Homeಕರ್ನಾಟಕಮೋದಿ 2.1ರ ಕೃಷಿ ಕ್ಷೇತ್ರ: ಅಂತಿಮ ಮೊಳೆ ಹೊಡೆಯುವ ಕೇಂದ್ರದ ಕಾಯಕಕ್ಕೆ ರಾಜ್ಯ ಸರ್ಕಾರಗಳೇ ಸರಬರಾಜುದಾರರು

ಮೋದಿ 2.1ರ ಕೃಷಿ ಕ್ಷೇತ್ರ: ಅಂತಿಮ ಮೊಳೆ ಹೊಡೆಯುವ ಕೇಂದ್ರದ ಕಾಯಕಕ್ಕೆ ರಾಜ್ಯ ಸರ್ಕಾರಗಳೇ ಸರಬರಾಜುದಾರರು

- Advertisement -
- Advertisement -

ತಾನು ವಶಪಡಿಸಿಕೊಳ್ಳಬೇಕೆಂದಿರುವ ಶತ್ರು ಪ್ರದೇಶವನ್ನೂ; ಅದರ ಜನ ಸಮುದಾಯವನ್ನೂ ಸೋಲಿಸಲು ಬಲು ದೊಡ್ಡ ದೀರ್ಘಕಾಲೀನ ಯುದ್ಧ ತಂತ್ರ ಹೆಣೆಯದೇ ಯಾರೂ ಗೆದ್ದಿಲ್ಲ. ಅಮೆರಿಕಾದಲ್ಲಿ ಸ್ಪಾನಿಷರು ದಶಕಗಳ ಕಾಲ ಇಂಥಾ ದಮನದ ಉದ್ದಿಶ್ಯದ ಯುದ್ಧದ ಮೂಲಕವೇ ಖಂಡವನ್ನು ವಶಪಡಿಸಿಕೊಂಡು ಎಲ್ಲರನ್ನೂ ಜೀತಕ್ಕಿರಿಸಿಕೊಂಡಿದ್ದು.

ಇದರ ನಿರ್ಣಾಯಕ ಹಂತವೆಂದರೆ ಘಾತಕ ಹತ್ಯಾರಗಳನ್ನು ಸನ್ನದ್ಧವಾಗಿಟ್ಟುಕೊಂಡು ಶತ್ರು ನಿರ್ಬಲನಾಗಿದ್ದ ಘಟ್ಟದಲ್ಲಿ ದಾಳಿ ನಡೆಸುವುದು. ಮೋದಿ ಸರಕಾರ ಗ್ರಾಮ ಭಾರತದ ಮೇಲೆ ನಡೆಸಿರುವ ಕಾರ್ಯಾಚರಣೆ ಇಂಥಾದ್ದು. ಇಡೀ ಕೃಷಿ ಆಧಾರಿತ ಗ್ರಾಮಭಾರತದ ಬೆನ್ನೆಲುಬು ಮುರಿದು ಅದನ್ನು ಕಾರ್ಪೋರೇಟ್ ಗಾಣದ ಎತ್ತುಗಳನ್ನಾಗಿ ಮಾಡಲು ವರ್ಷಗಟ್ಟಲೆಯಿಂದ ತಯಾರಿ ನಡೆದರೂ ಕಾಲ ಕೂಡಿಬಂದಿರಲಿಲ್ಲ. ಈ ಕೊರೋನಾ ಮೆಟ್ಟಿ ಎಲ್ಲರೂ ಮಹಾಭಾರತದ ಕರ್ಣನ ಹಾಗೆ ಹೂತ ಜೀವನ ರಥದ ಚಕ್ರ ಎತ್ತುವ ಪಡಿಪಾಟಲಿನಲ್ಲಿ ಮುಳುಗಿದ್ದೇ ಸಲೀಸಾಯಿತು. ಪಿಡುಗಿನ ನೆಪದ ಅಘೋಷಿತ/ಘೋಷಿತ ವಿಷಮ ಪರಿಸ್ಥಿತಿಯಲ್ಲಿ ಪ್ರತಿಭಟನೆಯ ಸೊಲ್ಲೂ ಸಾಧ್ಯವಿರದ ದಿನಗಳಿವು.

ಕೊರೋನಾ ದಾಳಿಯಿಂದ ಬಸವಳಿದಿದ್ದ ಆರ್ಥಿಕತೆಗೆ ಚೇತರಿಕೆ ನೀಡುವ ನೆಪದಲ್ಲಿ ತಂದ ನೀತಿ ಬದಲಾವಣೆಗಳೆಲ್ಲಾ ಜರ್ಝರಿತ ಸಮುದಾಯಕ್ಕೆ ಜೀವಜಲ ನೀಡುವ ಅನುಕಂಪದಿಂದ ಹುಟ್ಟಿದ್ದೇ ಅಲ್ಲ. ಈಗಾಗಲೇ ತಯಾರು ಮಾಡಿ ಅನುಷ್ಠಾನಕ್ಕೆ ತರುವ ಧ್ಯಾನದಲ್ಲಿದ್ದ ಬದಲಾವಣೆಗಳಷ್ಟೇ. ಕೃಷಿ ಮಾರುಕಟ್ಟೆ ನೀತಿಯ ಆದ್ಯಂತ ಬದಲಾಣೆ, ಕರಾರು ಕೃಷಿಯ ಅನುಷ್ಠಾನ, ಭೂ ಸುಧಾರಣೆ ಕಾಯಿದೆಗೆ ತಂದ ತಿದ್ದುಪಡಿ ಎಲ್ಲವೂ ಎರಡು ವರ್ಷ ಮೊದಲು ನೀತಿ ಆಯೋಗದ ಕಾರ್ಯತಂತ್ರ ದಾಖಲೆಯಲ್ಲಿರುವ ಅಂಶಗಳೇ.

