ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ (ಜ.17) ಪಕ್ಷದ ಮೊದಲ ಹಂತದ ಪ್ರಣಾಳಿಕೆ (ಚುನಾವಣಾ ಭರವಸೆ) ಬಿಡುಗಡೆ ಮಾಡಿದ್ದಾರೆ.
ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಎಲ್ಲಾ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ 2000 ರೂಪಾಯಿ ನೇರವಾಗಿ ಜಮೆ ಮಾಡುವ ‘ಕುಲವಿಳಕ್ಕು ಯೋಜನೆ’ ಪ್ರಣಾಳಿಕೆಯ ಪ್ರಮುಖ ಭರವಸೆಯಾಗಿದೆ.
ಗಮನಾರ್ಹವಾಗಿ, ನಗರ ಬಸ್‌ಗಳಲ್ಲಿ ಪುರುಷರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೆ ತರಲಾಗುವುದು, ಮಹಿಳೆಯರಿಗೆ ಅಸ್ತಿತ್ವದಲ್ಲಿರುವ ಉಚಿತ ಪ್ರಯಾಣ ಯೋಜನೆ ಮುಂದುವರಿಯಲಿದೆ ಎಂದು ಎಐಎಡಿಎಂಕೆ ಹೇಳಿದೆ.
ಗ್ರಾಮೀಣ ಪ್ರದೇಶಗಳಲ್ಲಿ ‘ಅಮ್ಮ ಇಲ್ಲಮ್’ ಯೋಜನೆಯಡಿಯಲ್ಲಿ, ಸರ್ಕಾರವು ಭೂಮಿಯನ್ನು ಖರೀದಿಸಿ, ಸ್ವಂತ ಮನೆ ಇಲ್ಲದವರಿಗೆ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿಕೊಡಲಿದೆ. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರವು ಭೂಮಿಯನ್ನು ಖರೀದಿಸಿ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಕಟ್ಟಲಿದೆ. ಇದರಲ್ಲಿ ‘ಅಮ್ಮ ಇಲ್ಲಮ್ ಯೋಜನೆ’ಯಡಿಯಲ್ಲಿ ಉಚಿತವಾಗಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಭರವಸೆ ನೀಡಲಾಗಿದೆ.
ಕೇಂದ್ರ ಸರ್ಕಾರವು ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಇದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಎಐಎಡಿಎಂಕೆ, ಅಧಿಕಾರಕ್ಕೆ ಬಂದರೆ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 150 ದಿನಗಳ ಕೆಲಸ ಒದಗಿಸುವುದಾಗಿ ಭರವಸೆ ನೀಡಿದೆ.
ಅಮ್ಮ ದ್ವಿಚಕ್ರ ವಾಹನ ಯೋಜನೆಯಡಿಯಲ್ಲಿ 5 ಲಕ್ಷ ಮಹಿಳಾ ಫಲಾನುಭವಿಗಳಿಗೆ ಪ್ರತಿಯೊಬ್ಬರಿಗೆ 25,000 ರೂ. ಸರ್ಕಾರಿ ಸಬ್ಸಿಡಿಯೊಂದಿಗೆ ದ್ವಿಚಕ್ರ ವಾಹನಗಳನ್ನು ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ರಾಜ್ಯದ ಮೇಲಿನ ಸಾಲದ ಹೊರೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ.ಗಳನ್ನು ಹೇಗೆ ಒದಗಿಸುವುದು ಎಂದು ಕೇಳಿದಾಗ ಪಳನಿಸ್ವಾಮಿ, “ಅವರು (ಡಿಎಂಕೆ) ಅಸಮರ್ಥರು; ನಾವು ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದೇವೆ” ಎಂದು ಹೇಳಿದ್ದಾರೆ.
2021ರ ವಿಧಾನಸಭಾ ಚುನಾವಣೆಯಲ್ಲಿ, ಆರ್ಥಿಕ ಸಮಾನತೆಯನ್ನು ಸೃಷ್ಟಿಸುವ ಉದ್ದೇಶದಿಂದ ಎಐಎಡಿಎಂಕೆ ಗೃಹಿಣಿಯರಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಇದಲ್ಲದೆ, ವರ್ಷಕ್ಕೆ ಆರು ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿಯೂ ಹೇಳಿತ್ತು.
ಪುರುಷರಿಗೆ ಉಚಿತ ಬಸ್ ಪ್ರಯಾಣ ಒದಗಿಸುವುದರಿಂದ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಡುದಿಲ್ಲವೇ? ಎಂದು ವರದಿಗಾರರು ಕೇಳಿದಾಗ, ಪಳನಿಸ್ವಾಮಿ, “ಆಡಳಿತಾತ್ಮಕ ಸಾಮರ್ಥ್ಯವಿದ್ದರೆ ಅದನ್ನು ಮಾಡಬಹುದು” ಎಂದು ಹೇಳಿದ್ದಾರೆ.
ಪ್ರಣಾಳಿಕೆ ಬಿಡುಗಡೆಗೂ ಮುನ್ನ, ಪಳನಿಸ್ವಾಮಿ ಮತ್ತು ಪಕ್ಷದ ಹಿರಿಯ ನಾಯಕರು ಚೆನ್ನೈನಲ್ಲಿರುವ ಎಐಎಡಿಎಂಕೆ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಅಲ್ಲಿ ನೆರೆದಿದ್ದ ಜನರಿಗೆ ಸಿಹಿತಿಂಡಿಗಳನ್ನು ವಿತರಿಸಿದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಎಐಎಡಿಎಂಕೆ ನೇತೃತ್ವದಲ್ಲಿ ಎನ್‌ಡಿಎ ತಮಿಳುನಾಡಿನಲ್ಲಿ ಮತ್ತೆ ಅಧಿಕಾರಕ್ಕೇರುವ ಗುರಿಯನ್ನು ಹೊಂದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ, 2023ರಲ್ಲಿ ಸಂಬಂಧಗಳನ್ನು ಕಡಿದುಕೊಂಡ ನಂತರ ಎಐಎಡಿಎಂಕೆ ಬಿಜೆಪಿಯೊಂದಿಗೆ ಮತ್ತೆ ಸಖ್ಯ ಬೆಳೆಸಿದೆ.
ಈ ನಡುವೆ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತು 2024ರ ಸಂಸತ್ ಚುನಾವಣೆಯಲ್ಲಿ ತನ್ನ ಉತ್ತಮ ಪ್ರದರ್ಶನದ ನಂತರ ವಿಶ್ವಾಸದಿಂದ ಚುನಾವಣಾ ಸ್ಪರ್ಧೆಗೆ ಪ್ರವೇಶಿಸುತ್ತಿದೆ.
ಈ ವರ್ಷದ ಮೊದಲಾರ್ಧದಲ್ಲಿ ತಮಿಳುನಾಡು ಚುನಾವಣೆ ನಡೆಯಲಿದೆ.


