ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಅವರ ಮಗ ಹರ್ಷಾನಂದ ಗುತ್ತೇದಾರ್ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಿದೆ ಎಂದು ವರದಿಯಾಗಿದೆ.
ಆರೋಪ ಪಟ್ಟಿಯಲ್ಲಿ ಇತರ ಐದು ಮಂದಿಯ ಮೇಲೆಯೂ ಆರೋಪ ಹೊರಿಸಲಾಗಿದೆ, ಮತ್ತು ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸುಭಾಷ್ ಗುತ್ತೇದಾರ್ ಮತ್ತು ಅವರ ಮಗ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
2023ರ ವಿಧಾನಸಭಾ ಚುನಾವಣೆಗೆ ಮುನ್ನ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಆಳಂದ ಕ್ಷೇತ್ರದಿಂದ ಸುಭಾಷ್ ಗುತ್ತೇದಾರ್ ಮರು ಆಯ್ಕೆ ಬಯಸಿದ್ದರು.
ನಕಲಿ ಫಾರ್ಮ್ 7ರ ಮೂಲಕ ಆಳಂದ ವಿಧಾನಸಭಾ ಕ್ಷೇತ್ರದ 6 ಸಾವಿರಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಪ್ರಯತ್ನಪಟ್ಟಿರುವುದು 2023ರ ವಿಧಾನಸಭಾ ಚುನಾವಣೆಗೆ ಮುನ್ನ ಬೆಳಕಿಗೆ ಬಂದಿತ್ತು.
ಈ ಸಂಬಂಧ ಆಳಂದದ ಆಗಿನ ಚುನಾವಣಾಧಿಕಾರಿ ಹಾಗೂ ಕಲಬುರಗಿಯ ಸಹಾಯಕ ಆಯುಕ್ತೆಯಾಗಿದ್ದ ಮಮತಾ ದೇವಿ ಅವರು 2023ರ ಫೆಬ್ರವರಿ 21ರಂದು ಆಳಂದ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆರಂಭದಲ್ಲಿ ಆಳಂದ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ಬಳಿಕ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು.
ಆರೋಪಿಗಳನ್ನು ಬಂಧಿಸಲು ಅಗತ್ಯವಾದ ನಿರ್ಣಾಯಕ ದತ್ತಾಂಶಗಳನ್ನು ಚುನಾವಣಾ ಆಯೋಗ ಸಿಐಡಿ ಜೊತೆ ಹಂಚಿಕೊಳ್ಳದ ಕಾರಣ ಪ್ರಕರಣ ಬಹುತೇಕ ಹಳ್ಳಹಿಡಿದಂತೆ ಕಾಣುತ್ತಿದೆ ಎಂದು ದಿ ಹಿಂದೂ ಪತ್ರಿಕೆ 2025ರ ಸೆಪ್ಟೆಂಬರ್ 7ರಂದು ವಿಸ್ತೃತ ವರದಿ ಪ್ರಕಟಿಸಿತ್ತು.
ಸೆಪ್ಟೆಂಬರ್ 18ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಳಂದ ಪ್ರಕರಣದ ದಾಖಲೆ ಬಿಡುಗಡೆ ಮಾಡಿದ್ದರು.
ಆ ಬಳಿಕ, ಆಳಂದ ಸೇರಿದಂತೆ ರಾಜ್ಯದಾದ್ಯಂತ ದಾಖಲಾಗಿರುವ ಮತ್ತು ಮುಂದೆ ದಾಖಲಾಗಲಿರುವ ಎಲ್ಲಾ ‘ಮತಗಳ್ಳತನ’ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ 2025ರ ಸೆಪ್ಟೆಂಬರ್ 20ರಂದು ರಾಜ್ಯ ಸರ್ಕಾರ ಆದೇಶಿಸಿತ್ತು.
2025ರ ಸೆಪ್ಟೆಂಬರ್ 26ರಂದು ಪ್ರಕರಣವನ್ನು ಸಿಐಡಿಯಿಂದ ಎಸ್‌ಐಟಿ ವಹಿಸಿಕೊಂಡಿತ್ತು. ಆ ಬಳಿಕ ಹಳ್ಳ ಹಿಡಿದಿದ್ದ ತನಿಖೆ ಚುರುಕುಗೊಂಡಿತ್ತು.
ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸುವಂತೆ ನಕಲಿ ಫಾರ್ಮ್-7ರ ಮೂಲಕ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಪ್ರತಿ ಅರ್ಜಿಗೆ 80 ರೂಪಾಯಿಯನ್ನು ಡೇಟಾ ಸೆಂಟರ್ ಅಪರೇಟರ್‌ಗೆ ಪಾವತಿಸಲಾಗಿದೆ ಎಂಬುವುದು ಎಸ್‌ಐಟಿ ತನಿಖೆಯಿಂದ ಬಯಲಾಗಿತ್ತು.
