ಲಖನೌ: ಸಂಭಾಲ್ ಮಸೀದಿ ನಂತರ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮತ್ತೊಂದು ಮಸೀದಿಯು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಮೊಘಲ್ ದೊರೆಗಳು ಪುರಾತನ ಶಿವ ದೇವಾಲಯವನ್ನು ಕೆಡವಿ ಇಲ್ಲಿ ಜಾಮಾ ಮಸೀದಿ ನಿರ್ಮಿಸಿದ್ದಾರೆ ಎಂದು ಹಿಂದು ಬಲಪಂಥಿಯ ಗುಂಪೊಂದು ಇದರ ಮಾಲೀಕತ್ವಕ್ಕಾಗಿ ಜಿಲ್ಲಾ ನ್ಯಾಯಾಲಯದ ಬಾಗಿಲು ತಟ್ಟಿದೆ.
ಜಾಮಾ ಮಸೀದಿ ಇಂತೇಜಾಮಿಯಾ ಸಮಿತಿಯ ಪರ ವಕೀಲ ಅನ್ವರ್ ಆಲಂ ಮಸೀದಿಯ ಪರವಾಗಿ ವಾದ ಮಂಡಿಸಿದರು ಮತ್ತು ಶಿವ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದರು.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಡಿಸೆಂಬರ್ 10ಕ್ಕೆ ನಿಗದಿಪಡಿಸಿದೆ.
ನೀಲಕಂಠ ದೇವಾಲಯವನ್ನು ಕೆಡವಿ ಜಾಮಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಮುಖಂಡ ಮುಖೇಶ್ ಪಟೇಲ್ ಎರಡು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ರಾಜ್ಯ ಸರ್ಕಾರದ ಪರ ವಕೀಲರು ಈಗಾಗಲೇ ತಮ್ಮ ವಾದ ಮಂಡಿಸಿದ್ದಾರೆ.
ಮುಸ್ಲಿಂ ದೊರೆಗಳು ದೇವಾಲಯದ ಶಿವಲಿಂಗವನ್ನು ಹೊರಗೆ ದೂರ ಎಸೆದಿದ್ದರು. ಸಮೀಪದಲ್ಲಿರುವ ಇನ್ನೊಂದು ದೇವಸ್ಥಾನದಲ್ಲಿ ಈ ಶಿವಲಿಂಗವನ್ನು ಸ್ಥಾಪಿಸಲಾಯಿತು ಎಂದು ಪಟೇಲ್ ಅರ್ಜಿಯಲ್ಲಿ ಹೇಳಿದ್ದಾರೆ.
13 ನೇ ಶತಮಾನದಲ್ಲಿ ದೆಹಲಿಯಲ್ಲಿ ಕುತುಬ್ ಮಿನಾರ್‌ನ ಅಡಿಪಾಯವನ್ನು ಹಾಕಿದ ದೆಹಲಿ ಸುಲ್ತಾನರ ಮೊದಲ ರಾಜ ಕುತುಬ್-ಉದ್-ದಿನ್-ಐಬಕ್ ಅವಧಿಯಲ್ಲಿ ನೀಲಕಂಠ ದೇವಾಲಯವನ್ನು ಕೆಡವಲಾಯಿತು ಎಂದು ಹಿಂದೂ ಬಲಪಂಥೀಯ ಗುಂಪುಗಳು ಪ್ರತಿಪಾದಿಸುತ್ತಿವೆ.
ಈ ಜಾಮಾ ಮಸೀದಿಯು 850 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅಲ್ಲಿ ಯಾವುದೇ ದೇವಾಲಯ ಅಸ್ತಿತ್ವದಲ್ಲಿರಲಿಲ್ಲ ಎಂದು ಮಸೀದಿ ಸಮಿತಿಯ ಪರ ವಕೀಲರು ವಾದಿಸುತ್ತಾರೆ. 1223ರಲ್ಲಿ ಗುಲಾಮ್ ರಾಜವಂಶದ ಸುಲ್ತಾನ್ ಶಮ್ಸ್-ಉದ್-ದಿನ್-ಅಲ್ತಮಾಶ್ ಈ ಮಸೀದಿಯನ್ನು ನಿರ್ಮಿಸಿದ ಎಂದು ಮುಸ್ಲಿಮರು ಹೇಳುತ್ತಾರೆ.
ಇದನ್ನೂ ಓದಿ….ಒಳಮೀಸಲಾತಿ: 60 ದಿನದಲ್ಲಿ ವರದಿ ಸಲ್ಲಿಕೆಗೆ ಸಮಾಜ ಕಲ್ಯಾಣ ಇಲಾಖೆ ಆದೇಶ


