ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದ ಮೂವರು ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅವರು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.
ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಪಹಲ್ಗಾಮ್‌ನ ಬಟ್ಕೋಟ್‌ನ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಹಿಲ್ ಪಾರ್ಕ್‌ನ ಬಶೀರ್ ಅಹ್ಮದ್ ಜೋಥರ್ ಎಂಬವರನ್ನು ಭಾನುವಾರ (ಜೂ.22) ಎನ್‌ಐಎ ಬಂಧಿಸಿದೆ.
ಬಂಧಿತರ ವಿಚಾರಣೆ ವೇಳೆ ದಾಳಿ ನಡೆಸಿ ಮೂವರು ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಮತ್ತು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸಂಬಂಧಿಸಿದವರು ಎಂಬುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಎನ್‌ಐಎ ತಿಳಿಸಿದೆ.
NIA Arrests 2 for Harbouring Pak Terrorists in Pahalgam Terror Attack Case, Gets Identities of the LeT Attackers pic.twitter.com/Pf9OrCE3KZ
— NIA India (@NIA_India) June 22, 2025
“ಪಹಲ್ಗಾಮ್ ದಾಳಿಕೋರರ ಗುರುತುಗಳು ಹಿಂದೆ ನಂಬಲಾಗಿದ್ದಕ್ಕಿಂತ ಈ ಭಿನ್ನವಾಗಿದೆ. ದಾಳಿ ನಡೆದ ಎರಡು ದಿನಗಳ ಬಳಿಕ ಜಮ್ಮು ಕಾಶ್ಮೀರ ಪೊಲೀಸರು ಪಾಕಿಸ್ತಾನಿ ಪ್ರಜೆಗಳು ಎನ್ನಲಾದ ಹಾಶಿಮ್ ಮೂಸಾ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಹಾಗೂ ಕಾಶ್ಮೀರದ ಸ್ಥಳೀಯ ವ್ಯಕ್ತಿ ಎನ್ನಲಾದ ಆದಿಲ್ ಹುಸೇನ್ ಥೋಕರ್ ಎಂಬವರು ಶಂಕಿತ ಆರೋಪಿಗಳು ಎಂದು ರೇಖಾಚಿತ್ರ ಬಿಡುಗಡೆ ಮಾಡಿತ್ತು. ಆದರೆ, ಆ ರೇಖಾಚಿತ್ರಗಳಲ್ಲಿರುವ ಮೂವರು ಪಹಲ್ಗಾಮ್ ದಾಳಿಕೋರರಲ್ಲ ಎಂಬುವುದಾಗಿ ಎನ್‌ಐಎ ಮೂಲಗಳು ಹೇಳುತ್ತಿವೆ ಎಂದು indianexpress.com ವರದಿ ಮಾಡಿದೆ.
ಕಳೆದ ವರ್ಷ ಅಕ್ಟೋಬರ್ 20ರಂದು ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯಲ್ಲಿ ಝಡ್-ಮೋರ್ಹ್ ಸುರಂಗವನ್ನು ನಿರ್ಮಿಸುತ್ತಿದ್ದ ಕಂಪನಿಯ ಏಳು ಉದ್ಯೋಗಿಗಳ ಹತ್ಯೆಯಲ್ಲಿ ಭಾಗಿಯಾಗಿದ್ದ ಸುಲೇಮಾನ್ ಶಾ ದಾಳಿಕೋರರಲ್ಲಿ ಒಬ್ಬನೆಂದು ಮೂಲಗಳು ತಿಳಿಸಿವೆ. ದಾಳಿಯ ಸಹ ಆರೋಪಿ ಜುನೈದ್ ರಂಜಾನ್ ಭಟ್ ಡಿಸೆಂಬರ್ 4ರಂದು ಜಮ್ಮು ಕಾಶ್ಮೀರ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ವರದಿ ವಿವರಿಸಿದೆ.
ಪೊಲೀಸರು ಹತ್ಯೆಯಾದ ಜುನೈದ್ ಫೋನ್‌ನಿಂದ ಆತನ ಜೊತೆಗೆ ಇತರ ಮೂವರು ಉಗ್ರರ ಫೋಟೋವನ್ನು ವಶಪಡಿಸಿಕೊಂಡಿದ್ದರು. ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ನಂತರ ಈ ಫೋಟೋಗಳು ವೈರಲ್ ಆಗಿತ್ತು. ಮೂಲಗಳು ಹೇಳುವಂತೆ, ಇದನ್ನು ಜಮ್ಮು ಕಾಶ್ಮೀರ ಪೊಲೀಸರು ರೇಖಾಚಿತ್ರಗಳಿಗೆ ಆಧಾರವಾಗಿ ಬಳಸಿಕೊಂಡಿದ್ದಾರೆ.
ತನಿಖೆಯ ಸಮಯದಲ್ಲಿ, ಕೇಂದ್ರೀಯ ಸಂಸ್ಥೆಗಳು ಮತ್ತು ಎನ್‌ಐಎ ಜುನೈದ್ ಫೋನ್‌ನಿಂದ ವಶಪಡಿಸಿಕೊಂಡ ವಿಭಿನ್ನ ಫೋಟೋಗಳನ್ನು ಬಂಧಿತ ಇಬ್ಬರು ಸ್ಥಳೀಯರಿಗೆ ತೋರಿಸಿವೆ. ಅವರು ಪಹಲ್ಗಾಮ್ ದಾಳಿಯ ಎರಡು ದಿನಗಳ ಮೊದಲು ತಮ್ಮನ್ನು ಭೇಟಿ ಮಾಡಿದ್ದ ವ್ಯಕ್ತಿಗಳನ್ನು ಗುರುತಿಸಿದ್ದಾರೆ.