ನಿರ್ಮಲಾ ಸೀತಾರಾಮನ್ ಸಿಡುಕು ಮೋರೆಯಲ್ಲಿ ಘೋಷಿಸಿದ ಎಲ್ಲವೂ ಈಗಾಗಲೇ ಸರಕಾರದ ಕಡತಗಳಲ್ಲಿದ್ದ ಯೋಜನೆಗಳೇ. ಸರಕಾರ ಇಡೀ ಗ್ರಾಮಭಾರತದ ಯೋಗಕ್ಷೇಮದ ಜವಾಬ್ದಾರಿಯಿಂದ ನುಣುಚಿಕೊಂಡು ಅದನ್ನು ಆಹಾರದ ಬಲಿಯಾಗಿ ಖಾಸಗಿ ಹೂಡಿಕೆದಾರರ ಬೊಗಸೆಗೆ ಧಾರೆ ಎರೆಯುವ ಯಜ್ಞ ಇದು.

ಈಗಾಗಲೇ ಜಾರಿಗೆ ತಂದಿರುವ ಬದಲಾವಣೆಗಳಲ್ಲಿ ಎರಡು ಮುಖ್ಯ ಲಕ್ಷಣಗಳಿವೆ. 1. ಭಾರತದ ಫೆಡರಲ್ ರಚನೆ ಏನಿದೆ ಅದನ್ನು ಸಂಪೂರ್ಣವಾಗಿ ಒರೆಸಿ ಕೇಂದ್ರೀಕೃತ ನೀತಿ, ಕಾರ್ಯಕ್ರಮ, ಅನುಷ್ಠಾನದ ಮಾದರಿಯೊಂದನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವುದು. 2. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಹಿಡಿತಕ್ಕೊಪ್ಪಿಸುವ ಎಲ್ಲಾ ಆಯಾಮಗಳನ್ನು ವ್ಯವಸ್ಥಿತವಾಗಿ ಖಾಸಗಿ ಹಿತಾಸಕ್ತಿಗೆ ತಕ್ಕಂತೆ ಬದಲಾಯಿಸುವುದು.

ಮೊದಲನೆಯ ಬದಲಾವಣೆ ನಮ್ಮ ಫೆಡರಲ್ ಲಕ್ಷಣವನ್ನು ಸಂಪೂರ್ಣ ಬದಲಾಯಿಸಿ ಏಕೀಕೃತ ಅಖಿಲ ಭಾರತ ನೀತಿಯ ನೆಪದಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಸಂಪೂರ್ಣ ನಾಶಪಡಿಸುವುದು. ಮೂಲತಃ ರಾಜ್ಯಗಳ ಉಡಾಫೆ, ಬೇಜಾಬ್ದಾರಿತನದಿಂದ ಕೇಂದ್ರ ಸರಕಾರಕ್ಕೆ ಈ ಕೆಲಸ ಸಲೀಸಾಯಿತು. ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳುವ ಬಗೆ ಇದು. ರಾಜ್ಯಗಳು ತಮ್ಮ ಆದಾಯದಿಂದ ದೂರದೃಷ್ಟಿಯ ಅಭಿವೃದ್ಧಿಯಲ್ಲಿ ಎಡವಿ ಕೇಂದ್ರ ಅನುದಾನಕ್ಕೆ ಕಾಯುವ ದಯನೀಯ ಆರ್ಥಿಕ ಸ್ಥಿತಿಗೆ ಬಂದಿವೆ. ಜಿ.ಎಸ್.ಟಿ.ಯಂಥಾ ಬದಲಾವಣೆಯೂ ರಾಜ್ಯಗಳನ್ನು ನಿಶ್ಯಕ್ತಗೊಳಿಸುವ ಮೊದಲ ಸುತ್ತಿನ ಕೋಟೆ.

ರಾಜ್ಯ ವಿಷಯಗಳಲ್ಲಿ ಹಲವು ಕ್ಷೇತ್ರಗಳಿದ್ದರೂ ಶಿಕ್ಷಣ ಮತ್ತು ಕೃಷಿ ನಿರ್ಣಾಯಕ. ಶಿಕ್ಷಣಕ್ಷೇತ್ರದಿಂದ ಹಿಂದೆ ಸರಿವ ನಿಲುವಿಗೆ ಬಹುತೇಕ ರಾಜ್ಯ ಸರಕಾರಗಳು ಹೃತ್ಪೂರ್ವಕ ಬೆಂಬಲ ನೀಡಿದ ಕಾರಣ ಅದು ಈಗ ಪೂರಂಪೂರಾ ಖಾಸಗಿ ಹಿಡಿತಕ್ಕೆ ಬಿದ್ದಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಕೃಷಿ ಕ್ಷೇತ್ರವನ್ನು ಒತ್ತೆಯಾಗಿರಿಸಿಕೊಳ್ಳುವ ಪ್ರಯತ್ನ ಈಗ ಜಾರಿಗೆ ಬಂದಿದೆ.

