Homeಮುಖಪುಟಮತ್ತೆ ಮುನ್ನೆಲೆಗೆ ಬಂದ ಹಿಂದಿ ಹೇರಿಕೆ ಚರ್ಚೆ: ಕನಿಮೊಳಿ ಪರ ದನಿಯೆತ್ತಿದ ಎಚ್‌.ಡಿ ಕುಮಾರಸ್ವಾಮಿ, ಚಿದಂಬರಂ

ಮತ್ತೆ ಮುನ್ನೆಲೆಗೆ ಬಂದ ಹಿಂದಿ ಹೇರಿಕೆ ಚರ್ಚೆ: ಕನಿಮೊಳಿ ಪರ ದನಿಯೆತ್ತಿದ ಎಚ್‌.ಡಿ ಕುಮಾರಸ್ವಾಮಿ, ಚಿದಂಬರಂ

ಒಬ್ಬ ಸಂಸದೆಗೆ ಇಷ್ಟು ಸಮಸ್ಯೆಯಾದರೆ ಜನಸಾಮಾನ್ಯರು ದಿನನಿತ್ಯ ಎಷ್ಟು ಅವಮಾನ ಅನುಭವಿಸಬೇಕು ಯೋಚಿಸಿ, ಅದಕ್ಕಾಗಿಯೇ ಈ ಹಿಂದಿ ಹೇರಿಕೆ ಬೇಡ ಎಂದು ಹಲವಾರು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

- Advertisement -

ವಿಮಾನ ನಿಲ್ದಾಣದಲ್ಲಿನ ಅಧಿಕಾರಿಯೊಬ್ಬರು ನಾನು ಹಿಂದಿಯಲ್ಲಿ ಮಾತನಾಡದ ಕಾರಣಕ್ಕೆ ‘ನೀವು ಭಾರತೀಯರೆ’ ಎಂದು ಪ್ರಶ್ನಿಸಿದ್ದಾರೆ. ಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ? ಇದು ಯಾವಾಗಿನಿಂದ ಆಗಿದೆ ಎಂದು ತಮಿಳುನಾಡಿ ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನಿಸಿದ ಬೆನ್ನಲ್ಲೇ ಹಿಂದಿ ಹೇರಿಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಕುರಿತು ಕರ್ನಾಟಕದಲ್ಲಿಯೂ ಚರ್ಚೆಗಳು ಆರಂಭವಾಗಿದ್ದು, ಒಬ್ಬ ಸಂಸದೆಗೆ ಇಷ್ಟು ಸಮಸ್ಯೆಯಾದರೆ ಜನಸಾಮಾನ್ಯರು ದಿನನಿತ್ಯ ಎಷ್ಟು ಅವಮಾನ ಅನುಭವಿಸಬೇಕು ಯೋಚಿಸಿ, ಅದಕ್ಕಾಗಿಯೇ ಈ ಹಿಂದಿ ಹೇರಿಕೆ ಬೇಡ ಎಂದು ಹಲವಾರು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿ “ಭಾಷೆ ಕಾರಣಕ್ಕೆ ಡಿಎಂಕೆ ಸಂಸದೆ ಕನಿಮೊಳಿಯವರನ್ನು ‘ನೀವು ಭಾರತೀಯರೇ?’ ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೊಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ. ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ” ಎಂದಿದ್ದಾರೆ.

