ಬಿಜೆಪಿ ನಾಯಕ ರಮೇಶ್ ಬಿಧುರಿ ಅವರು ತಮ್ಮ ತಂದೆಯ ಬಗ್ಗೆ ಹೇಳಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದೆಹಲಿ ಮುಖ್ಯಮಂತ್ರಿ ಅತಿಶಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿದ್ದಾರೆ. ಕ್ಯಾಮೆರಾ ಮುಂದೆಯೆ ಕಣ್ಣೀರು ಹಾಕಿದ ಅವರು, ಸಂಕಟದಿಂದ ಮಾತನಾಡಿದರು. ಬಿಧುರಿ ತಮ್ಮ ವಯಸ್ಸಾದ ತಂದೆಯನ್ನು ಮತ ಗಳಿಸಲು ಬಳಸಿಕೊಂಡು ಅಧೋಗತಿಗೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ತಂದೆ ವಿರುದ್ಧ ಬಿಜೆಪಿ
”ವಯಸ್ಸಾದ, ನಡೆಯಲು ಸಹ ಆಸರೆ ಬೇಕಿರುವ ನನ್ನ ತಂದೆಯನ್ನು ರಾಜಕೀಯ ಲಾಭಕ್ಕಾಗಿ ಅವರು ಬಳಸಿಕೊಳ್ಳುತ್ತಿದ್ದಾರೆ” ಎಂದು ಅತಿಶಿ ಕಣ್ಣೀರಿಟ್ಟಿದ್ದಾರೆ. ಬಿಜೆಪಿ ನಾಯಕ ಬಿಧುರಿಯ ಟೀಕೆಗಳ ಬಗ್ಗೆ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿ, ಇಂತಹ ತಂತ್ರಗಳು ತೀವ್ರ ನೋವುಂಟುಮಾಡುತ್ತವೆ ಮತ್ತು ಇದು ಅನುಚಿತವಾಗಿವೆ ಎಂದು ಒತ್ತಿ ಹೇಳಿದ್ದಾರೆ. ತಂದೆ ವಿರುದ್ಧ ಬಿಜೆಪಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಕ್ಷದ ಕೆಲಸ ಮತ್ತು ಜನಸೇವೆಯ ಮೂಲಕ ಮತಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು ಎಂದು ಹೇಳಿದ ಸಿಎಂ ಅತಿಶಿ, ರಾಜಕೀಯ ಪ್ರಚಾರದಲ್ಲಿ ವೈಯಕ್ತಿಕ ದಾಳಿ ಅಥವಾ ಕುಟುಂಬ ಸದಸ್ಯರನ್ನು ಬಳಸಿ ಶೋಷಣೆ ಮಾಡುವುದು ಸರಿಯಲ್ಲ, “ನೀವು ನಿಮ್ಮ ಕೆಲಸದ ವಿಚಾರದಲ್ಲಿ ಮತಗಳನ್ನು ಕೇಳಿ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
#WATCH | Delhi CM Atishi breaks down while speaking about BJP leader Ramesh Bidhuri's reported objectionable statement regarding her. pic.twitter.com/CkKRbGMyaL
— ANI (@ANI) January 6, 2025
ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ರಮೇಶ್ ಬಿಧುರಿ, ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ವಿರುದ್ಧ ವಾಗ್ದಾಳಿ ನಡೆಸುತ್ತಾ, “ಭ್ರಷ್ಟ ಕಾಂಗ್ರೆಸ್ ಜೊತೆ ಹೋಗುವುದಿಲ್ಲ ಎಂದು ಕೇಜ್ರಿವಾಲ್ ತಮ್ಮ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡಿದರು; ಮರ್ಲೆನಾ ತನ್ನ ತಂದೆಯನ್ನೆ ಬದಲಾಯಿಸಿದರು. ಮೊದಲು ಅವಳು ಮರ್ಲೆನಾ ಆಗಿದ್ದರು, ಈಗ ಅವಳು ಸಿಂಗ್ ಆಗಿದ್ದಾರೆ. ಇದು ಅವರ ಚಾರಿತ್ರ್ಯ” ಎಂದು ಹೇಳಿದ್ದಾರೆ
“ಅವರು ನಾಚಿಕೆಯ ಎಲ್ಲ ಮಿತಿಗಳನ್ನು ದಾಟಿದ್ದು, ಮಹಿಳಾ ಮುಖ್ಯಮಂತ್ರಿಯನ್ನು ಅವಮಾನ ಮಾಡಿರುವುದನ್ನು ದೆಹಲಿಯ ಜನರು ಸಹಿಸುವುದಿಲ್ಲ. ಇದರ ವಿರುದ್ಧ ದೆಹಲಿಯ ಎಲ್ಲಾ ಮಹಿಳೆಯರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ” ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎಕ್ಸ್‌ನಲ್ಲಿ ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಬಿಧುರಿ ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಕೂಡಾ ಅಶ್ಲೀಲ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳು ಬಿಜೆಪಿಯ “ಮಹಿಳಾ ವಿರೋಧಿ” ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಮತ್ತು ಎಎಪಿ ಆರೋಪಿಸಿದೆ.
“ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಯಂತೆ ಮಾಡುವುದಾಗಿ ಹೇಳಿದ್ದರು. ಆದರೆ ಅವರು ಸುಳ್ಳು ಹೇಳಿದ್ದು, ಅವರಿಗೆ ಅದನ್ನು ಮಾಡಲು ಸಾಧ್ಯವಾಗಿಲ್ಲ. ಆದರೆ ಓಖ್ಲಾ ಮತ್ತು ಸಂಗಮ್ ವಿಹಾರ್‌ನಲ್ಲಿ ನಾವು ನಿರ್ಮಿಸಿದ ರಸ್ತೆಗಳಂತೆ, ಕಲ್ಕಾಜಿಯ ಎಲ್ಲಾ ರಸ್ತೆಗಳನ್ನು ಪ್ರಿಯಾಂಕ ಗಾಂಧಿ ಅವರ ಕೆನ್ನೆಗಳಂತೆ ಮಾಡುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇನೆ” ಎಂದು ಬಿಧುರಿ ಹೇಳಿರುವ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು, “ಪ್ರಿಯಾಂಕಾ ಗಾಂಧಿ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಅಷ್ಟೆ ಅಲ್ಲದೆ, ಅವರ ಹೇಳಿಕೆ ಅವರ ಕೊಳಕು ಮಹಿಳಾ ವಿರೋಧಿ ಚಿಂತನೆಯನ್ನು ಬಿಂಬಿಸುತ್ತದೆ. ಅದಾಗ್ಯೂ, ಸದನದಲ್ಲಿ ತನ್ನ ಸಹ ಸಂಸದರ ವಿರುದ್ಧ ಅಸಭ್ಯ ಭಾಷೆ ಬಳಸಿ ಯಾವುದೇ ಶಿಕ್ಷೆಗೆ ಗುರಿಯಾಗದ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?” ಎಂದು ಹೇಳಿದ್ದಾರೆ.
“ಬಿಧುರಿ ಮಾತ್ರವಲ್ಲ, ಬಿಜೆಪಿಯ ಉನ್ನತ ನಾಯಕತ್ವ ಇದಕ್ಕಾಗಿ ಕೈ ಜೋಡಿಸಿ ಕ್ಷಮೆಯಾಚಿಸಬೇಕು” ಎಂದು ಶ್ರೀನಾಟೆ ಹೇಳಿದ್ದು, ಇದು ಕೇವಲ ಪ್ರಿಯಾಂಕಾ ಗಾಂಧಿಗೆ ಮಾತ್ರವಲ್ಲ ಎಲ್ಲಾ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ: ದೆಹಲಿ ಚುನಾವಣೆ: ಎಎಪಿಯ ‘ಮಹಿಳಾ ಸಮ್ಮಾನ್’ ನಂತರ ಕಾಂಗ್ರೆಸ್ ‘ಪ್ಯಾರಿ ದೀದಿ’ ಯೋಜನೆ
ದೆಹಲಿ ಚುನಾವಣೆ: ಎಎಪಿಯ ‘ಮಹಿಳಾ ಸಮ್ಮಾನ್’ ನಂತರ ಕಾಂಗ್ರೆಸ್ ‘ಪ್ಯಾರಿ ದೀದಿ’ ಯೋಜನೆ