ಕೃಷಿಕ್ಷೇತ್ರದ ನಾಲ್ಕು ಆಯಾಮಗಳನ್ನು ಗಮನಿಸಿ. 1.ಬೀಜ/ಗೊಬ್ಬರ. 2.ಬಂಡವಾಳ/ಸಾಲ 3.ಸಂಸ್ಕರಣೆ 4.ಮಾರುಕಟ್ಟೆ. ಈ ನಾಲ್ಕರಲ್ಲಿ

1. ಬೀಜದ ಹಿಡಿತವನ್ನು ಕಾರ್ಪೋರೇಟ್ ಕೈಗೆ ನೀಡುವ ಬೀಜ ಮಸೂದೆ ಈಗಾಗಲೇ ಬಂದಿದೆ. ಸರಕಾರದ ನೀತಿಯ ಪ್ರಕಾರ ಎಲ್ಲಾ ದೇಸೀ ತಳಿಗಳ ಜಾಗದಲ್ಲಿ ಹೈಬ್ರಿಡ್ ಬೀಜಗಳನ್ನು ಸ್ಥಾಪಿಸುವುದು ಪ್ರಮುಖ ಗುರಿ. ಇದನ್ನು ಸಾಧಿಸಲು ಪಿಪಿಪಿ ಮಾದರಿ (ಖಾಸಗಿ- ಸರಕಾರದ ಸಹಭಾಗಿತ್ವ). ಇದರ ಉದ್ದಿಶ್ಯ ಈಗಾಗಲೇ ನಮ್ಮಲ್ಲಿ ಸಶಕ್ತವಾಗಿ ಬೆಳೆದಿದ್ದ ಕೃಷಿ ಸಂಶೋಧನೆ, ವಿಸ್ತರಣೆಯ ರಚನೆಗಳನ್ನು ನಿಶ್ಯಕ್ತಗೊಳಿಸಿ, ಖಾಸಗಿ ಪಾಲುದಾರಿಕೆಯನ್ನು ಮುಂದೊತ್ತಲಾಗಿದೆ. ನಮ್ಮ ಕೃಷಿ ವಿವಿಗಳ ಅನುದಾನವನ್ನೂ ಅದಕ್ಕೆ ತಕ್ಕಂತೆ ಕಡಿತಗೊಳಿಸಿ ಕಾರ್ಪೋರೇಟ್ ಪಾಲುದಾರಿಕೆ ಮೂಲಕ ಸಂಶೋಧನೆ ನಡೆಸಿ ಎಂಬ ಫರ್ಮಾನು ಹೊರಡಿಸಲಾಗಿದೆ. ಅರ್ಥಾತ್, ಬೀಜದ ಸ್ವಾಮ್ಯ, ನಿಯಂತ್ರಣ ಸಂಪೂರ್ಣ ಖಾಸಗಿ ಕಂಪೆನಿಗಳ ಕೈಯಲ್ಲಿರುತ್ತದೆ. ಈಗಾಗಲೇ ಹತ್ತಿಯಲ್ಲಿ ಏನಾಗಿದೆ ಅದು ಉಳಿದ ಬೆಳೆಗಳಿಗೂ ವ್ಯಾಪಿಸಲಿದೆ.

2. ಬಂಡವಾಳ/ಸಾಲ: ಎಲ್ಲಾ ಸರಕಾರಗಳೂ ಕಾರ್ಪೋರೇಟ್ ಶಕ್ತಿಗಳ ತಲೆಹಿಡುಕರಾದಾಗ ಇದೊಂದನ್ನು ನಿರ್ವಹಿಸುತ್ತವೆ. ಬಂಡವಾಳವನ್ನು ಯಾವ ಕಾರ್ಪೋರೇಟ್ ನೀಡುತ್ತೆ? ಅದಕ್ಕೇ ಸಾಲ ನೀಡಿಕೆಯ ಜವಾಬ್ದಾರಿಯನ್ನು ಸರಕಾರ ಹೊರುತ್ತದೆ. ಆದರೆ ಒಂದಷ್ಟು ಶರತ್ತುಗಳನ್ನು ವಿಧಿಸುತ್ತದೆ. ಉದಾ: ಯಂತ್ರೋಪಕರಣಗಳ ಬಳಕೆ, ಮತ್ತು ನೀರಾವರಿ ಸುಧಾರಣೆಯ ನೆಪದಲ್ಲಿ ಪೈಪು ಕಂಪೆನಿಗಳನ್ನು ಪೋಷಿಸುವುದು.

