ದೇಶದಾದ್ಯಂತ ಚರ್ಚೆಯಾಗಿದ್ದ ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದ ‘ಮತಗಳ್ಳತನ’ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದೆ.
ಆಳಂದ ಸೇರಿದಂತೆ ರಾಜದಾದ್ಯಂತ ದಾಖಲಾಗಿರುವ ಮತ್ತು ಮುಂದೆ ದಾಖಲಾಗಲಿರುವ ಎಲ್ಲಾ ‘ಮತಗಳ್ಳತನ’ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿ ಸೆಪ್ಟೆಂಬರ್ 20ರಂದು ರಾಜ್ಯ ಸರ್ಕಾರ ಆದೇಶಿಸಿತ್ತು.
ಕರ್ನಾಟಕ ಪೊಲೀಸರ ಅಪರಾಧ ತನಿಖಾ ವಿಭಾಗ (ಸಿಐಡಿ) ತನಿಖೆ ನಡೆಸುತ್ತಿದ್ದ ಆಳಂದ ಪ್ರಕರಣವನ್ನು ಸೆಪ್ಟೆಂಬರ್ 26ರಂದು ಎಸ್‌ಐಟಿ ವಹಿಸಿಕೊಂಡಿದೆ. ಆ ಬಳಿಕ ಹಳ್ಳ ಹಿಡಿದಿದ್ದ ತನಿಖೆ ಮತ್ತೆ ಶುರುವಾಗಿದೆ.
ಎಸ್‌ಐಟಿ ತನಿಖೆ ವಹಿಸಿಕೊಂಡ ಬಳಿಕ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ ಎಂಬುವುದು ವರದಿಗಳಿಂದ ಗೊತ್ತಾಗಿದೆ.
ಆಳಂದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸುವಂತೆ ಚುನಾವಣಾ ಆಯೋಗಕ್ಕೆ ನಕಲಿ ಅರ್ಜಿ ಸಲ್ಲಿಸಲು ಪ್ರತಿ ಅರ್ಜಿಗೆ 80 ರೂಪಾಯಿಯನ್ನು ಡೇಟಾ ಸೆಂಟರ್ ಅಪರೇಟರ್‌ಗೆ ಪಾವತಿಸಲಾಗಿದೆ ಎಂಬುವುದು ಎಸ್‌ಐಟಿ ತನಿಖೆಯಿಂದ ಬಯಲಾಗಿದೆ.
ಡಿಸೆಂಬರ್ 2022ರಿಂದ ಫೆಬ್ರವರಿ 2023ರವರೆಗೆ ಕ್ಷೇತ್ರದ ಒಟ್ಟು 6,018 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲು ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದಕ್ಕಾಗಿ ಒಟ್ಟು 4.8 ಲಕ್ಷ ರೂ. ಪಾವತಿಸಲಾಗಿದೆ ಎಂದು ಎಸ್‌ಐಟಿ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆಳಂದ ಮತಗಳ್ಳತನ ಪ್ರಕರಣ 2023ರ ವಿಧಾನಸಭಾ ಚುನಾವಣೆಗೆ ಮುನ್ನ ನಕಲಿ ಫಾರ್ಮ್ 7ರ ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕಲು ನಡೆಸಿದ್ದ ಪಿತೂರಿಗೆ ಸಂಬಂಧಿಸಿದೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸಲು ಅಗತ್ಯವಾದ ನಿರ್ಣಾಯಕ ದತ್ತಾಂಶಗಳನ್ನು ಚುನಾವಣಾ ಆಯೋಗ ಸಿಐಡಿ ಜೊತೆ ಹಂಚಿಕೊಳ್ಳದ ಕಾರಣ ಪ್ರಕರಣ ಬಹುತೇಕ ಹಳ್ಳಹಿಡಿದಂತೆ ಕಾಣುತ್ತಿದೆ ಎಂದು ದಿ ಹಿಂದೂ ಪತ್ರಿಕೆ ಸೆಪ್ಟೆಂಬರ್ 7ರಂದು ವಿಸ್ತೃತ ವರದಿ ಪ್ರಕಟಿಸಿತ್ತು.
ಸೆಪ್ಟೆಂಬರ್ 18ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಆಳಂದ ಪ್ರಕರಣದ ದಾಖಲೆ ಬಿಡುಗಡೆ ಮಾಡಿದ್ದರು.
