ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯ ವೇಳಾಪಟ್ಟಿಯನ್ನು ಕೇಂದ್ರ ಸರ್ಕಾರ ಬುಧವಾರ (ಜೂ.4) ಪ್ರಕಟಿಸಿದೆ. ದೇಶದಾದ್ಯಂತ ಮಾರ್ಚ್ 1, 2027 ರಿಂದ ಗಣತಿ ಪ್ರಾರಂಭವಾಗಲಿದೆಯಾದರೂ, ಲಡಾಖ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತ ಹಿಮ ಪ್ರದೇಶಗಳ ರಾಜ್ಯಗಳಲ್ಲಿ ಅಕ್ಟೋಬರ್ 1, 2026ರಂದು ಗಣತಿ ಪ್ರಾರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಏಳು ವರ್ಷಗಳ ವಿಳಂಬ
ದೇಶದಾದ್ಯಂತ ಕೊನೆಯ ಬಾರಿ ಜನಗಣತಿ 2011ರಲ್ಲಿ ನಡೆಸಲಾಗಿತ್ತು. ಹತ್ತು ವರ್ಷಗಳ ನಂತರ 2021ರಲ್ಲಿ ಗಣತಿ ಮಾಡಬೇಕಾಗಿತ್ತು. ಆದರೆ, ಕೊರೊನಾ ಕಾರಣ ನೀಡಿ ಸರ್ಕಾರ ಗಣತಿ ಮುಂದೂಡಿತ್ತು. ಕೊರೊನಾ ಬಳಿಕವೂ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಕಾರಣ ನೀಡಿ ಗಣತಿ ಮುಂದೂಡಲಾಗಿತ್ತು. ಆದ್ದರಿಂದ ಏಳು ವರ್ಷಗಳ ವಿಳಂಬದ ನಂತರ ಈಗ ಗಣತಿ ನಡೆಸಲು ಸರ್ಕಾರ ಮುಂದಾಗಿದೆ.
“ಜನಸಂಖ್ಯಾ ಗಣತಿ-2027 ಅನ್ನು ಜಾತಿ ಗಣತಿಯೊಂದಿಗೆ ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜನಸಂಖ್ಯಾ ಗಣತಿ-2027 ರ ಉಲ್ಲೇಖ ದಿನಾಂಕವು ಮಾರ್ಚ್, 2027ರ ಮೊದಲ ದಿನದ 00:00 ಗಂಟೆಗಳು ಆಗಿರುತ್ತದೆ” ಎಂದು ಕೇಂದ್ರ ಗೃಹ ಸಚಿವಾಲಯ (MHAS) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಲಡಾಖ್ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಉಲ್ಲೇಖ ದಿನಾಂಕವು ಅಕ್ಟೋಬರ್, 2026 ರ ಮೊದಲ ದಿನದ 00.00 ಗಂಟೆಗಳು” ಎಂದು ಗೃಹ ಸಚಿವಾಲಯ ಹೇಳಿದೆ.
“ಜನಸಂಖ್ಯಾ ಗಣತಿಯನ್ನು ನಡೆಸುವ ಉದ್ದೇಶಕ್ಕಾಗಿ ಅಧಿಸೂಚನೆಯನ್ನು ಮೇಲಿನ ಉಲ್ಲೇಖ ದಿನಾಂಕಗಳೊಂದಿಗೆ 1948 ರ ಜನಗಣತಿ ಕಾಯ್ದೆಯ ಸೆಕ್ಷನ್ 3 ರ ನಿಬಂಧನೆಗಳ ಪ್ರಕಾರ, ಜೂನ್ 16, 2025 ರಂದು ಅಧಿಕೃತ ಗೆಜೆಟ್‌ನಲ್ಲಿ ತಾತ್ಕಾಲಿಕವಾಗಿ ಪ್ರಕಟಿಸಲಾಗುವುದು” ಎಂದು ಗೃಹ ಸಚಿವಾಲಯ ತಿಳಿಸಿದೆ.
ಭಾರತದ ಜನಗಣತಿಯನ್ನು 1948 ರ ಜನಗಣತಿ ಕಾಯ್ದೆ ಮತ್ತು 1990 ರ ಜನಗಣತಿ ನಿಯಮಗಳ ಅಡಿಯಲ್ಲಿ ನಡೆಸಲಾಗುತ್ತದೆ.