3. ಸಂಸ್ಕರಣೆ, ಕಾಪಿಡುವುದು: ಮೂಲತಃ ರೈತನೊಬ್ಬನಿಗೆ ಸರಳವಾಗಿ ಇದನ್ನು ಫಾರ್ಮ್ ಲೆವೆಲ್‍ನಲ್ಲಿ ಕಾಪಿಡುವ ಅಥವಾ ಗ್ರಾಮ ಮಟ್ಟದಲ್ಲಿ ಸಂಸ್ಕರಿಸುವ, ತಂತ್ರಜ್ಞಾನದಲ್ಲಿ ರೈತರಿಗೆ ದಕ್ಕಿದ್ದು ಕುಂಟಾ ಬಿಲ್ಲೆ ಆಡುವ ಕಾಂಕ್ರೀಟ್ ಸಪಾಟು ನೆಲ ಮಾತ್ರ. ಇದನ್ನು ಧಾನ್ಯ ತೂರುವ ಕಣ ಎಂದು ಕರೆಯಲಾಯಿತು. ದೊಡ್ಡ ಪ್ರಮಾಣದ ಶೀತಲಗೃಹ, ಸಂಸ್ಕರಣೆಗಳನ್ನು ಖಾಸಗಿ ಮಡಿಲಿಗೆ ಹಾಕಿ ಅವರನ್ನು ಕೃಷಿ ಲೋಕದ ಉದ್ಧಾರಕರೆಂಬಂತೆ ಬಿಂಬಿಸಿ ಸಬ್ಸಿಡಿ ಸಹಿತ ಸಕಲ ಅನುಕೂಲಗಳನ್ನೂ ನೀಡಲಾಯಿತು.

4. ಇದರ ಮುಂದುವರಿಕೆಯಾಗಿಯೇ ಮಾರುಕಟ್ಟೆಯ ಸುಧಾರಣೆ: ಈ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಎಂಬ ಸರಕಾರಿ ನಿಯಂತ್ರಣದ ವೇದಿಕೆಯೊಂದಿತ್ತು. ಯಾರೇ ಕೃಷಿ ಉತ್ಪನ್ನ ಕೊಳ್ಳಬೇಕೆಂದಿದ್ದರೂ ಈ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಮಾಡಬೇಕಿತ್ತು. ಸರ್ಕಾರದ ನಿಗಾ ಇತ್ತು. ಇಂದಿಗೂ; ಮುಖ್ಯತಃ ಬಯಲು ಸೀಮೆಯಲ್ಲಿ ಈ ಎಪಿಎಂಸಿ ರೈತರನ್ನು ಬಹಳ ಉದ್ಧಾರ ಮಾಡದಿದ್ದರೂ ಹೊರಗೆ ಮೂರು ಕಾಸಿಗೆ ಕೇಳಿದಾಗ, ‘ಬಿಡತ್ತಾಗಿ, ಎಪಿಎಂಸಿಗೆ ಒಯ್ತೀನಿ’ ಅಂತ ರೈತ ಹೇಳುವಷ್ಟು ಕೌಂಟರ್ ವೈಟ್ ಈ ಸಮಿತಿಗಿತ್ತು.

ಈಗ ಅದನ್ನೂ ಅಂಚಿಗೆ ಸರಿಸಿ ಖಾಸಗಿಯವರು ಎಲ್ಲಿ ಬೇಕಾದರೂ ಕೊಳ್ಳಬಹುದು, ರೈತರು ಯಾರಿಗೆ ಬೇಕಾದರೂ ಮಾರಬಹುದು ಎಂಬ ಮುಕ್ತ ದಾರಿ ಉದ್ಘಾಟಿಸಲಾಗಿದೆ. ಮೇಲ್ನೋಟಕ್ಕೆ ಇದು ಪರವಾಗಿಲ್ವೇ ಎನ್ನಿಸಬಹುದು. ಈ ಖಾಸಗಿ ಮಾರುಕಟ್ಟೆಯ ಹಿಡಿತದ ಚರಿತ್ರೆ, ಅಂತರ್ರಾಷ್ಟ್ರೀಯ ವ್ಯವಹಾರದ ಸೂತ್ರ ಗಮನಿಸಿದವರಿಗೆ ಇದೊಂದು ತಾತ್ಕಾಲಿಕ ಲಾಭ ತೋರಿ ದೀರ್ಘಾವಧಿಯಲ್ಲಿ ರೈತರನ್ನು ಅಡವಿಟ್ಟುಕೊಳ್ಳುವ ವ್ಯವಹಾರ ಎಂಬುದು ಗೊತ್ತು. ಚಾರಿತ್ರಿಕವಾಗಿ 1980ರಲ್ಲಿ ಕರ್ನಾಟಕದಲ್ಲಿ ಕೋಕೋ ಬೆಳೆಯಲು ಇನ್ನಿಲ್ಲದ ಪ್ರೋತ್ಸಾಹ ನೀಡಿದ ಕ್ಯಾಡ್‍ಬರಿ, ತನಗೆ ಬೇಕಷ್ಟು ಉತ್ಪಾದನೆ ಆಗುವ ಹಂತ ಸೃಷ್ಟಿಯಾಗಿದೆ ಅನ್ನಿಸಿದ್ದೇ ಈ ಕೋಕೋ ತಾನು ಕೊಳ್ಳಲ್ಲ, ಗುಣ ಮಟ್ಟ ಅಷ್ಟಕ್ಕಷ್ಟೇ ಎಂದು ಕೈ ಎತ್ತಿತ್ತು. ಕ್ಯಾಡ್‍ಬರಿ ಏಕೈಕ ಕೊಳ್ಳುಗ ಆದ್ದರಿಂದ ದಿಕ್ಕೆಟ್ಟ ರೈತರು ಕೋಕೋ ಬೆಳೆಯನ್ನೇ ನಾಶ ಮಾಡಿದ್ದರು. ವೆನಿಲಾಕ್ಕೂ ಇದೇ ಗತಿ ಆಗಿತ್ತು. ಕಾಫಿ ಬೋರ್ಡನ್ನು ಕಳಚಿ ಖಾಸಗಿಗೆ ರಹದಾರಿ ಮಾಡಿದ ಕಾರಣಕ್ಕೇ ಈಗ ಕಾಫಿ ಬೆಳೆಗಾರರು ಸದಾ ಸೋಲುವ ಜೂಜಾಟದ ಭಾಗವಾಗಿದ್ದಾರೆ.