ಡಿಸೆಂಬರ್ 2022ರಿಂದ ಫೆಬ್ರವರಿ 2023ರವರೆಗೆ ಕ್ಷೇತ್ರದ ಒಟ್ಟು 6,018 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲು ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದಕ್ಕಾಗಿ ಒಟ್ಟು 4.8 ಲಕ್ಷ ರೂ. ಪಾವತಿಸಲಾಗಿದೆ ಎಂದು ಎಸ್‌ಐಟಿ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಕಲಬುರಗಿಯ ಕೇಂದ್ರ ಸ್ಥಾನದಲ್ಲಿರುವ ಒಂದು ಡೇಟಾ ಸೆಂಟರ್‌ನಿಂದ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಸ್ಥಳೀಯ ನಿವಾಸಿ ಮೊಹಮ್ಮದ್ ಅಶ್ಫಾಕ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಸೂಚನೆಗಳು ಎಸ್‌ಐಟಿ ತನಿಖೆಯಲ್ಲಿ ಕಂಡುಬಂದಿರುವುದಾಗಿ ವರದಿ ಹೇಳಿತ್ತು.
ಎಸ್‌ಐಟಿ ಅಧಿಕಾರಿಗಳು ಸುಭಾಷ್ ಗುತ್ತೇದಾರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದರು.
ನಂತರ, ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸುಭಾಷ್ ಗುತ್ತೇದಾರ್ ಮತ್ತು ಅವರ ಮಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ್‌ಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ಇದರಿಂದ ಬಂಧನ ಭೀತಿಯಲ್ಲಿದ್ದ ತಂದೆ ಮಗ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಈಗ ಸಲ್ಲಿಸಿರುವುದು ಮೊದಲ ಅಥವಾ ಪ್ರಾಥಮಿಕ ಆರೋಪಪಟ್ಟಿ, ಚುನಾವಣಾ ಆಯೋಗ ಅಗತ್ಯ ದತ್ತಾಂಶವನ್ನು ಒದಗಿಸಿದ ನಂತರ ಹೆಚ್ಚಿನ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಎಸ್‌ಐಟಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ ಎಂದು ದಿ ಹಿಂದೂ ಶನಿವಾರ (ಡಿ.13) ವರದಿ ಮಾಡಿದೆ.
ಆಳಂದದಿಂದ ನಾಲ್ಕು ಬಾರಿ ಶಾಸಕರಾಗಿರುವ ಸುಭಾಷ್ ಗುತ್ತೇದಾರ್ 2023ರಲ್ಲಿ ಮೂರು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಬಿ.ಆರ್. ಪಾಟೀಲ್ ವಿರುದ್ಧ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಇದಕ್ಕೂ ಮುನ್ನ 2018 ರಲ್ಲಿ 697 ಮತಗಳ ಅಲ್ಪ ಅಂತರದಿಂದ ಬಿ.ಆರ್ ಪಾಟೀಲ್ ವಿರುದ್ದ ಗುತ್ತೇದಾರ್ ಗೆಲುವು ಸಾಧಿಸಿದ್ದರು.
ಸುಭಾಷ್ ಗುತ್ತೇದಾರ್ ಅವರ ಎದುರಾಳಿಗೆ ಮತ ಹಾಕುತ್ತಾರೆ ಎಂದು ಶಂಕಿಸಲಾದ ಮತದಾರರ ಹೆಸರುಗಳನ್ನು ಗುರಿಯಾಗಿಸಿಕೊಂಡು ಅಳಿಸಲು ಗುತ್ತೇದಾರ್ ಕುಟುಂಬವು ಕಲಬುರಗಿಯಲ್ಲಿ ಕಾಲ್ ಸೆಂಟರ್ ತರಹದ ಸಂಸ್ಥೆಯನ್ನು ನಡೆಸುತ್ತಿದ್ದ ಅಕ್ರಮ್ ಪಾಷಾ ಅವರನ್ನು ನೇಮಿಸಿಕೊಂಡಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಗುತ್ತೇದಾರ್ ಕುಟುಂಬಕ್ಕೆ ಸಂಬಂಧಿಸಿದ ಅನೇಕ ಸ್ಥಳಗಳ ಮೇಲೆ ಎಸ್‌ಐಟಿ ದಾಳಿ ನಡೆಸಿದಾಗ, ಅವರು ಆಳಂದದಲ್ಲಿ ಸಾಕ್ಷ್ಯಗಳನ್ನು ಸುಟ್ಟು ನಾಶಪಡಿಸಿದ್ದಾರೆ ಎಂಬುವುದಾಗಿ ಎಸ್‌ಐಟಿ ಆರೋಪಿಸಿದೆ ಎಂದು ದಿ ಹಿಂದೂ ವರದಿ ಹೇಳಿದೆ.
