ಬಾರಾಮತಿಯಲ್ಲಿ ಜನವರಿ 28 ರಂದು ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ (ಫೆ.17) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದ ಎರಡೂ ಸ್ವತಂತ್ರ ಫ್ಲೈಟ್ ರೆಕಾರ್ಡರ್ಗಳು ಬೆಂಕಿಯಿಂದ ಹಾನಿಗೊಳಗಾಗಿವೆ ಎಂದು ಖಚಿತಪಡಿಸಿದೆ.
ವಿಮಾನ ಅಪಘಾತದ ತನಿಖಾ ಸಂಸ್ಥೆಯಾದ ವಿಮಾನ ಅಪಘಾತ ತನಿಖಾ ದಳ (ಎಎಐಬಿ) ಬಾರಾಮತಿಯಲ್ಲಿ ಅಪಘಾತಕ್ಕೀಡಾದ ಲಿಯರ್ಜೆಟ್ 45 ಏರ್ಕ್ರಾಫ್ಟ್ VT-SSKಗೆ ಸಂಬಂಧಿಸಿದಂತೆ ಸಮಗ್ರ ತನಿಖೆಯನ್ನು ನಡೆಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಈ ತನಿಖೆಯನ್ನು ವಿಮಾನ (ಅಪಘಾತಗಳು ಮತ್ತು ಘಟನೆಗಳ ತನಿಖೆ) ನಿಯಮಗಳು, 2017ರ ಪ್ರಕಾರ ಮತ್ತು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಅನೆಕ್ಸ್ 13ರ ಅಂತಾರಾಷ್ಟ್ರೀಯ ಮಾನದಂಡಗಳು ಹಾಗೂ ಶಿಫಾರಸುಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ ಎಂದು ಹೇಳಿದೆ.
ವಿಮಾನವು ಎರಡು ಸ್ವತಂತ್ರ ಫ್ಲೈಟ್ ರೆಕಾರ್ಡರ್ಗಳನ್ನು ಹೊಂದಿತ್ತು. ಅಪಘಾತದ ಸಮಯದಲ್ಲಿ ಈ ಎರಡೂ ರೆಕಾರ್ಡರ್ಗಳು ದೀರ್ಘಕಾಲದವರೆಗೆ ಅತಿಯಾದ ಶಾಖಕ್ಕೆ ಒಡ್ಡಿಕೊಂಡಿದ್ದರಿಂದ, ಬೆಂಕಿಯಿಂದ ಹಾನಿಗೊಳಗಾಗಿವೆ ಎಂದು ಅಧಿಕೃತ ಹೇಳಿಕೆ ವಿವರಿಸಿದೆ.
ಎಲ್3-ಕಮ್ಯುನಿಕೇಷನ್ಸ್ ಸಂಸ್ಥೆ ತಯಾರಿಸಿರುವ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (ಡಿಎಫ್ಡಿಆರ್) ಅನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ)ದ ಫ್ಲೈಟ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಡೌನ್ಲೋಡ್ ಮಾಡಲಾಗಿದೆ. ವಿಮಾನದ ಹಾರಾಟದ ದತ್ತಾಂಶಗಳನ್ನು ಹೊಂದಿರುವ ಈ ರೆಕಾರ್ಡರ್ ತನಿಖೆಗೆ ಅತ್ಯಂತ ಪ್ರಮುಖವಾಗಿದೆ. ಆದರೆ, ಹನಿವೆಲ್ ಕಂಪನಿ ತಯಾರಿಸಿರುವ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ತೀವ್ರವಾಗಿ ಹಾನಿಗೊಳಗಾಗಿರುವ ಕಾರಣ, ಅದರಿಂದ ಮಾಹಿತಿ ಪಡೆಯಲು ತಯಾರಕ ರಾಷ್ಟ್ರವಾದ ಅಮೆರಿಕದ ತಜ್ಞರ ನೆರವನ್ನು ಕೋರಲಾಗಿದೆ.
ಸಂಪೂರ್ಣ, ವಸ್ತುನಿಷ್ಠ ಮತ್ತು ಪುರಾವೆ ಆಧಾರಿತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಎಎಐಬಿ ಸಂಸ್ಥೆಯು ಸೂಚಿಸಲಾದ ಎಲ್ಲಾ ತಾಂತ್ರಿಕ ಮತ್ತು ಕಾರ್ಯವಿಧಾನದ ನಿಯಮಾವಳಿಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಪೂರ್ಣ ಪಾರದರ್ಶಕತೆಗೆ ಬ್ಯೂರೋ (ಎಎಐಬಿ) ಬದ್ಧವಾಗಿದ್ದು, ತನಿಖೆಯ ಸೂಕ್ತ ಹಂತದಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಘಟನೆಯ ಬಗ್ಗೆ ಊಹಾಪೋಹಗಳನ್ನು ಹರಡಬಾರದು ಮತ್ತು ನಿಗದಿಪಡಿಸಿದ ಕಾರ್ಯವಿಧಾನಗಳ ಪ್ರಕಾರ ತನಿಖಾ ಪ್ರಕ್ರಿಯೆಯು ಮುಂದುವರಿಯಲು ಸಹಕರಿಸಬೇಕೆಂದು ಎಎಐಬಿ ಗೌರವಪೂರ್ವಕವಾಗಿ ವಿನಂತಿಸುತ್ತದೆ ಎಂದು ಅಧಿಕೃತ ಹೇಳಿಕೆಯು ಮನವಿ ಮಾಡಿದೆ.
ಜನವರಿ 28, 2026 ರಂದು ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.