ಪ್ರಸ್ತುತ ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿ, ಕಳೆದ ವಾರ 2023ರಲ್ಲಿ ಕಾಂಗ್ರೆಸ್‌ನ ಬಿ. ಆರ್ ಪಾಟೀಲ್ ವಿರುದ್ಧ ಸೋತಿದ್ದ ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿದೆ ಎಂದು ವರದಿಯಾಗಿದೆ.
ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಕಲಬುರಗಿಯ ಕೇಂದ್ರ ಸ್ಥಾನದಲ್ಲಿರುವ ಒಂದು ಡೇಟಾ ಸೆಂಟರ್‌ನಿಂದ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಸ್ಥಳೀಯ ನಿವಾಸಿ ಮೊಹಮ್ಮದ್ ಅಶ್ಫಾಕ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಸೂಚನೆಗಳು ಎಸ್‌ಐಟಿ ತನಿಖೆಯಲ್ಲಿ ಕಂಡುಬಂದಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
2023ರಲ್ಲಿ ಅಶ್ಫಾಕ್ ಅನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆಗ ಆತ ತಾನು ನಿರಪರಾಧಿ ಎಂದು ಹೇಳಿಕೊಂಡು ತನ್ನ ಬಳಿ ಇರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಒಪ್ಪಿಸುವುದಾಗಿ ಭರವಸೆ ನೀಡಿದ್ದ. ಪೊಲೀಸರಿಂದ ಬಿಡುಗಡೆಯಾದ ನಂತರ, ಆತ ದುಬೈಗೆ ತೆರಳಿದ್ದಾನೆ ಎಂದು ವರದಿ ತಿಳಿಸಿದೆ.
ಎಸ್‌ಐಟಿ ತಂಡವು ಮೊಹಮ್ಮದ್ ಅಶ್ಫಾಕ್‌ನಿಂದ ವಶಪಡಿಸಿಕೊಂಡ ಇಂಟರ್‌ನೆಟ್ ಪ್ರೊಟೊಕಾಲ್ ಡೀಟೇಲ್ ರೆಕಾರ್ಡ್‌ಗಳು ಮತ್ತು ಸಾಧನಗಳನ್ನು ಪರಿಶೀಲಿಸಿದ ನಂತರ, ಆತನು ತನ್ನ ಸಹಾಯಕ ಮೊಹಮ್ಮದ್ ಅಕ್ರಮ್ ಮತ್ತು ಇತರ ಮೂವರು ವ್ಯಕ್ತಿಗಳೊಂದಿಗೆ ಇಂಟರ್‌ನೆಟ್ ಕರೆಗಳ ಮೂಲಕ ಸಂಪರ್ಕದಲ್ಲಿದ್ದನೆಂದು ಕಂಡುಹಿಡಿದಿದೆ.
ಕಳೆದ ವಾರ ಎಸ್‌ಐಟಿ ಈ ನಾಲ್ವರಿಗೆ ಸಂಬಂಧಿಸಿದ ಆಸ್ತಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು ಮತ್ತು ಕಲಬುರಗಿ ಪ್ರದೇಶದಲ್ಲಿ ಮತದಾರರ ಪಟ್ಟಿಯನ್ನು ತಿರುಚಲು ಡೇಟಾ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹಾಗೂ ಪ್ರತಿ ಮತದಾರರ ಹೆಸರು ತೆಗೆದುಹಾಕಲು 80 ರೂ. ಪಾವತಿಸಿರುವ ವಿವರಗಳನ್ನು ಕಂಡುಕೊಂಡಿದೆ ಎಂದು ವರದಿ ಹೇಳಿದೆ.
ಮೊಹಮ್ಮದ್ ಅಕ್ರಮ್ ಮತ್ತು ಅಶ್ಫಾಕ್ ಡೇಟಾ ಸೆಂಟರ್‌ನ ಜವಾಬ್ದಾರಿಯನ್ನು ಹೊತ್ತಿದ್ದರು. ಇತರರು ಡೇಟಾ ಎಂಟ್ರಿ ಮಾಡುವ ಕೆಲಸಗಾರರಾಗಿದ್ದರು. ತನಿಖೆಯಲ್ಲಿ ಒಂದು ಲ್ಯಾಪ್‌ಟಾಪ್ ಕಂಡುಬಂದಿದೆ, ಅದನ್ನು ಈ ಕಾನೂನುಬಾಹಿರ ಅರ್ಜಿಗಳನ್ನು ತಯಾರಿಸಲು ಬಳಸಲಾಗಿತ್ತು ಎನ್ನಲಾಗಿದೆ.