“ಹೊಸ ಫೋಟೋಗಳನ್ನು ಹಲವಾರು ಸಾಕ್ಷಿಗಳಿಗೂ ತೋರಿಸಲಾಗಿದೆ. ಅವರು ಕೂಡ ಫೋಟೋದಲ್ಲಿರುವ ವ್ಯಕ್ತಿಗಳು ಪಹಲ್ಗಾಮ್ ದಾಳಿ ಸ್ಥಳದಲ್ಲಿ ಇದ್ದಿದ್ದನ್ನು ದೃಢಪಡಿಸಿದ್ದಾರೆ. ಝಡ್-ಮೋರ್ಹ್ ದಾಳಿಯ ಆರೋಪಿ ಸುಲೇಮಾನ್ ಶಾ ಸೇರಿದಂತೆ ಮೂವರೂ ಪಾಕಿಸ್ತಾನಿ ಪ್ರಜೆಗಳು” ಎಂಬುವುದಾಗಿ ಮೂಲಗಳು ತಿಳಿಸಿವೆ ಎಂದು indianexpress.com ಹೇಳಿದೆ.
ಕೇಂದ್ರ ಸಂಸ್ಥೆಗಳು ಮತ್ತು ಎನ್‌ಐಎ ಹಿಂದಿನ ಪ್ರಕರಣಗಳನ್ನು ಮರುಪರಿಶೀಲಿಸುತ್ತಿವೆ ಮತ್ತು ಈ ದಾಳಿಕೋರರ ವಿರುದ್ಧ ಬಲವಾದ ಪ್ರಕರಣವನ್ನು ರೂಪಿಸುವುದಕ್ಕಾಗಿ ಬ್ಯಾಲಿಸ್ಟಿಕ್ ವರದಿಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿವೆ ಎಂದಿದೆ.
ಆಗಸ್ಟ್ 2023ರಲ್ಲಿ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮೂವರು ಸೇನಾ ಸಿಬ್ಬಂದಿಯ ಹತ್ಯೆಯಲ್ಲಿ ಮತ್ತು ಕಳೆದ ವರ್ಷ ಮೇ ತಿಂಗಳಲ್ಲಿ ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ವಾಯುಪಡೆಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿ ಇತರ ನಾಲ್ವರು ಗಾಯಗೊಂಡಿದ್ದ ಮತ್ತೊಂದು ದಾಳಿಯಲ್ಲಿ ಸುಲೇಮಾನ್ ಭಾಗಿಯಾಗಿದ್ದಾನೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದಾಳಿಕೋರರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಎನ್‌ಐಎ ಇಬ್ಬರು ಸ್ಥಳೀಯರನ್ನು ಬಂಧಿಸುವ ಮೊದಲು ಸ್ಥಳೀಯ ಕುದುರೆ ಸೇವಾದಾರರು, ವ್ಯಾಪಾರಿಗಳು ಮತ್ತು ಫೋಟೋಗ್ರಾಫರ್‌ಗಳು ಸೇರಿದಂತೆ 200ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದೆ.
ಬಂಧಿತ ಪರ್ವೈಜ್‌ಗೆ ಕುದುರೆ ಸೇವಾದಾರ ಸ್ನೇಹಿತರಿದ್ದಾರೆ. ಅವರ ಪತ್ನಿಯರು ತಮ್ಮ ಮನೆಗೆ ಭೇಟಿ ನೀಡಿದವರ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ indianexpress.com ಹೇಳಿದೆ.
ಏಪ್ರಿಲ್ 20ರಂದು ಸಂಜೆ ಮೂವರು ದಾಳಿಕೋರರು ಪರ್ವೈಜ್ ಮತ್ತು ಇತರರ ಮನೆಗಳಿಗೆ ಭೇಟಿ ನೀಡಿ ಆಹಾರ ಪ್ಯಾಕ್ ಮಾಡಿ ಕೊಡಲು ಹೇಳಿದ್ದಾರೆ. ಅಲ್ಲಿಂದ ಹೊರಡುವ ಮೊದಲು, ಅವರು ಮನೆಯವರಿಗೆ ಸ್ವಲ್ಪ ಹಣ ನೀಡಿ ತಮ್ಮ ಭೇಟಿಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂದಿದೆ.
ತನಿಖೆಯ ಪ್ರಕಾರ, ಪರ್ವೈಜ್ ಮತ್ತು ಬಶೀರ್ ದಾಳಿಗೆ ಮೊದಲು ಹಿಲ್ ಪಾರ್ಕ್‌ನಲ್ಲಿರುವ ಗುಡಿಸಲಿನಲ್ಲಿ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ತಿಳಿದೇ ಆಶ್ರಯ ನೀಡಿದ್ದಾರೆ. ಭಯೋತ್ಪಾದಕರಿಗೆ ಆಹಾರ, ಆಶ್ರಯ ಮತ್ತು ಸಾಗಣೆ ಬೆಂಬಲವನ್ನು ಒದಗಿಸಿದ್ದಾರೆ. 1967 ರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 19 ರ ಅಡಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.
ಪಹಲ್ಗಾಮ್ ದಾಳಿಕೋರರಿಗೆ ಆಶ್ರಯ ನೀಡಿದ ಆರೋಪ: ಇಬ್ಬರನ್ನು ಬಂಧಿಸಿದ ಎನ್‌ಐಎ