ಭಾರತದ ಕೊನೆಯ ಜನಗಣತಿಯನ್ನು 2011ರಲ್ಲಿ ಎರಡು ಹಂತಗಳಲ್ಲಿ ನಡೆಸಲಾಗಿತ್ತು. ಮೊದಲನೆಯದು ಮನೆ ಪಟ್ಟಿ (HLO),ಇದನ್ನು 2010 ರ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರ ನಡುವೆ ನಡೆಸಲಾಗಿತ್ತು ಮತ್ತು ಎರಡನೆಯದು ಜನಸಂಖ್ಯಾ ಗಣತಿ (PE), ಇದನ್ನು 2011ರ ಫೆಬ್ರವರಿ 9 ರಿಂದ 28 ರ ನಡುವೆ ನಡೆಸಲಾಗಿತ್ತು.
2021ರ ಜನಗಣತಿಯನ್ನು ಎರಡು ಹಂತಗಳಲ್ಲಿ ಇದೇ ರೀತಿ ನಡೆಸಲು ಪ್ರಸ್ತಾಪಿಸಲಾಗಿತ್ತು. ಮೊದಲ ಹಂತ 2020ರ ಏಪ್ರಿಲ್ -ಸೆಪ್ಟೆಂಬರ್ ನಡುವೆ ಮತ್ತು ಎರಡನೇ ಹಂತ 2021ರ ಫೆಬ್ರವರಿಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು.
“2021ರಲ್ಲಿ ಜನಗಣತಿಯ ಮೊದಲ ಹಂತದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿತ್ತು. ಏಪ್ರಿಲ್ 1, 2020 ರಿಂದ ಕೆಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯವನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ಕಾರಣ ಜನಗಣತಿ ಕಾರ್ಯವನ್ನು ಮುಂದೂಡಲಾಯಿತು” ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯ ನಂತರ, ಜನಗಣತಿಯ ಜೊತೆಗೆ ಜಾತಿ ಆಧಾರಿತ ಗಣತಿ ನಡೆಸಲು ತೀರ್ಮಾನಿಸಿರುವುದಾಗಿ ಸರ್ಕಾರ ತಿಳಿಸಿತ್ತು. “ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಮೋದಿ ಸರ್ಕಾರ ಇಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ” ಎಂದು ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಅಂದು ಹೇಳಿದ್ದರು.
ಸ್ವಾತಂತ್ರ್ಯದ ನಂತರ, 1951ರಿಂದ ದೇಶದ ಜನಸಂಖ್ಯಾ ಗಣತಿಯನ್ನು ಪ್ರತಿ 10 ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಭಾರತದ ಜನಗಣತಿಯನ್ನು ಮೊದಲು 1872 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಜನಗಣತಿ ಸಮಯದಲ್ಲಿ ನಾಗರಿಕರಿಗೆ ಕೇಳಲು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ 31 ಪ್ರಶ್ನೆಗಳನ್ನು ಸಿದ್ಧಪಡಿಸಿತ್ತು.
2011 ರ ಮಾಹಿತಿಯ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆ 121 ಕೋಟಿ, ಲಿಂಗ ಅನುಪಾತವು 1,000 ಪುರುಷರಿಗೆ 940 ಮಹಿಳೆಯರು, ಸಾಕ್ಷರತಾ ಪ್ರಮಾಣವು 74.04 ಪ್ರತಿಶತ ಆಗಿತ್ತು. ಜೊತೆಗೆ 2001 ರಿಂದ 2011 ರವರೆಗೆ ಜನಸಂಖ್ಯಾ ಬೆಳವಣಿಗೆ 17.64 ಪ್ರತಿಶತದಷ್ಟಿತ್ತು. ಏಳು ವರ್ಷಗಳ ವಿಳಂಬ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜುಲೈ 21 ರಿಂದ ಆಗಸ್ಟ್ 12 ರವರೆಗೆ ಸಂಸತ್ತಿನ ಮಳೆಗಾಲದ ಅಧಿವೇಶನ

