ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕೈ ಪದ್ಮಶಾಲಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಉಪಾಧ್ಯಕ್ಷೆ ಹುದ್ದೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ (ಆ.11) ರಾಜೀನಾಮೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, “ಸೆಪ್ಟೆಂಬರ್ 20, 2020ರಂದು ತನಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಕೊಟ್ಟು, ಬಳಿಕ ಕೆಪಿಸಿಸಿಗೆ ತನ್ನನ್ನು ಸೇರಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷೆ ಹುದ್ದೆಗಳನ್ನು ನೀಡಿರುವುದಕ್ಕೆ ತಾನು ಅಭಾರಿ” ಎಂದು ಅಕ್ಕೈ ಹೇಳಿದ್ದಾರೆ.
“ನಮ್ಮ ತುಳಿತಕ್ಕೊಳಗಾದ ಹಾಗೂ ಶೋಷಿತ ಅಂತರ್ಲಿಂಗಿ , ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತೆಯ ಸಮುದಾಯವು ಇಂದಿನ ಪ್ರಸ್ತುತ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಕಾನೂನು, ಮೂಲಭೂತ ಹಕ್ಕುಗಳ ಹಾಗೂ ನೀತಿ ನಿರೂಪಣೆಗಳ ನೆಲೆಗಟ್ಟಿನಿಂದ ತೀರಾ ಹಿಂದುಳಿದಿದೆ. ನಮ್ಮ ಸಮುದಾಯವನ್ನು ರಾಷ್ಟ್ರದಾದ್ಯಂತ ಸಂಘಟಿಸುವ ಸಾಮಾಜಿಕ ಜವಾಬ್ದಾರಿ ಹಾಗೂ ಸಂವಿಧಾನದ ನೈತಿಕತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ನಿಭಾಯಿಸುವ ಸಲುವಾಗಿ ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅಕ್ಕೈ ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಟ್ರಾನ್ಸ್ಜೆಂಡರ್ ಸಮುದಾಯ, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಕಾರ್ಯಕರ್ತರ ಸಮುದಾಯಗಳ ಹೋರಾಟಗಳಿಗೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ರಾಜೀನಾಮೆ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅಕ್ಕೈ, “ನಾವು ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗ. ಒಂದು ಪಕ್ಷದೊಳಗೆ ಇರುವುದು ಒಂದು ರೀತಿಯಾದರೆ, ಅದರಿಂದ ಹೊರಬರುವುದು ನನ್ನನ್ನು ಇನ್ನಷ್ಟು ಮುಕ್ತ ಮತ್ತು ಬಲಶಾಲಿಯಾಗಿ ಮಾಡುತ್ತದೆ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿಯೇ ಈ ರಾಜಕೀಯ ವ್ಯವಸ್ಥೆಯಿಂದ ಹೊರಬಂದು ನನ್ನ ಚಳವಳಿಯ ತೊಡಗಿಸಿಕೊಳ್ಳಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.
ರಾಜಕಾರಣಿಗಳ ಟ್ರಾನ್ಸ್ಜೆಂಡರ್ ವಿರೋಧಿ ಹೇಳಿಕೆಗಳನ್ನು ಉಲ್ಲೇಖಿಸಿದ ಅಕ್ಕೈ, ರಾಜಕೀಯ ವಾತಾವರಣವನ್ನು ಟೀಕಿಸಿದ್ದಾರೆ. ಚಳುವಳಿಯು ಇತರ ಎಲ್ಲಾ ವ್ಯವಸ್ಥೆಗಳಿಗಿಂತ ಹೆಚ್ಚು ಪ್ರಬಲವಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದೇನೆ” ಎಂದಿದ್ದಾರೆ.
ಲಿಂಗತ್ವ ಮತ್ತು ಲೈಂಗಿಕತೆಯ ವಿಷಯಗಳ ಬಗ್ಗೆ ರಾಜಕೀಯ ಪ್ರಬುದ್ಧತೆಗೆ ಕರೆ ನೀಡಿದ ಅವರು, “ಲಿಂಗತ್ವ ಮತ್ತು ಲೈಂಗಿಕತೆಯ ಬಗ್ಗೆ ಮಾತನಾಡುವವರು ಬಹಳ ಕಡಿಮೆ. ಪ್ರತಿಯೊಂದು ರಾಜಕೀಯ ಪಕ್ಷವು ಸಾಂಕೇತಿಕವಾಗಿ ಮಾತ್ರ ಅಲ್ಲದೆ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಮುಖ್ಯವಾಹಿನಿಗೆ ತರುವ ಆಂತರಿಕ ದೃಢಸಂಕಲ್ಪದ ಬಗ್ಗೆ ಮಾತನಾಡಬೇಕು” ಎಂದು ಆಗ್ರಹಿಸಿದ್ದಾರೆ.
“ನನಗೆ ರಾಜಕೀಯ ಬೇಕಾ..ಚಳುವಳಿ ಬೇಕಾ? ಎಂದು ಯೋಚಿಸಿದಾಗ ಚಳುವಳಿಯೇ ಸೂಕ್ತ ಆಯ್ಕೆ ಎಂದನಿಸಿತು. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಸಮುದಾಯದ ಹಕ್ಕುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯತೆ ಇದೆ. ಅದು ಈಗಿನ ರಾಜಕೀಯ ವ್ಯವಸ್ಥೆಯೊಳಗೆಯಿದ್ದು ಸಾಧ್ಯವಿಲ್ಲ. ಹಾಗಾಗಿ, ಅದರಿಂದ ಹೊರಬಂದೆ” ಎಂದು ಅಕ್ಕೈ ತಿಳಿಸಿದ್ದಾರೆ.
ಸಚಿವ ಕೆ.ಎನ್. ರಾಜಣ್ಣ ವಜಾ: ಕಾಂಗ್ರೆಸ್‌ನ ‘ದಲಿತ ವಿರೋಧಿ’ ಮುಖವಾಡ ಬಯಲು- ಬಿಜೆಪಿ