ಇಂಥದ್ದೇ ಅನುಭವ ನನಗೂ ಆಗಿವೆ. ನಾನೂ 2 ಬಾರಿ ಸಂಸದನಾಗಿದ್ದವನು. ಸಂಸತ್‌ನಲ್ಲಿ ಕನ್ನಡದಲ್ಲಿ ಮಾಡಲಾಗುವ ಭಾಷಣಗಳ ಬಗ್ಗೆ ಆಳುವ ವರ್ಗ ದಿವ್ಯ ನಿರ್ಲಕ್ಷ್ಯ ತೋರುತ್ತದೆ. ಅಲ್ಲದೆ, ಹಿಂದಿ ವ್ಯಾಮೋಹಿ ರಾಜಕಾರಣಿಗಳ ವರಸೆಗಳನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳೆಂದರೆ ಬಹುತೇಕರಿಗೆ ಅಲ್ಲಿ ಅಪತ್ಯವೇ ಸರಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಗ್ರಾಹಕ ಸೇವೆಯಲ್ಲಿ ಕನ್ನಡಕ್ಕಾಗಿ, ಸಮಾನ ಭಾಷಾ ನೀತಿಗಾಗಿ, ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಅರುಣ್ ಜಾವಗಲ್‌ರವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ಅವರು “ದೇಶದ ಪ್ರತಿಯೊಬ್ಬ ಪ್ರಜೆಯು ತನ್ನ ಭಾಷೆಯಲ್ಲಿ ಮಾಹಿತಿಯನ್ನು ಪಡೆಯುವುದು ಅವನ/ಳ ಮೂಲಭೂತ ಹಕ್ಕು. ಜನರ ಭಾಷೆಯಲ್ಲಿ ಮಾಹಿತಿ ಪಡೆಯುವುದಕ್ಕೆ ಕಾನೂನು ಬೇಕು, ಹೋರಾಟ ಬೇಕು ಎಂದರೆ ಅದು ಪ್ರಜಾಪ್ರಭುತ್ವ ದೇಶವೇ? ಹೈಕೋರ್ಟ್ ಮೂರು ಬಾರಿ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ನೀಡಿದೆ ಎಂದು ಆದೇಶ ನೀಡಿದರೂ ಕೇಂದ್ರ ಸರ್ಕಾರ ವಿಧಿ 343ರ ಅಡಿಯಲ್ಲಿ ನಾವು ಮಾಹಿತಿ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನದ ವಿಧಿ 343 ರಿಂದ 351 ರವರೆಗೆ ಹಿಂದಿ ಭಾಷೆಗೆ ಹೆಚ್ಚುಗಾರಿಕೆ ನೀಡಲಾಗಿದೆ. ಅಲ್ಲಿಂದಲೇ ಇತರ ಭಾಷೆಗಳ ಕಡೆಗಣಿಸುವಿಕೆ ಆರಂಭವಾಗಿದೆ. ಇದು ಹಿಂದಿಯೇತರರನ್ನು ತಮ್ಮ ಅಡಿಯಾಳನ್ನಾಗಿ ಮಾಡಿಕೊಳ್ಳುವ ಉತ್ತರ ಭಾರತ ರಾಜಕೀಯದ ಸ್ಪಷ್ಟ ಹುನ್ನಾರ. ಹಾಗಾಗಿ ಹಿಂದಿಯೇತರ ಸಂಸದರು ಈ ವಿಧಿಗಳ ತಿದ್ದುಪಡಿಗೆ ಹೋರಾಡುವುದೊಂದೆ ಶಾಶ್ವತ ಪರಿಹಾರ” ಎಂದಿದ್ದಾರೆ.

ಏಕತೆ ಎಂಬುದು ಭಾಷಾ ಸಮಾನತೆಯಲ್ಲಿದೆ. ಹಿಂದಿ ಹೇರಿಕೆಯಲ್ಲಿಲ್ಲ ಎಂಬ ಪೋಸ್ಟರ್

ಇನ್ನು ಈ ಕುರಿತು ಇಂದು ಬೆಳಿಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪಿ ಚಿದಂಬರಂ ಸರಣಿ ಟ್ವೀಟ್‌ಗಳನ್ನು ಮಾಡಿ ‘ಚನ್ನೈ ವಿಮಾನ ನಿಲ್ದಾಣದಲ್ಲಿ ಕನಿಮೊಳಿಯವರಿಗಾಗಿರುವ ಈ ಅಹಿತಕರ ಅನುಭವವು ಸಾಮಾನ್ಯವಾದುದ್ದಲ್ಲ’ ಎಂದಿದ್ದಾರೆ.

ಕೆಲವು ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ, ಕೆಲವು ಸಾಮಾನ್ಯ ಜನರೊಂದಿಗೆ ಫೋನಿನಲ್ಲಿ ಮಾತನಾಡುವಾಗ, ಕೆಲವೊಮ್ಮೆ ನೇರವಾಗಿಯೂ ಹಿಂದಿಯಲ್ಲಿಯೇ ಮಾತನಾಡುವಂತೆ ಒತ್ತಡ ಹಾಕುವ ಇದೇ ರೀತಿಯ ಹಲವು ಅಹಿತಕರ ಅನುಭವಗಳು ನನಗೂ ಆಗಿವೆ ಎಂದು ಚಿದಂಬರಂ ತಿಳಿಸಿದ್ದಾರೆ.

ಭಾನುವಾರ ಚನ್ನೈ ವಿಮಾನ ನಿಲ್ದಾಣದಲ್ಲಿ ತನಗೆ ಹಿಂದಿ ಬಾರದ ಕಾರಣ ಇಂಗ್ಲಿಷ್ ಇಲ್ಲವೇ ತಮಿಳಿನಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ನೀವು ಭಾರತೀಯರೆ ಎಂದು ಸಿಐಎಸ್ಎ‌ಫ್ ಭದ್ರತಾ ಅಧಿಕಾರಿ ಪ್ರಶ್ನಿಸಿದ್ದಾರೆ ಎಂದು ಡಿಎಂಕೆ ಸಂಸದೆ ಕನಿಮೊಳಿ ಆರೋಪಿಸಿದ್ದರು. ಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ ಎಂದು ಅವರು ಕಿಡಿಕಾರಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಿ.ಚಿದಂಬರಂ ಸರ್ಕಾರವು ತನ್ನ ಅಧಿಕಾರಿಗಳಿಗೆ, ಉದ್ಯೋಗಿಗಳಿಗೆ ಹಿಂದಿ ಮತ್ತು ಇಂಗ್ಲಿಷ್‌ ಎರಡು ಭಾಷೆಯಲ್ಲಿಯೂ ವ್ಯವಹರಿಸುವಂತೆ ಆದೇಶಿಸಬೇಕು ಎಂದು ಸಲಹೆ ನೀಡಿದ್ದಾರೆ.

