ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ (ಡಿ.14) ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಸ್ಮಾರಕ ಭೇಟಿ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದು, ಅವರ ಪಕ್ಷ ಎನ್‌ಸಿಪಿ ರಾಜ್ಯದ ಅಭಿವೃದ್ಧಿಗಾಗಿ ಮಹಾಯುತಿ ಮೈತ್ರಿಕೂಟಕ್ಕೆ ಸೇರಿರುವುದಾಗಿ ಒತ್ತಿ ಹೇಳಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಿದ್ಧಾಂತವು (ಸಮಾಜ ಸುಧಾರಕರು) ಶಾಹು, ಫುಲೆ ಮತ್ತು ಅಂಬೇಡ್ಕರ್ ಅವರ ಪ್ರಗತಿಪರ ಆಲೋಚನೆಗಳನ್ನು ಆಧರಿಸಿದೆ” ಎಂದು ಎನ್‌ಸಿಪಿ ವಕ್ತಾರ ಆನಂದ್ ಪರಾಂಜಪೆ ಹೇಳಿದ್ದಾರೆ. ಹೆಡ್ಗೆವಾರ್ ಅವರ ಸ್ಮಾರಕಕ್ಕೆ ಪವಾರ್ ಭೇಟಿ ನೀಡುವುದನ್ನು ತಪ್ಪಿಸಿಕೊಂಡಿದ್ದು ಇದೇ ಮೊದಲಲ್ಲ ಎಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
“ನಾವು ನಮ್ಮ ತತ್ವಗಳಿಗೆ ಬದ್ಧರಾಗಿದ್ದೇವೆ ಮತ್ತು ನಮ್ಮ ಗಮನ ರಾಜ್ಯದ ಅಭಿವೃದ್ಧಿಯಾಗಿದೆ” ಎಂದು ಪರಾಂಜಪೆ ಹೇಳಿದ್ದಾರೆ ಎಂದಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಆಡಳಿತಾರೂಢ ಬಿಜೆಪಿ, ಶಿವಸೇನೆ ಶಾಸಕರು ಭಾನುವಾರ ಬೆಳಿಗ್ಗೆ ಹೆಡ್ಗೆವಾರ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರೆ, ಪವಾರ್ ಮತ್ತು ಇತರ ಎನ್‌ಸಿಪಿ ನಾಯಕರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನವು ಪ್ರಸ್ತುತ ನಾಗ್ಪುರದಲ್ಲಿ ನಡೆಯುತ್ತಿದೆ.
ಪ್ರತಿ ವರ್ಷ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬಿಜೆಪಿ ಸಚಿವರು ಮತ್ತು ಶಾಸಕರು ರೇಶಿಂಬಾಗ್‌ನ ಸ್ಮೃತಿ ಮಂದಿರದಲ್ಲಿರುವ ಹೆಡ್ಗೆವಾರ್ ಮತ್ತು ಆರ್‌ಎಸ್‌ಎಸ್‌ನ ಎರಡನೇ ಸಂಘಚಾಲಕ ಎಂ.ಎಸ್ ಗೋಲ್ವಾಲ್ಕರ್ ಅವರ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ.
ಕಳೆದ ವರ್ಷ ಕೂಡ ವಿಧಾನಸಭೆಯಲ್ಲಿ 41 ಶಾಸಕರನ್ನು ಹೊಂದಿದ್ದರೂ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಶಾಸಕರಾದ ರಾಜು ಕರೇಮೋರೆ ಮತ್ತು ರಾಜ್‌ಕುಮಾರ್ ಬಡೋಲೆ ಮಾತ್ರ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದರು.
“ಸಚಿವ ಸಂಪುಟ ಸಭೆಗಳಲ್ಲಿ ಎನ್‌ಸಿಪಿ ಆರ್‌ಎಸ್‌ಎಸ್‌ನ ಸಿದ್ದಾಂತಗಳನ್ನು ಕೇಳುತ್ತಿದೆ. ಅವರು ಅದನ್ನು ಒಪ್ಪಿಕೊಳ್ಳದ ಹೊರತು ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ” ಎಂದು ವಿರೋಧ ಪಕ್ಷ ಕಾಂಗ್ರೆಸ್‌ನ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಾವಂತ್ ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದು, “ಅದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ದುರ್ಬಲಗೊಳಿಸುವ ಸಿದ್ಧಾಂತಗಳನ್ನು ಉತ್ತೇಜಿಸುತ್ತದೆ” ಎಂದು ಆರೋಪಿಸಿದ್ದಾರೆ.
ಏಕನಾಥ್ ಶಿಂಧೆ ಮತ್ತು ಶಿವಸೇನೆ ಶಾಸಕರು ಹೆಡ್ಗೆವಾರ್ ಸ್ಮಾರಕಕ್ಕೆ ಭೇಟಿ ನೀಡಿರುವುದನ್ನು ಉಲ್ಲೇಖಿಸಿರುವ ಸಾವಂತ್, “ಹಣ ಹಂಚುವ ಮೂಲಕ ಹೇಗೆ ಅಧಿಕಾರ ಪಡೆಯುವುದು ಮತ್ತು ಹೇಗೆ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ನಾಶಮಾಡುವುದು” ಎಂಬುದರ ಮೇಲೆ ಅವರ ಗಮನವಿದೆ ಎಂದು ಟೀಕಿಸಿದ್ದಾರೆ.
“100 ವರ್ಷಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದ್ದರೂ, ಹಿಂದುತ್ವ ಏನನ್ನು ಸೂಚಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವಲ್ಲಿ ಆರ್‌ಎಸ್‌ಎಸ್ ವಿಫಲವಾಗಿದೆ” ಎಂದು ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.
“ಕನಿಷ್ಠ ಪಕ್ಷ ಈಗಲಾದರೂ ಹಿಂದುತ್ವ ಎಂದರೆ ಏನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಆರ್‌ಎಸ್‌ಎಸ್‌ನಲ್ಲಿ ಉತ್ತಮ ಚರ್ಚೆಗಳು ನಡೆಯುವುದು ಕಡಿಮೆ, ಸಮಾಜವನ್ನು ವಿಭಜಿಸುವ ಚರ್ಚೆಗಳೇ ಹೆಚ್ಚು ಎಂದು ಸಚಿನ್ ಸಾವಂತ್ ಬರೆದುಕೊಂಡಿದ್ದಾರೆ.


