ಫ್ಯಾಲೆಸ್ತೀನಿನ ಗಾಜಾದಲ್ಲಿ ಕಳೆದ 15 ತಿಂಗಳಿನಿಂದ ಯುದ್ಧದಲ್ಲಿರುವ ಇಸ್ರೇಲ್ ಮತ್ತು ಹಮಾಸ್ ನಡುವೆ ಭಾನುವಾರ (ಜನವರಿ 19, 2025) ಬೆಳಿಗ್ಗೆ ಕದನ ವಿರಾಮ ಜಾರಿಗೆ ಬರಲಿದ್ದು, ಕೆಲವು ಗಂಟೆಗಳ ನಂತರ ಒತ್ತೆಯಾಳು ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಈಜಿಪ್ಟ್, ಕತಾರ್ ಮತ್ತು ಅಮೆರಿಕ ಮಧ್ಯಸ್ಥಿಕೆಯಲ್ಲಿ ತಿಂಗಳುಗಳ ಕಾಲ ನಡೆದ ಮಾತುಕತೆಗಳ ನಂತರ ಕದನ ವಿರಾಮ ಒಪ್ಪಂದವು ತೀರ್ಮಾನವಾಗಿತ್ತು. Gaza ceasefire
ಕದನ ವಿರಾಮ ಒಪ್ಪಂದದ ಹಿನ್ನಲೆ ಇಸ್ರೇಲಿ ಪಡೆಗಳು ಗಾಜಾದ ರಫಾ ಪ್ರದೇಶಗಳಿಂದ ಈಜಿಪ್ಟ್ ಮತ್ತು ಗಾಜಾ ನಡುವಿನ ಗಡಿಯುದ್ದಕ್ಕೂ ಫಿಲಡೆಲ್ಫಿ ಕಾರಿಡಾರ್‌ಗೆ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದವು ಎಂದು ಹಮಾಸ್ ಪರ ಮಾಧ್ಯಮಗಳು ಭಾನುವಾರ ಮುಂಜಾನೆ ವರದಿ ಮಾಡಿವೆ. ಹಾಗಾಗಿ, ಯುದ್ಧ ಪೀಡಿತ ಗಾಜಾ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. Gaza ceasefire
ಜನವರಿ 20 ರಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣ ವಚನಕ್ಕೆ ಮೊದಲು ಕದನ ವಿರಾಮ ಘೋಷಣೆಯಾಗಿದೆ. ಶನಿವಾರ ರಾಷ್ಟ್ರವನ್ನುದ್ದೇಶಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಡಿದ ಭಾಷಣದಲ್ಲಿ, ಮತ್ತೆ ಯುದ್ಧ ಅಗತ್ಯವಿದ್ದರೆ ಇಸ್ರೇಲ್‌ಗೆ ಅಮೆರಿಕದ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
42 ದಿನಗಳ ಮೊದಲ ಹಂತವನ್ನು “ತಾತ್ಕಾಲಿಕ ಕದನ ವಿರಾಮ” ಎಂದು ಕರೆದ ಅವರು, “ಒಂದು ವೇಳೆ ಯುದ್ಧವನ್ನು ಪುನರಾರಂಭಿಸುವಂತೆ ಏನಾದರೂ ನಡೆದರೆ, ನಾವು ಮತ್ತೆ ರಣರಂಗಕ್ಕೆ ಇಳಿಯಲಿದ್ದೇವೆ” ಎಂದು ಹೇಳಿದ್ದರು.
ಅದಾಗ್ಯೂ, ಸ್ಥಳೀಯ ಸಮಯ ಬೆಳಿಗ್ಗೆ 8:30 ಕ್ಕೆ ಕದನ ವಿರಾಮ ಪ್ರಾರಂಭವಾಗಲಿದ್ದು, ಒಪ್ಪಂದ ಪ್ರಾರಂಭವಾಗುವ ಗಡುವು ಮುಗಿದರೂ, ಹಮಾಸ್ ಬಿಡುಗಡೆ ಮಾಡುವ ಒತ್ತೆಯಾಳುಗಳ ಪಟ್ಟಿಯನ್ನು ಹಸ್ತಾಂತರಿಸಲಾಗಿಲ್ಲ ಎಂದು ಇಸ್ರೇಲ್‌ನ ಉನ್ನತ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. “ಸೈನ್ಯವು ಗಾಜಾದಲ್ಲಿ ಈಗಲೂ ದಾಳಿ ಮಾಡುವುದನ್ನು ಮುಂದುವರೆಸಿದೆ. ಹಮಾಸ್ ಒಪ್ಪಂದವನ್ನು ಪಾಲಿಸುವವರೆಗೆ ದಾಳಿ ನಡೆಸಲಿದೆ” ಎಂದು ಅವರು ಹೇಳಿದ್ದಾರೆ.