ಪಾಷಾ ಅವರ ಸಂಸ್ಥೆಯು ಮತದಾರರನ್ನು ಪಟ್ಟಿಯಿಂದ ಅಳಿಸಲು ಮಾಡಿದ ಪ್ರತಿ ನಕಲಿ ಫಾರ್ಮ್ 7 ಅರ್ಜಿಗೆ 80 ರೂಪಾಯಿ ನೀಡಲಾಗಿದೆ ಎಂದು ದೋಷಾರೋಪ ಪಟ್ಟಿ ಆರೋಪಿಸಿದೆ. ಅದರ 22,000ಕ್ಕೂ ಹೆಚ್ಚು ಪುಟಗಳು ಗುತ್ತೇದಾರ್ ಮತ್ತು ಪಾಷಾ ಅವರ ಸಂಸ್ಥೆಯ ನಡುವಿನ ಹಣದ ವ್ಯವಹಾರಗಳು ಸೇರಿದಂತೆ ಹಲವಾರು ತಾಂತ್ರಿಕ ಪುರಾವೆಗಳನ್ನು ಒಳಗೊಂಡಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ವಿವರಿಸಿದೆ.
ಅಕ್ರಮ್ ಪಾಷಾ, ಅವರ ಸಹೋದರ ಅಸ್ಲಂ ಪಾಷಾ ಮತ್ತು ಸಂಬಂಧಿ ಮೊಹಮ್ಮದ್ ಅಶ್ಫಾಕ್ ಜೊತೆ ಸೇರಿ ನಕಲಿ ದಾಖಲೆಗಳನ್ನು ಬಳಸಿಕೊಂಡು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP)ನಲ್ಲಿ ಖಾತೆಗಳನ್ನು ತೆರೆದಿದ್ದರು. ಪಶ್ಚಿಮ ಬಂಗಾಳ ಮೂಲದ ಬಾಪಿ ಅದ್ಯ ಎಂಬಾತ ನಡೆಸುತ್ತಿದ್ದ https://otpbazar.online ವೆಬ್‌ಸೈಟ್‌ನಿಂದ ನಕಲಿ ದಾಖಲೆಗಳನ್ನು ಖರೀದಿಸಿದ್ದರು. ಆತನಿಗೆ ಅಕ್ರಮ್ ಪಾಷಾ ಅವರ ಪತ್ನಿಯ ಖಾತೆಯಿಂದ ಹಣ ಪಾವತಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಅಶ್ಫಾಕ್ ಅವರು ಪಾಷಾ ಸಹೋದರರು ನೀಡಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಮಾತ್ರವಲ್ಲದೆ, ಅವರ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನೂ ಕೂಡ ಈ ಅಕ್ರಮಕ್ಕೆ ಬಳಸಿದ್ದಾರೆ. ಈ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವು ಸಾಕ್ಷ್ಯದ ಭಾಗವಾಗಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ವಂಚನೆಯಿಂದ ಸೃಷ್ಟಿಸಲಾದ ಲಾಗಿನ್ ಐಡಿಗಳನ್ನು ಬಳಸಿಕೊಂಡು ಮೂವರು ಆರೋಪಿಗಳು ಡಿಸೆಂಬರ್ 12, 2022 ಮತ್ತು ಫೆಬ್ರವರಿ 16, 2023ರ ನಡುವೆ 5,994 ನಕಲಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಹೆಸರಿನಲ್ಲಿ ಸಲ್ಲಿಸಲಾಗಿದೆ. ಅರ್ಜಿಯನ್ನು ಯಾರ ಹೆಸರಿನಲ್ಲಿ ಸಲ್ಲಿಸಲಾಗಿದೆಯೂ, ಯಾರ ಹೆಸರನ್ನು ಅಳಿಸಲು ಕೋರಲಾಗಿದೆಯೋ ಈ ಇಬ್ಬರಿಗೂ ಈ ವಿಷಯ ಗೊತ್ತಿರಲಿಲ್ಲ.
