ಕಾಪಾಡಲು ಮುಸ್ಲಿಂ ಕುಟುಂಬ ಮನೆ ಮಾರಾಟಕ್ಕೆ ಮುಂದಾಗಿದೆ ಎಂದು ದಿ ವೈರ್ ವಿವರಿಸಿದೆ.
ಇದನ್ನೂ ಓದಿ : ಅಸ್ಸಾಂ | ‘ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಡ್ಡಾಯ’ ಮಸೂದೆ ಅಂಗೀಕಾರ