ಉತ್ತರ ಭಾರತದಲ್ಲಿ ಹಿಂದಿ ಹೇರಿಕೆಯ ವಿರುದ್ಧ ದನಿ.

ಕೇಂದ್ರ ಸರ್ಕಾರಕ್ಕೆ ಹಿಂದಿ ಮತ್ತು ಇಂಗ್ಲಿಷ್ ಎರಡೂ ಅಧಿಕೃತ ಭಾಷೆಗಳೆಂಬ ನಿಜವಾದ ಕಾಳಜಿಯಿದ್ದರೆ ಅದು ಕೇಂದ್ರದ ಅಡಿಯಲ್ಲಿ ಬರುವ ಎಲ್ಲಾ ಉದ್ಯೋಗಿಗಳಿಗೂ ಹಿಂದಿ ಮತ್ತು ಇಂಗ್ಲಿಷ್‌ ಎರಡು ಭಾಷೆಯಲ್ಲಿಯೂ ವ್ಯವಹರಿಸುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

“ಹಿಂದಿಯೇತರರು ಕೇಂದ್ರೀಯ ಹುದ್ದೆಗಳಿಗೆ ಆಯ್ಕೆಯಾದಾಗ ವ್ಯವಹರಿಸಲು ಸಾಧ್ಯವಾಗುವ ಸ್ಪೋಕನ್ ಹಿಂದಿಯನ್ನು ಕೂಡಲೇ ಕಲಿತುಕೊಳ್ಳುತ್ತಾರೆ. ಆದರೆ ಹಿಂದಿ ಭಾಷಿಕರು ಆಯ್ಕೆಯಾದಾಗ ವ್ಯವಹರಿಸಲು ಸಾಧ್ಯವಾಗುವ ಇತರ ಭಾಷೆಗಳನ್ನು, ಸ್ಪೋಕನ್ ಇಂಗ್ಲಿಷ್‌ ಅನ್ನು ಕಲಿಯಬಾರದೇಕೆ?” ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿಯೂ ಈ ಸಮಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದನಿಯೆದ್ದಿದೆ. “ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ, ಬಂಗಾಳಿ ಭಾಷೆಯನ್ನು ಗೌರವಿಸಿ ಇಲ್ಲದಿದ್ದರೆ ಜಾಗ ಖಾಲಿ ಮಾಡಿ” ಎನ್ನುವ ಪೋಸ್ಟರ್‌ ಇರುವ ಫೋಟೊವೊಂದು ವೈರಲ್ ಆಗಿದೆ. ಕರ್ನಾಟಕದಲ್ಲಿಯೂ ಇದೇ ರೀತಿಯ ಪೋಸ್ಟರ್‌ಗಳನ್ನು ಅಂಟಿಸಬೇಕು, ಕನ್ನಡವನ್ನು ಗೌರವಿಸಿ, ಇಲ್ಲ ಜಾಗ ಖಾಲಿ ಮಾಡಿ ಎಂದು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೊಷ್ ಹಿಂದಿ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಕನಿಮೊಳಿಯವರಿಗೆ ತೀಕ್ಷ್ಣ ಪ್ರತಿಕ್ರಿಯೆ ಮೂಲಕ ತಮಿಳುನಾಡು ರಾಜಕೀಯಕ್ಕೆ ಸಮೀಕರಿಸಿರುವ ಅವರು, ಇನ್ನು 8 ತಿಂಗಳಿನಲ್ಲಿ ರಾಜ್ಯ ಚುನಾವಣೆಯಿದೆ… ಆಗಲೇ ಪ್ರಚಾರ ಆರಂಭವಾಗಿದೆ.. ಎಂದು ಟೀಕಿಸಿದ್ದಾರೆ.

ಕಳೆದ ವರ್ಷ ಕರ್ನಾಟಕದಲ್ಲಿ ಸೆಪ್ಟಂಬರ್ 14 ರಂದು ಹಿಂದಿ ದಿವಸ್ ವಿರೋದಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿರುವುದು.

ಒಟ್ಟಿನಲ್ಲಿ ಹಿಂದಿ ಹೇರಿಕೆ ಸರಿಯೇ ತಪ್ಪೇ ಎಂಬುದರ ಕುರಿತು ಚರ್ಚೆಗಳು ದೊಡ್ಡ ಮಟ್ಟದಲ್ಲಿ ಆರಂಭವಾಗಿವೆ. ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿಯ ಮೂಲಕ ತ್ರಿಭಾಷಾ ಸೂತ್ರ ಜಾರಿಗೊಳಿಸಲು ಮುಂದಾದಾಗ ಬಿಜೆಪಿ ಮಿತ್ರಪಕ್ಷ ಎಐಡಿಎಂಕೆ ಅದನ್ನು ತೀವ್ರವಾಗಿ ವಿರೋಧಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅದನ್ನು ನೋವಿನ ಮತ್ತು ದುಃಖಕರ ಸಂಗತಿ ಎಂದು ಕರೆದಿದ್ದು, ತಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಸಾರಿದ್ದಾರೆ.


ಇದನ್ನೂ ಓದಿ: ಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ?: ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial