ಬೆಂಗಳೂರು: ಆಳಂದ ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವ್ಯಕ್ತಿ ಒಬ್ಬನನ್ನು ಬಂಧಿಸಿದೆ, ಎಂದು ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ವ್ಯಕ್ತಿಯನ್ನು ಬುಧವಾರ ಬಂಧಿಸಿ, ಬೆಂಗಳೂರಿಗೆ ಕರೆತರಲಾಗಿದ್ದು, ವಿಚಾರಣೆಗಾಗಿ ಸಿಐಡಿ ಅವರನ್ನು ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ.
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಮತಗಳನ್ನು ಅಳಿಸಲು ಆರೋಪಿ ಅರ್ಜಿ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸಿಐಡಿ ಮೂಲಗಳ ಪ್ರಕಾರ, ನಾಡಿಯಾದ ಬಾಪಿ ಅದ್ಯ ಎಂಬ ಆರೋಪಿಯನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ಹಣದ ಜಾಡು ಹಿಡಿದು ಬಂಧಿಸಲಾಗಿದೆ.
ಬಿ.ಆರ್ ಪಾಟೀಲ್ ಮತ್ತು ಸಚಿವ ಮತ್ತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮತ ಅಳಿಸುವಿಕೆ ಪ್ರಯತ್ನಗಳ ಬಗ್ಗೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ (CEO) ಗಮನಕ್ಕೆ ತಂದಿದ್ದರು. ಆದರೆ, ಮುಖ್ಯ ಚುನಾವಣಾ ಅಧಿಕಾರಿ, ಯಾವುದೇ ಮುಂದಿನ ಕ್ರಮಗಳನ್ನು ನಿಲ್ಲಿಸಲು ಮತ್ತು ಮತದಾರರ ಪಟ್ಟಿಯ ಸದ್ಯದ ಸ್ಥಿತಿಯನ್ನು ಕಾಯ್ದುಕೊಳ್ಳಲು ನಿರ್ಧರಿಸಿದರು.
ಪಾಟೀಲ್ ಅವರ ಪ್ರಕಾರ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಳಗೊಂಡ 6,994 ‘ಕಾಂಗ್ರೆಸ್ ಮತಗಳನ್ನು’ ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸಿಇಒ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ ಮತ ಅಳಿಸುವಿಕೆಯನ್ನು ನಿಲ್ಲಿಸಲಾಯಿತು. ಈ ಮತಗಳನ್ನು ಅಳಿಸಿದ್ದರೆ ನಾನು ಖಂಡಿತವಾಗಿಯೂ ಚುನಾವಣೆಯಲ್ಲಿ ಸೋಲುತ್ತಿದ್ದೆ ಎಂದಿದ್ದಾರೆ.
ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಸುಭಾಷ್ ಗುತ್ತೇದಾರ್ (ಬಿಜೆಪಿ) ವಿರುದ್ಧ ಸುಮಾರು 10,000 ಮತಗಳ ಅಂತರದಿಂದ ಗೆದ್ದಿದ್ದರು.
ಇತ್ತೀಚೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ವೋಟ್ ಚೋರಿ’ ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸಿದರು ಮತ್ತು ಆಳಂದ ಕ್ಷೇತ್ರದ ಉದಾಹರಣೆ ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರ, ‘ಮತ ಕಳ್ಳತನ’ದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತು. ಸಿಐಡಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಕೆ ಸಿಂಗ್ ಇದರ ನೇತೃತ್ವ ವಹಿಸಿದ್ದಾರೆ.