ಪ್ರಕರಣದ ಹಿನ್ನೆಲೆ : 2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 697 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಆರ್.ಪಾಟೀಲ್ ಸೋಲನುಭವಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆದ್ದರು. ಚುನಾವಣೆಗೂ ಮುನ್ನ ಆದ ಬೆಳವಣಿಗೆಯಲ್ಲಿ ಸತ್ಯ ಸಂಗತಿಯೊಂದು ಪಾಟೀಲರ ಗಮನಕ್ಕೆ ಬಂದಿತ್ತು. ಸಾವಿರಾರು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿರುವುದು ಸ್ವತಃ ಮತದಾರರಿಗೂ ಗೊತ್ತಿಲ್ಲ ಎಂಬುದು ದೊಡ್ಡ ಆಘಾತ ತಂದಿತ್ತು.
ಈ ಸಂಬಂಧ ಬಿ.ಆರ್ ಪಾಟೀಲ್ ತಕ್ಷಣ ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಿದ್ದರು. ‘ಬೂತ್ ಮಟ್ಟದ ಅಧಿಕಾರಿಯೊಬ್ಬರು [ಬಿಎಲ್‌ಒ] ತಮ್ಮ ಸಹೋದರನ ಹೆಸರನ್ನೇ ಅಳಿಸಿ ಹಾಕಲು ಕೋರಿರುವ ಫಾರ್ಮ್ 7 ಅರ್ಜಿಯನ್ನು ಅನಿರೀಕ್ಷಿತವಾಗಿ ಗಮನಿಸಿದ್ದರು. ಆದರೆ, ಅವರ ಸಹೋದರ ಅರ್ಜಿ ಸಲ್ಲಿಸಿರಲಿಲ್ಲ. ಆ ಬಿಎಲ್‌ಒ ಸಹೋದರನು ನನ್ನ ಬೆಂಬಲಿಗ. ಅದೇ ಹಳ್ಳಿಯ ಇನ್ನೊಬ್ಬ ಮತದಾರರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅವರಿಗೂ ಅದರ ಬಗ್ಗೆ ತಿಳಿದಿರಲಿಲ್ಲ. ಇದು ನಮಗೆ ಮತ ಕಳ್ಳತನದ ಸುಳಿವು ನೀಡಿತ್ತು ಎನ್ನುತ್ತಾರೆ ಬಿ.ಆರ್ ಪಾಟೀಲ್
ಬಿ.ಆರ್ ಪಾಟೀಲ್ ಮೂಲಕ ಪ್ರಕರಣ ಸದ್ದು ಮಾಡುತ್ತಿದ್ದಂತೆ ತಮ್ಮ ಗುರುತುಗಳನ್ನು ದುರುಪಯೋಗ ಮಾಡಿಕೊಂಡು, ಫಾರ್ಮ್ 7ರ ಅರ್ಜಿಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿ ಹಾಕಲು ಯತ್ನಿಸಿರುವ ಸಂಬಂಧ ಅನೇಕ ಮತದಾರರು ತಮ್ಮ ದೂರುಗಳನ್ನು ಆಳಂದ ತಹಶೀಲ್ದಾರ್‌ಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 6,018 ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿತ್ತು.
ಆಳಂದದ ಚುನಾವಣಾಧಿಕಾರಿ ಹಾಗೂ ಕಲಬುರಗಿಯ ಸಹಾಯಕ ಆಯುಕ್ತೆ ಮಮತಾ ದೇವಿ ಅವರು 2023ರ ಫೆಬ್ರವರಿ 21ರಂದು ಆಳಂದ ಪೊಲೀಸರಿಗೆ ದೂರು ನೀಡಿ ಪ್ರಕರಣದ ಸ್ವರೂಪವನ್ನು ವಿವರಿಸಿದ್ದರು. 6,018 ಪ್ರಕರಣಗಳಲ್ಲಿ ಕೇವಲ 24 ಅರ್ಜಿಗಳು ಮಾತ್ರ ಅಸಲಿಯಾಗಿವೆ. ಸದರಿ 24 ಅರ್ಜಿಗಳಿಗೆ ಸಂಬಂಧಿಸಿದ ಮತದಾರರು ತಮ್ಮ ಕ್ಷೇತ್ರವನ್ನು ಬೇರೆಡೆಗೆ ಬದಲಿಸಿದ್ದರಿಂದ ಇಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿ ಹಾಕಲು ಕೋರಿರುವುದು ನಿಜ. ಉಳಿದ 5,994 ಮತದಾರರ ಹೆಸರಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮಮತಾ ದೇವಿ ಹೇಳಿದ್ದರು.
ಇಷ್ಟು ದೊಡ್ಡ ಮಟ್ಟದಲ್ಲಿ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (26/2023 ಆಳಂದ ಪೊಲೀಸ್ ಠಾಣೆ) ದಾಖಲಾಗಿತ್ತು. ಅಂತಿಮವಾಗಿ, ಈ 5,994 ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿತ್ತು.


