ಉತ್ತರ ಪ್ರದೇಶದ ಬಳಿಕ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಕೂಡ ಆಹಾರ ಮಳಿಗೆಗಳು ತಮ್ಮ ಮಾಲೀಕರು ಮತ್ತು ಸಿಬ್ಬಂದಿಯ ಹೆಸರು ಪ್ರದರ್ಶಿಸುವಂತೆ ಬುಧವಾರ ಆದೇಶಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಹಿಮಾಚಲದ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್ “ರಾಜ್ಯ ಸರ್ಕಾರ ‘ಗ್ರಾಹಕರ ಅನುಕೂಲಕ್ಕಾಗಿ’ ಈ ರೀತಿಯ ಆದೇಶ ಹೊರಡಿಸಿದೆ ಎಂದಿದ್ದಾರೆ.
“ನಾವು ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಗಳ ಸಭೆ ನಡೆಸಿದ್ದೇವೆ. ನೈರ್ಮಲ್ಯದ ಆಹಾರ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ… ವಿಶೇಷವಾಗಿ ಖಾದ್ಯ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಸರು ಪ್ರದರ್ಶಿಸಲು ನಿರ್ದೇಶಿಸಿದ್ದೇವೆ” ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.
“ಜನರು ಆಹಾರದ ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆ, ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಂಬಂಧಪಟ್ಟಂತೆ ನೀತಿ ರೂಪಿಸಲು ರಚಿಸಲಾದ ಏಳು ಸದಸ್ಯರ ಸಮಿತಿಯ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ನಾವು ಯಾವುದೇ ರಾಜ್ಯವನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರದ ಆದೇಶ ಎಲ್ಲಾ ಧರ್ಮೀಯರಿಗೂ ಅನ್ವಯಿಸಲಿದೆ. ಕೆಲ ದಿನಗಳಿಂದ ನಮ್ಮ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ” ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ. ಹೈಕೋರ್ಟ್ ಸೂಚನೆ ಮೇರೆಗೆ ಬೀದಿ ಬದಿ ವ್ಯಾಪಾರ ನೀತಿಯನ್ನು ರೂಪಿಸಲಾಗುತ್ತಿದೆ ಎಂದಿದ್ದಾರೆ.
ಉತ್ತರ ಪ್ರದೇಶ ಸರ್ಕಾರದಿಂದ ಆದೇಶ
ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಆಹಾರ ಮಳಿಗೆಗಳ ಮಾಲೀಕರು, ನಿರ್ವಾಹಕರು ತಮ್ಮ ಹೆಸರು ಪ್ರದರ್ಶಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ತಿನಿಸುಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಈ ವರ್ಷದ ಕನ್ವರ್ ಯಾತ್ರೆಯ ಸಂದರ್ಭ, ಯಾತ್ರೆ ಸಾಗುವ ಮಾರ್ಗದ ಎಲ್ಲಾ ಅಂಗಡಿ, ಹೋಟೆಲ್ ಮಾಲೀಕರು ತಮ್ಮ ಮತ್ತು ಸಿಬ್ಬಂದಿಯ ಹೆಸರು ಪ್ರದರ್ಶಿಸುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಇದು ಧರ್ಮದ ಆಧಾರದಲ್ಲಿ ಹೋಟೆಲ್‌ಗಳನ್ನು ಗುರುತಿಸಿ ಒಂದು ಸಮುದಾಯದ ವ್ಯಾಪಾರ ಬಹಿಷ್ಕರಿಸುವ ಹುನ್ನಾರ ಎಂದು ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು.
ಸರ್ಕಾರದ ಆದೇಶ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ಉಂಟು ಮಾಡುತ್ತದೆ ಎಂದು ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜುಲೈ 22 ರಂದು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿಜೆಪಿಯನ್ನು ಅನುಸರಿಸಿದ ಕಾಂಗ್ರೆಸ್ ಸರ್ಕಾರ
ಉತ್ತರ ಪ್ರದೇಶದ ಸರ್ಕಾರ ಈಗ ನೀಡಿರುವ ಮತ್ತು ಮಧ್ಯ ಪ್ರದೇಶ ಸರ್ಕಾರ ಈ ಹಿಂದೆ ನೀಡಿದ್ದ ಆದೇಶದ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಬಿಜೆಪಿಯನ್ನು ಅನುಸರಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
It is appalling that the Congress govt in Himachal chooses to follow in the steps of Adityanath in UP. Himachal: Congress minister says eateries must display owner’s ID https://t.co/WzFwyrEnlL via @IndianExpress
— Harsh Mander (@harsh_mander) September 26, 2024
ಇದನ್ನೂ ಓದಿ : ಹೋಟೆಲ್ ಮಾಲೀಕರು ಹೆಸರು ಪ್ರದರ್ಶಿಸಿ : ಮತ್ತೊಮ್ಮೆ ಆದೇಶಿಸಿದ ಯೋಗಿ ಸರ್ಕಾರ


