ದೆಹಲಿಯಲ್ಲಿ ಭಾನುವಾರ ನಡೆದ ಸಭೆಯ ವೇಳೆ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರನ್ನಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ನೇಮಿಸಿದ್ದಾರೆ. ಈ ಹಿಂದೆ ಪಕ್ಷದಿಂದ ಹೊರ ಹಾಕಲ್ಪಟ್ಟಿದ್ದ ಆನಂದ್ ಅವರನ್ನು ಮತ್ತೆ ಪಕ್ಷಕ್ಕೆ ಸ್ವಾಗತಿಸಿದ ಒಂದು ತಿಂಗಳ ನಂತರ ಮಾಯಾವತಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಬಿಎಸ್‌ಪಿ ಪಕ್ಷದಲ್ಲಿ ಈ ಹುದ್ದೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದ್ದು, ಅದಕ್ಕೆ ಆನಂದ್ ಅವರನ್ನು ನೇಮಿಸಲಾಗಿದೆ. ಆನಂದ್ ಅವರು ಮಾರ್ಚ್ ವೇಳೆ ಪಕ್ಷದಿಂದ ಹೊರಹಾಕಲ್ಪಡುವ ಮೊದಲು ಇದ್ದ ಹುದ್ದೆಗಿಂತಲೂ ಈ ಹುದ್ದೆ ಉನ್ನತ ಸ್ಥಾನದ್ದಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಹುದ್ದೆಗೆ ಆನಂದ್ ಅವರನ್ನು ನೇಮಿಸುವ ಮೂಲಕ ಪಕ್ಷದ ಎರಡನೇ ಅತ್ಯುನ್ನತ ಸ್ಥಾನದಲ್ಲಿ ಅವರನ್ನು ಇರಿಸಲಾಗಿದೆ ಎಂದು ವರದಿ ಹೇಳಿದೆ. ಈ ಹುದ್ದೆಯು ಪಕ್ಷದ ಮೂರು ರಾಷ್ಟ್ರೀಯ ಸಂಯೋಜಕರಿಗಿಂತ ಮೇಲಿರುತ್ತದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.
ಈ ಹುದ್ದೆಗೆ ಆನಂದ್ ನೇಮಕವಾದ್ದರಿಂದ ಅವರು ಈಗ ದೇಶಾದ್ಯಂತ ಎಲ್ಲಾ ರಾಜ್ಯ ಘಟಕಗಳಲ್ಲಿ ಪಕ್ಷದ ಕಾರ್ಯತಂತ್ರಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಬಿಹಾರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಉದ್ದೇಶವನ್ನು ಪಕ್ಷವು ಭಾನುವಾರ ಘೋಷಿಸಿದೆ. “ಬಿಹಾರ ಚುನಾವಣೆಯ ಬಗ್ಗೆ ಪ್ರತ್ಯೇಕ ಚರ್ಚೆ ನಡೆದಿದ್ದು, ಮತ್ತು ಪಕ್ಷವು ತನ್ನ ಎಲ್ಲಾ ಶಕ್ತಿಯನ್ನು ಬಳಸಿ ಚುನಾವಣೆಯಲ್ಲಿ ಏಕಾಂಗಿಯಾಗಿ ಎದುರಿಸಲು ನಿರ್ಧರಿಸಿತು” ಎಂದು ಪಕ್ಷ ಹೇಳಿದೆ.
ಪಕ್ಷದ ಹೊಸ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಆನಂದ್ ಅವರು ಮಾಯಾವತಿಗೆ ಧನ್ಯವಾದ ಅರ್ಪಿಸಿದ್ದಾರೆ. “ಅವರು ನನ್ನ ತಪ್ಪುಗಳನ್ನು ಕ್ಷಮಿಸಿದ್ದಾರೆ ಮತ್ತು ಬಹುಜನ ಮಿಷನ್ ಮತ್ತು ಚಳುವಳಿಯನ್ನು ಬಲಪಡಿಸುವಲ್ಲಿ ಕೊಡುಗೆ ನೀಡಲು ನನಗೆ ಅವಕಾಶ ನೀಡಿದ್ದಾರೆ” ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
“ಪಕ್ಷ ಮತ್ತು ಚಳುವಳಿಯ ಹಿತಾಸಕ್ತಿಗಾಗಿ ನಾನು ಸಂಪೂರ್ಣ ಭಕ್ತಿಯಿಂದ ಕೆಲಸ ಮಾಡುತ್ತೇನೆ ಮತ್ತು ನಿಮ್ಮನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ ಎಂದು ನಾನು ಬೆಹೆನ್‌ಜಿಗೆ ಭರವಸೆ ನೀಡುತ್ತೇನೆ.” ಎಂದು ಅವರು ತಿಳಿಸಿದ್ದಾರೆ.