ಈ ಸಾಕ್ಷ್ಯಗಳನ್ನು ಕಂಡುಕೊಂಡ ನಂತರ, ಎಸ್‌ಐಟಿ ತಂಡವು ಅಕ್ಟೋಬರ್ 17 ರಂದು ಬಿಜೆಪಿ ನಾಯಕ ಗುತ್ತೇದಾರ್, ಅವರ ಮಕ್ಕಳಾದ ಹರ್ಷನಂದ, ಸಂತೋಷ್ ಮತ್ತು ಅವರ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ ಮಹಾಂತಗೋಳ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿದೆ. ಈ ವೇಳೆ ಏಳಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಈ ಕೆಲಸಕ್ಕೆ ಕೊಟ್ಟ ಹಣ ಎಲ್ಲಿಂದ ಬಂದಿದೆ ಎಂದು ತನಿಖೆ ಕೈಗೊಂಡಿದೆ.
ಆಳಂದ ಕ್ಷೇತ್ರದ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ನಕಲಿ ಅರ್ಜಿಗಳನ್ನು ಸಲ್ಲಿಸಲು ಒಟ್ಟು 75 ಮೊಬೈಲ್ ನಂಬರ್‌ಗಳನ್ನು ಬಳಸಲಾಗಿತ್ತು. ಈ ನಂಬರ್‌ಗಳು ಕೋಳಿ ಫಾರ್ಮ್ ಕೆಲಸಗಾರರಿಂದ ಹಿಡಿದು ಪೊಲೀಸರ ಸಂಬಂಧಿಕರವರೆಗಿನ ವಿವಿಧ ವ್ಯಕ್ತಿಗಳಿಗೆ ಸೇರಿವೆ ಎಂದು ಕಂಡುಬಂದಿದೆ.
ಯಾವ ರೀತಿಯಲ್ಲಿ ಚುನಾವಣಾ ಆಯೋಗದ ಪೋರ್ಟಲ್‌ಗೆ ನಕಲಿ ಗುರುತಿನ ಮಾಹಿತಿಯನ್ನು ಬಳಸಿ ಪ್ರವೇಶ ಪಡೆಯಲಾಯಿತು ಮತ್ತು ಮತದಾರರ ಹೆಸರು ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಯಿತು ಎಂಬುವುದನ್ನು ಎಸ್‌ಐಟಿ ಇನ್ನೂ ಪತ್ತೆ ಮಾಡಬೇಕಿದೆ. ಚುನಾವಣಾ ಆಯೋಗದ ಪೋರ್ಟಲ್‌ಗೆ ಪ್ರವೇಶಿಸಲು ಯಾರ ಗುರುತಿನ ಮಾಹಿತಿಯನ್ನು ಬಳಸಲಾಯಿತೋ ಅಥವಾ ಯಾರ ಹೆಸರಿನಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಯಿತೋ, ಆ ಎರಡೂ ಗುಂಪಿನ ಜನರಿಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಆಳಂದ ವಿಧಾನಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಬಿಜೆಪಿಯ ಸುಭಾಷ್ ಗುತ್ತೇದಾರ್, ಮತದಾರರ ಹೆಸರು ಅಳಿಸುವಿಕೆ ಪ್ರಯತ್ನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. 2023ರಲ್ಲಿ ಗೆದ್ದ ಕಾಂಗ್ರೆಸ್‌ನ ಬಿ.ಆರ್ ಪಾಟೀಲ್ ಅವರು ವೈಯಕ್ತಿಕ ಲಾಭಕ್ಕಾಗಿ ಈ ಆರೋಪಗಳನ್ನು ಮಾಡುತ್ತಿದ್ದಾರೆ. ಪಾಟೀಲ್ ಸಚಿವ ಸ್ಥಾನ ಬಯಸುತ್ತಿದ್ದಾರೆ. ಇದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗುತ್ತೇದಾರ್ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.
‘ಸತೀಶ್ ಜಾರಕಿಹೊಳಿ ಅವರಿಗೆ ಸಿದ್ದರಾಮಯ್ಯ ‘ಮಾರ್ಗದರ್ಶಕ’ರಾಗಬೇಕು..’; ಕುತೂಹಲ ಮೂಡಿಸಿದ ಯತೀಂದ್ರ ಹೇಳಿಕೆ


