ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು (ಎಐಕೆಎಸ್‌ಸಿಸಿ) ಜನವರಿ 8 ರಂದು ಗ್ರಾಮೀಣ ಭಾರತ್ ಬಂದ್ ಆಚರಿಸಲು ಕರೆ ನೀಡಿದೆ. 25 ರಾಜ್ಯಗಳ ರೈತ ಸಂಘಟನೆಗಳು ಏಕೀಕೃತ ಆಂದೋಲನವು ರೈತ ಸಮುದಾಯದ ಹಕ್ಕುಗಳಿಗಾಗಿ ಈ ಬಂದ್ ಆಚರಿಸಲು ನಿರ್ಧರಿಸಿವೆ.
ದೆಹಲಿಯಲ್ಲಿ ನಡೆದ 25 ರಾಜ್ಯಗಳ 800 ಪ್ರತಿನಿಧಿಗಳು ಭಾಗವಹಿಸಿದ್ದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ (ಎಐಕೆಎಸ್‌ಸಿಸಿ) 3 ನೇ ರಾಷ್ಟ್ರೀಯ ಸಮಾವೇಶವು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರು ತಿಳಿಸಿದ್ದಾರೆ.
ಕೇಂದ್ರದ ರೈತ ವಿರೋಧಿ ನೀತಿಗಳು ಮತ್ತು ರೈತರ ಹಕ್ಕೊತ್ತಾಯಗಳನ್ನು ಕಡೆಗಣಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಷ್ಕ್ರಿಯತೆಯನ್ನು ವಿರೋಧಿಸಿ ಬಂದ್ ಆಚರಿಸಲಾಗುತ್ತಿದೆ ಎಂದು ಎಐಕೆಎಸ್‌ಸಿಸಿ ತಿಳಿಸಿದೆ.
ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅಂದರೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಸಿ2 + 50% ಖಾತರಿಪಡಿಸುವಲ್ಲಿನ ವಿಫಲತೆ, ಋಣಭಾರದಿಂದ ಸ್ವಾತಂತ್ರ್ಯವನ್ನು ಒದಗಿಸುವಲ್ಲಿ, ಬರ, ಪ್ರವಾಹದ ಸಂದರ್ಭದಲ್ಲಿ ಪರಿಣಾಮಕಾರಿ ಬೆಳೆ ವಿಮೆ ಮತ್ತು ವಿಪತ್ತು ಪರಿಹಾರವನ್ನು ಒದಗಿಸುವಲ್ಲಿ ಸರ್ಕಾರದ ವಿಫಲತೆಯನ್ನು ರೈತ ಮುಖಂಡರು ಎತ್ತಿ ತೋರಿಸಿದ್ದಾರೆ.
ಅರಣ್ಯ ಹಕ್ಕುಗಳ ಕಾಯ್ದೆ, ಎಲ್‌ಎಆರ್‌ಆರ್ ಕಾಯ್ದೆ 2013 ರ ಅನುಷ್ಠಾನ, ಮತ್ತು ಬುಡಕಟ್ಟು ಜನರು ಮತ್ತು ರೈತರನ್ನು ಬಲವಂತವಾಗಿ ಸ್ಥಳಾಂತರಿಸುವುದರ ವಿರುದ್ಧ, ಮುಕ್ತ ವ್ಯಾಪಾರ ಒಪ್ಪಂದಗಳ (ಆರ್‌ಸಿಇಪಿ) ಕಾಯ್ದೆ, ಕೃಷಿ ಉತ್ಪನ್ನಗಳು ಮತ್ತು ಕೃಷಿ ಕ್ಷೇತ್ರದ ಮೇಲೆ ನಿಯಂತ್ರಣ ಸಾಧಿಸಲು ಹೊರಟ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಡುವುದನ್ನು ರೈತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಕೃಷಿ ಕಾರ್ಮಿಕರ ಮತ್ತು ಷೇರುದಾರರ ಹಕ್ಕುಗಳಿಗಾಗಿ ಸಮಗ್ರ ಶಾಸನ, ಬೆಳೆ ವಿಮೆ ಮತ್ತು ವಿಪತ್ತು ಪರಿಹಾರವನ್ನು ಸಮರ್ಪಕವಾಗಿ ನೀಡಬೇಕು, ಜಮ್ಮು ಕಾಶ್ಮೀರದ ರೈತರು ಅನುಭವಿಸಿದ ನಷ್ಟಕ್ಕೆ ಪರಿಹಾರ ಒದಗಿಸಬೇಕು ಮತ್ತು ಗ್ರಾಮೀಣ ಕಾರ್ಯಪಡೆಗೆ 10,000 ರೂ ಮಾಶಾಸನ ನಿಗಧಿ ಮಾಡಬೇಕು ಎಂದು ಎಐಕೆಎಸ್‌ಸಿಸಿ ಒತ್ತಾಯಿಸಿದೆ.
ಅಲ್ಲದೇ ರೈತರಿಗೆ ಸಂಬಂಧಿಸಿದ 21 ವಿಷಯಗಳನ್ನು ಒಳಗೊಂಡ ರೈತರ ಚಾರ್ಟರ್ ಅನ್ನು ಸಮಾವೇಶದಲ್ಲಿ ಚರ್ಚಿಸಿ ಮಂಡಿಸಲಾಯಿತು ಎಂದು ಎಐಕೆಎಸ್‌ಸಿಸಿ ಸಂಚಾಲಕರಾದ ವಿ.ಎಂ.ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜು ಶೆಟ್ಟಿ, ಹನ್ನನ್ ಮೊಲ್ಲಾ, ಮೇಧಾ ಪಟ್ಕರ್, ಅತುಲ್ ಅಂಜನ್, ಡಾ. ಆಶಿಶ್ ಮಿತ್ತಲ್, ಯೋಗೇಂದ್ರ ಯಾದವ್, ಡಾ.ಸುನಿಲಂ, ರಾಜಾರಾಮ್ ಸಿಂಗ್, ಡಾ. ದರ್ಶನ್ ಪಾಲ್, ಸತ್ಯವಾನ್, ಪ್ರತಿಭಾ ಶಿಂಧೆ, ಅವಿಕ್ ಸಹಾ ಮತ್ತು ಕಿರಣ್ ವಿಸ್ಸಾ ಮುಂತಾದವರು ಭಾಗವಹಸಿದ್ದರು.