ಇದರೊಂದಿಗೇ ಸರಕಾರ ಇನ್ನೊಂದೆರಡು ಕಾರ್ಪೋರೇಟ್ ಆಸಕ್ತಿಯ ಪ್ರೊಪೋಸಲುಗಳನ್ನು ರೈತರ ಉದ್ಧಾರದ ಹೆಸರಿನಲ್ಲಿ ಮುಂದಿಟ್ಟಿದೆ. 1.ಅಧಿಕಮೌಲ್ಯದ ಬೆಳೆಗಳು. 2.ರಫ್ತು ಮಾದರಿಯ ಬೆಳೆಗಳು.

ಭಾರತದ ಕೃಷಿಯ ತೊಡಕುಗಳ ಬಗ್ಗೆ ಇಲ್ಲಿನ ರೈತರ ಹಿಡುವಳಿ ಚಿಕ್ಕದು, ನೀರಿನ ಸೌಲಭ್ಯ ಇಲ್ಲ, ಎಂದೆಲ್ಲಾ ಪುಂಖಾನುಪುಂಖವಾಗಿ ದಾಖಲಿಸುವ ಸರಕಾರ ಮೆತ್ತಗೆ ಹೈವ್ಯಾಲ್ಯೂ ಕ್ರಾಪ್ ಎಂದು ಪಲುಕುತ್ತದೆ. ಈ ಅಧಿಕ ಬೆಲೆಯ, ರಫ್ತು ಉದ್ದೇಶದ ಬೆಳೆಗಳನ್ನು ಆಯ್ದ ಭಾಗಗಳಲ್ಲಷ್ಟೇ ಬೆಳೆಯಲು ಸಾಧ್ಯ. ಕಾಂಟ್ರಾಕ್ಟ್ ಫಾರ್ಮಿಂಗಿನ ವಿಟ ಪುರುಷ ವೈಯ್ಯಾರದಲ್ಲಿ ರಂಗಪ್ರವೇಶ ಮಾಡುವುದು ಹೀಗೆ. ಇಂಥಾ ದ್ವೀಪಗಳಿಗೆ ಇನ್ನಿಲ್ಲದ ಅನುದಾನ ಸಹಿತ ಸಕಲ ಸವಲತ್ತುಗಳನ್ನೂ ಸರಕಾರ ವಿಸ್ತರಿಸಿ ಉಳಿದ ಮಾಮೂಲಿ ಕೃಷಿಯನ್ನು ಸಂಪೂರ್ಣ ನಿರ್ಲಕ್ಷಿಸುವುದು ಖಂಡಿತ. ‘70ರ ದಶಕದಲ್ಲೇ ಫುಡ್ ಫಸ್ಟ್ ಎಂಬ ಹೆಸರಾಂತ ಕೃತಿಯಲ್ಲಿ ಕಾರ್ಪೋರೇಟ್ ಕೃಷಿಯ ಧೂರ್ತತನದ ಬಗ್ಗೆ ವಿಷದವಾಗಿ ಹೇಳಲಾಗಿತ್ತು. ಭೀಕರ ಬರದಲ್ಲಿ ಇಥಿಯೋಪಿಯಾ ಸಾಯುತ್ತಿದ್ದಾಗ ಯುರೋಪಿಯನ್ ದೇಶಗಳಿಗೆ ಇಥಿಯೋಪಿಯಾದಿಂದ ನಳನಳಿಸುವ ಹಣ್ಣು ತರಕಾರಿ ವಿಮಾನದಲ್ಲಿ ರಫ್ತಾಗುತ್ತಿತ್ತು!! ಇದು ಕಾರ್ಪೋರೇಟ್ ಕೃಷಿ ಮತ್ತು ಮಾರ್ಕೆಟಿಂಗ್‍ನ ಉದಾಹರಣೆ. ಇಲ್ಲೂ ಅದನ್ನು ಮುಕ್ತಗೊಳಿಸಿ ಎಂಬ ಒತ್ತಡ ದಶಕಗಳಿಂದಲೇ ಇತ್ತು.

