ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕ ಮತ್ತು ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಅವರನ್ನು ಬಂಧಿಸಿದೆ.
ಸತತ ವಿಚಾರಣೆಯ ನಂತರ 70 ವರ್ಷದ ಆಲಂ ಅವರನ್ನು ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯದ ವಲಯ ಕಚೇರಿಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಗಳವಾರ 9 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯವು ಸಚಿವ ಆಲಂಗೀರ್ ಆಲಂ ಅವರನ್ನು ವಿಚಾರಣೆ ನಡೆಸಿದೆ. ಈ ವೇಳೆ ದಾಖಲಿಸಿದ ಹೇಳಿಕೆಯಂತೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ವಾರ ಆಲಂ ಅವರ ಆಪ್ತ ಕಾರ್ಯದರ್ಶಿ ಹಾಗೂ ರಾಜ್ಯ ಆಡಳಿತ ಸೇವಾ ಅಧಿಕಾರಿ ಸಂಜೀವ್ ಕುಮಾರ್ ಲಾಲ್ (52) ಹಾಗೂ ಲಾಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಜಹಾಂಗೀರ್ ಆಲಂ (42) ಅವರು ನಂಟು ಹೊಂದಿದ ಫ್ಲ್ಯಾಟ್‌ನಿಂದ 32 ಕೋಟಿ ರೂ.ಗೂ ಅಧಿಕ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದರು. ಇದೀಗ ತನಿಖೆಯ ಮುಂದುವರಿದ ಭಾಗವಾಗಿ ಸಚಿವ ಅಲಂಗೀರ್ ಆಲಂ ಬಂಧನ ನಡೆದಿದೆ.
ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಲಂಚ ಪಾವತಿಸಿದ ಆರೋಪಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಇಬ್ಬರು ಬಂಧಿತ ವ್ಯಕ್ತಿಗಳನ್ನು ತನ್ನ ಕಸ್ಟಡಿಗೆ ಕೋರಿದಾಗ, ಕೆಲವು ಪ್ರಭಾವಿ ವ್ಯಕ್ತಿಗಳ ಪರವಾಗಿ ಸಂಜೀವ್ ಕುಮಾರ್ ಲಾಲ್ ಕಮಿಷನ್ ಸಂಗ್ರಹಿಸಿದ್ದಾರೆ ಮತ್ತು ಗ್ರಾಮೀಣ ಇಲಾಖೆಯಲ್ಲಿ ಮೇಲಿಂದ ಕೆಳಗಿನವರೆಗೆ ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಇಡಿ ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಶಪಡಿಸಿಕೊಂಡ ಒಟ್ಟು ನಗದು ಮೊತ್ತವು ಸುಮಾರು 36.75 ಕೋಟಿ ರೂಪಾಯಿಗಳಷ್ಟಿದೆ, ಇದರಲ್ಲಿ ಲಾಲ್ ಅವರಿಗೆ ಸಂಬಂಧಿಸಿದ ಸ್ಥಳದಿಂದ 10.05 ಲಕ್ಷ ರೂಪಾಯಿಗಳು ಮತ್ತು ಗುತ್ತಿಗೆದಾರರೋರ್ವರಿಗೆ ಸಂಬಂಧಿಸಿದ ಸ್ಥಳದಿಂದ 1.5 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನು ಓದಿ: ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧೆಗಿಳಿದಿದ್ದ ಹಾಸ್ಯನಟ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕಾರ


