ಭಾರತ ತಂಡವು ಪಾಕಿಸ್ತಾನ ಎದುರು ವಿಶ್ವಕಪ್ ಟಿಟ್ವೆಂಟಿ ಪಂದ್ಯ ಸೋತಿದ್ದಕ್ಕಾಗಿ ದುಷ್ಕರ್ಮಿಗಳಿಂದ ನಿಂದನೆಗೆ ಒಳಗಾಗಿದ್ದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಶಮಿ ಪರವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದನಿಯೆತ್ತಿದ್ದಾರೆ. “ಧರ್ಮದ ಆಧಾರದಲ್ಲಿ ಯಾರ ಮೇಲಾದರೂ ದಾಳಿ ಮಾಡಿದರೆ ಮನುಷ್ಯನಾಗಿ ಮಾಡಬಹುದಾದ ಅತ್ಯಂತ ಕರುಣಾಜನಕ ವಿಷಯ” ಎಂದು ಕೊಹ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಕೆಲವರ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಾನು ಎಂದಿಗೂ ಊಹಿಸಿರಲಿಲ್ಲ” ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಂದ್ಯ ಸೋತರೂ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಕೊಹ್ಲಿ, ಧೋನಿ!
ನಾವು ಒಳ್ಳೆಯ ಉದ್ದೇಶಕ್ಕಾಗಿ ಮೈದಾನದಲ್ಲಿ ಆಡುತ್ತಿದ್ದೇವೆಯೇ ಹೊರತು ಸಾಮಾಜಿಕ ಮಾಧ್ಯಮಗಳಲ್ಲಿನ ಬೆನ್ನುಮೂಳೆಯಿಲ್ಲದ ಜನರ ಗುಂಪಿನಂತಲ್ಲ. ಅವರಿಗೆ ಕೇವಲ ಒಬ್ಬ ವ್ಯಕ್ತಿಯನ್ನು ಸಹ ನೇರವಾಗಿ ಎದುರಿಸಲು ಸಾಧ್ಯವಿಲ್ಲ. ಅವರು ತಮ್ಮ ಗುರುತನ್ನು ಮರೆಮಾಚಿ ಸಾಮಾಜಿಕ ಮಾಧ್ಯಮಗಳಲ್ಲಿ ಗೇಲಿ ಮಾಡುತ್ತಾರೆ. ಇದು ಕೆಲವರಿಗೆ ಮನರಂಜನೆಯ ಮೂಲವಾಗಿರುವುದು ದುರದೃಷ್ಟಕರ ಮತ್ತು ದುಃಖದ ವಿಷಯವಾಗಿದೆ. ಇದು ಅಕ್ಷರಶಃ ಒಬ್ಬ ಮನುಷ್ಯ ಅತಿ ಕೆಳಮಟ್ಟದ ಕೃತ್ಯವಾಗಿದೆ ಎಂದು ಕೊಹ್ಲಿ ಕಿಡಿಕಾರಿದ್ದಾರೆ.
ಜನರು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ಏಕೆಂದರೆ ಮೊಹಮ್ಮದ್ ಶಮಿ ಭಾರತದ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂಬ ತಿಳುವಳಿಕೆ ಅವರಿಗಿಲ್ಲ. ಶಮಿಯವರ ಪ್ರಾಮಾಣಿಕತೆ, ದೇಶದ ಬಗೆಗಿನ ಬದ್ಧತೆಯನ್ನು ಅರ್ಥಮಾಡಿಕೊಳ್ಳದ ಜನರೊಂದಿಗೆ ಒಂದು ನಿಮಿಷವನ್ನು ಸಹ ವ್ಯರ್ಥಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಅವರ ಬೆಂಬಲಕ್ಕೆ 200 ಪರ್ಸೆಂಟ್ ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ; ವಿ ಲವ್ ಯೂ ಮೊಹಮ್ಮದ್ ಶಮಿ ಎಂದ ಭಾರತದ ಕ್ರಿಕೆಟಿಗರು: ಕಾರಣ?