ಪಟ್ಟಿಯನ್ನು ತಲುಪಿಸಲಾಗುವುದು ಮತ್ತು ಒಪ್ಪಂದವು ಇನ್ನೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮಧ್ಯವರ್ತಿಗಳು ಭರವಸೆ ನೀಡಿದ್ದಾರೆ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ನಡುವೆಯು ಇಸ್ರೇಲ್ ದಾಳಿಯಿಂದ ಗಾಜಾದಾದ್ಯಂತ ಕನಿಷ್ಠ ಎಂಟು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಅಲ್‌ಜಝೀರಾ ವರದಿ ಮಾಡಿದೆ.
ಈ ನಡುವೆ, ಬಂಧಿತರು ಮತ್ತು ಕೈದಿಗಳ ವಿನಿಮಯ ಒಪ್ಪಂದದ ಮೊದಲ ಹಂತದಲ್ಲಿ ಬಿಡುಗಡೆಗೊಳ್ಳುವ ಬಂಧಿತರ ಹೆಸರನ್ನು ಹಮಾಸ್ ಬಿಡುಗಡೆ ಮಾಡುವವರೆಗೆ ಗಾಜಾದಲ್ಲಿ ಕದನ ವಿರಾಮ ಪ್ರಾರಂಭವಾಗುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ತಾಂತ್ರಿಕ ಕಾರಣದಿಂದ ಕದನ ವಿರಾಮ ವಿಳಂಬವಾಗುತ್ತಿದೆ ಎಂದು ಪ್ಯಾಲೇಸ್ತೀನಿ ಹೋರಾಟಗಾರರು ಹೇಳಿದ್ದಾರೆ.
ಕದನ ವಿರಾಮದ ಮೊದಲ ದಿನದಂದು, ಇಸ್ರೇಲ್-ಹಮಾಸ್ ಒಪ್ಪಂದದ ಪ್ರಕಾರ ಗಾಜಾದಲ್ಲಿ ಕದನ ವಿರಾಮಕ್ಕೆ, ಮೂವರು ಇಸ್ರೇಲಿ ಬಂಧಿತರನ್ನು ಮತ್ತು ಸುಮಾರು 95 ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಮಾಡಬೇಕಿದೆ.
ಅಕ್ಟೋಬರ್ 7, 2023 ರಿಂದ ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧದಿಂದ ಕನಿಷ್ಠ 46,899 ಪ್ಯಾಲೆಸ್ತೀನಿಯರು ಹತ್ಯೆಯಾಗಿದ್ದು, ಸುಮಾರು 1,10,725 ಜನರು ಗಾಯಗೊಂಡಿದ್ದಾರೆ. ಅದೇ ದಿನ ಪ್ಯಾಲೆಸ್ತೀನ್ ಹೋರಾಟಗಾರ ಗುಂಪು ಹಮಾಸ್ ನೇತೃತ್ವದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕನಿಷ್ಠ 1,139 ಜನರು ಸಾವನ್ನಪ್ಪಿದ್ದರು ಮತ್ತು 200 ಕ್ಕೂ ಹೆಚ್ಚು ಜನರನ್ನು ಅವರು ಸೆರೆಯಾಳುಗಳನ್ನಾಗಿ ಕರೆದೊಯ್ದಿದ್ದರು.
ಇದನ್ನೂಓದಿ: ಗಾಝಾ ಕದನ ವಿರಾಮ ಒಪ್ಪಂದ ಅನುಮೋದಿಸಿದ ಇಸ್ರೇಲ್ ಸಂಪುಟ