आज बी.एस.पी की आल-इंडिया बैठक में शामिल होने का मौका मिला। सभी पदाधिकारियों को पूरे देश में पार्टी को मजबूत करने के लिए आदरणीय बहन कु. मायावती जी का मार्गदर्शन और जरूरी दिशा-निर्देश मिला।
आदरणीय बहन जी ने मुझे पार्टी के मुख्य नेशनल कोआर्डिनेटर पद की जिम्मेदारी दी है।
मैं आदरणीय…— Akash Anand (@AnandAkash_BSP) May 18, 2025
2019 ರ ಲೋಕಸಭಾ ಚುನಾವಣೆಯ ನಂತರ ಆನಂದ್ ಅವರನ್ನು ಆರಂಭದಲ್ಲಿ ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಲಾಯಿತು. ಆದಾಗ್ಯೂ, ಪ್ರಚಾರ ಭಾಷಣದ ಸಮಯದಲ್ಲಿ “ದ್ವೇಷವನ್ನು ಉತ್ತೇಜಿಸುವ” ಆರೋಪದ ಮೇಲೆ ಮೇ 2024 ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾದ ನಂತರ ಅವರನ್ನು ಆ ಹುದ್ದೆಯಿಂದ ಮತ್ತು ಮಾಯಾವತಿ ಅವರ ನಿಯೋಜಿತ ಉತ್ತರಾಧಿಕಾರಿ ಸ್ಥಾನದಿಂದ ತೆಗೆದುಹಾಕಲಾಯಿತು.
ಅದಾಗ್ಯೂ, ಜೂನ್ 2024 ರಲ್ಲಿ ಅವರನ್ನು ಎರಡೂ ಪಾತ್ರಗಳಲ್ಲಿ ಮರುಸ್ಥಾಪಿಸಲಾಗಿತ್ತು. ಆದರೆ ಈ ವರ್ಷದ ಮಾರ್ಚ್‌ನಲ್ಲಿ, ಅವರ ಮಾವ ಅಶೋಕ್ ಸಿದ್ಧಾರ್ಥ್ ಅವರೊಂದಿಗಿನ ಸಂಪರ್ಕದಿಂದಾಗಿ ಅವರನ್ನು ಪಕ್ಷದಿಂದ ಹೊರಹಾಕಲಾಯಿತು ಮತ್ತು ಮತ್ತೊಮ್ಮೆ ರಾಷ್ಟ್ರೀಯ ಸಂಯೋಜಕರ ಸ್ಥಾನದಿಂದ ತೆಗೆದುಹಾಕಲಾಯಿತು.
ಬಹುಜನ ಸಮಾಜ ಪಕ್ಷದ ಕೇಂದ್ರ-ರಾಜ್ಯ ಸಂಯೋಜಕ ನಿತಿನ್ ಸಿಂಗ್ ಅವರೊಂದಿಗೆ ಮಾಜಿ ರಾಜ್ಯಸಭಾ ಸಂಸದ ಸಿದ್ಧಾರ್ಥ್ ಅವರನ್ನು ಫೆಬ್ರವರಿ 12 ರಂದು ಗುಂಪುಗಾರಿಕೆ ಮತ್ತು “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡ ಆರೋಪದ ಮೇಲೆ ಹೊರಹಾಕಲಾಯಿತು.
ಅದಾಗ್ಯೂ, ಏಪ್ರಿಲ್‌ನಲ್ಲಿ ಮಾಯಾವತಿ ಅವರು ಆನಂದ್ ಅವರಿಗೆ “ಮತ್ತೊಂದು ಅವಕಾಶ” ನೀಡಲು ಒಪ್ಪಿಕೊಂಡರು ಮತ್ತು ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಂಡಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಲವಂತದ ಅಥವಾ ವಂಚನೆಯ ಧಾರ್ಮಿಕ ಮತಾಂತರವನ್ನು ಸಂವಿಧಾನ ಬೆಂಬಲಿಸುವುದಿಲ್ಲ: ಅಲಹಾಬಾದ್ ಹೈಕೋರ್ಟ್
ಬಲವಂತದ ಅಥವಾ ವಂಚನೆಯ ಧಾರ್ಮಿಕ ಮತಾಂತರವನ್ನು ಸಂವಿಧಾನ ಬೆಂಬಲಿಸುವುದಿಲ್ಲ: ಅಲಹಾಬಾದ್ ಹೈಕೋರ್ಟ್