ಅದನ್ನು ಧೈರ್ಯದಿಂದ ಮಾಡುವ ತಲೆಹಿಡುಕ ಸರಕಾರ ಇರಲಿಲ್ಲ. ಈಗ ಸಲೀಸು. ನಮ್ಮ ಕೃಷಿ; ತನ್ಮೂಲಕ ಗ್ರಾಮಭರತವನ್ನೇ ಕಾರ್ಪೋರೇಟ್ ಆಡೊಂಬೊಲ ಮಾಡಲು ಇಷ್ಟೇ ಸಾಕಾಗವುದಿಲ್ಲ. ಇದು ಎಂಥಾ ಜುಗ್ಗ ಲಾಭಬಡುಕ ಸಂತಾನವೆಂದರೆ ಒಂದು ವ್ಯವಹಾರದ ಎಲ್ಲಾ ಖರ್ಚಿನ ಬಾಬುಗಳನ್ನೂ ಸರಕಾರ ಭರಿಸುವಂತೆ ಸರಕಾರದ ಕೈ ತಿರುಚುತ್ತದೆ. ಮೊನ್ನೆ ನಿರ್ಮಲಕ್ಕನವರು ಸ್ವಲ್ಪ ನಸು ನಕ್ಕು ಒಂದು ಸ್ಕೀಮ್ ಘೋಷಿಸಿದರು. ಎಲ್ಲಿ ಉತ್ಪಾದನೆ ಜಾಸ್ತಿ ಇರುತ್ತೋ ಅಲ್ಲಿಂದ ಬೇಡಿಕೆ ಜಾಸ್ತಿ/ಉತ್ಪಾದನೆ ಕಡಿಮೆ ಇರುವ ಜಾಗಗಳಿಗೆ ಕೃಷಿ ಉತ್ಪನ್ನ ಸಾಗಿಸಲು ಸರಕಾರ ಸಬ್ಸಿಡಿ ನೀಡುತ್ತೆ ಅಂತ.

ಇದು ಈ ಪ್ಯಾಕೇಜಿನ ಭಾಗ. ರೈತನೊಬ್ಬ ಇದನ್ನು ಪಡೆವ ಭಾಗ್ಯ ಅಷ್ಟರಲ್ಲೇ ಇದೆ. ದೇಶಸೇವೆಯ ನೆಪದಲ್ಲಿ ಈ ಸಬ್ಸಿಡಿಯೂ ಕಾರ್ಪೋರೇಟ್/ಸಗಟು ಕುಳಗಳಿಗೆ ಹೋಗುತ್ತೆ. ರೈತ ಇನ್ನೂ ಚೇತರಿಸಿಕೊಂಡರೆ ಎನ್ನುವ ಸಂಶಯ ಸರ್ಕಾರಕ್ಕಿದೆ. ಅದಕ್ಕೇ ನಿನ್ನೆ ಘೋಷಿಸಿದ ವಿದ್ಯುತ್ ಸುಧಾರಣಾ ನೀತಿ. ಇದು ಕೂಡಾ ನೀತಿ ಆಯೋಗದ ಕಾರ್ಯತಂತ್ರ ದಾಖಲೆಯಲ್ಲಿರುವುಂಥಾದ್ದೇ.

ನಿರ್ಮಲಕ್ಕನವರು 20 ಲಕ್ಷ ಕೋಟಿ ಘೋಷಿಸಿದಾಗ ಅದರಲ್ಲಿ 90 ಸಾವಿರ ಕೋಟಿ ವಿದ್ಯುತ್ ಕ್ಷೇತ್ರಕ್ಕೆ ಎಂದು ಬೊಟ್ಟು ಮಾಡಿ ತೋರಿಸಿದರು. ಈ 90 ಸಾವಿರ ಕೋಟಿ ಘಾತಕ ಶರತ್ತುಗಳ ಸಾಲ ಎಂಬುದು ಮಾರನೇ ದಿನವೇ ಬಯಲಾಯಿತು. ಆದರೆ ಅದರ ಕೋರೆ ಹಲ್ಲುಗಳ ವಿವರಗಳೇನು ಎಂಬುದು ನಿನ್ನೆ ಅನಾವರಣಗೊಂಡಿತು. ತಾಂತ್ರಿಕ ಸುಧಾರಣೆ ಮಾಡಿದರೆ ಅದರ ವೆಚ್ಚವನ್ನು ಮೃದು ಸಾಲದ ರೂಪದಲ್ಲಿ ನೀಡಲಾಗುತ್ತದೆ ಅಷ್ಟೇ. ಇದರ ಹದುಳವೇನಪ್ಪಾ ವಿದ್ಯುತ್ ವಿತರಣಾ ಜಾಲವನ್ನೇ ಖಾಸಗೀಕರಣಗೊಳಿಸಲಾಗುವುದು; ಅಂದರೆ, ರೈತರು ಬಿಲ್ಲು ಮೊದಲು ಕಟ್ಟಬೇಕು. ಆಮೇಲೆ ಸರಕಾರ ಸಬ್ಸಿಡಿ ರೈತರಿಗೆ ಪಾವತಿ ಮಾಡುತ್ತದೆ. ಈಗ ಗ್ಯಾಸ್ ಸಬ್ಸಿಡಿ ಹೇಗಿರುತ್ತದೆ ಅಂತ ಗೊತ್ತಿದ್ದರೆ ಇದರ ಮರ್ಮ ಬಯಲಾಗುತ್ತದೆ. ನಿಧಾನಕ್ಕೆ ಸರಕಾರ ಈ ಸಬ್ಸಿಡಿಯ ಮೊತ್ತ ಕಡಿತಗೊಳಿಸುತ್ತಾ ಹೋಗುತ್ತದೆ. ರೈತ ಬಿಲ್ಲು ಕಕ್ಕುತ್ತಲೇ ಇರಬೇಕು. ಬೇಕಾಬಿಟ್ಟಿ ಬಳಕೆಗೆ ಕಡಿವಾಣ ಹಾಕಿ ಶಿಸ್ತು ತರುವ ಬಗೆ ಇದು ಎಂದು ಇದನ್ನು ಪ್ರಶಂಸಿಸುವ ಕಾರ್ಖಾನೆ ಆಗ ಸಕ್ರಿಯವಾಗುತ್ತದೆ.

