ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾದ ಕಾರಣ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಶ್ಚಿಮ ಬಂಗಾಳದಲ್ಲಿ ವಿಶೇಷ ಷರತ್ತುಗಳೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ಪುನರಾರಂಭಿಸಲು ಮುಂದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮೂರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಪುನರಾರಂಭಿಸುವಂತೆ ಅಲ್ಲಿನ ಆಡಳಿತರೂಢ ಟಿಎಂಸಿ ಒತ್ತಾಯಿಸುತ್ತಿತ್ತು.
ವಿಶೇಷ ಷರತ್ತುಗಳೊಂದಿಗೆ ಯೋಜನೆಯನ್ನು ಪುನರಾರಂಭಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ಕಳೆದ ವಾರ ಪ್ರಧಾನ ಮಂತ್ರಿ ಕಚೇರಿಗೆ ತಿಳಿಸಿದೆ ಎಂದು ಗೊತ್ತಾಗಿದೆ. ಈ ವಿಷಯದ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಸಚಿವಾಲಯದಿಂದ ವರದಿಯನ್ನು ಕೇಳಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಈ-ಮೇಲ್ ಮಾಡಿ ನಾವು ಈ ಬಗ್ಗೆ ಮಾಹಿತಿ ಕೇಳಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ಆಗಸ್ಟ್ 1, 2025ರಿಂದ ಪಶ್ಚಿಮ ಬಂಗಾಳದಲ್ಲಿ ನರೇಗಾ ಯೋಜನೆಯನ್ನು ಪುನರ್ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದ ಕಲ್ಕತ್ತಾ ಹೈಕೋರ್ಟ್ ಜೂನ್ 18, 2025ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಕ್ಟೋಬರ್ 27, 2025ರಂದು ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ರಾಜ್ಯದಲ್ಲಿ ಯೋಜನೆಯ ಅನುಷ್ಠಾನಕ್ಕೆ ‘ವಿಶೇಷ ಷರತ್ತುಗಳನ್ನು’ ವಿಧಿಸುವ ಅಧಿಕಾರವನ್ನು ಹೈಕೋರ್ಟ್ ಕೇಂದ್ರಕ್ಕೆ ಬಿಟ್ಟಿತ್ತು.
ಜೂನ್ 18ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜುಲೈ 31ರಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿಶೇಷ ರಜಾ ಅವಧಿಯ ಅರ್ಜಿ ಸಲ್ಲಿಸಿತ್ತು. ಆದರೆ, ಅದರ ಮರುದಿನ ಆಗಸ್ಟ್ 1ರಂದು ಯೋಜನೆ ಪುನರಾರಂಭಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಆಗಸ್ಟ್ 2025ರಿಂದ ಯೋಜನೆಯನ್ನು ಪುನರ್ ಅನುಷ್ಠಾನಗೊಳಿಸುವಾಗ, ಯಾವುದೇ ಅಕ್ರಮಗಳು ಸಂಭವಿಸದಂತೆ ನೋಡಿಕೊಳ್ಳಲು ದೇಶದ ಇತರ ರಾಜ್ಯಗಳಲ್ಲಿ ಇರುವಂತೆ ವಿಶೇಷ ಷರತ್ತುಗಳು, ನಿರ್ಬಂಧಗಳು ಮತ್ತು ನಿಯಮಗಳು ಇತ್ಯಾದಿಗಳನ್ನು ವಿಧಿಸಲು ಕೇಂದ್ರ ಸರ್ಕಾರ ಸಂಪೂರ್ಣ ಅಧಿಕಾರ ಹೊಂದಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸದ ಕಾರಣ 2005ರ ನರೇಗಾ ಕಾಯ್ದೆಯ ಸೆಕ್ಷನ್ 27 ಅನ್ನು ಅನ್ವಯಿಸಿ ಕೇಂದ್ರ ಸರ್ಕಾರ ಮಾರ್ಚ್ 9, 2022ರಿಂದ ಪಶ್ಚಿಮ ಬಂಗಾಳಕ್ಕೆ ಯೋಜನೆಯ ಹಣ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿತ್ತು. ಅಂದಿನಿಂದ, ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಯಾವುದೇ ಕೆಲಸ ನಡೆದಿಲ್ಲ. ಯೋಜನೆಯನ್ನು ಸ್ಥಗಿತಗೊಳಿಸುವ ಮೊದಲು, 2014-15 ಮತ್ತು 2021-22 ರ ನಡುವೆ ಪಶ್ಚಿಮ ಬಂಗಾಳದ 51 ಲಕ್ಷದಿಂದ 80 ಲಕ್ಷ ಕುಟುಂಬಗಳು ವಾರ್ಷಿಕವಾಗಿ ಅದರ ಲಾಭ ಪಡೆಯುತ್ತಿದ್ದವು.


