ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿಯವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಕೇಂದ್ರ ಸರ್ಕಾರ ನರೇಗಾ ಬದಲಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ (ಜ.27) ಕೆಪಿಸಿಸಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ಹೆಸರು ಕೇಳಿದರೆ ಬಿಜೆಪಿಯವರಿಗೆ ಆಗಲ್ಲ. ಹಾಗಾಗಿ, ದುರುದ್ದೇಶದಿಂದ ‘ನರೇಗಾ’ ಹೆಸರು ಬದಲಾವಣೆ ಮಾಡಿ ‘ವಿಬಿ- ಜಿ ರಾಮ್ ಜಿ’ ಮಾಡಿದ್ದಾರೆ ಎಂದು ಸಿಎಂ ಹೇಳಿದರು.
ನರೇಗಾ ಕಾಯ್ದೆಯನ್ನು ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಾಯಿಸಿ ‘ರಾಮ’ ಎಂಬ ಹೆಸರು ಬರುವಂತೆ ಮಾಡಿದ್ದಾರೆ. ಆದರೆ, ಇದ ದಶರಥ ರಾಮ, ಕೌಸಲ್ಯ ರಾಮ, ಸೀತಾ ರಾಮ ಅಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ. ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ. ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ ಎಂದರು.
ಆರ್‌ಎಸ್‌ಎಸ್ ಮಾರ್ಗದರ್ಶನದಂತೆ ಬಡವರ ಕಾರ್ಯಕ್ರಮಗಳನ್ನು ಬಿಜೆಪಿಯವರು ರದ್ದು ಮಾಡಿದ್ದಾರೆ. ಆರ್‌ಎಸ್‌ಎಸ್‌ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು ಅವರ ಸಿದ್ಧಾಂತ. ಬಡವರ ವಿರೋಧಿ ಬಿಜೆಪಿ ಬಡವರ ಪರವಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.