ನಮ್ಮ ರಾಜ್ಯ ಸರಕಾರಗಳು ಸಾವಿರಾರು ಕೋಟಿ ರೂಪಾಯಿಗಳ ವಿದ್ಯುತ್ ಸಬ್ಸಿಡಿ ನೀಡಿ ಬಸವಳಿದಿವೆ. ಅವಕ್ಕೂ ಇದರಿಂದ ಮುಕ್ತಿ ಬೇಕು. ವಿದ್ಯುತ್ ಖರೀದಿಯಲ್ಲಿ ಕಾಸು ಹೊಡೆಯುವ ವಿದ್ಯಮಾನಕ್ಕೆ ಈ ಖಾಸಗೀಕರಣ ಅಡ್ಡಿಯಾಗದು. ಆದ್ದರಿಂದ ರಾಜ್ಯ ಸರಕಾರಗಳೂ ರೈತರ ಶವ ಪೆಟ್ಟಿಗೆಗೆ ಮೊಳೆ ಹೊಡೆಯುವ ಕೆಲಸದಲ್ಲಿ ಮೊಳೆ ಸಪ್ಲೈ ಮಾಡುವ ಕೆಲಸ ಮಾಡುವುದರಲ್ಲಿ ಸಂಶಯವಿಲ್ಲ.

ಮುಂದಿನ ದಿನಗಳಲ್ಲಿ ಇಂಥಾ ಸುಧಾರಣೆಗಳು ಇನ್ನಷ್ಟು ವಿಸ್ತಾರಗೊಂಡು ಸರಕಾರದ ಬಜೆಟ್ ಅನುದಾನ ಕನಿಷ್ಠಕ್ಕಿಳಿದಾಗ ರೈತರು ಗಲಾಟೆ ಎಬ್ಬಿಸುವುದಿಲ್ಲವೇ? ಅದನ್ನು ನಿಭಾಯಿಸುವ ಜಾಣ್ಮೆಯನ್ನೂ ಕರಗತಮಾಡಿಕೊಂಡ ಕಾರಣವೇ ಮೋದಿ ಸರಕಾರ ಇಷ್ಟು ಧೈರ್ಯ ಮಾಡಿರುವುದು. ಸಾಕುನಾಯಿಗೆ ವಾರಕಾಲ ಹೊಟ್ಟೆಗೆ ಏನೂ ಹಾಕದೇ ಕಟ್ಟಿ ಹಾಕಿ. ಆಮೇಲೆ ಎಂಟನೇ ದಿನ ಒಂದಷ್ಟು ಅನ್ನ ಸುರುವಿ. ಲೋಕವನ್ನೇ ಅಲ್ಲಾಡಿಸುವ ವೇಗದಲ್ಲಿ ಅದು ಬಾಲ ಅಲ್ಲಾಡಿಸಿ ಗಬಗಬ ಅನ್ನ ತಿನ್ನುತ್ತಾ ಕೃತಜ್ಞತೆಯ ಕಣ್ಣಿಂದ ಯಜಮಾನನತ್ತ ನೋಡುತ್ತಿರುತ್ತದೆ. ಬಂಡಾಯ ಏಳುವ ಪ್ರಶ್ನೆಯೇ ಇಲ್ಲ.

ಇಡೀ ಹುನ್ನಾರವೇ ನಮ್ಮನ್ನು ಪ್ರಾಣಿಗಳನ್ನಾಗಿ ರೂಪಾಂತರಗೊಳಿಸುವುದು. ಕೆಲವರನ್ನು ಹಸುಗಳಾಗಿ, ಕೆಲವರನ್ನು ನಾಯಿಗಳಾಗಿ, ಕತ್ತೆಗಳಾಗಿ. ಪ್ರತೀ ಪ್ರಾಣಿಗೂ ಒಂದು ಉಪಯುಕ್ತತೆ ಇದೆ. ಆರ್ವೆಲ್ಲನ ಆನಿಮಲ್ ಫಾರ್ಮ್ ಹಳೆದಾಯಿತು. ಈಗ ಹೊಸ ಆವೃತ್ತಿ ಪ್ರಕಟಗೊಳ್ಳುವುದಿದೆ.

ಭೂಮಿ ವಶಕ್ಕೂ ಕಾನೂನಿನ ಮುದ್ರೆ

ಪ್ರಪಂಚದ ಬೇರೆ ಭಾಗಗಳಲ್ಲಿ ಭೂಹಿಡುವಳಿಯಲ್ಲಿ ಆದ ಪ್ರಮುಖ ಬದಲಾವಣೆ ಎಂದರೆ ಭೂಮಿಯ ಕೇಂದ್ರೀಕರಣ. ಅಂದರೆ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳ ಕೈಗೆ ಲಕ್ಷ ಲಕ್ಷ ಎಕರೆ ಸಿಕ್ಕಿ, ಕೃಷಿಯನ್ನು ಕೈಗಾರಿಕೆಯ ರೀತಿ ಮಾಡುವುದು. ನಮ್ಮಲ್ಲಿ ಎಸ್ಟೇಟುಗಳನ್ನು ಹೊರತುಪಡಿಸಿದರೆ ಕೃಷಿಗಾಗಿ ಆ ರೀತಿಯ ಕೇಂದ್ರೀಕರಣ ಸಾಧ್ಯವಾಗಲಿಲ್ಲ. ಕಾನೂನಿನ ಪ್ರಕಾರವೂ ಅದಕ್ಕೆ ಅವಕಾಶವಿರಲಿಲ್ಲ. ಬದಲಿಗೆ ಭೂಮಿ ವಿಘಟಿತವಾಗುತ್ತಾ ಹೋಗಿ ಸಣ್ಣ, ಅತೀ ಸಣ್ಣ ಹಿಡುವಳಿದಾರರು ಅಪಾರ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಾ ಹೋದರು. ಇದೂ ಒಂದು ಸಮಸ್ಯೆಯೇ. ಆದರೆ ಇದನ್ನು ಬಗೆಹರಿಸಲು ಸರ್ಕಾರಗಳು ಸೂಚಿಸುತ್ತಾ ಬಂದಿದ್ದು ಕಾರ್ಪೋರೇಟ್ ಫಾರ್ಮಿಂಗ್ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ (ಗುತ್ತಿಗೆ ಅಥವಾ ಕರಾರು ಕೃಷಿ).

ಇತ್ತೀಚೆಗೆ ಅವರಿಗೆ ಇನ್ನೊಂದು ಸಬೂಬೂ ಸಹಾ ಸಿಕ್ಕಿತು. ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಬೀಳು ಬಿಡುವ ಅಭ್ಯಾಸ ಶುರುವಾಗಿರುವುದರಿಂದ ದೇಶದ ಕೃಷಿ ಉತ್ಪಾದಕತೆಯ ದೃಷ್ಟಿಯಿಂದ ಕಂಪೆನಿಗಳಿಗೆ ಭೂಮಿಯನ್ನು ಕರಾರಿನ ಆಧಾರದ ಮೇಲೆ ಕೊಡುವುದು ಒಳ್ಳೆಯದು ಎಂಬ ಚರ್ಚೆಯನ್ನು ಹುಟ್ಟು ಹಾಕಿ ಸೈ ಎನಿಸಿಕೊಂಡರು. ಅದನ್ನೇ ಈ ವರ್ಷ ಕಾನೂನಿನ ರೂಪದಲ್ಲೂ ತರಲಾಗಿದೆ. ಈ ಕಾನೂನು ಭೂಮಿಯನ್ನು ಕರಾರಿನ ಮೇಲೆ ಕೊಡುವ ರೈತರ ಪರವಾಗಿಲ್ಲ; ಕಂಪೆನಿಗಳ ಪರವಾಗಿದೆ.

ಅಂದರೆ ಒಳಸುರಿಯ ಮೇಲಿನ ಸಂಪೂರ್ಣ ಹಿಡಿತ ಹಿಂದೆಯೇ ಕಾರ್ಪೋರೇಟ್‍ಗಳ ಪಾಲಾಗಿತ್ತು. ಮಾರುಕಟ್ಟೆಯ ಮೇಲೆ ಕಾನೂನಾತ್ಮಕವಾಗಿಯಾದರೂ ಎಪಿಎಂಸಿ ಮೂಲಕ ಒಂದಷ್ಟು ನಿಯಂತ್ರಣ ಸಾಧ್ಯವಿತ್ತು. ಅದನ್ನೂ ಕಿತ್ತುಹಾಕಲಾಯಿತು. ಜೊತೆಗೆ ಭೂಮಿಯ ಮೇಲಿನ ಒಡೆತನವನ್ನು ರೈತರಿಂದ ಕಿತ್ತುಕೊಳ್ಳಲು ಸಾಧ್ಯವಾಗುವ ಕಾನೂನೂ ತಂದಾಯಿತು. ಅಲ್ಲಿಗೆ ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಕೆಲಸ ಬಹುತೇಕ ಆರಂಭವಾದಂತೆಯೇ ಸರಿ!


ಇದನ್ನೂ ಓದಿ: ಲಾಕ್‍ಡೌನ್ ಮುಗಿಯಿತು ಮುಂದೇನು? – ಡಾ. ಶ್ರೀನಿವಾಸ ಕಕ್ಕಿಲ್ಲಾಯ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...